
ಬೆಂಗಳೂರು, ಸೆಪ್ಟೆಂಬರ್ 30: ರಾಜ್ಯದಲ್ಲಿ ಸಂಚಾರ ಶಿಸ್ತು ಕಾಪಾಡುವ ಜತೆಗೆ ಟ್ರಾಫಿಕ್ ದಟ್ಟಣೆ ನಿಯಂತ್ರಿಸಲು ಸಾರಿಗೆ ಇಲಾಖೆ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಕಡಿಮೆ ವೇಗದ ಬ್ಯಾಟರಿ ಚಾಲಿತ ವಿದ್ಯುತ್ (ಇವಿ) ದ್ವಿಚಕ್ರ ವಾಹನಗಳಿಗೂ ಸಂಚಾರಿ ನಿಯಮಗಳನ್ನು ಅನ್ವಯಿಸಲು ಹಾಗೂ ನಗರಗಳಲ್ಲಿ ವಾಹನ ದಟ್ಟಣೆ ತಗ್ಗಿಸಲು ಆ್ಯಪ್ ಆಧಾರಿತ ಕಾರ್ ಪೂಲಿಂಗ್ ಸೇವೆಗಳಿಗೆ ನೂತನ ನೀತಿ ರೂಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಭೈರತಿ ಸುರೇಶ್, ‘ಕಡಿಮೆ ವೇಗದ ಬ್ಯಾಟರಿ ಚಾಲಿತ ವಿದ್ಯುತ್ ದ್ವಿಚಕ್ರ ವಾಹನಗಳಿಗೆ ಪ್ರಸ್ತುತ ಹೆಲ್ಮೆಟ್ ಧರಿಸುವಿಕೆ ಹಾಗೂ ನೋಂದಣಿ ಸೇರಿದಂತೆ ಕೆಲವು ಸಂಚಾರಿ ನಿಯಮಗಳು ಅನ್ವಯಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ, ಇಂತಹ ವಾಹನಗಳ ಮೂಲಕ ಸಂಚಾರಿ ನಿಯಮ ಉಲ್ಲಂಘನೆಗಳು ಹೆಚ್ಚುತ್ತಿರುವ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗಿದೆ’ ಎಂದರು.
ಇದನ್ನೂ ಓದಿ: ಫುಟ್‌ಪಾತ್ ಬೈಕ್ ಸವಾರರಿಗೆ ಭಾರಿ ದಂಡದ ಶಾಕ್: ಹಾಫ್ ಹೆಲ್ಮೆಟ್ ನಿಷೇಧಕ್ಕೆ ಸರ್ಕಾರ ಚಿಂತನೆ
‘ರಸ್ತೆ ಸುರಕ್ಷತೆ ಹಾಗೂ ಸಂಚಾರ ಶಿಸ್ತು ಕಾಪಾಡುವ ನಿಟ್ಟಿನಲ್ಲಿ, ಇಂತಹ ವಾಹನಗಳನ್ನು ಗುರುತಿಸುವುದು ಮತ್ತು ಚಾಲಕರ ಹೊಣೆಗಾರಿಕೆಯನ್ನು ಖಚಿತಪಡಿಸುವುದು ಸೇರಿದಂತೆ ಅಗತ್ಯ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಲು ಸರ್ಕಾರ ಯೋಜಿಸುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.
ನಗರ ಪ್ರದೇಶಗಳಲ್ಲಿ ನಿತ್ಯ ಎದುರಾಗುತ್ತಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕಾರ್ ಪೂಲಿಂಗ್ ಮತ್ತು ಪ್ರಯಾಣ ಹಂಚಿಕೆ ವ್ಯವಸ್ಥೆಗೆ ರಾಜ್ಯಮಟ್ಟದಲ್ಲಿ ಸೂಕ್ತ ನೀತಿ ರೂಪಿಸುವ ಕುರಿತು ಚರ್ಚೆ ನಡೆದಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ಹೇಳಿದ್ದಾರೆ.
ಮೊಬೈಲ್ ಅಪ್ಲಿಕೇಶನ್ ಆಧಾರಿತ ಕಾರ್ ಪೂಲಿಂಗ್ ಸೇವೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ರಾಜ್ಯಮಟ್ಟದಲ್ಲಿ ಸೂಕ್ತ ಹಾಗೂ ಸಮಗ್ರ ನೀತಿ ರೂಪಿಸುವ ಕುರಿತು ಇಲಾಖಾ ಮಟ್ಟದಲ್ಲಿ ಮಹತ್ವದ ಚರ್ಚೆ ನಡೆಸಲಾಗಿದೆ.
ಇನ್ನು ಸಾರ್ವಜನಿಕರು ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ ಸಾರಿಗೆ ವ್ಯವಸ್ಥೆಯನ್ನು ಸುಲಭವಾಗಿ ಬಳಸಿಕೊಳ್ಳಲು ಅನುಕೂಲವಾಗುವಂತೆ ‘ಪಾರ್ಕ್ ಆ್ಯಂಡ್ ರೈಡ್’ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಬಗ್ಗೆಯೂ ಸಾರಿಗೆ ಇಲಾಖೆಯ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:26 pm, Wed, 30 September 26