ತುಮಕೂರು: ದೇವಸ್ಥಾನದ ದಲಿತ ಅರ್ಚಕನ ಮೇಲೆ ಸವರ್ಣೀಯರಿಂದ ಮಾರಣಾಂತಿಕ ಹಲ್ಲೆ

|

Updated on: Apr 08, 2023 | 10:25 PM

ಅಸ್ಪೃಶ್ಯತೆ ಹೋಗಲಾಡಿಸಲು ಕಾನೂನು ಇದ್ದರೂ ಕೆಲವೊಂದು ಕಡೆಗಳಲ್ಲಿ ಈಗಲೂ ಪಿಡುಗು ಮುಂದುವರಿದಿದೆ. ದೇವಸ್ಥಾನದಲ್ಲಿ ಪೂಜೆ ಮಾಡುವ ದಲಿತ ಅರ್ಚಕನ ಮೇಲೆ ಜಾತ್ರೆಯಂದು ಸವರ್ಣೀಯರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ.

ತುಮಕೂರು: ದೇವಸ್ಥಾನದ ದಲಿತ ಅರ್ಚಕನ ಮೇಲೆ ಸವರ್ಣೀಯರಿಂದ ಮಾರಣಾಂತಿಕ ಹಲ್ಲೆ
ಸವರ್ಣೀಯರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಲಿತ ಅರ್ಚಕ (ಎಡ ಚಿತ್ರ) ಮತ್ತು ಬಿದರೆಗುಡಿಯ ಬಿದಿರಾಂಬಿಕ ಹಾಗೂ ಚಿಕ್ಕಮ್ಮ ದೇವಿ ದೇವಸ್ಥಾನ (ಬಲ ಚಿತ್ರ)
Follow us on

ತುಮಕೂರು: ಅಸ್ಪೃಶ್ಯತೆ (Untouchability) ಎಂಬ ಕೆಟ್ಟ ಆಚರಣೆ ರಾಜ್ಯದಲ್ಲಿ ಮುಂದುವರಿದಿರುವುದು ಬೇಸರದ ಸಂಗತಿಯೇ ಸರಿ. ದೇವಸ್ಥಾನದಲ್ಲಿ ಪೂಜೆ ಮಾಡುವ ದಲಿತ ಅರ್ಚಕನ ಮೇಲೆ ಜಾತ್ರೆಯಂದು ಸವರ್ಣೀಯರು ಮಾರಣಾಂತಿಕವಾಗಿ ಹಲ್ಲೆ (Assault on Dalit priest) ನಡೆಸಿದ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಬಿದರೆಗುಡಿ ಗ್ರಾಮದಲ್ಲಿರುವ ಮುಜಾರಾಯಿ ಇಲಾಖೆಗೆ ಸೇರಿದ ಬಿದರೆಗುಡಿಯ ಬಿದಿರಾಂಬಿಕ ಹಾಗೂ ಚಿಕ್ಕಮ್ಮ ದೇವಿಯ ದೇವಸ್ಥಾನದ ಅರ್ಚಕ ಲಿಂಗರಾಜು ಮೇಲೆ ಸವರ್ಣೀಯರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಸ್ಥಳಕ್ಕೆ ಹೊನ್ನವಳ್ಳಿ, ತಿಪಟೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಬಿದಿರಾಂಬಿಕ ಹಾಗೂ ಚಿಕ್ಕಮ್ಮ ದೇವಿಯ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ದೇವಿಯ ಬ್ರಹ್ಮ ರಥೋತ್ಸವ ನಡೆದಿದೆ. ಆದರೆ ಈ ರಥೋತ್ಸವದ ವೇಳೆ ಅರ್ಚಕನನ್ನು ದೇವಸ್ಥಾನಕ್ಕೆ ಕರೆಸಿ ಅನ್ಯ ಜನಾಂಗದ ವ್ಯಕ್ತಿಗಳಿಂದ ಹಲ್ಲೆ ನಡೆಸಿದ ಆರೋಪ ಮಾಡಲಾಗಿದೆ. ಹಲ್ಲೆಗೆ ಒಳಗಾದ ಅರ್ಚಕನಿಗೆ ಚಿಕಿತ್ಸೆ ಪಡೆಯಲು ಬಿಡದ ಆರೋಪವೂ ಮಾಡಲಾಗಿದೆ. ಮಾತ್ರವಲ್ಲದೆ, ಪೂಜೆಗೆ ತೆರಳಿದ್ದ ಇತರೆ ದಲಿತರ ಮೇಲೂ ಹಲ್ಲೆಗೆ ಯತ್ನ ನಡೆಸಲಾಗಿದೆ ಎನ್ನಲಾಗುತ್ತಿದೆ. ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮ್ಯೂಸಿಕ್ ಸೌಂಡ್ ಕಡಿಮೆ ಮಾಡುವಂತೆ ಹೇಳಿದ್ದ ಸೇನಾಧಿಕಾರಿ ಸೋದರನ ಮೇಲೆ ಹಲ್ಲೆ, ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಕಳೆದ ತಿಂಗಳು ಮಾರ್ಚ್​ನಲ್ಲಿ ಕನಕದಾಸರ ತವರೂರು ಹಾವೇರಿಯಲ್ಲಿ ಅಸ್ಪೃಶ್ಯತೆ ಆಚರಣೆ ಬೆಳಕಿಗೆ ಬಂದಿತ್ತು. ದೇವಸ್ಥಾನ ಪ್ರವೇಶಿಸಿದ್ದ ದಲಿತ ಮಹಿಳೆ ಮತ್ತು ಆಕೆಯ ಮಗನ ಮೇಲೆ ಸವರ್ಣೀಯರು ಹಲ್ಲೆ ನಡೆಸಿ ದಾಂದಲೆ ನಡೆಸಿದ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ನಂದಿಹಳ್ಳಿಯಲ್ಲಿ ನಡೆದಿತ್ತು. ದಲಿತರಿಗೆ ಪ್ರವೇಶ ನಿರ್ಬಂಧವನ್ನು ಧಿಕ್ಕರಿಸಿ ಬಸವೇಶ್ವರನ ದರ್ಶನಕ್ಕೆ ದೇಗುಲ ಪ್ರವೇಶಿಸಿದ್ದಕ್ಕೆ ಆಕ್ರೋಶಗೊಂಡ ಸವರ್ಣೀಯರು, ಗುಂಪುಕಟ್ಟಿಕೊಂಡು ದೇಗುಲ ಪ್ರವೇಶಿಸಿದವರ ಮನೆ ಮೇಲೆ ದಾಳಿ ಮಾಡಿ ಇಬ್ಬರ ಮೇಲೆ ಹಲ್ಲೆ ನಡೆಸಿದ್ದರು.

ಇದಕ್ಕೂ ಮುನ್ನ ಜನವರಿ ತಿಂಗಳಲ್ಲಿ ಸವರ್ಣಿಯರು ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ದ ಘಟನೆ ಗದಗ ತಾಲೂಕಿನ ಶ್ಯಾಗೋಟಿ ಗ್ರಾಮದಲ್ಲಿ ನಡೆದಿತ್ತು. ದೇವಸ್ಥಾನ, ಕಿರಾಣಿ ಶಾಪ್, ಹೊಟೇಲ್​ಗಳಿಗೆ ದಲಿತರು ಹೋದರೆ ಅಂಗಡಿ ಮಾಲೀಕರು ಯಾವ ವಸ್ತುಗಳನ್ನೂ ನೀಡುತ್ತಿಲ್ಲ. ಯಾಕೆ ಕೊಡಲ್ಲ ಅಂತ ಪ್ರಶ್ನೆ ಮಾಡಿದಕ್ಕೆ ವಾಗ್ವಾದ ನಡೆದಿದೆ. ನಿಮಗೆ ಏನಾದ್ರೂ ಕೊಟ್ಟರೆ ದಂಡ ಹಾಕುತ್ತಾರೆ ಎಂದು ಅಂಗಡಿಕಾರರು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಪರಿಸ್ಥಿತಿ ಹೀಗಿದ್ದರೂ ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು ಮಾತ್ರ ಗ್ರಾಮಕ್ಕೆ ಭೇಟಿ ನೀಡಿರಲಿಲ್ಲ. ಇನ್ನು ಗ್ರಾಮದಲ್ಲಿ ನಡೆಯುವ ಕೆಟ್ಟ ಆಚರಣೆಯ ಬಗ್ಗೆ ಯುವಕರು ಜಿಲ್ಲಾಧಿಕಾರಿಗಳಿಗೆ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:24 pm, Sat, 8 April 23