ಕೆಟ್ಟ ಮಾತಾಡಿದ್ದಕ್ಕೆ ಬುದ್ಧಿ ಹೇಳಿದೆ; ಯುವಕನಿಗೆ ಕಪಾಳಮೋಕ್ಷ ಮಾಡಿದ್ದಕ್ಕೆ ಪಾವಗಡ ಶಾಸಕ ಸಮರ್ಥನೆ

| Updated By: ಸುಷ್ಮಾ ಚಕ್ರೆ

Updated on: Apr 20, 2022 | 8:06 PM

ತುಮಕೂರಿನ ಪಾವಗಡ ತಾಲೂಕು ಕಚೇರಿ ಬಳಿ ಈ ಘಟನೆ ನಡೆದಿತ್ತು. ತಮ್ಮ ಗ್ರಾಮಕ್ಕೆ ರಸ್ತೆ, ಕುಡಿಯುವ ನೀರಿಲ್ಲವೆಂದು ಶಾಸಕರ ಬಳಿ ದೂರು ನೀಡಲು ಬಂದಿದ್ದ ಯುವಕನ ಕಪಾಳಕ್ಕೆ ಹೊಡೆದು ಪೊಲೀಸ್ ಸ್ಟೇಷನ್​ಗೆ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು.

ಕೆಟ್ಟ ಮಾತಾಡಿದ್ದಕ್ಕೆ ಬುದ್ಧಿ ಹೇಳಿದೆ; ಯುವಕನಿಗೆ ಕಪಾಳಮೋಕ್ಷ ಮಾಡಿದ್ದಕ್ಕೆ ಪಾವಗಡ ಶಾಸಕ ಸಮರ್ಥನೆ
ಪಾವಗಡದ ಶಾಸಕ ವೆಂಕಟರಮಣಪ್ಪ ಯುವಕನ ಕೆನ್ನೆಗೆ ಬಾರಿಸುತ್ತಿರುವುದು
Follow us on

ತುಮಕೂರು: ತುಮಕೂರಿನ ಪಾವಗಡದ ಯುವಕನೊಬ್ಬ ತಮ್ಮ ಗ್ರಾಮಕ್ಕೆ ರಸ್ತೆ ಹಾಗೂ ನೀರಿನ ಸೌಲಭ್ಯವನ್ನು ಒದಗಿಸಬೇಕೆಂದು ಕೇಳಿದ್ದಕ್ಕೆ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ (MLA Venkataramanappa) ಆತನಿಗೆ ಕಪಾಳಮೋಕ್ಷ ಮಾಡಿದ್ದ ವಿಡಿಯೋ ಭಾರೀ ವೈರಲ್ (Video Viral) ಆಗಿತ್ತು. ಕಾಂಗ್ರೆಸ್ ಶಾಸಕನಿಂದ ಯುವಕನಿಗೆ ಕಪಾಳಮೋಕ್ಷ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗುತ್ತಿದ್ದಂತೆ ತಾವು ಮಾಡಿದ್ದಕ್ಕೆ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ ಸಮರ್ಥನೆ ನೀಡಿದ್ದಾರೆ.

ಆ ಯುವಕನಿಗೆ ಹೊಡೆದಿದ್ದು ಏಕೆಂದು ಪಾವಗಡ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ ಪ್ರತಿಕ್ರಿಯೆ ನೀಡಿದ್ದು, ನಾಗೇನಹಳ್ಳಿಯ ಯುವಕ ತಮ್ಮ ಊರಿನ ರಸ್ತೆ ಹಾಳಾಗಿದೆ ಎಂದು ಹೇಳಿದ. ಆ ರಸ್ತೆಗೆ 3.5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ, ಶೀಘ್ರದಲ್ಲೇ ಗುದ್ದಲಿ ಪೂಜೆ ಮಾಡುತ್ತೇನೆ ಎಂದು ಹೇಳಿದೆ. ಆದರೆ, ಆ ಯುವಕ ಬಹಳ ಕೆಟ್ಟ ಭಾಷೆಯ ಪದಗಳನ್ನು ಬಳಸಿದ. ಅದಕ್ಕೆ ಹಾಗೆಲ್ಲಾ ಮಾತಾಡಬಾರದು ಎಂದು ಕೆನ್ನೆಗೆ ತಟ್ಟಿ, ಬುದ್ಧಿ ಹೇಳಿ ಕಳಿಸಿದೆ ಎನ್ನುವ ಮೂಲಕ ಇದರಲ್ಲಿ ತಮ್ಮದೇನೂ ತಪ್ಪಿಲ್ಲ ಎಂದು ಶಾಸಕ ವೆಂಕಟರಮಣಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಗ್ರಾಮಕ್ಕೆ ನೀರು, ರಸ್ತೆ ಮತ್ತಿತರ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕೆಂದು ಕೇಳಿದ ಯುವಕನಿಗೆ ತುಮಕೂರು ಜಿಲ್ಲೆಯ ಪಾವಗಡ ಶಾಸಕ ವೆಂಕಟರವಣಪ್ಪ ಕಪಾಳಕ್ಕೆ ಬಾರಿಸಿರುವ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ.

ಇಂದು ತುಮಕೂರಿನ ಪಾವಗಡ ತಾಲೂಕು ಕಚೇರಿ ಬಳಿ ಈ ಘಟನೆ ನಡೆದಿತ್ತು. ತಮ್ಮ ಗ್ರಾಮಕ್ಕೆ ರಸ್ತೆ, ಕುಡಿಯುವ ನೀರಿಲ್ಲವೆಂದು ಶಾಸಕರ ಬಳಿ ದೂರು ನೀಡಲು ಬಂದಿದ್ದ ಯುವಕನ ಮೇಲೆ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ ಹಲ್ಲೆ ಮಾಡಿದ್ದರು. ಆ ಯುವಕನ ಕಪಾಳಕ್ಕೆ ಹೊಡೆದು ಪೊಲೀಸ್ ಸ್ಟೇಷನ್​ಗೆ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಈ ದೃಶ್ಯವನ್ನು ಅಲ್ಲಿ ಸೇರಿದ್ದ ಜನರು ರೆಕಾರ್ಡ್​ ಮಾಡಿಕೊಂಡಿದ್ದರು.

ನಾನು ಮೀಟಿಂಗ್ ಮುಗಿಸಿ ಹೊರಗಡೆ ಬಂದಾಗ ನಾಗೇನಹಳ್ಳಿಯ ಯುವಕ ತಮ್ಮ ಊರಿನ ರಸ್ತೆ ಹಾಳಾಗಿದೆ ಎಂದು ಕೇಳಿದ. ಆ ರಸ್ತೆಗೆ 3.5 ಕೋಟಿ ಅನುದಾನ ಬಿಡುಗಡೆ ಆಗಿದೆ, ಶೀಘ್ರದಲ್ಲೇ ಗುದ್ದಲಿ ಪೂಜೆ ಮಾಡ್ತೀನಿ ಎಂದು ಹೇಳಿದೆ. ಅದಕ್ಕೆ ಅವನು ಬಹಳ ಕೆಟ್ಟಭಾಷೆಯ ಪದಗಳನ್ನು ಬಳಸಿದ. ಹೇಯ್, ಹಾಗೆಲ್ಲಾ ಮಾತನಾಡಬಾರದು ಎಂದು ಬುದ್ದಿ ಹೇಳಿ ಕಳಿಸಿದೆ. ಅದನ್ನು ದೊಡ್ಡ ವಿಷಯ ಮಾಡುವಂಥದ್ದು ಏನೂ ಇಲ್ಲ ಎಂದು ಶಾಸಕ ವೆಂಕಟರಮಣಪ್ಪ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ರಸ್ತೆ, ಕುಡಿಯುವ ನೀರು ಕೇಳಿದ ಯುವಕನ ಕಪಾಳಕ್ಕೆ ಹೊಡೆದ ಶಾಸಕ ವೆಂಕಟರಮಣಪ್ಪ

ಗ್ರಾಮಕ್ಕೆ ರಸ್ತೆ, ನೀರಿನ ಸೌಲಭ್ಯ ಕೇಳಿದ ಯುವಕನಿಗೆ ಪಾವಗಡದ ಕಾಂಗ್ರೆಸ್ ಶಾಸಕರಿಂದ ಕಪಾಳಮೋಕ್ಷ