
ತುಮಕೂರು, ಸೆಪ್ಟೆಂಬರ್ 30: ಪಶು ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ಕಿಂಗ್ ಪಿನ್ ಆಗಿರುವ ಬಸವರಾಜ್ ಕನ್ನಾಳೆಗೆ ಮತ್ತೊಂದು ಶಾಕ್ ಎದುರಾಗಿದೆ. ತುಮಕೂರು ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯನಾಗಿದ್ದ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬಸವರಾಜ್ ಸ್ಥಾನ ರದ್ದಾಗುವ ಸಾಧ್ಯತೆ ಬಹುತೇಕ ನಿಶ್ಚಿತ ಎನ್ನಲಾಗಿದೆ. ರಾಜಕಾರಣಿಗಳ ಪ್ರಭಾವ ಹೊಂದಿದ್ದ ಈತ ರಾಜ್ಯಪಾಲರ ಕೋಟಾದಲ್ಲಿ ನಾಮ ನಿರ್ದೇಶಿತಗೊಂಡು, ಕಳೆದ ಒಂದು ವರ್ಷದಿಂದಲೂ ಯೂನಿವರ್ಸಿಟಿಯ ಸಿಂಡಿಕೇಟ್ ಸದಸ್ಯನಾಗಿದ್ದ. ಆದರೀಗ ಅದಕ್ಕೂ ಕಂಟಕ ಎದುರಾಗಿದೆ.
ಕೆಪಿಎಸ್ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹುದ್ದೆಯಲ್ಲಿ ಕನ್ನಾಳೆಯೇ ಪ್ರಮುಖ ಆರೋಪಿ ಎನ್ನಲಾಗಿರುವ ಕಾರಣ ರಾಜ್ಯಪಾಲರ ನಿರ್ದೇಶನದಂತೆ ತುಮಕೂರು ವಿಶ್ವ ವಿದ್ಯಾಲಯದಿಂದ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ಸೆಪ್ಟೆಂಬರ್ 10 ಮತ್ತು 21ರಂದು ಎರಡು ಬಾರಿ ನೋಟಿಸ್ ಕೊಡಲಾಗಿದ್ದು, ವಿಶ್ವವಿದ್ಯಾಲಯದ ಸಿಬ್ಬಂದಿ ಬಿದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿರುವ ಬಸವರಾಜ್ ಮನೆಗೇ ಹೋಗಿ ಆತನ ಪೋಷಕರಿಗೂ ನೋಟಿಸ್ ತಲುಪಿಸಿದ್ದರು. ಕೆಪಿಎಸ್ಸಿ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಬಗ್ಗೆ ಅದರಲ್ಲಿ ಉಲ್ಲೇಖಿಸಲಾಗಿದ್ದು, ನೋಟಿಸ್ ತಲುಪಿದ 7 ದಿನದೊಳಗೆ ಉತ್ತರ ಕೊಡುವಂತೆ ಸೂಚಿಸಲಾಗಿತ್ತು. ಒಂದು ವೇಳೆ ಉತ್ತರಿಸದೇ ಇದ್ದರೆ ವಜಾಗೊಳಿಸುವ ಎಚ್ಚರಿಕೆಯನ್ನೂ ನೀಡಲಾಗಿತ್ತು.
ಇದನ್ನೂ ಓದಿ: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ: ಇಡಿ ತನಿಖೆಯಲ್ಲಿ ಆರೋಪಿಗಳ ಕಳ್ಳಾಟ ಬಹಿರಂಗ
ಇನ್ನು ಎರಡನೇ ನೋಟಿಸ್ ನೀಡಿ ಸೆಪ್ಟೆಂಬರ್ 28ಕ್ಕೆ 7 ದಿನ ಮುಗಿದರೂ ಕನ್ನಾಳೆಯಿಂದ ಉತ್ತರ ಬಾರದ ಕಾರಣ ವಿಚಾರವನ್ನು ವಿವಿಯ ಕುಲಪತಿಗಳು ರಾಜ್ಯಪಾಲರಿಗೆ ತಲುಪಿಸಿದ್ದಾರೆ. ಅಲ್ಲದೆ ಕೆಪಿಎಸ್ಸಿ ಹಗರಣದ ತನಿಖೆ ನಡೆಸುತ್ತಿರುವ ತಂಡದಿಂದಲೂ ಕನ್ನಾಳೆ ಪಾತ್ರದ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದ್ದು, ಇದನ್ನೂ ಸಹ ರಾಜ್ಯಪಾಲರಿಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಈಗ ಚೆಂಡು ರಾಜ್ಯಪಾಲರ ಅಂಗಳದಲ್ಲಿ ಇದ್ದು, ಸಿಂಡಿಕೇಟ್ ಸದಸ್ಯ ಕನ್ನಾಳೆ ವಜಾ ಪಕ್ಕಾ ಎನ್ನಲಾಗ್ತಿದೆ. ಹೀಗಿದ್ದರೂ ಅಂತಿಮವಾಗಿ ರಾಜ್ಯಪಾಲರ ನಿರ್ಧಾರ ಏನೆಂಬುದನ್ನು ಕಾದು ನೋಡಬೇಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.