ತುಮಕೂರು, ಫೆ.28: ವಿಧಾನಸೌಧದಲ್ಲಿ ನಿನ್ನೆ(ಫೆ.27) ಪಾಕಿಸ್ತಾನ ಪರ ಘೋಷಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಚೇರಿ ಮೇಲೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ ವೇಳೆ ತುಮಕೂರು(Tumakuru) ನಗರ ಡಿವೈಎಸ್ ಪಿ.ಚಂದ್ರಶೇಖರ್ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾನ್ ಹ್ಯಾಂಡಲ್ ಮಾಡಿದ್ದ ಆರೋಪಿ ವಿರುದ್ಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ 353 ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಬಿಜೆಪಿ ಕಾರ್ಯಕರ್ತ ವೆಂಕಟೇಶ (42) ಬಂಧಿತ ಆರೋಪಿ. ಕಾಂಗ್ರೆಸ್ ಕಚೇರಿ ಮುತ್ತಿಗೆ ವೇಳೆ ನೂಕಾಟ ತಳ್ಳಾಟವಾಗಿತ್ತು. ಈ ಸಂದರ್ಭದಲ್ಲಿ ಡಿವೈಎಸ್ಪಿ ಮೇಲೆ ಹಲ್ಲೆ ಆಗಿತ್ತು. ಜೊತೆಗೆ ಡಿವೈಎಸ್ ಪಿ ಮೂಗಿನ ಮೇಲೆ ರಕ್ತಸ್ರಾವ ಆಗಿತ್ತು. ಈ ಹಿನ್ನಲೆ ಇದೀಗ ಆರೋಪಿಯನ್ನ ಬಂಧಿಸಲಾಗಿದೆ.
ಇನ್ನು ವಿಧಾನಸೌಧದ ಆವರಣದಲ್ಲಿ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಕೂಗಿದ ಬೆನ್ನಲ್ಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಕಿಡಿಕಾರಿದ್ದರು. ಅದರಂತೆ ಮಂಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾ ಆಕ್ರೋಶ ಹೊರ ಹಾಕಿ, ಕಾಂಗ್ರೆಸ್ ಕಚೇರಿ ಮುತ್ತಿಗೆಗೆ ಯತ್ನಿಸಿದ್ದರು. ನಂತರ ಕೆಲ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆಯಲಾಗಿತ್ತು. ಕಾಂಗ್ರೆಸ್ ಕಚೇರಿ ಒಳಗೆ ನುಗ್ಗದಂತೆ ಪೊಲೀಸರು ಮೊದಲೇ ಬ್ಯಾರಿಕೇಡ್ ಅಳವಡಿಸಿದ್ದರು. ಪ್ರತಿಭಟನಾಕಾರರು ಕಚೇರಿ ಬಳಿ ಆಗಮಿಸುವ ಮೊದಲೇ ಪೊಲೀಸರು ವಶಕ್ಕೆ ಪಡೆದಿದ್ದರು.
ಅಷ್ಟೇ ಅಲ್ಲ, ವಿಧಾನಸೌಧದ ಲಾಂಜ್ನಲ್ಲಿ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಿಡಿದೆದ್ದಿತ್ತು. ನಂದೀಶ್ ರೆಡ್ಡಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಧರಣಿ ಮಾಡಿದ್ದರು. ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದರು. ಕೂಡಲೇ ಪ್ರತಿಭಟನಾ ನಿರತರನ್ನು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ನೇತೃತ್ವದಲ್ಲಿ ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ಯಲಾಗಿತ್ತು. ಇದೀಗ ತುಮಕೂರಿನಲ್ಲಿ ಪ್ರತಿಭಟನೆ ವೇಳೆ ಆಗಿದ್ದ ಅವಘಡಕ್ಕೆ ಓರ್ವನನ್ನು ಅರೆಸ್ಟ್ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ