ತುಮಕೂರು: ಆ ಜಾಗದಲ್ಲಿ ಜನ ನಿಲ್ಲೋದಕ್ಕೂ ಭಯ ಪಡ್ತಿದ್ದಾರೆ. ಯಾಕಂದ್ರೆ, ಒಂದಲ್ಲ, ಎರಡಲ್ಲ, ಸುಮಾರು 60ಕ್ಕೂ ಹೆಚ್ಚು ಅಪಘಾತಗಳು ಅಲ್ಲಿ ನಡೆದಿವೆ. 30 ಕ್ಕೂ ಹೆಚ್ಚು ಜನ ಆ ಜಾಗದಲ್ಲೇ ಉಸಿರು ಚೆಲ್ಲಿದ್ದಾರೆ. ತಿರುವಿನ ಈ ದಾರಿಯಲ್ಲಿ, ಯಾವ ಹೊತ್ತಿನಲ್ಲಿ ಏನಾಗುತ್ತೋ ಗೊತ್ತಿಲ್ಲ. ದಿನಕ್ಕೊಂದು ಅಪಘಾತ ಇಲ್ಲಿ ತಪ್ಪಿದ್ದಲ್ಲ. ವಾರಕ್ಕೊಬ್ಬರಾದ್ರೂ ಜೀವ ಬಿಡ್ತಾನೆ ಇರ್ತಾರೆ. ಯಾಕಂದ್ರೆ, ಅಂತಹ ಡೆಡ್ಲಿ ಹೈವೇ ಇದು.
ಹೌದು.. ಸಾಲು ಸಾಲು ಅಪಘಾತಗಳಿಗೆ ಸಾಕ್ಷಿಯಾಗ್ತಿರೋ ಇದು ಕೆರೆಗಳ ಪಾಳ್ಯ. ತುಮಕೂರು ಜಿಲ್ಲೆ ಮಧುಗಿರಿ ಸಮೀಪದ ಈ ಕೆರೆಗಳಪಾಳ್ಯ ಗ್ರಾಮದಲ್ಲಿ, ರಾಜ್ಯ ಹೆದ್ದಾರಿ 4 ಹಾದು ಹೋಗುತ್ತೆ. ಆದ್ರೆ, ಕಳೆದೊಂದು ವರ್ಷದಿಂದ ಇಲ್ಲಿ ಸುಮಾರು 60 ಕ್ಕೂ ಹೆಚ್ಚು ಅಪಘಾತಗಳಾಗಿವೆ. 30ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಕೆಶಿಪ್ನ ಅವೈಜ್ಙಾನಿಕೆ ರಸ್ತೆ ಕಾಮಗಾರಿಯೇ ಇದಕ್ಕೆಲ್ಲ ಕಾರಣ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ.
ಇನ್ನೂ ಈ ವಾರದಲ್ಲೇ ಇಲ್ಲಿ ನಾಲ್ಕು ಅಪಘಾತಗಳಾಗಿದ್ದು, ಮೂವರು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ರಸ್ತೆ ಬದಿಯೇ ಸರ್ಕಾರಿ ಶಾಲೆ, ಹಾಲಿನ ಡೈರಿ ಇದೆ. ಹೆದ್ದಾರಿಯಲ್ಲಿ ಅತಿವೇಗದಲ್ಲಿ ವಾಹನಗಳು ತಿರುಗಾಡ್ತವೆ. ತಿರುವಿನಿಂದ ಬಂದ ವಾಹನಗಳು ಏಕಾಏಕಿ, ಪಾದಚಾರಿಗಳ ಮೇಲೆ ಹರಿಯುತ್ತಿವೆ. ಸಾಲು ಸಾಲು ಅಪಘಾತಗಳಿಂದ ಆತಂಕಗೊಂಡು ಜನ, ಮೊನ್ನೆಯಷ್ಟೇ ಪ್ರತಿಭಟನೆ ಮಾಡಿದ್ರು. ಇದೀಗ, ಸ್ಕೈ ವಾಕರ್ ಇಲ್ಲ ಬೈಪಾಸ್ ಮೂಲಕ ವಾಹನಗಳನ್ನ ಡೈವರ್ಟ್ ಮಾಡ್ಬೇಕು ಅಂತ ಪಟ್ಟು ಹಿಡಿದಿದ್ದಾರೆ.