ಜೆಡಿಎಸ್ ಅಭ್ಯರ್ಥಿ ಗೌರಿಶಂಕರ್ ಬಿಗ್ ರಿಲೀಫ್: ಚುನಾವಣೆಗೆ ಸ್ಪರ್ಧಿಸಲು ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್

|

Updated on: Apr 17, 2023 | 1:26 PM

2018ರ ಚುನಾವಣೆಯಲ್ಲಿ ಮತದಾರರಿಗೆ ವಿಮಾ ಪಾಲಿಸಿಯ ನಕಲಿ ಬಾಂಡ್ ವಿತರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಗೌರಿ ಶಂಕರ್​ಗೆ ಬಿಗ್​ ರಿಲೀಫ್ ಸಿಕ್ಕಿದೆ.

ಜೆಡಿಎಸ್ ಅಭ್ಯರ್ಥಿ ಗೌರಿಶಂಕರ್ ಬಿಗ್ ರಿಲೀಫ್: ಚುನಾವಣೆಗೆ ಸ್ಪರ್ಧಿಸಲು ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್
ಗೌರಿಶಂಕರ್
Follow us on

ನನದೆಹಲಿ: ಕರ್ನಾಟಕ ವಿಧಾನಭೆ ಚುನಾವಣೆ ತಯಾರಿಯಲ್ಲಿದ್ದ ಜೆಡಿಎಸ್ ಅಭ್ಯರ್ಥಿ ಡಿಸಿ ಗೌರಿಶಂಕರ್‌(DC Gaurishankar) ಅವರಿಗೆ ಸುಪ್ರೀಂ ಕೋರ್ಟ್(supreme court) ಬಿಗ್ ರಿಲೀಫ್ ನೀಡಿದೆ. ಈ ಬಾರಿಯ ವಿಧಾನಸಭೆ ಚುನಾವಣೆಗೆ (Karnataka Assembly Elections 2023)ಸ್ಪರ್ಧಿಸಲು ಅನುಮತಿ ನೀಡಿ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಹೀಗಾಗಿ ತುಮಕೂರು ಗ್ರಾಮಾಂತರ ಕ್ಷೇತ್ರದ JDS ಶಾಸಕ ಗೌರಿಶಂಕರ್​ ನಿರಾಳರಾಗಿದ್ದಾರೆ.

ಇದನ್ನೂ ಓದಿ: ಶಾಸಕ ಗೌರಿಶಂಕರ್ ಆಯ್ಕೆ ಅಸಿಂಧುಗೊಳಿಸಿ ಹೈಕೋರ್ಟ್‌ ಆದೇಶ, ಆದರೂ ಬೀಸುವ ದೊಣ್ಣೆಯಿಂದ ಪಾರು

2018ರ ಚುನಾವಣೆಯಲ್ಲಿ ಮತದಾರರಿಗೆ ವಿಮಾ ಪಾಲಿಸಿಯ ನಕಲಿ ಬಾಂಡ್ ವಿತರಿಸಿದ ಕೇಸ್‌ಗೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್​ ಶಾಸಕ ಗೌರಿಶಂಕರ್​ ಅವರನ್ನು ಹೈಕೋರ್ಟ್​ ಏಕಸದಸ್ಯ ಪೀಠ ಅನರ್ಹಗೊಳಿಸಿ ಆದೇಶ ಹೊರಡಿಸಿತ್ತು. ಆದರೆ ಶಾಸಕ ಗೌರಿಶಂಕರ್​ ಪರ ವಕೀಲರು ಒಂದು ತಿಂಗಳ ಕಾಲ ಆದೇಶಕ್ಕೆ ತಡೆ ನೀಡುವಂತೆ ಕೋರ್ಟ್​ಗೆ ಮನವಿ ಮಾಡಿದ್ದರು. ಹೀಗಾಗಿ ಕೋರ್ಟ್​ ಒಂದು ತಿಂಗಳ ಕಾಲ ಆದೇಶಕ್ಕೆ ತಡೆ ನೀಡಿತ್ತು.

ಹೈಕೋರ್ಟ್​ ನೀಡಿದ ಒಂದು ತಿಂಗಳ ಅವಧಿಯಲ್ಲಿ ಗೌರಿಶಂಕರ್​ ಅವರು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿ ಹೈಕೋರ್ಟ್​ ನೀಡಿರುವ ತೀರ್ಪಿಗೆ ತಡೆ ತರಬೇಕಿತ್ತು. ಇಲ್ಲದಿದ್ದರೆ ಅನರ್ಹ ಭೀತಿ ಎದುರಿಸಬೇಕಾಗಿತ್ತು. ಹೀಗಾಗಿ ಗೌರಿ ಶಂಕರ್ ಅವರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಕೋರ್ಟ್, ಚುನಾವಣೆಗೆ ಸ್ಪರ್ಧೆಗೆ ಅನುಮತಿ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ. ಇದರಿಂದ ಗೌರಿ ಶಂಕರ್​ಗೆ ಇದ್ದ ಆತಂಕ ಸದ್ಯಕ್ಕೆ ದೂರವಾಗಿದೆ.

ಹೈಕೋರ್ಟ್​ ಆದೇಶದಲ್ಲೇನಿತ್ತು?

ಚುನಾವಣಾ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ತುಮಕೂರು ಗ್ರಾಮಾಂತರ ಜೆಡಿಎಸ್‌ ಶಾಸಕ ಗೌರಿಶಂಕರ್‌ ಸ್ವಾಮಿ ಆಯ್ಕೆಯನ್ನು ಅನೂರ್ಜಿತಗೊಳಿಸಿ ಕರ್ನಾಟಕ ಹೈಕೋರ್ಟ್‌ ಮಾರ್ಚ್​ 30ರಂದಯ ಆದೇಶ ಹೊರಡಿಸಿತ್ತು. ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಅವಕಾಶ ನೀಡಬೇಕು ಎಂಬ ಗೌರಿ ಶಂಕರ್‌ ಅವರ ಮಧ್ಯಂತರ ಮನವಿಯನ್ನು ಇದೇ ಸಂದರ್ಭದಲ್ಲಿ ಪುರಸ್ಕರಿಸಿದ್ದ ಹೈಕೋರ್ಟ್‌ ಆದೇಶವನ್ನು ಒಂದು ತಿಂಗಳು ಅಮಾನತಿನಲ್ಲಿರಿಸಿತ್ತು.

ಗೌರಿಶಂಕರ್‌ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ ಬಿ.ಸುರೇಶ್ ಗೌಡ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಸುರೇಶ್ ಗೌಡರ ಪರ ಹಿರಿಯ ವಕೀಲೆ ನಳಿನಾ ಮಾಯೇಗೌಡ ಸುದೀರ್ಘ ವಾದ ಮಂಡಿಸಿದ್ದರು. ತೀರ್ಪು ಹೊರಬೀಳುತ್ತಲೇ, ಗೌರಿಶಂಕರ್ ಪರ ವಕೀಲ ಆರ್. ಹೇಮಂತ ರಾಜ್‌, ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ತೀರ್ಪಿಗೆ ತಡೆ ನೀಡಬೇಕು” ಎಂದು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

ಪ್ರಕರಣವೇನು?

ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೌರಿಶಂಕರ್ ವ್ಯಾಪಕ ಚುನಾವಣಾ ಅಕ್ರಮ ಎಸಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಸಲ್ಲಿಕೆ ನಂತರ ಮತದಾರರಿಗೆ ಮತಯಾಚನೆ ಪತ್ರದ ಜೊತೆ ಗುಂಪು ಆರೋಗ್ಯ ವಿಮಾ ಪಾಲಿಸಿಯ ಆಮಿಷವೊಡ್ಡಿ ಅವರಿಂದ ಮತಗಳನ್ನು ಪಡೆದು ಆರಿಸಿ ಬಂದಿದ್ದಾರೆ. ಹೀಗಾಗಿ ಆಯ್ಕೆ ಅಸಿಂಧುಗೊಳಿಸಬೇಕು ಎಂದು ಕೋರಿ ಬಿಜೆಪಿಯ ಸುರೇಶ್‌ಗೌಡ ಮನವಿ ಮಾಡಿದ್ದರು.