Tumkur News: ವಿದ್ಯೋದಯ ಕಾನೂನು ಕಾಲೇಜಿನ ಟ್ರಸ್ಟಿ ಪ್ರೋ ಎಚ್ಎಸ್ ಶೇಷಾದ್ರಿ ನಿಧನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 31, 2022 | 7:41 PM

ತುಮಕೂರಿನ ಸಿದ್ದಗಂಗಾ ಮಠದ ಉಚ್ವಾಟಿತ ಗೌರಿಶಂಕರ್ ಸ್ವಾಮೀಜಿ ಪರವಾಗಿ ಸುಪ್ರೀಂಕೋರ್ಟ್​ನಲ್ಲಿ ಶೇಷಾದ್ರಿ ಅವರು ವಾದಿಸಿದ್ದರು.

Tumkur News: ವಿದ್ಯೋದಯ ಕಾನೂನು ಕಾಲೇಜಿನ ಟ್ರಸ್ಟಿ ಪ್ರೋ ಎಚ್ಎಸ್ ಶೇಷಾದ್ರಿ ನಿಧನ
ಎಚ್​.ಎಸ್.ಶೇಷಾದ್ರಿ
Follow us on

ತುಮಕೂರು: ಹಿರಿಯ ವಕೀಲ ಹಾಗೂ ತುಮಕೂರಿನ ವಿದ್ಯೋದಯ ಕಾನೂನು ಶಿಕ್ಷಣ ಸಂಸ್ಥೆಯ ಟ್ರಸ್ಟಿ ಪ್ರೊ ಎಚ್.ಎಸ್.ಶೇಷಾದ್ರಿ (99) (HS Sheshadri) ನಗರದಲ್ಲಿ ಬುಧವಾರ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ವಿದ್ಯೋದಯ ಸಂಸ್ಥೆಯ ಅಧ್ಯಕ್ಷರೂ ಆಗಿದ್ದ ಅವರ ಶಿಷ್ಯರು ದೇಶದ ವಿವಿಧೆಡೆ ವಕೀಲರು ಹಾಗೂ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಗರದಲ್ಲಿ ಅವರ ಅಭಿಮಾನಿ ಬಳಗವೂ ದೊಡ್ಡದಾಗಿದೆ. ತುಮಕೂರಿನಲ್ಲಿ ಶಿಕ್ಷಣ ಹಾಗೂ ಕಾನೂನು ಸೇವೆಯ ವಲಯಕ್ಕೆ ಶೇಷಾದ್ರಿ ಅವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ವಿದ್ಯೋದಯ ಕಾನೂನು ವಿದ್ಯಾಲಯ ಹಾಗೂ ಕೆಂಪೇಗೌಡ ಪಟ್ಟಣ ಸಹಕಾರ ಬ್ಯಾಂಕಿನ ಸಂಸ್ಥಾಪಕರಾಗಿ ಅವರು ಅಪೂರ್ವ ಸೇವೆ ಸಲ್ಲಿಸಿದ್ದರು. ಜಿಲ್ಲೆಯಲ್ಲಿ ಲಯನ್ ಶೇಷಾದ್ರಿ ಎಂದೇ ಅವರನ್ನು ಕರೆಯಲಾಗುತ್ತದೆ.

ತುಮಕೂರಿನ ಸಿದ್ದಗಂಗಾ ಮಠದ ಉಚ್ವಾಟಿತ ಗೌರಿಶಂಕರ್ ಸ್ವಾಮೀಜಿ ಪರವಾಗಿ ಸುಪ್ರೀಂಕೋರ್ಟ್​ನಲ್ಲಿ ಶೇಷಾದ್ರಿ ಅವರು ವಾದಿಸಿದ್ದರು. ಶೇಷಾದ್ರಿ ಅವರ ಪ್ರಬಲ ವಾದ ಮಂಡನೆಯ ನಂತರ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ಆದೇಶಿಸಿತ್ತು.

ಶೇಷಾದ್ರಿ ನಿಧನಕ್ಕೆ ಅಬಕಾರಿ ಸಚಿವ ಕೆ.ಗೋಪಾಲಯ್ಯ ಸಂತಾಪ ಸೂಚಿಸಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸುವುದಾಗಿ ಅಬಕಾರಿ ಗೋಪಾಲಯ್ಯ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.