ತುಮಕೂರು, ಸೆ.06: ಕ್ಷೀರಭಾಗ್ಯ ಯೋಜನೆ(Ksheera Bhagya) ಜಾರಿಯಾಗಿ 10 ವರ್ಷ ಹಿನ್ನೆಲೆಯಲ್ಲಿ ಕರ್ನಾಟಕ ಹಾಲು ಒಕ್ಕೂಟದಿಂದ(KMF) ಇಂದು ಮಧುಗಿರಿಯಲ್ಲಿ ರಾಜ್ಯಮಟ್ಟದ ಕ್ಷೀರಭಾಗ್ಯ ದಶಮಾನೋತ್ಸವ ಸಮಾರಂಭ ಆಯೋಜಿಸಲಾಗಿದೆ. ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಿಎಂ ಸಿದ್ದರಾಮಯ್ಯ(Siddaramaiah), ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಭಾಗಿಯಾಗಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಆಗಮಿಸುವ ಸಿಎಂ ಸಿದ್ದರಾಮಯ್ಯ, ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾದ ಕನ್ನಡ ಸಾಹಿತ್ಯ ಭವನ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ವೇದಿಕೆಯಲ್ಲಿ 156 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯ ನೆರವೇರಿಸಲಿದ್ದಾರೆ.
ರಾಜ್ಯಮಟ್ಟದ ಕ್ಷೀರಭಾಗ್ಯ ದಶಮಾನೋತ್ಸವ ಸಂಭ್ರಮಾಚರಣೆಗೆ ಮಧುಗಿರಿ ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಭವ್ಯ, ಬೃಹತ್ ವೇದಿಕೆ ಸಿದ್ಧವಾಗಿದೆ. ವೇದಿಕೆ ಬಳಿ ಹೈನುಗಾರಿಕೆ ಸೊಬಗನ್ನ ಬಿಡಿಸಲಾಗಿದೆ. ವೇದಿಕೆ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಪರಮೇಶ್ವರ್, ರಾಜಣ್ಣರ ಬೃಹತ್ ಕಟೌಟ್ ನಿಲ್ಲಿಸಲಾಗಿದೆ.
ಸಹಕಾರ ಸಚಿವ ಕೆ.ಎನ್.ರಾಜಣ್ಣ ನೇತೃತ್ವದಲ್ಲಿ ರಾಜ್ಯಮಟ್ಟದ ಕ್ಷೀರಭಾಗ್ಯ ದಶಮಾನೋತ್ಸವ ಸಮಾರಂಭ ನಡೆಯುತ್ತಿದ್ದು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ಚಿತ್ರದುರ್ಗ ಹಾಗೂ ಬಳ್ಳಾರಿ ಸೇರಿ ಹಲವು ಜಿಲ್ಲೆಗಳಿಂದ ಒಟ್ಟು 1 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆ ಇದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಅದ್ಧೂರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿಎದ. ಸಮಾರಂಭದಲ್ಲಿ ಒಟ್ಟು 35 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು 13 ಸ್ಟಾಲ್ಗಳನ್ನು ಸ್ಥಾಪಿಸಲಾಗಿದೆ. ತುಮಕೂರು ಎಸ್ಪಿ ರಾಹುಲ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ ನೀಡಲಾಗಿದೆ.
ಇದನ್ನೂ ಓದಿ: ಕ್ಷೀರಭಾಗ್ಯ ದಶಮಾನೋತ್ಸವ : ಹಿಂದೆ ಎಂದೂ ನೋಡದ ಕಾರ್ಯಕ್ರಮ ಮಧುಗಿರಿಯಲ್ಲಿ ಆಯೋಜನೆ; ಜಿ ಪರಮೇಶ್ವರ
ಸರ್ಕಾರಿ ಬಸ್ ಹಾಗೂ ಖಾಸಗಿ ಬಸ್ಗಳು ಸೇರಿದಂತೆ ಒಟ್ಟು 450 ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಒಂದು ಸಾವಿರ ಟಿಟಿ ವಾಹನಗಳು, ಎರಡು ಸಾವಿರ ಕ್ರೂಸರ್ ವಾಹನಗಳು, ಒಂದೂವರೆ ಸಾವಿರ ಕಾರುಗಳಲ್ಲಿ ಜನರು ಆಗಮಿಸುವ ಸಾಧ್ಯತೆ ಇದೆ. ಬರುವ ವಾಹನಗಳಿಗೆ ಮಾರಮ್ಮ ದೇವಾಲಯ, ಸಿದ್ದಾಪುರ ಗೇಟ್, ಟ್ರೀ ಪಾರ್ಕ್ ಲಿಂಗೇನಹಳ್ಳಿ, ಚೇತನ ಸ್ಕೂಲ್ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅವ್ಯವಸ್ಥೆ ಆಗದಂತೆ ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಬರುವವರಿಗೆ ಉಪಹಾರ, ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ ಉಪ್ಪಿಟ್ಟು, ಕೇಸರಿಬಾತ್, ಮಧ್ಯಾಹ್ನ, ಟಮೋಟ ಬಾತ್, ಮೆಂತ್ಯಾಬಾತ್ ಹಾಗೂ ಮೈಸೂರು ಪಾಕ್ ವ್ಯವಸ್ಥೆ ಮಾಡಲಾಗಿದೆ. ಒಟ್ಟು ಮೂರು ಕೌಂಟರ್ಗಳಲ್ಲಿ ಊಟ ವಿತರಣೆ ಮಾಡಲಾಗುತ್ತೆ. ಸುಮಾರು 250 ಬಾಣಸಿಗರಿಂದ ಅಡುಗೆ ವ್ಯವಸ್ಥೆ ಮಾಡಿಸಲಾಗಿದೆ.
ತುಮಕೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:07 am, Wed, 6 September 23