ತುಮಕೂರು: ಒಂದೇ ದಿನ, ಪ್ರತ್ಯೇಕವಾಗಿ, ಒಂದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಪೋಷಕರು ಮಲಗಿದ ನಂತರ ರಾತ್ರಿ ವೇಳೆ ತನ್ನ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದ ಹನುಮಂತ ಚಾರ್ ಮಗಳು ಹೇಮಾವತಿ 17 ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಕೊರಟಗೆರೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಹೇಮಾವತಿ ಪೋಷಕರು ಮಲಗಿದ ನಂತರ ಓದಿಕೊಳ್ಳಲೆಂದು ರೂಮಿನ ಒಳಗೆ ಹೋದವಳು ಬೆಳಿಗ್ಗೆ 8 ಗಂಟೆಯಾದರೂ ಹೊರಗೆ ಬಾರದ ಕಾರಣ ಬಾಗಿಲು ಒಡೆದು ನೋಡಿದಾಗ ಫ್ಯಾನ್ ಗೆ ವೆಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಯಾವುದೇ ಕಾರಣ ತಿಳಿದು ಬಂದಿಲ್ಲ.
ಅನಾರೋಗ್ಯದಿಂದ ಕೆಲವರ್ಷಗಳಿಂದ ನೊಂದು ಯಾವುದೇ ಆಸ್ಪತ್ರೆಯಲ್ಲಿ ಗುಣಮುಖವಾಗದ ಕಾರಣ ಮಹಿಳೆಯೊಬ್ಬರು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದ ಸತ್ಯನಾರಾಯಣಶೆಟ್ಟಿ ಅವರ ಪತ್ನಿ ತ್ರೈಜತಿ (40 ವರ್ಷ) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸೆಂಟ್ರಿಂಗ್ ಕಾರ್ಮಿಕನೋರ್ವ ಕೈ ಸಾಲಕ್ಕೆ ಹೆದರಿ ತನ್ನ ಜಮೀನಿನಲ್ಲಿರುವ ಗುಡಿಸಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸಿ. ಎನ್. ದುರ್ಗಾ ಹೋಬಳಿ ಬೋರಯ್ಯನ ಹಟ್ಟಿ ಬಳಿಯ ಬಡ ಮುದ್ದಯ್ಯನಪಾಳ್ಯದ ಮರಿಯಣ್ಣ ನಮಗ ದಾಸೇಗೌಡ (29 ವರ್ಷ) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ.
ಮೃತ ದಾಸೇಗೌಡ ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ಇತ್ತೀಚೆಗೆ ಕೈಸಾಲ ಹೆಚ್ಚು ಮಾಡಿಕೊಂಡಿದ್ದ. ಸೆಂಟ್ರಿಂಗ್ ಕೆಲಸಕ್ಕೆಂದು ಅಡ್ವಾನ್ಸ್ ಪಡೆದು ಕೆಲಸ ಮಾಡದೆ ಕೆಲವರು ಮನೆ ಬಾಗಿಲಿಗೆ ಹುಡಿಕೊಂಡು ಬಂದು ಗಲಾಟೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ತನ್ನ ಜಮೀನಿನ ಗುಡಿಸಲಿನಲ್ಲಿ ಪಂಚೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸಿದ್ದರಾಮೇಶ್ವರ ಪಿಎಸ್ಐ ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸಿದ್ದಾರೆ.
ವರದಿ -ಮಹೇಶ್, ಟಿವಿ 9, ತುಮಕೂರು