ಕರ್ನಾಟಕದಲ್ಲಿ ಮಳೆ ಅವಾಂತರ: ಗ್ರಾ.ಪಂ. ಟಾಸ್ಕ್ ಫೋರ್ಸ್ ರಚನೆ, ಮಳೆ ಹಾನಿ ಪರಿಹಾರಕ್ಕೆ ಹಣ ಬಿಡುಗಡೆ

| Updated By: ರಮೇಶ್ ಬಿ. ಜವಳಗೇರಾ

Updated on: Jul 19, 2024 | 3:22 PM

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಅಲ್ಲಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಅದರಲ್ಲೂ ಕರವಾಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ವರುಣ ಅಬ್ಬರಿಸುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಹಾನಿ ಪರಿಹಾರ ಬಿಡುಗಡೆ ಮಾಡಿರುವ ಬಗ್ಗೆ ಮಾಹಿತಿ ನೀಡಿದೆ.

ಕರ್ನಾಟಕದಲ್ಲಿ ಮಳೆ ಅವಾಂತರ: ಗ್ರಾ.ಪಂ. ಟಾಸ್ಕ್ ಫೋರ್ಸ್ ರಚನೆ, ಮಳೆ ಹಾನಿ ಪರಿಹಾರಕ್ಕೆ ಹಣ ಬಿಡುಗಡೆ
ಕಂದಾಯ ಸಚಿವ ಕೃಷ್ಣ ಭೈರೇಗೌಡ
Follow us on

ಬೆಂಗಳೂರು, (ಜುಲೈ 19): ಕರ್ನಾಟಕದ ಹಲವೆಡೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯು ಜನರ ಬದುಕನ್ನೇ ಬೀದಿಗೆ ತರುತ್ತಿದೆ. ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಮನೆ-ಮಠ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಕರ್ನಾಟಕ ಸರ್ಕಾರ, ಮಳೆ ಹಾನಿ ಪರಿಹಾರಕ್ಕೆ ಹಣ ಬಿಡುಗಡೆ ಮಾಡಿದೆ. ಇಂದು (ಜುಲೈ 19) ವಿಧಾನಸಭೆ ಅಧಿವೇಶನದಲ್ಲಿ ಮಳೆ ಹಾನಿ ಕುರಿತು ಚರ್ಚೆ ನಡೆದಿದ್ದು, ಈ ವೇಳೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಪರಿಹಾರ ಕ್ರಮಕ್ಕೆ ಎಲ್ಲಾ ಜಿಲ್ಲೆಗಳಿಗೆ 777.54 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಮಳೆ ಹಾನಿ ಪರಿಹಾರ ಕ್ರಮಕ್ಕೆ ನಮ್ಮ ಬಳಿ ಹಣದ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು.

ವಿಧಾನಸಭೆಯಲ್ಲಿ ನಿಯಮ 69 ಅಡಿಯಲ್ಲಿ  ಉತ್ತರ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರ ಎಲ್ಲಾ ಪ್ರಯತ್ನ‌ ಮಾಡುತ್ತಿದೆ. ಸಂಪುಟ ಸಭೆಯಲ್ಲಿ ಹಾನಿ ಪರಿಹಾರ ಬಗ್ಗೆ ಚರ್ಚೆ ಮಾಡುತ್ತೇವೆ. ಕರಾವಳಿ ಭಾಗದಲ್ಲಿ ವಾಡಿಕೆಗಿಂತ ಶೇ.21ರಷ್ಟು ಹೆಚ್ಚು ಮಳೆ ಆಗಿದೆ. ಮಲೆನಾಡಿನಲ್ಲಿ ವಾಡಿಕೆಗಿಂತ ಶೇಕಡಾ 9ರಷ್ಟು ಹೆಚ್ಚು ಮಳೆಯಾಗಿದೆ. ಪರಿಹಾರ ಕ್ರಮಕ್ಕೆ ಎಲ್ಲಾ ಜಿಲ್ಲೆಗಳಿಗೆ 777.54 ಕೋಟಿ ರೂ. ನೀಡಲಾಗಿದ್ದು, ಮಳೆ ಹಾನಿ ಪರಿಹಾರ ಕ್ರಮಕ್ಕೆ ನಮ್ಮ ಬಳಿ ಹಣದ ಕೊರತೆ ಇಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಮಳೆಗೆ ಮನೆಗೋಡೆ ಕುಸಿದು ಬಾಣಂತಿ ಸಾವು, ಬದುಕುಳಿದ ಮಗು ತಾಯಿ ಇಲ್ಲದೇ ತಬ್ಬಲಿ ಆಯ್ತು

6 ಜಿಲ್ಲೆಗಳಲ್ಲಿ 5 ಎನ್​ಡಿಆರ್​ಎಫ್ ತುಕಡಿ ನಿಯೋಜಿಸಲಾಗಿದೆ. ಸಮಸ್ಯೆ ಉಂಟಾಗುವ 2,225 ಗ್ರಾಮಗಳನ್ನು ಗುರುತಿಸಲಾಗಿದ್ದು, 1,200ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಟಾಸ್ಕ್ ಫೋರ್ಸ್​ ರಚನೆ ಮಾಡಲಾಗಿದೆ. ಅಲ್ಲದೇ ತಾಲೂಕು ಮಟ್ಟದ ಅಧಿಕಾರಿ ಪ್ರತಿ ಗ್ರಾಮ ಪಂಚಾಯಿತಿಗೆ ಪ್ರವಾಹ ನಿರ್ವಹಣೆಗೆ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿದ್ದು, ಗ್ರಾ.ಪಂ. ಟಾಸ್ಕ್​ಫೋರ್ಸ್​ಗೂ ಹಣ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ