ಮದರಸಾದಲ್ಲಿ ನಿರಂತರ ಹಿಂಸೆ ಕೊಡುತ್ತಿದ್ದ ಧರ್ಮ ಬೋಧಕ: ದೌರ್ಜನ್ಯ ತಾಳಲಾರದೆ ತಪ್ಪಿಸಿಕೊಂಡ ಬಿಹಾರದ 24 ಮಕ್ಕಳು!

ತುಮಕೂರಿನ ಮದರಸಾವೊಂದರಲ್ಲಿ 24 ಮಕ್ಕಳಿಗೆ ದೈಹಿಕ ಹಿಂಸೆ ಮತ್ತು ಬಲವಂತದ ದುಡಿಮೆ ಮಾಡಿಸುತ್ತಿದ್ದ ಆರೋಪದ ಮೇಲೆ ಮೌಲಾಲಿ ಎಂಬ ಧರ್ಮಬೋಧಕನ ವಿರುದ್ಧ ಪ್ರಕರಣ ದಾಖಲಾಗಿದೆ. ದೌರ್ಜನ್ಯ ತಾಳಲಾರದೆ ಮದರಸಾದಿಂದ ತಪ್ಪಿಸಿಕೊಂಡು ತವರಿಗೆ ತೆರಳಲು ಬೆಂಗಳೂರು ರೈಲ್ವೇ ನಿಲ್ದಾಣ ತಲುಪಿದ್ದ ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ.

ಮದರಸಾದಲ್ಲಿ ನಿರಂತರ ಹಿಂಸೆ ಕೊಡುತ್ತಿದ್ದ ಧರ್ಮ ಬೋಧಕ: ದೌರ್ಜನ್ಯ ತಾಳಲಾರದೆ ತಪ್ಪಿಸಿಕೊಂಡ ಬಿಹಾರದ 24 ಮಕ್ಕಳು!
ಸಾಂದರ್ಭಿಕ ಚಿತ್ರ (ಎಐ)
Image Credit source: MediaForge AI

Updated on: May 14, 2026 | 9:21 AM

ತುಮಕೂರು, ಮೇ 14: ತುಮಕೂರು (Tumakuru) ಜಿಲ್ಲೆಯ ಮದರಸಾವೊಂದರಲ್ಲಿ ಮಕ್ಕಳಿಗೆ ದೈಹಿಕ ಕಿರುಕುಳ ಮತ್ತು ಬಾಲಕಾರ್ಮಿಕ ಪದ್ಧತಿಯಂತಹ ಅಮಾನವೀಯ ಕೃತ್ಯ ಎಸಗಿದ ಆರೋಪದ ಮೇಲೆ ಧರ್ಮಬೋಧಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮದರಸಾದಲ್ಲಿ ನಡೆಯುತ್ತಿದ್ದ ದೌರ್ಜನ್ಯ ತಾಳಲಾರದೆ 24 ಮಕ್ಕಳು ಅಲ್ಲಿಂದ ತಪ್ಪಿಸಿಕೊಂಡು ಬಂದ ಸಿನಿಮೀಯ ಘಟನೆಯ ನಂತರ ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಮುಖ್ಯಾಂಶಗಳು

  • ತುಮಕೂರು ಜಿಲ್ಲೆಯ ಆಮಲಾಪುರ ಗ್ರಾಮದ ಮದರಸಾದಲ್ಲಿ 24 ಮಕ್ಕಳಿಗೆ ದೈಹಿಕ ಕಿರುಕುಳ ನೀಡಿದ ಆರೋಪ.
  • ಧರ್ಮ ಬೋಧಕ ಮೌಲಾಲಿ ಎಂಬಾತನ ವಿರುದ್ಧ ಪ್ರಕರಣ ದಾಖಲು.
  • ಬೆಂಗಳೂರಿನ ಕೆಎಸ್‌ಆರ್ ರೈಲ್ವೇ ನಿಲ್ದಾಣದಲ್ಲಿ ಮಕ್ಕಳನ್ನು ರಕ್ಷಿಸಿದ ರೈಲ್ವೇ ರಕ್ಷಣಾ ಪಡೆ

ಘಟನೆಯ ವಿವರ

ತುಮಕೂರಿನ ಮದರಸಾದಿಂದ ತಪ್ಪಿಸಿಕೊಂಡಿದ್ದ 8 ರಿಂದ 17 ವರ್ಷ ವಯಸ್ಸಿನ 24 ಮಕ್ಕಳು ಬಿಹಾರದ ತಮ್ಮ ಮನೆಗಳಿಗೆ ಮರಳಲು ಯತ್ನಿಸುತ್ತಿದ್ದರು. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಈ ಮಕ್ಕಳನ್ನು ಗಮನಿಸಿದ ರೈಲ್ವೇ ರಕ್ಷಣಾ ಪಡೆ (RPF) ಅಧಿಕಾರಿಗಳು ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಮದರಸಾದಲ್ಲಿ ನಡೆಯುತ್ತಿದ್ದ ಕರಾಳ ಕೃತ್ಯಗಳು ಹೊರಬಂದಿವೆ. ಮದರಸಾದಲ್ಲಿ ಹಿಂಸೆ ನೀಡುತ್ತಿದ್ದರು ಮತ್ತು ಮದರಸಾದ ಆವರಣದಲ್ಲಿ ಕಾಂಪೌಂಡ್ ಗೋಡೆ ನಿರ್ಮಿಸುವಂತಹ ಕಠಿಣ ಕೆಲಸಗಳನ್ನು ಬಲವಂತವಾಗಿ ಮಾಡಿಸಲಾಗುತ್ತಿತ್ತು ಎಂದು ಮಕ್ಕಳು ತಿಳಿಸಿದ್ದಾರೆ.

ತನಿಖೆ ಮತ್ತು ಕ್ರಮ

ಮಕ್ಕಳನ್ನು ಸದ್ಯ ಮಕ್ಕಳ ಕಲ್ಯಾಣ ಸಮಿತಿಯ (CWC) ವಶಕ್ಕೆ ನೀಡಲಾಗಿದ್ದು, ಅವರಿಗೆ ಕೌನ್ಸೆಲಿಂಗ್ ಮಾಡಲಾಗುತ್ತಿದೆ. ಈ ಪ್ರಕರಣವನ್ನು ಮೊದಲು ರೈಲ್ವೇ ಪೊಲೀಸರು ದಾಖಲಿಸಿಕೊಂಡು, ನಂತರ ಹೆಚ್ಚಿನ ತನಿಖೆಗಾಗಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಆರೋಪಿ ಮೌಲಾಲಿ ವಿರುದ್ಧ ಬಾಲಾಪರಾಧ ನ್ಯಾಯ ಕಾಯ್ದೆ (JJ Act), ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಬಾಲಕಾರ್ಮಿಕ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಹೆಣ್ಮಕ್ಕಳಿಗೆ ಕೋರಮಂಗಲ ರಾತ್ರಿ ಸಂಚಾರಕ್ಕೆ ಡೇಂಜರ್​: ಗಂಡನ ಜೊತೆಗಿದ್ದರೂ ಬರ್ತೀಯಾ ಎಂದು ಕೇಳ್ತಾರೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us