ತುಮಕೂರು: ಇಡೀ ವಿಶ್ವದಲ್ಲಿ ದಾಪುಗಾಲಿಡುತ್ತಾ ಮುಂದೆ ಸಾಗುತ್ತಿರುವ ಕೊರೊನಾ ಮಹಾಮಾರಿಯನ್ನು ಹತ್ತಿಕ್ಕಲು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಪ್ರತಿ ಜಿಲ್ಲೆಯಲ್ಲಿ ಕೋವಿಡ್ ಆಸ್ಪತ್ರೆಗಳು, ಅಗತ್ಯ ವೈದ್ಯಕೀಯ ಪರಿಕರಗಳು ಹೀಗೆ ಹತ್ತು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೆ ಇಷ್ಟಕ್ಕೇ ಸೀಮಿತವಾಗದೆ ಈಗ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊರೊನಾ ಸೋಂಕಿತರು ಮತ್ತು ಸೋಂಕಿನ ಲಕ್ಷಣವನ್ನ ಹೊಂದಿರುವ ನಾಗರಿಕರನ್ನ ಮೊದಲ ಹಂತದಲ್ಲೇ ಪತ್ತೆಹಚ್ಚಲು ಅಗತ್ಯ ಕ್ರಮಗಳನ್ನು ರೂಪಿಸುತ್ತಿದೆ.
ಇದರ ಒಂದು ಭಾಗವಾಗಿ ತುಮಕೂರು ಜಿಲ್ಲೆಯಲ್ಲಿ ಕೋವಿಡ್19 ಮೊಬೈಲ್ ಫೀವರ್ ಕ್ಲಿನಿಕ್ ಬಸ್ಗೆ ಚಾಲನೆ ನೀಡಲಾಗಿದೆ. ಈ ಮೊಬೈಲ್ ಕ್ಲಿನಿಕ್ ಬಸ್ ಮಾರುಕಟ್ಟೆ, ಬಸ್ ನಿಲ್ದಾಣ, ಕಾರ್ಮಿಕರ ಕ್ಯಾಂಪ್ಗಳು, ಕ್ವಾರಂಟೈನ್ ಸೆಂಟರ್, ಕೈಗಾರಿಕಾ ವಸಾಹತು ಮುಂತಾದ ಪ್ರದೇಶಗಳಿಗೆ ತೆರಳಿ ಅಲ್ಲಿನ ಜನರಲ್ಲಿ ಸೋಂಕಿನ ಲಕ್ಷಣಗಳನ್ನ ಪತ್ತೆಹಚ್ಚಲು ಮುಂದಾಗಿದೆ.
ಲಕ್ಷಣ ಕಂಡುಬಂದಲ್ಲಿ ಸ್ವಾಬ್ ಟೆಸ್ಟ್:
ಮೊಬೈಲ್ ಕ್ಲಿನಿಕ್ನ ಸಿಬ್ಬಂದಿ ನೆರೆದಿರುವ ಸಾರ್ವಜನಿಕರಿಗೆ ಮೊದಲು ಥರ್ಮಲ್ ಸ್ಕ್ಯಾನಿಂಗ್ಗೆ ಒಳಪಡಿಸುತ್ತಾರೆ. ಸೋಂಕಿನ ಲಕ್ಷಣ ಕಂಡುಬಂದ್ರೆ ತಕ್ಷಣ ಅವರನ್ನು ಕರೆತಂದು ಸ್ವಾಬ್ ಟೆಸ್ಟ್ ಮಾಡುತ್ತಾರೆ. ಕ್ಲಿನಿಕ್ನ ಸಿಬ್ಬಂದಿ ಇದುವರೆಗೂ 1800 ಜನರನ್ನು ತಪಾಸಣೆ ಮತ್ತು ಪರೀಕ್ಷೆಗೆ ಒಳಪಡಿಸಿದ್ದಾರೆ. ಸಂತಸವೆಂದರೆ, ಇದುವರೆಗೂ ಪರೀಕ್ಷೆಗೆ ಒಳಪಟ್ಟವರಲ್ಲಿ ಒಬ್ಬರಿಗೂ ಸೋಂಕು ಪತ್ತೆಯಾಗಿಲ್ಲವೆಂದು ಕ್ಲಿನಿಕ್ ಸಿಬ್ಬಂದಿ ಹೇಳಿದ್ದಾರೆ.
ಮತ್ತಷ್ಟು ಮೊಬೈಲ್ ಕ್ಲಿನಿಕ್ಗೆ ಬೇಡಿಕೆ:
ಜಿಲ್ಲಾಡಳಿತದ ಈ ವಿನೂತನ ಪ್ರಯತ್ನಕ್ಕೆ ಜಿಲ್ಲೆಯ ಮಂದಿಯಿಂದ ಶಹಬ್ಬಾಸ್ ಗಿರಿ ಸಿಕ್ಕಿದೆ. ಸರ್ಕಾರಿ ಆಸ್ಪತ್ರೆಗಳು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಸಾಕಷ್ಟು ಜನ ಅಲ್ಲಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಕೆಲವು ಖಾಸಗಿ ಕ್ಲಿನಿಕ್ಗಳ ವೈದ್ಯರೂ ಪೂರಕವಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂಬ ಕೊರಗು ಜನರಲ್ಲಿದೆ. ಹೀಗಾಗಿ ಜಿಲ್ಲಾಡಳಿತದ ನಡೆಗೆ ಎಲ್ಲೆಡೆಯಿಂದ ಉತ್ತಮ ಸ್ಪಂದನೆ ದೊರೆತಿದೆ. ಜೊತೆಗೆ ಮೊಬೈಲ್ ಫೀವರ್ ಕ್ಲಿನಿಕ್ ಬಸ್ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಕೂಗು ಸಹ ಕೇಳಿಬಂದಿದೆ.
Published On - 2:31 pm, Wed, 10 June 20