ತುಮಕೂರು, ಸೆ.05: ಕಲ್ಪತರು ನಾಡು ತುಮಕೂರು(Tumakuru) ಜಿಲ್ಲೆಯಲ್ಲಿ ಜೀತ ಪದ್ದತಿ ಇನ್ನೂ ಜೀವಂತವಾಗಿದ್ದು, ತಿಪಟೂರು ತಾಲೂಕಿನ ಹಾಲ್ಕುರಿಕೆ ಬಳಿ ಚಾಮರಾಜನರ ಜಿಲ್ಲೆಯ ಕೊಳ್ಳೆಗಾಲ, ಮೈಸೂರು, ವಿಜಯಪುರ ಹಾಗೂ ಬಳ್ಳಾರಿ ಮೂಲದ 38 ಕೂಲಿ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಹೌದು, ದಲಿತ ಸಮುದಾಯಕ್ಕೆ ಸೇರಿದ ಕೂಲಿ ಕಾರ್ಮಿಕರು ಇವರಾಗಿದ್ದು, ಶುಂಠಿ ಕ್ಯಾಂಪ್ಗಳಲ್ಲಿ ಜಮೀನು ಮಾಲೀಕರು ಒತ್ತೆಯಾಗಿರಿಸಿಕೊಂಡಿದ್ದರು. ಇದೀಗ ಎಲ್ಲ ಕಾರ್ಮಿಕರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಹೊರಗಿನ ಕೆಲ ಪ್ರಭಾವಿಗಳು, ರೈತರ ಜಮೀನುಗಳನ್ನ ಗುತ್ತಿಗೆ ಪಡೆದು ನೂರಾರು ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆ ಬೆಳೆಯುತ್ತಾರೆ. ಈ ಶುಂಠಿ ಹೊಲದಲ್ಲಿ ಕೆಲಸ ಮಾಡಲು ಹೊರ ಜಿಲ್ಲೆಗಳ ಬಡ ಕೂಲಿ ಕಾರ್ಮಿಕರನ್ನು 2 ರಿಂದ 3 ವರ್ಷಗಳಿಂದ ಕೂಲಿ ಹಣ ನೀಡದೆ ಶೆಡ್ಗಳಲ್ಲಿ ಒತ್ತೆಯಾಳುಗಳಂತೆ ಇರಿಸಿಕೊಂಡು ದುಡಿಸಿಕೊಳ್ಳಲಾಗುತ್ತದೆಯಂತೆ. ಅಷ್ಟೇ ಅಲ್ಲ, ಕೆಲಸ ಮಾಡದಿದ್ದರೆ ಅಥವಾ ಊರಿಗೆ ಹೋಗಲು ಯತ್ನಿಸಿದರೆ ಕಾವಲುಗಾರರು ದೊಣ್ಣೆಗಳಿಂದ ಹಲ್ಲೆ ಮಾಡುತ್ತಾರಂತೆ.
ಇದನ್ನೂ ಓದಿ:ಮೈಸೂರು ಜಿಲ್ಲೆಯಲ್ಲಿ ಜೀತ ಪದ್ಧತಿ ಇನ್ನೂ ಜೀವಂತ: ಜೀತಕ್ಕಿಟ್ಟುಕೊಂಡು ಕೂಡಿಹಾಕಿದ್ದ ತಾಯಿ, ಮಕ್ಕಳ ರಕ್ಷಣೆ
ಕಳೆದ ಎರಡು ವರ್ಷದಿಂದ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನಲ್ಲಿ ದುಡಿಸಿಕೊಳ್ಳಲಾಗಿತ್ತು. ಅಲ್ಲಿಂದ ಬೇರೆ ಬೇರೆ ಶುಂಠಿ ಕ್ಯಾಂಪ್ಗಳಿಗೆ ಕಾರ್ಮಿಕರನ್ನ ಸಾಗಾಟ ಮಾಡಲಾಗುತ್ತಿದೆ. ಈ ಕುರಿತು ಮಾಲೀಕರುಗಳ ವಿರುದ್ಧ ಕೂಲಿ ಕಾರ್ಮಿಕರು ಗಂಭೀರ ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸರು ಭೇಟಿ ನೀಡಿ 38 ಜನ ಕೂಲಿ ಕಾರ್ಮಿಕರನ್ನು ವಶಕ್ಕೆ ಪಡೆದು, ಸಮುದಾಯ ಭವನದಲ್ಲಿರಿಸಿ ಕಾರ್ಮಿಕರಿಗೆ ಉಪಚಾರ ಮಾಡಲಾಗುತ್ತಿದೆ. ಸ್ಥಳಕ್ಕೆ ತಹಶೀಲ್ದಾರ್, ಕಾರ್ಮಿಕ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಹೊನ್ನವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ