ನವದೆಹಲಿ: ಕಬ್ಬು ಬೆಳೆಗಾರರಿಗೆ ₹ 3,500 ಕೋಟಿ ಸಬ್ಸಿಡಿ ನೀಡುವುದಾಗಿ ಕೇಂದ್ರ ಸರ್ಕಾರ ಇಂದು ಘೋಷಣೆ ಮಾಡಿದೆ. ಆದರೆ, ಈ ವಿಶೇಷ ಪ್ಯಾಕೇಜ್ನಿಂದ ಸಕ್ಕರೆ ಕಾರ್ಖಾನೆಗಳಿಗೆ ಸಹಾಯವಾಗಲಿದೆಯೇ ಹೊರತು ಕಬ್ಬು ಬೆಳೆಗಾರರಿಗಲ್ಲ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಕುರುಬೂರು ಶಾಂತಕುಮಾರ್, ಸಕ್ಕರೆ ರಫ್ತು ಮಾಡುವ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ₹3500 ಕೋಟಿ ರೂಪಾಯಿ ಪ್ರೋತ್ಸಾಹ ಧನ ನೀಡಲು ಕೇಂದ್ರ ಸಚಿವ ಸಂಪುಟ ಸಮ್ಮತಿಸಿದೆ. ಇದು ಸಕ್ಕರೆ ಕಾರ್ಖಾನೆಗಳಿಗೆ ಸಿಹಿ ಸುದ್ದಿಯಾಗಿದೆ. ಇದರಿಂದ ಕಾರ್ಖಾನೆ ಮಾಲೀಕರಿಗೆ ರೈತರ ಬಾಕಿ ಹಣ ತೀರಿಸಲು ಮಾತ್ರ ನೆರವಾಗುತ್ತದೆ, ಎಂದರು.
ಈಗಾಗಲೇ ಸಾಕಷ್ಟು ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಕಾಲಿಕ ಮಳೆಯಿಂದ, ಕಾಡು ಪ್ರಾಣಿಗಳ ದಾಳಿಯಿಂದ ಕಬ್ಬು ಬೆಳೆ ನಾಶವಾದ ಸಾಕಷ್ಟು ಉದಾಹರಣೆಗಳಿವೆ. ಸರ್ಕಾರ ಬಿಡುಗಡೆ ಮಾಡಿರುವ ಪ್ರೋತ್ಸಾಹಧನದಿಂದ ಈ ರೀತಿ ಸಂಕಷ್ಟಕ್ಕೆ ತುತ್ತಾದ ರೈತರಿಗೆ ಯಾವುದೇ ಸಹಕಾರಿಯಾಗದು ಎನ್ನುವ ಅರ್ಥದಲ್ಲಿ ಶಾಂತಕುಮಾರ್ ಹೇಳಿದ್ದಾರೆ.
ಉತ್ತರ ಪ್ರದೇಶಕ್ಕೆ ಹೆಚ್ಚು ಹಣ?
ದೇಶದ ನಾನಾ ರಾಜ್ಯಗಳಲ್ಲಿ ಕಬ್ಬನ್ನು ಬೆಳೆಯುತ್ತಾರೆ. ಕರ್ನಾಟಕದಲ್ಲೂ ಕಬ್ಬು ಬೆಳೆ ಅಧಿಕವಾಗಿದೆ. ಆದರೆ, ಈ ಪ್ರೋತ್ಸಾಹ ಧನದಲ್ಲಿ ಹೆಚ್ಚುಪಾಲು ಉತ್ತರ ಪ್ರದೇಶಕ್ಕೆ ಬಿಡುಗಡೆ ಆಗಿದೆ ಎಂದು ಕುರುಬೂರು ಶಾಂತಕುಮಾರ್ರಿಂದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾಡೇಕರ್ ಹೇಳಿದ್ದೇನು?
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ’60 ಲಕ್ಷ ಟನ್ ಸಕ್ಕರೆ ರಫ್ತು ಮಾಡಲಾಗುವುದು. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ 5 ಕೋಟಿ ಕಬ್ಬು ಬೆಳೆಗಾರರಿಗೆ ಲಾಭವಾಗಲಿದ್ದು, ಈ ಸಬ್ಸಿಡಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ’ ಎಂದು ಹೇಳಿದ್ದರು.