ತುಮಕೂರು: ಜಿಲ್ಲೆಯಲ್ಲಿ ನಡೆದ ಭೋವಿ ಸಮಾಜದ ರಾಜ್ಯ ಮಟ್ಟದ ಜನ ಜಾಗೃತಿ ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಭಾಗಿಯಾಗಿದ್ದಾರೆ. ತುಮಕೂರಿನ ಗಾಜಿನ ಮನೆಯಲ್ಲಿ ಸಮಾವೇಶ ನಡೆಯುತ್ತಿದ್ದು ವಿವಿಧ ಗಣ್ಯರು, ಸಚಿವರು, ಶಾಸಕರು, ಮುಖಂಡರು ಭಾಗಿಯಾಗಿದ್ದಾರೆ.
ಭೋವಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಿಎಂ ಬೊಮ್ಮಾಯಿ ಭಾಷಣದಲ್ಲಿ ಭೋವಿ ಸಮುದಾಯದ ಕೊಡಿಗೆಯನ್ನು ನೆನಪಿಸಿಕೊಂಡರು. ಈ ಸಮುದಾಯ ದೇಶ ಕಟ್ಟುವ, ದೇವಾಲಯ ಕಟ್ಟುವ ಸಮುದಾಯ. ಈ ಸಮುದಾಯದ ಜೊತೆಗೆ ನನಗೆ 40 ವರ್ಷ ಒಡನಾಟವಿದೆ. ಇಮ್ಮಡಿ ಸ್ವಾಮಿಜಿಗಳು ಹೇಳಿದ್ದಾರೆ. ಬರುವಂತ ದಿನಗಳಲ್ಲಿ ಸಾಮಾಜಿಕ ಬದಲಾವಣೆ ತರಲು ಗುರುಗಳಿಂದ ಪ್ರೇರಣೆ ಪಡೆದಿದ್ದೇನೆ. ಸಿದ್ದರಾಮೇಶ್ವರು ಬದುಕಿನ ದಾರಿ ತೋರಿಸಿರುವ ಪವಾಡ ಪುರುಷರು. ದೇಶದ ಆರ್ಥಿಕ ಬೆಳವಣಿಗೆ ತಳಸಮುದಾಯದ ದುಡಿಮೆ ಮುಖ್ಯ. ದುಡಿಮೆಯೇ ದೊಡ್ಡಪ್ಪ ಕಾಲವಿದು. ದುಡ್ಡೇ ದೊಡ್ಡಪ್ಪ ಕಾಲವಿತ್ತು, ಈಗಿಲ್ಲ. ನಿಮ್ಮಿಂದ ದೇವಾಲಯಗಳು ನಿರ್ಮಾಣವಾಗುತ್ತಿವೆ. ಕಲ್ಲು ರಸ್ತೆ ಮೇಲೆ ಬಿದ್ದರೇ ತುಳಿದುಕೊಂಡು ಹೋಗ್ತಾರೆ. ಅದೇ ಕಲ್ಲು ಮೂರ್ತಿಯಾದ್ರೆ ಪೂಜೆ ಮಾಡ್ತಾರೆ. ಲಯ ಬದ್ದ ಸೂಕ್ಷ್ಮತೆ ಇದ್ದರೇ ನಿಮ್ಮ ಸಮಾಜದಲ್ಲಿ ಮಾತ್ರ. ಕಲ್ಲನ್ನ ಹೇಗೆ ಬೇಕೋ ಹಾಗೆ ಬದಲಾವಣೆ ಮಾಡೋ ಶಕ್ತಿ ಭಗವಂತ ನಿಮಗೆ ನೀಡಿದ್ದಾನೆ ಎಂದು ಭೋವಿ ಸಮುದಾಯವನ್ನು ಸಿಎಂ ಬೊಮ್ಮಾಯಿ ಹೊಗಳಿದರು.
21ನೇ ಶತಮಾನ ಜ್ಞಾನದ ಶತಮಾನವಾಗಿದೆ. ನಿಮ್ಮಲ್ಲಿರುವ ಜ್ಞಾನವೇ ಕಂಪ್ಯೂಟರ್ ಸೈನ್ಸ್ ಆಗಿದೆ. ಶಿಕ್ಷಣಕ್ಕೆ ಬಹಳಷ್ಟು ಮಹತ್ವ ಕೋಡಬೇಕಿದೆ. ಈ ಸಮಾಜದ ಅಭಿವೃದ್ಧಿಗಾಗಿ ವಿಶೇಷ ಯೋಜನೆ ಮಾಡಲಾಗಿದೆ. Sc, st ಹಾಸ್ಟೆಲ್ ಗಳನ್ನ ಐದು ಹೊಸದಾಗಿ ನೀಡಲಾಗಿದೆ. Sc, st ಜನಾಂಗದವರಿಗೆ ಉಚಿತವಾಗಿ 75 ಯೂನಿಟ್ ವಿದ್ಯುತ್ ಮಂಜೂರು ಮಾಡಲಾಗಿದೆ. ಇದುವರೆಗೂ ಯಾರು ಮಾಡಿರಲಿಲ್ಲ. ಹಳ್ಳಿಗಳಲ್ಲಿ ವಿದ್ಯುತ್ ಸರಿಯಾಗಿ ಇಲ್ಲ. ಇದೆಲ್ಲಾ ಬದಲಾವಣೆ ಆಗಬೇಕು. ಮಕ್ಕಳಿಗೆ ವಿದ್ಯುತ್ ನೀಡಿದ್ರೆ ಓದುತ್ತಾರೆ, ಉದ್ಯೋಗಿಗಳಾಗುತ್ತಾರೆ. ಭೋವಿ ಸಮಾಜದ ಅಭಿವೃದ್ಧಿ ನಿಗಮಕ್ಕೆ 170 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲು ಸೂಚಿಸಲಾಗಿದೆ. ಇನ್ನೊಂದು ವಾರದಲ್ಲಿ ಅಭಿವೃದ್ಧಿ ನಿಗಮಕ್ಕೆ ದಕ್ಷ ಅಧ್ಯಕ್ಷರ ನೇಮಕ ಮಾಡಲಾಗುತ್ತದೆ. Sc, st ಹೆಣ್ಣು ಮಕ್ಕಳಿಗೆ ಸಾಲ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಭಾಷಣದಲ್ಲಿ ಹೇಳಿದರು.
ಮಂಜುನಾಥ್ ಪ್ರಸಾದ್ ರನ್ನ ಹಾಡಿ ಹೊಗಳಿದ ಸಿಎಂ
ಇನ್ನು ಇದೇ ವೇಳೆ ಸಿಎಂ ಬೊಮ್ಮಾಯಿ ಮಂಜುನಾಥ್ ಪ್ರಸಾದ್ ರನ್ನು ಹಾಡಿ ಹೊಗಳಿದ್ದಾರೆ. ಎಂತಹ ಸಂದರ್ಭದಲ್ಲೂ ಕೂಡ ಅವರು ಎದುರಿಸುವ ಸಾಮರ್ಥ್ಯ ಇದೆ. ಅವರು ಈ ಹುದ್ದೆಯನ್ನ ಕೇಳಿರಲಿಲ್ಲ, ನಾನೇ ಕರೆದು ಕೊಟ್ಟಿದ್ದೇನೆ. ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹಾರ ಮಾಡುವ ವ್ಯಕ್ತಿ ಮಂಜುನಾಥ್ ಪ್ರಸಾದ್. ವೆಸ್ಟ್ ಬೆಂಗಾಲ್ ನಲ್ಲಿ ಅವರು ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಅವರು ನಾನು ಗೆಲ್ಲಬೆಕೆಂದು ಆಟವಾಡುವ ಅಧಿಕಾರಿ ಮಂಜುನಾಥ್ ಪ್ರಸಾದ್. ಇವರ ಬದುಕು ನಿಮಗೂ ಪ್ರೇರಣೆ ಯಾಗಲಿ ಎಂದರು.
ಇನ್ನು ಮತ್ತೊಂದೆಡೆ ತುಮಕೂರು ವಿವಿಯಲ್ಲಿ ಸಾವರ್ಕರ್ ಅಧ್ಯಯನ ಪೀಠ ವಿಚಾರಕ್ಕೆ ಸಂಬಂಧಿಸಿ ಸಿಎಂ ಬೊಮ್ಮಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದು ಆಂತರಿಕವಾಗಿ ತುಮಕೂರು ವಿಶ್ವವಿದ್ಯಾಲಯಕ್ಕೆ ಬಿಟ್ಟ ವಿಚಾರ. ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ನಲ್ಲಿ ತೀರ್ಮಾನ ಮಾಡ್ಬೇಕು. ತುಮಕೂರು ವಿವಿ ಸಮ್ಮತಿಸಿ ಪಾಸ್ ಮಾಡಿದರೆ ಸ್ಥಾಪನೆ ಆಗುತ್ತೆ. ಸಾವರ್ಕರ್ ಅಧ್ಯಯನ ಪೀಠಕ್ಕೆ ಬೇಕಾದ ಸಹಕಾರ ನೀಡುತ್ತೇವೆ ಎಂದರು.
ಹಾಗೂ ಸಾವರ್ಕರ್ ಅಧ್ಯಯನ ಪೀಠಕ್ಕೆ ಸರ್ಕಾರ ಒತ್ತಡವೆಂಬ ಮಾಜಿ ಡಿಸಿಎಂ ಡಾ.ಪರಮೇಶ್ವರ್ ಆರೋಪಕ್ಕೆ ಸಿಎಂ ಉತ್ತರಿಸಿದ್ದಾರೆ. ಒಬ್ಬೊಬ್ಬರು ಒಂದೊಂದು ಕಾಲದಲ್ಲಿ ಒಂದೊಂದು ಪೀಠ ಸ್ಥಾಪಿಸಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಿದ್ದಾರೆ. ಅವೆಲ್ಲವೂ ಆಗಿನ ಕಾಲದ ಒತ್ತಡ ಅಷ್ಟೇ ಎಂದು ಸಿಎಂ ತಿರುಗೇಟು ಕೊಟ್ಟಿದ್ದಾರೆ.
Published On - 3:37 pm, Sun, 28 August 22