ತುಮಕೂರು: ಧ್ವಜಸ್ತಂಭ ನೆಡುವ ವೇಳೆ ವಿದ್ಯಾರ್ಥಿ ದುರ್ಮರಣವಾದ ದಾರುಣ ಘಟನೆ ಆಗಸ್ಟ್ 15ರಂದು ನಡೆದಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿ ಮೃತ ವಿದ್ಯಾರ್ಥಿ ಚಂದನ್ ಮನೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಂಗಳವಾರ (ಆಗಸ್ಟ್ 17) ಭೇಟಿ ನೀಡಿದ್ದಾರೆ. ತುಮಕೂರು ತಾಲೂಕಿನ ಕರೀಕೆರೆಯಲ್ಲಿರುವ ಬಾಲಕನ ಮನೆಗೆ ಬಿ.ಸಿ. ನಾಗೇಶ್ ಭೇಟಿ ಕೊಟ್ಟಿದ್ದಾರೆ. ಹಾಗೂ ಮೃತನ ಕುಟುಂಬಸ್ಥರಿಗೆ 1 ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಿದ್ದಾರೆ. ಶಿಕ್ಷಣ ಇಲಾಖೆಯಿಂದ 1 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ.
ಕರೀಕೆರೆ ಘಟನೆಯಲ್ಲಿ ದೈವಾಧೀನರಾದ ಹುಡುಗನ ಮನೆಗೆ ಹೋಗಿದ್ವಿ. ತಾಯಿ ಮತ್ತು ಅಜ್ಜಿಗೆ ಸಾಂತ್ವನ ಹೇಳೋ ಕೆಲಸ ಮಾಡಿದೆ. ಕಷ್ಟಪಟ್ಟು ಅಜ್ಜಿ ಮತ್ತು ಆ ತಾಯಿ ಒಬ್ಬನೇ ಮಗನನ್ನು ಸಾಕಿದ್ದರು. ತಂದೆಯನ್ನು ಸಹಿತ ನೋಡದೇ ಇರೋ ಮಗ ಅವನು. ಈಗ ಅನಾಹುತಕ್ಕೆ ಬಲಿಯಾಗಿದ್ದಾನೆ. ಎಷ್ಟೇ ಏನೇ ಮಾಡಿದ್ರು ಅವರ ದುಃಖ ಬರಿಸೋಕೆ ಸಾಧ್ಯ ಇಲ್ಲ. ಸಂಸಾರ ನೆಡೆಸೋದಕ್ಕೆ ಸಹಾಯ ಆಗಲಿ ಅಂತಾ ಒಂದು ಲಕ್ಷ ರೂಪಾಯಿಯ ಚೆಕ್ ವಿತರಿಸಿದ್ದೇವೆ. ಯಾವುದಾದ್ರು ಕೆಲಸ ಕೊಡಿಸಿ ಎಂದು ಆ ಮನೆಯವರು ಕೇಳಿಕೊಂಡ್ರು. ಅದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಜಿಲ್ಲಾಧಿಕಾರಿ ಜೊತೆ ಸಹ ಮಾತನಾಡಿದ್ದೇನೆ. ಇನ್ನಿಬ್ಬರು ಯುವಕರನ್ನು ಸಹ ಹೋಗಿ ನೋಡಿ ಕೊಂಡು ಬಂದಿದ್ದೇನೆ. ಅವರನ್ನು ಇವತ್ತು ಡಿಸ್ಚಾರ್ಜ್ ಮಾಡ್ತಾರೆ ಎಂದು ಭೇಟಿ ಬಳಿಕ ತುಮಕೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ತುಮಕೂರು ತಾಲೂಕಿನ ಕರೀಕೆರೆ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ನಡುವೆ ಈ ಮನಕಲಕುವ ಘಟನೆ ನಡೆದಿತ್ತು. ಮೂವರು ಸರ್ಕಾರಿ ಶಾಲೆಯಲ್ಲಿ ಧ್ವಜಸ್ತಂಭ ನಿಲ್ಲಿಸಲು ಹೋದಾಗ ಮೂವರಿಗೂ ವಿದ್ಯುತ್ ತಂತಿ ತಗುಲಿತ್ತು. ಧ್ವಜಸ್ತಂಭ ನೆಡುವ ವೇಳೆ ವಿದ್ಯುತ್ ಶಾಕ್ ತಗುಲಿ 16 ವರ್ಷದ ಬಾಲಕ ಚಂದನ್ ಕೊನೆಯುಸಿರೆಳೆದಿದ್ದರು. ಶಶಾಂಕ್ (16), ಪವನ್ (22) ಗೆ ಗಾಯವಾಗಿತ್ತು. ಬಳಿಕ ಅವರಿಬ್ಬರಿಗೆ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.
ಮೂವರು ಕರೀಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು. ಇಂದು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಶಾಲೆಗೆ ಧ್ವಜಸ್ತಂಭ ನಿಲ್ಲಿಸಲು ತೆರಳಿದ್ದರು. ಶಿಕ್ಷಕರ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಅಂತ ಪೋಷಕರ ಆರೋಪಿಸಿದ್ದರು. ತುಮಕೂರಿನ ಖಾಸಗಿ ಆಸ್ಪತ್ರೆಗೆ ಡಿಡಿಪಿಐ ನಂಜಪ್ಪ ಭೇಟಿ ನೀಡಿ ಕುಟುಂಬಕ್ಕೆ ಆರ್ಥಿಕ ನೆರವು ನೀಡುತ್ತೇವೆ ಎಂದು ತಿಳಿಸಿದ್ದರು.
ಬಿ.ಸಿ.ನಾಗೇಶ್ ಸಂತಾಪ
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ನೋಡಲು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದರು. ಧ್ವಜಸ್ತಂಭ ನಿಲ್ಲಿಸುವ ವೇಳೆ ವಿದ್ಯುತ್ ಅವಘಡ ಘಟನೆಯಿಂದ ಆಘಾತವಾಗಿದೆ. ಇದು ದುರದೃಷ್ಟಕರ ಘಟನೆ. ಮೃತರ ಕುಟುಂಬಕ್ಕೆ ಸಂತಾಪ ತಿಳಿಸಲು ಬಯಸುತ್ತೇನೆ. ಶಬ್ಧಗಳಿಂದ ದುಃಖ ಶಮನ ಮಾಡಲು ಸಾಧ್ಯವಿಲ್ಲ. ಗಾಯಾಳುಗಳ ಚಿಕಿತ್ಸೆಗೆ ಅವಶ್ಯಕ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಸೂಚನೆ ನೀಡಿದ್ದೇನೆ ಎಂದು ಸಚಿವರು ತಿಳಿಸಿದ್ದರು.
ಹದಿನಾರು ವರ್ಷದ ಬಾಲಕ ಮೃತ ಪಟ್ಟಿದ್ದು ನನ್ನ ಮನಸಿಗೆ ನೋವು ತಂದಿದೆ. ಅವರ ಕುಟುಂಬದ ಜೊತೆ ನಾನು ಇರುತ್ತೇನೆ. ವರದಿ ತರೆಸಿಕೊಂಡು ಕ್ರಮ ಕೈಗೊಳ್ಳಲಾಗುವುದು. ಮುಂದೆ ಈ ರೀತಿ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಶಾಲೆಯಲ್ಲಿ ವಿದ್ಯುತ್ ಲೈನ್ ಹಾದು ಹೋಗದಂತೆ ನಿಗಾ ವಹಿಸಲಾಗುತ್ತದೆ ಎಂದು ಸಚಿವ ನಾಗೇಶ್ ಹೇಳಿದ್ದರು.
ಇದನ್ನೂ ಓದಿ: ಪೋಷಕರಿಗೆ ಸಮಸ್ಯೆ ಆದ ಕಡೆ ಕಾನೂನಿನಡಿ ಕ್ರಮಕೈಗೊಳ್ಳುತ್ತೇವೆ; ಶಿಕ್ಷಣ ಸಚಿವ ಬಿ.ಸಿ.ನಾಗೇಶ್
Published On - 2:51 pm, Tue, 17 August 21