ಕಲ್ಪತರು ನಾಡಲ್ಲಿ ಅಚ್ಚರಿ ಘಟನೆ; 3 ತಿಂಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿ ದಿಢೀರ್ ಪ್ರತ್ಯಕ್ಷ, ತಿಥಿ ಕಾರ್ಯ ಮುಗಿಸಿ ಸುಮ್ಮನಿಂದ ಕುಟುಂಬಸ್ಥರಲ್ಲಿ ಸಂತೋಷ, ಆತಂಕ

| Updated By: ಆಯೇಷಾ ಬಾನು

Updated on: Dec 01, 2021 | 9:26 AM

ನಾಗರಾಜಪ್ಪ ಎಂಬ ವ್ಯಕ್ತಿ ಮೂರು ತಿಂಗಳ ಹಿಂದೆ ಸಾವನ್ನಪ್ಪಿದ್ದಾನೆ ಅಂತಾ ತಿಳಿದು ಈತನ ಕುಟುಂಬಸ್ಥರು ಬೇರೊಂದು ಶವಕ್ಕೆ ಅಂತ್ಯಕ್ರಿಯೆ ನಡೆಸಿ, ತಿಥಿ ಮಾಡಿ ಆತನ ಫೋಟೋಗೆ ಫ್ರೇಮ್ ಸಹ ಮಾಡಿಸಿ ಮನೆ ಗೋಡೆಗೆ ನೇತುಹಾಕಿದ್ರು. ಆದ್ರೆ ನಾಗರಾಜಪ್ಪ ದಿಢೀರ್ ಪ್ರತ್ಯಕ್ಷವಾದ ಬೆನ್ನಲ್ಲೇ ಈತನನ್ನ ನೋಡಿ ಕುಟುಂಬಸ್ಥರು, ಗ್ರಾಮಸ್ಥರು ಅಚ್ಚರಿಯ ಜೊತೆ ಜೊತೆಗೆ ಗೊಂದಲಕ್ಕೂ ಒಳಗಾಗಿದ್ದಾರೆ.

ಕಲ್ಪತರು ನಾಡಲ್ಲಿ ಅಚ್ಚರಿ ಘಟನೆ; 3 ತಿಂಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿ ದಿಢೀರ್ ಪ್ರತ್ಯಕ್ಷ, ತಿಥಿ ಕಾರ್ಯ ಮುಗಿಸಿ ಸುಮ್ಮನಿಂದ ಕುಟುಂಬಸ್ಥರಲ್ಲಿ ಸಂತೋಷ, ಆತಂಕ
3 ತಿಂಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿ ದಿಢೀರ್ ಪ್ರತ್ಯಕ್ಷ
Follow us on

ತುಮಕೂರು: ಆ ವ್ಯಕ್ತಿ 3 ತಿಂಗಳ ಹಿಂದೆ ಮೃತಪಟ್ಟಿದ್ದ. ಶವಸಂಸ್ಕಾರ, ತಿಥಿಕಾರ್ಯ ಎಲ್ಲವೂ ಮುಗಿದಿತ್ತು. ಕುಟುಂಬಸ್ಥರು ಬಹುತೇಕ ನೋವಿನಿಂದ ಹೊರಬಂದಿದ್ದರು. ಆದ್ರೆ ಅಂದು ಮೃತಪಟ್ಟಿದ್ದ ಎನ್ನಲಾಗಿದ್ದ ವ್ಯಕ್ತಿ 3 ತಿಂಗಳ ನಂತ್ರ ದಿಢೀರ್ ಪ್ರತ್ಯಕ್ಷನಾಗಿದ್ದಾನೆ.

ಮಗಳ ಜೊತೆಯಲ್ಲಿದ್ದ ಅಪ್ಪ ದಿಢೀರ್ ನಾಪತ್ತೆ
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗಿರೋ ಪ್ರೇಮಲತಾರ ತಂದೆ ನಾಗರಾಜಪ್ಪ 12 ವರ್ಷದ ಹಿಂದೆ ಚಿಕ್ಕಮಾಲೂರನ್ನ ತೊರೆದು ಯಾರಿಗು ಹೇಳದೆ‌ ಹೋಗಿದ್ರು. 3 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ವಾಸವಿರೋ ನಾಗರಾಜಪ್ಪನ ಎರಡನೇ ಮಗಳಾದ ನೇತ್ರಾವತಿಯ ಮನೆಯಲ್ಲಿ ದಿಢೀರ್ ಪ್ರತ್ಯಕ್ಷರಾಗಿದ್ರಂತೆ. ಬೆಂಗಳೂರಿನ ಸೆಂಟ್ಜಾನ್ಸ್ ಆಸ್ಪತ್ರೆಯಲ್ಲಿ‌ ಸಹಾಯಕ ನರ್ಸ್ ಆಗಿ ಕೆಲಸ ಮಾಡ್ತಿರೋ ನೇತ್ರಾವತಿ ಅಂದಿನಿಂದಲೂ ತಂದೆ ನಾಗರಾಜಪ್ಪನನ್ನ ನೋಡಿಕೊಳ್ತಿದ್ರು. ಮಗಳು ಕೆಲಸ ಮಾಡೋ ಆಸ್ಪತ್ರೆಯಲ್ಲಿಯೇ ನಾಗರಾಜಪ್ಪ ಸಹ ಚಿಕ್ಕಪುಟ್ಟ ಕೆಲಸ ಮಾಡಿಕೊಂಡಿದ್ದರು. ಆದರೆ ಮೂರು ತಿಂಗಳ ಹಿಂದೆ ಇದ್ದಕ್ಕಿದಂತೆ ನಾಗರಾಜಪ್ಪ ಕಾಣೆಯಾಗಿದ್ರಂತೆ. ಎಷ್ಟೇ ಹುಡುಕಿದರು ಯಾರಿಗೂ ಸಿಕ್ಕಿರಲಿಲ್ಲವಂತೆ.

ಅಪ್ಪನೆಂದು ತಿಳಿದು ಅಪರಿಚಿತ ಶವಕ್ಕೆ ಅಂತ್ಯಸಂಸ್ಕಾರ
ನಾಗರಾಜಪ್ಪ ಕಾಣೆಯಾದ 8 ದಿನದ ಬಳಿಕ ಅಂದ್ರೆ ಸೆಪ್ಟೆಂಬರ್ 8 ರಂದು ಸೆಂಟ್ಜಾನ್ಸ್ ಆಸ್ಪತ್ರೆ ಕಾಂಪೌಂಡ್ ಬಳಿ ಅಪರಿಚಿತ ಶವ ಪತ್ತೆಯಾಗಿತ್ತು. ಆಸ್ಪತ್ರೆಯ ಸಿಬ್ಬಂದಿ ನೇತ್ರಾವತಿಗೆ ವಿಷಯ ತಿಳಿಸಿದ್ದು, ತಂದೆ ನಾಗರಾಜಪ್ಪನೇ ಮೃತಪಟ್ಟಿರಬಹುದೆಂದು ಸಂಶಯ ವ್ಯಕ್ತಪಡಿಸಿದ್ದಾರೆ. ಅಪರಿಚಿತ ಶವ ನಾಗರಾಜಪ್ಪನ ಹೋಲಿಕೆ ಇದ್ದಿದ್ರಿಂದ ಮಗಳು ನೇತ್ರಾವತಿ ಸಹ ಶವ ತನ್ನ ತಂದೆಯದ್ದೇ ಎಂದು ಒಪ್ಪಿ ಈ ಬಗ್ಗೆ ಕೋರಮಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮರಣ್ಣೋತ್ತರ ಪರೀಕ್ಷೆ ನಡೆಸಿ ಬಳಿಕ ಚಿಕ್ಕಮಾಲೂರಿಗೆ ಶವ ತಂದು ಸಂಸ್ಕಾರ ಮಾಡಿದ್ದರು.

ಸತ್ತು ಹೋದ ಅಂದುಕೊಂಡ್ರೆ ಬದುಕಿಬಂದ
ಶವಸಂಸ್ಕಾರದ ಬಳಿಕ 11 ದಿನಕ್ಕೆ ನಾಗರಾಜಪ್ಪ ತಿಥಿ ಕೂಡ ಮಾಡಲಾಗಿದೆ. ಇನ್ನು ನಾಗರಾಜಪ್ಪನ ಮಗ ಎಲ್ಲ ಕಾರ್ಯ ಮುಗಿಸಿದ್ದ. ಮನೆಯಲ್ಲಿ ನಾಗರಾಜಪ್ಪನ ಫೋಟೋಗೆ ಫ್ರೇಂ ಮಾಡಿಸಿ ಗೋಡೆಗೆ ನೇತುಹಾಕಲಾಗಿದೆ. ಆದರೆ ದಿಢೀರ್ ನಾಗರಾಜಪ್ಪ ಚಿಕ್ಕಮಾಲೂರಿಗೆ ಬಂದು ಎಲ್ಲರನ್ನ ಗಾಬರಿಗೊಳಿಸಿದ್ದ. ಕುಡಿತಕ್ಕೆ ದಾಸನಾಗಿದ್ದ ನಾಗರಾಜಪ್ಪ ಹಿಂದಿನಿಂದಲೂ ಮಾನಸಿಕ ಅಸ್ವಸ್ಥನ ರೀತಿ ವರ್ತಿಸುತ್ತಿದ್ದನಂತೆ. ಮಗಳ‌ ಮನೆಯಿಂದ ಯಾರಿಗೂ ಹೇಳದೇ ಹೋಗಿ ಸಿಕ್ಕ ಕಡೆಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡಿ 3 ತಿಂಗಳು ಬೇರೆಬೇರೆ ಊರುಗಳಲ್ಲಿ ತಿರುಗಾಡಿದ್ದನಂತೆ. ನಂತ್ರ ತನ್ನ ಊರಿಗೆ ಬರಬೇಕೆಂದುಕೊಂಡು ವಾಪಸ್ ಬಂದಿದ್ದಾನೆ. ಬಸ್ನಿಂದ ಇಳಿದ ಕೂಡಲೇ ಆತನನ್ನು ಆಶ್ಚರ್ಯದಿಂದಲೇ ನೋಡಿದ ಗ್ರಾಮಸ್ಥರು ಸತ್ತುಹೋಗಿದ್ದ ವಿಷಯ ತಿಳಿಸಿದ್ದಾರೆ. ಆತನೇ ಎಲ್ಲರನ್ನ ಗುರುತು ಹಿಡಿದು ಮಾತನಾಡಿಸಿದ ಬಳಿಕ ಈತನೇ ಅಸಲಿ ನಾಗರಾಜಪ್ಪ ಎಂದು ತಿಳಿದುಬಂದಿದೆ.

ಮೃತಪಟ್ಟ ವ್ಯಕ್ತಿ ಶವಕ್ಕೂ ನಾಗರಾಜಪ್ಪನಿಗೂ ಸಾಕಷ್ಟು ಹೋಲಿಕೆ ಇತ್ತು. ಇದೇ ಹೋಲಿಕೆ ಇಷ್ಟೆಲ್ಲ ಎಡವಟ್ಟಿಗೆ ಕಾರಣವಾಗಿದೆ. ಅನಾಥ ಶವವನ್ನು ತನ್ನ ತಂದೆಯದ್ದೇ ಅಂತಾ ತಿಳಿದ ಕುಟುಂಬಸ್ಥರು ವಿಧಿವಿಧಾನಗಳನ್ನು ನೆರವೇರಿಸಿ ಅಂತ್ಯಸಂಸ್ಕಾರ ಮಾಡಿದ್ದು ಒಂದು ಕಡೆಯಾದರೆ. ಸತ್ತರು ಅಂದುಕೊಂಡಿದ್ದ ತನ್ನ ತಂದೆಯೇ ಬದುಕಿ ಬಂದಿರೋದು ಕುಟುಂಬಸ್ಥರ ಸಂತಸಕ್ಕೆ ಕಾರಣವಾಗಿದೆ. ಆದರೆ ಈ ಮಧ್ಯೆ ಅಂದು ಸಿಕ್ಕಿದ್ದ ಅನಾಥ ಶವ ಯಾರದ್ದು ಅನ್ನೋ ಪ್ರಶ್ನೆಗೆ ಪೊಲೀಸರು ತಮ್ಮ ತನಿಖೆಯ ಮೂಲಕ ಉತ್ತರ ಹುಡುಕ ಹೊರಟಿದ್ದಾರೆ.

ವರದಿ: ಮಹೇಶ್, ಟಿವಿ9 ತುಮಕೂರು

ಇದನ್ನೂ ಓದಿ: ಗುಬ್ಬಿ: ಪ್ರೀತಿಸಿ ಮದುವೆಯಾದಗಿದ್ದ ಪತ್ನಿಯನ್ನೆ ಕೊಲೆ ಮಾಡಿದವನಿಗೆ ಜೀವಾವಧಿ ಶಿಕ್ಷೆ