ಉತ್ತರ ಕನ್ನಡ: ಉಳ್ಳಾಗೆಡ್ಡೆ, ಕೋಸು, ಆಲೂ, ಗೆಣಸು, ಬೀಟ್ರೂಟ್, ಕೆಸವಿನಗಡ್ಡೆ ಹೀಗೆ ಅಬ್ಬಬ್ಬಾ ಅಂದ್ರೆ ನಾವು ಹತ್ತು ಗೆಡ್ಡೆಗಳ ಹೆಸರನ್ನು ಕೇಳಿಯೇ ಇರ್ತೀವಿ. ಹಾಗೇ ನೋಡಿಯೂ ಇರ್ತೀವಿ. ಆದ್ರೆ ಜೋಯಿಡಾದ ಗೆಡ್ಡೆ-ಗೆಣಸು ಮೇಳ ಮಾತ್ರ ಫುಲ್ ಡಿಫರೆಂಟ್ ಆಗಿರುತ್ತೆ. ಹಾಗಾದರೆ, ಈ ಸಲ ಮೇಳದಲ್ಲಿ ಏನೇನಿತ್ತು? ಈ ಬಾರಿಯ ವಿಶೇಷತೆ ಏನಿತ್ತು ಎಂಬುದರ ಮಾಹಿತಿ ಇಲ್ಲಿದೆ.
ಈ ವಿಶೇಷ ಮೇಳದಲ್ಲಿ ಬರೋಬ್ಬರಿ 150 ಜಾತಿಯ ಗೆಡ್ಡೆ, ಗೆಣಸುಗಳನ್ನ ಪ್ರದರ್ಶಿಸಲಾಗಿತ್ತು . ಸಾಧಾರಣವಾಗಿ ಗೆಡ್ಡೆ ಗೆಣಸು ಅಂದ ತಕ್ಷಣ ನಮಗೆ ನೆನಪಾಗೋದು ಕೇವಲ 4-5 ಗೆಡ್ಡೆಗಳು ಮಾತ್ರ. ಆದರೆ, ಕಾನನ ನಗರಿ ಎಂದೇ ಖ್ಯಾತಿ ಪಡೆದಿರುವ ಜಿಲ್ಲೆಯ ಜೋಯಿಡಾ ಪಟ್ಟಣದ ಕುಣಬಿ ಭವನದಲ್ಲಿ ಕಾಣಸಿಕ್ಕ ಗೆಡ್ಡೆಗಳು ಮಾತ್ರ ಫುಲ್ ಡಿಫರೆಂಟ್. ಜನಸಾಮಾನ್ಯರು ಕಂಡು ಕೇಳಿರದ ಗೆಡ್ಡೆಗಳು ಮೇಳದಲ್ಲಿ ಕಂಡು ಬಂದಿತು.
ಗೆಡ್ಡೆಗಳ ಜೊತೆ ತಿನಿಸುಗಳ ಪ್ರದರ್ಶನ
ಪ್ರತೀ ವರ್ಷ ಸಂಕ್ರಾಂತಿ ಮುನ್ನ ನಡೆಯುವ ಈ ಮೇಳದಲ್ಲಿ 3 ಕೆ.ಜಿಗಿಂತ ಅಧಿಕ ತೂಗುವ ಗೆಡ್ಡೆಗಳನ್ನು ಪ್ರದರ್ಶಿಸಲಾಗುತ್ತದೆ. ವಿಭಿನ್ನ ಗಾತ್ರ, ರುಚಿ ಮತ್ತು ಔಷಧೀಯ ಗುಣಗಳುಳ್ಳ ಗೆಡ್ಡೆಗಳ ಸಂಗ್ರಹವೂ ಹೆಚ್ಚಾಗಿ ಕಂಡುಬರುತ್ತದೆ. ಜೊತೆಗೆ, ಇವುಗಳಿಂದ ತಯಾರಿಸುವ ಬಗೆ ಬಗೆಯ ತಿನಿಸುಗಳನ್ನು ಸಹ ಸಾರ್ವಜನಿಕರು ನೋಡಬಹುದಾಗಿದೆ.
ಮೇಳದಲ್ಲಿ ರೈತರಿಗೆ ಸ್ಪರ್ಧೆಯ ಏರ್ಪಾಡು
ಇನ್ನು, ಮೇಳದಲ್ಲಿ ರೈತರಿಗೆ ಸ್ಪರ್ಧೆಗಳನ್ನು ಸಹ ಏರ್ಪಡಿಸಲಾಗಿತ್ತು. ಗಡ್ಡೆಗಳ ಪ್ರಭೇದ ಮತ್ತು ಗಾತ್ರಕ್ಕೆ ಅನುಗುಣವಾಗಿ ಬಹುಮಾನ ಕೂಡ ನೀಡಲಾಯಿತು. ಕಳೆದ 7 ವರ್ಷದಿಂದ ಈ ಮೇಳವನ್ನು ಆಯೋಜಿಸಲಾಗುತ್ತಿದ್ದು, ಈಗ ಜೋಯಿಡಾದ ಈ ಗೆಡ್ಡೆಗಳು ಹೊರ ರಾಜ್ಯದಲ್ಲೂ ಪ್ರಸಿದ್ಧಿ ಪಡೆದಿದೆ. ಮೇಳದ ಮತ್ತೊಂದು ವಿಶೇಷವೆಂದರೆ ವ್ಯಾಪಾರ, ವಹಿವಾಟಿನ ಅರಿವೇ ಇಲ್ಲದಿದ್ದ ಕುಣಬಿ ಹೆಂಗಸರೂ ಸಹ ಮೇಳದಲ್ಲಿ ಪಾಲ್ಗೊಂಡು, ವ್ಯಾಪಾರ ಮಾಡಿ ಲಾಭ ಪಡೆದಿದ್ದು ಬಲು ವಿಶಿಷ್ಟ.
ಕಾಡು ಮತ್ತು ಕಪ್ಪು ಮಣ್ಣಲ್ಲಿ ಬೆಳೆಯುವ ಪರಿಸರಸ್ನೇಹಿ ಗೆಡ್ಡೆಗಳ ಗುಚ್ಛವೇ ಮೇಳದಲ್ಲಿ ರಾರಾಜಿಸಿತು. ಬಿಳಿ ಕೋನ್, ಕೆಂಪ್ ಕೋನ್, ಅಂಬೆಹಳದ್, ಸೂರನ, ದವೆ, ಕಚ್ಚಿಪು, ಕುಸು, ವೈಕನ್, ಒಕಾಟೆ, ಚಿರಗೆ, ಗುಟ್ಟು, ಕಾಯಿಮಡಿ, ಜಾಡ್ಕಣ, ಗೆಣಸು,ಮುಡ್ಲಿ, ತಂಬಡೆ, ದುಕ್ಕನ್, ಕೆಂಪು ಗೆಣಸು, ಹಸಿರು ಗೆಣಸು, ಕಪ್ ಗೆಣಸು, ಚಿರಕಾಟೆ ಗಡ್ಡೆ ಹೀಗೆ ನಾನಾ ಥರದ ಹೆಸರು ಹೇಳೋದ್ರಲ್ಲೇ ಸುಸ್ತಾಗಿ ಹೋಗುತ್ತೆ. ಏನಿಲ್ಲಾ ಅಂದ್ರೂ ಬರೋಬ್ಬರಿ 150ಕ್ಕೂ ಅಧಿಕ ಜಾತಿಯ ಗೆಡ್ಡೆಗಳದ್ದೇ ರಾಶಿ. ವಿಶಿಷ್ಟವಾಗಿ ಕುಣಬಿ ಜನಾಂಗದ ಮಹಿಳೆಯರೇ ಬೆಳೆಯುವ ಬಗೆಬಗೆಯ ಗೆಡ್ಡೆಗಳ ಪ್ರದರ್ಶನ ಮತ್ತು ಮಾರಾಟವಂತೂ ಫುಲ್ ಜೋರಾಗಿದ್ದು ನೆರೆಯ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದಲೂ ಜನ ಬಂದು ಗೆಡ್ಡೆ, ಗೆಣಸು ಖರೀದಿಸಿದರು.
ಇನ್ನು, ಈ ವಿಶಿಷ್ಟ ಗೆಡ್ಡೆ-ಗೆಣಸು ಪ್ರದರ್ಶನ ಬಲು ಸೊಗಸಾಗಿ ನಡೆಯಿತು. ಆದರೆ, ಗೆಡ್ಡೆ ಗೆಣಸನ್ನೇ ಬೆಳೆದು ಜೀವನ ಸಾಗಿಸೋ ಕುಣಬಿ ಸಮುದಾಯ ಜೋಯಿಡಾ ತಾಲೂಕಿನಾದ್ಯಂತ ಇದ್ದು ಕೆಲ ಬಾರಿ ಗೆಡ್ಡೆ-ಗೆಣಸನ್ನು ಕೇಳೋರೆ ಇಲ್ಲದಾಗಿರುವ ಪರಿಸ್ಥಿತಿ ಕೂಡಾ ಎದುರಾಗಿದೆ. ಸರ್ಕಾರ ಇದನ್ನು ಬೆಳೆಯುವ ರೈತ ಸಮುದಾಯಕ್ಕೆ ಮತ್ತಷ್ಟು ಉತ್ತೇಜನ ಕೊಟ್ಟು ಅದರ ಕುರಿತಾಗಿ ರೈತರಿಗೆ ತಿಳಿಸಿಕೊಟ್ಟಿದ್ದೇ ಆದಲ್ಲಿ ಸಾವಯವ ಗೆಡ್ಡೆ ಬೆಳೆಯುವ ಕುಣಬಿ ಸಮುದಾಯದ ಬದುಕು ಮತ್ತಷ್ಟು ಹಸನಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಮೇಳಕ್ಕೆ ಆಗಮಿಸಿದ್ದ ಸ್ಥಳೀಯ ನಿವಾಸಿ ಶ್ರೇಯಾ ಬಾರ್ಕೂರು ಅಭಿಪ್ರಾಯಪಟ್ಟಿದ್ದಾರೆ.