ಪ್ರತ್ಯೇಕ ರಸ್ತೆ ಅಪಘಾತಗಳು: ಐವರು ಸಾವು, ಓರ್ವನ ಕಾಲು ಮುರಿತ

ತುಮಕೂರು, ಬೆಂಗಳೂರು ಗ್ರಾಮಾಂತರ, ಕೊಪ್ಪಳ ಸೇರಿದಂತೆ ಕರ್ನಾಟಕದ ವಿವಿಧೆಡೆ ನಡೆದ ಭೀಕರ ರಸ್ತೆ ಅಪಘಾತಗಳಲ್ಲಿ ಹಲವರು ಸಾವನ್ನಪ್ಪಿದ್ದಾರೆ. ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ, ಕಾರು ಅಪಘಾತ, ಕ್ಯಾಂಟರ್ ಮತ್ತು ಟಿಪ್ಪರ್ ಡಿಕ್ಕಿಯಿಂದ ಸಾವು-ನೋವು ಸಂಭವಿಸಿದೆ. ಭೀಕರ ರಸ್ತೆ ಅಪಘಾತಗಳಲ್ಲಿ ಐವರು ಸಾವನ್ನಪ್ಪಿದ್ದು, ಓರ್ವ ವ್ಯಕ್ತಿಯ ಕಾಲು ಮುರಿದಿದೆ.

ಪ್ರತ್ಯೇಕ ರಸ್ತೆ ಅಪಘಾತಗಳು: ಐವರು ಸಾವು, ಓರ್ವನ ಕಾಲು ಮುರಿತ
ಪ್ರಾತಿನಿಧಿಕ ಚಿತ್ರ
Image Credit source: thehansindia
Edited By:

Updated on: Mar 20, 2026 | 8:09 PM

ತುಮಕೂರು, ಮಾರ್ಚ್​ 20: ಕೆಎಸ್ಆರ್​ಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್​ನಲ್ಲಿ ತೆರಳುತ್ತಿದ್ದ ಇಬ್ಬರು ಸಾವರರು ಸಾವನ್ನಪ್ಪಿರುವಂತಹ (death) ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಬರಗೂರು ದಾಸರಹಳ್ಳಿ ಮಧ್ಯೆ ನಡೆದಿದೆ. ಬರಗೂರು ನಿವಾಸಿ ನರಸಿಂಹಮೂರ್ತಿ (26) ಮತ್ತು ಎಲ್ಪೆನಹಳ್ಳಿ ನಿವಾಸಿ ನವೀನ್ (26) ಮೃತ‌ರು. ಸ್ಥಳಕ್ಕೆ ಪಟ್ಟನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ನಡೆದಿದ್ದೇನು?

ನರಸಿಂಹಮೂರ್ತಿ ಮತ್ತು ನವೀನ್​ ಇಬ್ಬರು ಬೈಕ್​​ನಲ್ಲಿ ತೆರಳುತ್ತಿದ್ದರು. ಈ ವೇಳೆ ಪಾವಗಡದಿಂದ ತುಮಕೂರಿನತ್ತ ಬರುತಿದ್ದ ಬಸ್​ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಬೈಕ್​ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. KSRTC ಬಸ್ ಡಿಕ್ಕಿ ರಭಸಕ್ಕೆ ಬೈಕ್​ನಲ್ಲಿ ತೆರಳುತ್ತಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೆಟ್ಟಕೋಟೆ‌ ಗ್ರಾಮದಲ್ಲಿ ಕಾರೊಂದು ಡಿವೈಡರ್​ಗೆ ಡಿಕ್ಕಿ ಹೊಡೆದು ಬಳಿಕ ಬೈಕ್​ಗೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ವೆಂಕಟೇಗೌಡ(45) ಮೃತ ವ್ಯಕ್ತಿ.

ಇದನ್ನೂ ಓದಿ: ಕೋತಿ ಕಿತಾಪತಿಗೆ ಹೆಜ್ಜೇನು ದಾಳಿ: ಜೀವ ಬಿಟ್ಟ ಕಾರು ಶೋರೂಂ ಮೇಲ್ವಿಚಾರಕ!

ಆಕಾಶ್ ಕಾಲೇಜಿನ ಮೆಡಿಕಲ್ ವಿದ್ಯಾರ್ಥಿ ಆನಂದ್​ಗೆ ಸೇರಿದ ಕಾರು. ಅತಿವೇಗ ಹಾಗೂ ಅಜಾಗರೂಕತೆಯ ಡ್ರೈವಿಂಗ್​ನಿಂದ ಅಪಘಾತ ಸಂಭವಿಸಿರುವ ಆರೋಪ ಕೇಳಿಬಂದಿದೆ. ಇನ್ನು ಸ್ಥಳಕ್ಕೆ ದೇವನಹಳ್ಳಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ರಸ್ತೆ ಬದಿ ನಿಂತಿದ್ದ ಟಿಪ್ಪರ್​ಗೆ ಕ್ಯಾಂಟರ್ ಡಿಕ್ಕಿ: ಇಬ್ಬರು ಸಾವು

ಕೊಪ್ಪಳ ಜಿಲ್ಲೆಯ ಕುಷ್ಟಗಿ ಹೊರವಲಯದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ರಸ್ತೆ ಬದಿ ನಿಂತಿದ್ದ ಟಿಪ್ಪರ್​​​ಗೆ ಕ್ಯಾಂಟರ್ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿದ್ದಾರೆ. ಜಿಲ್ಲೆ ಯಲಬುರ್ಗಾ ತಾಲೂಕಿನ ಕಟಿಗೆಹಳ್ಳಿ ಗ್ರಾಮದ ಹುಚ್ಚಪ್ಪ ಹಾಗೂ ಗೋವಿಂದ್ ಮೃತರು.

ಕ್ಯಾಂಟರ್ ಸೊಲ್ಲಾಪುರದಿಂದ ಹೊಸಪೇಟೆ ಕಡೆ ಹೊರಟಿತ್ತು. ಈ ವೇಳೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಟಿಪ್ಪರ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದಿಂದಾಗಿ ಕ್ಯಾಂಟರ್​ನಲ್ಲಿದ್ದ ಡಿಸೇಲ್ ಸೋರಿಕೆಯಾಗಿ ರಸ್ತೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬುಲೆರೋ ವಾಹನ ಡಿಕ್ಕಿ: ಗ್ರಾ. ಪಂ ಮಾಜಿ ಅಧ್ಯಕ್ಷನ ಕಾಲು ಮುರಿತ

ಬೈಕ್​ಗೆ ಬುಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷನ ಕಾಲು ಮುರಿದಿರುವಂತಹ ಘಟನೆ ರಾಯಚೂರು ತಾಲ್ಲೂಕಿನ ಕಲ್ಮಲಾ ಬಳಿ ನಡೆದಿದೆ. ಮುರಾಂಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಪ್ಪರ ಕಾಲು ಮುರಿದಿದೆ.

ಇದನ್ನೂ ಓದಿ: ಹುಳಿಯಾರು ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಅನುಮಾನಸ್ಪದ ಸಾವು: ಕೇಸ್​​ ತನಿಖೆ ಹೊಣೆ ಸಿಐಡಿಗೆ

ಬೈಕ್​ನಲ್ಲಿದ್ದ ಮೂವರಿಗೆ ಗಾಯಗಳಾಗಿದ್ದು, ಆಂಬ್ಯುಲೆನ್ಸ್ ಕರೆಸಿ ಗಾಯಗೊಂಡವರನ್ನು ಸ್ಥಳೀಯರು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us