ಹುಟ್ಟುಹಬ್ಬದ ದಿನವೇ ನಿವೃತ್ತ ಸೈನಿಕನಿಗೆ ಸೈಬರ್ ಶಾಕ್: ‘ಗಿಫ್ಟ್’ ಆಸೆಗೆ ಬಿದ್ದ ಯೋಧನಿಗೆ 2.82 ಲಕ್ಷ ರೂ. ವಂಚನೆ

ತುಮಕೂರಿನಲ್ಲಿ ನಿವೃತ್ತ ಯೋಧರೊಬ್ಬರು ತಮ್ಮ ಹುಟ್ಟುಹಬ್ಬದ ದಿನವೇ ಸೈಬರ್ ವಂಚಕರ ಜಾಲಕ್ಕೆ ಸಿಕ್ಕಿ ಬಿದ್ದಿದ್ದಾರೆ. 'ಗಿಫ್ಟ್' ಕಳುಹಿಸುವ ನೆಪದಲ್ಲಿ ಅಪರಿಚಿತರು ಕರೆ ಮಾಡಿ, ಕೊರಿಯರ್ ಮತ್ತು ಕಸ್ಟಮ್ಸ್ ಶುಲ್ಕದ ಹೆಸರಿನಲ್ಲಿ ಹಂತ ಹಂತವಾಗಿ 2.82 ಲಕ್ಷ ರೂಪಾಯಿ ವಂಚಿಸಿದ್ದಾರೆ. ಸೈಬರ್ ವಂಚಕರ ಬಲೆಯಲ್ಲಿ ಸಿಲುಕಿ ಹಣ ಕಳೆದುಕೊಂಡ ಯೋಧರು ಈಗ ತುಮಕೂರು ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹುಟ್ಟುಹಬ್ಬದ ದಿನವೇ ನಿವೃತ್ತ ಸೈನಿಕನಿಗೆ ಸೈಬರ್ ಶಾಕ್: ‘ಗಿಫ್ಟ್’ ಆಸೆಗೆ ಬಿದ್ದ ಯೋಧನಿಗೆ 2.82 ಲಕ್ಷ ರೂ. ವಂಚನೆ
ಸಾಂದರ್ಭಿಕ ಚಿತ್ರ
Image Credit source: PTI
Edited By:

Updated on: Jun 20, 2026 | 12:47 PM

ತುಮಕೂರು, ಜೂ.20: ನಿವೃತ್ತರಾಗಿದ್ದ ಯೋಧರೊಬ್ಬರಿಗೆ ಅವರ ಹುಟ್ಟುಹಬ್ಬದ ದಿನದಂದೇ ಸೈಬರ್ ಖದೀಮರು ಬರೋಬ್ಬರಿ ಲಕ್ಷಾಂತರ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹ್ಯಾಪಿ ಬರ್ತ್‌ಡೇ ಎಂದು ಶುಭಕೋರಿ, ಗಿಫ್ಟ್ ಕಳುಹಿಸುವ ನೆಪದಲ್ಲಿ ನಿವೃತ್ತ ಯೋಧನಿಗೆ ಬರೋಬ್ಬರಿ 2.82 ಲಕ್ಷ ರೂಪಾಯಿ ನಾಮ ಹಾಕಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮದ ನಿವಾಸಿ, ನಿವೃತ್ತ ಯೋಧ ಶಿವಕುಮಾರ್ ವಂಚನೆಗೊಳಗಾದವರು.

ಜೂನ್ 20ರಂದು ನಿವೃತ್ತ ಯೋಧ ಶಿವಕುಮಾರ್ ಅವರ ಹುಟ್ಟುಹಬ್ಬವಿತ್ತು. ಇದೇ ದಿನ ಮುಂಜಾನೆ ಅಪರಿಚಿತ ವ್ಯಕ್ತಿಗಳು ಶಿವಕುಮಾರ್ ಅವರಿಗೆ ಕರೆ ಮಾಡಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ. ಮಾತುಕತೆಯ ನಡುವೆ, “ನಿಮ್ಮ ಹುಟ್ಟುಹಬ್ಬಕ್ಕೆ ನಮ್ಮ ಕಡೆಯಿಂದ ಒಂದು ಅಮೂಲ್ಯವಾದ ಗಿಫ್ಟ್ ನೀಡುತ್ತಿದ್ದೇವೆ” ಎಂದು ನಂಬಿಸಿ, ಗಿಫ್ಟ್ ಪಾರ್ಸೆಲ್ ಕಳುಹಿಸಲು ಅವರ ಮನೆಯ ವಿಳಾಸವನ್ನು ಪಡೆದುಕೊಂಡಿದ್ದಾರೆ.

ವಿಳಾಸ ಪಡೆದ ಕೆಲವೇ ಹೊತ್ತಿನಲ್ಲಿ ಮತ್ತೆ ಕರೆ ಮಾಡಿದ ಸೈಬರ್ ವಂಚಕರು, “ನಿಮ್ಮ ಗಿಫ್ಟ್ ರೆಡಿಯಾಗಿದೆ. ಆದರೆ ಕೊರಿಯರ್ ಹಾಗೂ ಕಸ್ಟಮ್ಸ್ ಡ್ಯೂಟಿ ಚಾರ್ಜ್ ಅನ್ನು ಮುಂಗಡವಾಗಿ ಪಾವತಿಸಬೇಕು. ಆ ಹಣವನ್ನು ಗಿಫ್ಟ್ ಸಿಕ್ಕ ತಕ್ಷಣ ರಿಫಂಡ್ ಮಾಡಲಾಗುವುದು” ಎಂದು ನಂಬಿಸಿ ಆನ್‌ಲೈನ್ ಲಿಂಕ್ ಕಳುಹಿಸಿದ್ದಾರೆ. ಇದನ್ನು ನಿಜವೆಂದು ನಂಬಿದ ಶಿವಕುಮಾರ್ ಅವರು ವಿವಿಧ ಶುಲ್ಕಗಳ ನೆಪದಲ್ಲಿ ಹಂತ ಹಂತವಾಗಿ ಬರೋಬ್ಬರಿ 2.82 ಲಕ್ಷ ರೂಪಾಯಿ ಹಣವನ್ನು ವಂಚಕರ ಖಾತೆಗೆ ವರ್ಗಾವಣೆ ಮಾಡಿದ್ದಾರೆ.

ಇದನ್ನೂ ಓದಿ: ನಟಿ ರುಕ್ಮಿಣಿ ವಸಂತ ಡೀಪ್‌ಫೇಕ್ ಪ್ರಕರಣ: ಸಿಕ್ಕಿಬಿದ್ದ ಹೈಟೆಕ್ ಕಿಲಾಡಿಗಳ ಹಿನ್ನೆಲೆ ನೋಡಿ ಪೊಲೀಸರೇ ಶಾಕ್!

ಯಾವಾಗ ಖಾತೆಯಿಂದ ಅಷ್ಟೂ ಹಣ ವರ್ಗಾವಣೆಯಾಯಿತೋ, ತಕ್ಷಣವೇ ವಂಚಕರು ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇದರಿಂದ ತಾನು ಸೈಬರ್ ಜಾಲದ ಬಲೆಗೆ ಬಿದ್ದು ವಂಚನೆಗೊಳಗಾಗಿರುವುದು ಶಿವಕುಮಾರ್ ಅವರಿಗೆ ತಡವಾಗಿ ಅರಿವಾಗಿದೆ. ಸದ್ಯ ನಿವೃತ್ತ ಯೋಧ ಶಿವಕುಮಾರ್ ಅವರು ತುಮಕೂರು ಸಿಇಎನ್ (CEN) ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಪೊಲೀಸರು ವಂಚಕರ ಪತ್ತೆಗಾಗಿ ಕಾರ್ಯಚರಣೆ ನಡೆಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:46 pm, Sat, 20 June 26

ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
Loading...
Unable to load recommendations.
Follow Us