ಬೆಂಗಳೂರು: ಮುಷ್ಕರಕ್ಕೆ ಕರೆ ನೀಡಿರುವವರನ್ನು ಹೊರತುಪಡಿಸಿ, ಸಾರಿಗೆ ನಿಗಮಗಳ ನೌಕರರ ಮತ್ತೊಂದು ಬಣದೊಂದಿಗೆ ಸಚಿವ ಲಕ್ಷ್ಮಣ ಸವದಿ ಸಂಧಾನ ಸಭೆ ನಡೆಸುತ್ತಿರುವ ಬಗ್ಗೆ ನೌಕರರಿಂದ ಆಕ್ಷೇಪ ವ್ಯಕ್ತವಾಗಿದೆ. ಈ ಸಂಧಾನಸಭೆ ವಿಫಲವಾಗಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಮುಷ್ಕರಕ್ಕೆ ಕರೆ ಕೊಟ್ಟಿರುವ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಸಾರಿಗೆ ನೌಕರರ ಇತರ ಒಕ್ಕೂಟಗಳ ನಾಯಕರನ್ನು ಬದಿಗಿಟ್ಟು, KSRTC ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ರಾಜ್ಯಾಧ್ಯಕ್ಷ ಅನಂತ ಸುಬ್ಬರಾವ್ ಅವರನ್ನು ಸಭೆಗೆ ಆಹ್ವಾನಿಸಲಾಗಿದೆ.
ನಿನ್ನೆ ನಡೆದ ಸಾರಿಗೆ ನೌಕರರ ಪ್ರತಿಭಟನೆಯಲ್ಲಿ ಭಾಗಿಯಾದ ಸಂಘಟನೆಗಳ ಮುಖಂಡರನ್ನ ಸವದಿ ಸಭೆಗೆ ಕರೆದಿಲ್ಲ ಎಂದು ಹೇಳಲಾಗಿದೆ. ಸಚಿವರಿಂದ ಮಾತುಕತೆಗೆ ಆಹ್ವಾನ ಬಂದ್ರೆ ನಾವು ರೆಡಿ ಇದ್ದೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಸಾರಿಗೆ ನೌಕರರ ಒಕ್ಕೂಟಗಳ ರಾಜ್ಯಾಧ್ಯಕ್ಷರು ಈ ಹಿಂದೆ ಹೇಳಿದ್ದರು.
ಅಂದ ಹಾಗೆ, ಅನಂತ್ ಸುಬ್ಬರಾವ್ ನಿನ್ನೆ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿರಲಿಲ್ಲ. ಹೀಗಾಗಿ, ನಮ್ಮ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಸಾರಿಗೆ ನೌಕರರು ಹೇಳಿದ್ದಾರೆ. ಸವದಿ ಕರೆದ ಸಭೆ ವಿಫಲ ಆಗೋ ಸಾಧ್ಯತೆ ಹೆಚ್ಚು ಎಂದು ಮುಷ್ಕರಕ್ಕೆ ಕರೆ ನೀಡಿರುವ ಮುಖಂಡರು ತಿಳಿಸಿದ್ದಾರೆ.
ಈ ಮಧ್ಯೆ, ಸವದಿ ಮುಷ್ಕರವನ್ನು ಫ್ಲಾಪ್ ಮಾಡಲು ಈ ಪ್ಲಾನ್ ಹೂಡಿದ್ರಾ ಅನ್ನೋ ಗುಮಾನಿ ಸಹ ಸಾರಿಗೆ ನೌಕರರಲ್ಲಿ ಮೂಡಿದೆ. ಸದ್ಯ, ಅನಂತ ಸುಬ್ಬರಾವ್ ಜೊತೆ ಮಾತುಕತೆ ನಡೆಸಿರುವ ಸವದಿ ನಾಳೆಯಿಂದ ಅನಂತ ಸುಬ್ಬರಾವ್ ಬಣದ ನೌಕರರನ್ನು ರೋಡಿಗಿಳಿಸುವ ಪ್ಲಾನ್ ಮಾಡ್ತಿದ್ದಾರೆ ಅನ್ನೋ ಡೌಟ್ ಹಲವರಲ್ಲಿ ಮೂಡಿದೆ.
ಈ ನಡುವೆ, ಸಾರಿಗೆ ಸಂಘಟನೆಗಳ ನಾಯಕರ ಜೊತೆ ವಿಕಾಸಸೌಧದಲ್ಲಿ ಸುಮಾರು 2 ಗಂಟೆಯಿಂದ ಸಭೆ ನಡೆಯುತ್ತಿದೆ. ಒಕ್ಕೂಟದ ಮುಖಂಡರ ಜೊತೆ ಮಾತುಕತೆ ನಡೆಸಿದ ಸಚಿವ ಸವದಿ ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಮಾಡುವ ಬೇಡಿಕೆಯ ಈಡೇರಿಕೆ ಸದ್ಯಕ್ಕೆ ಅಸಾಧ್ಯ ಎಂದು ಹೇಳಿದರು ಎಂದು ತಿಳಿದುಬಂದಿದೆ. ಜೊತೆಗೆ, ಕೊರೊನಾ ಸಮಯದಲ್ಲಿ ಸಹಕರಿಸಲು ಮನವಿ ಸಹ ಮಾಡಿದ್ದಾರೆ ಎಂದು ಹೇಳಲಾಗಿದೆ.
ಸಾರಿಗೆ ನೌಕರರ ಪ್ರತಿಭಟನೆ ಬಿಸಿ ಜೋರು, ಆಟೋ ಚಾಲಕರಿಂದ ದುಪ್ಪಟ್ಟು ಹಣ ವಸೂಲಿ
Published On - 2:16 pm, Fri, 11 December 20