ರಿಲೇ ಓಟದಲ್ಲಿ ದ್ವಿತೀಯ ಸ್ಥಾನ ಗೆದ್ದ ಕೆಲವೇ ನಿಮಿಷಗಳಲ್ಲಿ 15 ವರ್ಷದ ಬಾಲಕ ಹೃದಯಾಘಾತಕ್ಕೆ ಬಲಿ

|

Updated on: Aug 05, 2023 | 3:27 PM

ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ರಿಲೇ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ತಂಡದಲ್ಲಿದ್ದ ಬಾಲಕನೊಬ್ಬ ಓಡಿದ ಕೆಲವೇ ನಿಮಿಷಗಳಲ್ಲಿ ಕುಸಿದುಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ರಿಲೇ ಓಟದಲ್ಲಿ ದ್ವಿತೀಯ ಸ್ಥಾನ ಗೆದ್ದ ಕೆಲವೇ ನಿಮಿಷಗಳಲ್ಲಿ 15 ವರ್ಷದ ಬಾಲಕ ಹೃದಯಾಘಾತಕ್ಕೆ ಬಲಿ
ರಿಲೇ ಓಟದಲ್ಲಿ ದ್ವಿತೀಯ ಸ್ಥಾನ ಗೆದ್ದು ಕೆಲವೇ ನಿಮಿಷಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ವಿದ್ಯಾರ್ಥಿ ಭೀಮಾಶಂಕರ್ (ಎಡಚಿತ್ರ) ಮತ್ತು ರಿಲೇ ಸಾಂದರ್ಭಿಕ ಚಿತ್ರ
Follow us on

ತುಮಕೂರು, ಆಗಸ್ಟ್ 5: ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ 4×100 ಮೀಟರ್ ರಿಲೇ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಅನುದಾನಿತ ಪ್ರೌಢಶಾಲಾ ತಂಡದಲ್ಲಿ ಭಾಗಿಯಾಗಿದ್ದ 15 ವರ್ಷದ ಬಾಲಕನೊಬ್ಬ ಕೆಲವೇ ನಿಮಿಷಗಳಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ (Heart Attack) ಮೃತಪಟ್ಟ ಘಟನೆ ತುಮಕೂರು (Tumkur) ತಾಲೂಕಿನ ಚಿಕ್ಕತೋಟುಕೆರೆಯಲ್ಲಿ ಗುರುವಾರ (ಆಗಸ್ಟ್ 3) ನಡೆದಿದೆ.

ಬೆಳಧಾರ ಗ್ರಾಮೀಣ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಭೀಮಾಶಂಕರ್ 12 ಸದಸ್ಯರ ರಿಲೇ ತಂಡದ ಸದಸ್ಯನಾಗಿದ್ದ. ಘಟನೆ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯ ನಾಗರಾಜು, “ಗುರುವಾರ ಸಂಜೆ 5.45 ಕ್ಕೆ ಮುಕ್ತಾಯಗೊಂಡ ರಿಲೇಯಲ್ಲಿ ನಮ್ಮ ತಂಡವು ಎರಡನೇ ಸ್ಥಾನವನ್ನು ಗಳಿಸಿದೆ. ಆರಂಭದಲ್ಲಿ ಭೀಮಾಶಂಕರ್ ತಮ್ಮ ತಂಡಕ್ಕೆ ಮುನ್ನಡೆ ಒದಗಿಸಿದ್ದ. ಆದರೆ ನಂತರ ಓಡಿಹೋದ ಇತರರು ಮುನ್ನಡೆ ಮುಂದುವರಿಸುವಲ್ಲಿ ವಿಫಲರಾದರು. ಹೀಗಾಗಿ ಮೊದಲ ಸ್ಥಾನ ಪಡೆಯಲು ಸಾಧ್ಯವಾಗದ ಹಿನ್ನೆಲೆ ಭೀಮಾಶಂಕರ್ ಅಸಮಾಧಾನಗೊಂಡಿದ್ದ ಎಂದರು.

ಇದನ್ನೂ ಓದಿ: ತುಮಕೂರು: ಮೂಢನಂಬಿಕೆಗೆ ಹಸುಗೂಸು ಬಲಿ ಪ್ರಕರಣ; ಸಾವಿಗೆ ಸತ್ಯಾಂಶ ತಿಳಿಯಲು ಹೂತ್ತಿದ್ದ ಮೃತದೇಹ ಹೊರತೆಗೆದ ಪೊಲೀಸ್ರು

ಓಟದ ನಂತರ, ಶಿಕ್ಷಕರು ವಾಪಸ್ ಗ್ರಾಮಕ್ಕೆ ಮರಳಲು ವಾಹನವನ್ನು ಹತ್ತುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದರು. ಆದರೆ ಸಂಜೆ 6 ಗಂಟೆ ಸುಮಾರಿಗೆ ಭೀಮಾಶಂಕರ್ ಕುಸಿದುಬಿದ್ದಿದ್ದಾನೆ. ಕೂಡಲೇ ಆತನನ್ನು ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ರಿಸರ್ಚ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಭೀಮಾಶಂಕರ್ ಮೃತಪಟ್ಟಿರುವುದಾಗಿ ಘೋಷಿಸಿದರು. ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾಗಿ ನಾಗರಾಜು ಹೇಳಿದರು.

ಭೀಮಾಶಂಕರ್ ಅವರ ತಂದೆ ಬಸವರಾಜು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಾಗನೂರು ಗ್ರಾಮದವರಾಗಿದ್ದು, ಕೆಂಚಯ್ಯನಪಾಳ್ಯದ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಘಟನೆ ಸಂಬಂಧ ಭೀಮಾಶಂಕರ್ ತಂದೆ ಕೋರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಬಾಲಕನ ಶವವನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ