
ತುಮಕೂರು, ಡಿಸೆಂಬರ್ 07: ಸುಮಾರು 7 ವರ್ಷದ ಹಿಂದೆ ತುಮಕೂರಿನಲ್ಲಿ (Tumkur) ನಡೆದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈ ಕೋರ್ಟ್ (Karnataka High Court) ಮಹತ್ವದ ತೀರ್ಪು ನೀಡಿದ್ದು, ವಾಹನ ಸವಾರನ ಬಳಿ ಲೈಸೆನ್ಸ್ ಇಲ್ಲವೆಂಬ ಕಾರಣಕ್ಕೆ ಆತನ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿದೆ ಎಂದರ್ಥವಲ್ಲ ಎಂದು ಹೇಳಿದೆ. ವಾಹನ ಸವಾರನ ಲೈಸೆನ್ಸ್ ರದ್ದಾದ ಎಂಟು ದಿನಗಳೊಳಗೆ ಈ ಅಪಘಾತ ಸಂಭವಸಿದ್ದು, ಈ ಹಿನ್ನೆಲೆ ಸವಾರನಿಗೆ ದಂಡ ವಿಧಿಸಲಾಗಿತ್ತು.
ತುಮಕೂರಿನ ಹೊನ್ನವಳ್ಳಿ ಗ್ರಾಮದ ನಿವಾಸಿಯಾದ ರಂಜಿತ್, 2018ರ ಏಪ್ರಿಲ್ 25 ರಂದು ತಿಪಟೂರು- ಹುಲಿಯೂರ್ ರಸ್ತೆಯಲ್ಲಿ ಅಪಘಾತಕ್ಕೊಳಗಾಗಿದ್ದರು. ಅವರು ಆರೋಪಿಸುವಂತೆ ಇನ್ನೋರ್ವ ಬೈಕ್ ಸವಾರ ಬಸವರಾಜ್ ಎನ್ನುವವರ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿತ್ತು. ಆಕ್ಸಿಡೆಂಟ್ನಲ್ಲಿ ಗಂಭೀರ ಗಾಯಗೊಂಡಿದ್ದ ರಂಜಿತ್, ತಿಪಟೂರು ಮೋಟಾರ್ ಅಪಘಾತ ಪರಿಹಾರ ನ್ಯಾಯ ಮಂಡಳಿಯ ಮೆಟ್ಟಿಲೇರಿ 15 ಲಕ್ಷ ರೂ. ಪರಿಹಾರಕ್ಕೆ ಒತ್ತಾಯಿಸಿದ್ದರು. ಈ ಹಿನ್ನಲೆ 2021 ಮಾರ್ಚ್ 23ರಂದು ನ್ಯಾಯಮಂಡಳಿಯು ಬಸವರಾಜ್ನ ಡ್ರೈವಿಂಗ್ ಲೈಸೆನ್ಸ್ ರದ್ದಾಗಿದ್ದ ಕಾರಣ ದಂಡ ವಿಧಿಸಿತ್ತು. ವಿಮಾದಾರರಿಗೆ 7 ಪ್ರತಿಶತ ಬಡ್ಡಿಯೊಂದಿಗೆ 6,22,295 ರೂ. ಪರಿಹಾರ ನೀಡುವಂತೆ ಸೂಚಿಸಿತ್ತು. ಇಷ್ಟಕ್ಕೆ ಸಮಾಧಾನ ಪಡದ ರಂಜಿತ್, ಹೆಚ್ಚಿನ ಪರಿಹಾರದ ಆಶಯದಿಂದ ಹೈಕೋರ್ಟ್ ಮೆಟ್ಟಿಲೇರಿದ್ದರು.
ವೆಹಿಕಲ್ ಆ್ಯಕ್ಟ್ ಸೆಕ್ಷನ್ 14ರ ನಿಂಭದನೆಯಡಿಯಲ್ಲಿ ಡ್ರೈವಿಂಗ್ ಲೈಸೆನ್ಸ್ ಮುಗಿದು 30 ದಿನಗಳ ಒಳಗೆ ಪರವಾನಗಿ ನವೀಕರಣಗೊಳ್ಳಬೇಕು. ಅಲ್ಲಿಯವರೆಗೆ ಲೈಸೆನ್ಸ್ ಅನ್ನು ವಿಸ್ತರಿಸಲಾಗುತ್ತದೆ. ಹೀಗಿರುವಾಗ ಬಸವರಾಜ್ನ ಲೈಸೆನ್ಸ್ ರದ್ದಾಗಿ ಕೇವಲ 8 ದಿನಗಳಾಗಿದ್ದನ್ನು ಗಮನಿಸಿದ ನ್ಯಾ. ಉಮೇಶ್ ಅಡಿಗಾ, ಚಾಲಕನ ಲೈಸೆನ್ಸ್ ರದ್ದಾಗಿ 1 ತಿಂಗಳವರೆಗೆ ಪರವಾನಗಿ ನವೀಕರಣಕ್ಕೆ ಅವಕಾಶವಿದ್ದು, ಈ ವೇಳೆ ಯಾವುದೇ ಅಪಘಾತ ಸಂಭವಿಸಿದಲ್ಲಿ ಚಾಲಕನ ಡಿಎಲ್ ಮೇಲೆ ದಂಡ ವಿಧಿಸುವಂತಿಲ್ಲ ಎಂದರು. ಅದಲ್ಲದೆ ಕೇವಲ ಲೈಸೆನ್ಸ್ ರದ್ದಾದ ಮಾತ್ರಕ್ಕೆ ಚಾಲಕನ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿದೆ ಎನ್ನುವುದು ತಪ್ಪು ಎಂದರು.
ಕರ್ನಾಟಕದ ರಾಜ್ಯ ಕಾನೂನು ಪ್ರಾಧಿಕಾರದ ಆದಾಯ ಪಟ್ಟಿಯಂತೆ ರಂಜಿತ್ ಕೃಷಿಕನಾಗಿದ್ದು, ತಿಂಗಳಿಗೆ 12,500 ರೂ.ಗಳಿಸುವುದರಿಂದ 6 ಪ್ರತಿಶತ ಬಡ್ಡಿಯೊಂದಿಗೆ ಹೆಚ್ಚಿನ 2,79,000 ರೂ. ಪರಿಹಾರ ನೀಡುವಂತೆ ವಿಮಾದಾರರಿಗೆ ಹೇಳಲಾಯಿತು. ಅದರೊಂದಿಗೆ ಬಸವರಾಜ್ನ ಕುಟುಂಬವಿಟ್ಟಿದ್ದ ಠೇವಣಿ ಹಣವನ್ನು ಹಿಂದಿರುಗಿಸುವಂತೆ ಆದೇಶಿಸಲಾಯಿತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:50 am, Sun, 7 December 25