ಪಾಕಿಸ್ತಾನ ಪರ ಘೋಷಣೆ ಆರೋಪ; ಮಂಗಳೂರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ, ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ವಶ
ವಿಧಾನಸೌಧದ ಆವರಣದಲ್ಲಿ ನಾಸಿರ್ ಹುಸೇನ್ ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಬೆನ್ನಲ್ಲೇ ಮಂಗಳೂರಿನಲ್ಲಿ ಪ್ರತಿಭಟನೆ ಜೋರಾಗಿದೆ. ಮಂಗಳೂರಿನ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೊಲಿಸರು ವಶಕ್ಕೆ ಪಡೆದಿದ್ದು ಗಲಾಟೆ ನಡೆಯುತ್ತಿದೆ.
ಮಂಗಳೂರು, ಫೆ.28: ರಾಜ್ಯ ಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್ ಸದಸ್ಯ ನಾಸೀರ್ ಹುಸೇನ್ (Nasser Hussain) ಸುತ್ತ ಹೊಸ ವಿವಾದ ಸುತ್ತುಹಾಕಿಕೊಂಡಿದೆ. ನಾಸೀರ್ ಹುಸೇನ್ ಬೆಂಬಲಿಗರು ಗೆಲುವಿನ ಸಂಭ್ರಮದ ನಡುವೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿರೋ ಆರೋಪಗಳು ಕೇಳಿ ಬಂದಿದೆ. ವಿಧಾನಸೌಧದ ಆವರಣದಲ್ಲಿ ನಾಸಿರ್ ಹುಸೇನ್ ಬೆಂಬಲಿಗರು ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ. ಈ ಘಟನೆ ಸದ್ಯ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಘಟನೆ ಸಂಬಂಧ ಮಂಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾ ಆಕ್ರೋಶ ಹೊರ ಹಾಕಿದ್ದು ಕಾಂಗ್ರೆಸ್ ಕಚೇರಿ ಮುತ್ತಿಗೆಗೆ ಯತ್ನಿಸಿದ್ದಾರೆ. ಸದ್ಯ ಕೆಲ ಪ್ರತಿಭಟನಾಕಾರರನ್ನು (Protest) ವಶಕ್ಕೆ ಪಡೆಯಲಾಗಿದ್ದು ಸ್ಥಳದಲ್ಲಿ ಗಲಾಟೆ ನಡೆಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ಯತ್ನ ನಡೆದಿದೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರೆಲ್ಲರನ್ನು ವಶಕ್ಕೆ ಪಡೆದಿದ್ದು ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನೂಕಾಟ ತಳ್ಳಾಟವಾಗಿದೆ. ಕಾಂಗ್ರೆಸ್ ಕಚೇರಿ ಒಳಗೆ ನುಗ್ಗದಂತೆ ಪೊಲೀಸರು ಮೊದಲೇ ಬ್ಯಾರಿಕೇಡ್ ಅಳವಡಿಸಿದ್ದರು. ಪ್ರತಿಭಟನಾಕಾರರು ಕಚೇರಿ ಬಳಿ ಆಗಮಿಸುವ ಮೊದಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಮಪ್ ಅರ್ಗವಾಲ್ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ವಿಧಾನ ಸಭೆಯಲ್ಲಿ ಪಾಕಿಸ್ತಾನ್ ಪರ ಘೋಷಣೆ: ಗೃಹ ಸಚಿವರ ನಿವಾಸಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ದೌಡು
ಪಾಕ್ ಪರ ಘೋಷಣೆ ಆರೋಪ ಕೇಳಿ ಬರುತ್ತಿದ್ದಂತೆ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಎಚ್ಚರಿಕೆ ನೀಡಿತ್ತು. ಹೀಗಾಗಿ ಪೊಲೀಸರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭದ್ರತೆ ನೀಡಿದ್ದರು. ಮಂಗಳೂರು ನಗರದ ಮಲ್ಲಿಕಟ್ಟೆ ಬಳಿ ಇರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಕದ್ರಿ, ಪಾಂಡೇಶ್ವರ ಠಾಣೆ ಪೊಲೀಸರು ಭದ್ರತೆ ನೀಡಿದ್ದರು. ಕಚೇರಿ ಮುಂಭಾಗ ಬ್ಯಾರಿಕೇಡ್ ಅಳವಡಿಸಿ ಕಚೇರಿ ಒಳಗೆ ಪ್ರತಿಭಟನಾಕಾರರು ನುಗ್ಗದಂತೆ ತಯಾರಿ ಮಾಡಿಕೊಂಡಿದ್ದರು. ಎರಡು ಕೆಎಸ್ಆರ್ಪಿ ತುಕಡಿಗಳ ನಿಯೋಜನೆ ಮಾಡಲಾಗಿದೆ. ಮಂಗಳೂರು ದಕ್ಷಿಣ ವಿಭಾಗದ ಎಸಿಪಿ ಧನ್ಯನಾಯಕ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಇನ್ನು ನಾಸಿರ್ ಹುಸೇನ್‌ರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ಮುಂದುವರೆದಿದೆ.
ವಿಧಾನಸೌಧದ ಲಾಂಜ್ನಲ್ಲಿ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಿಡಿದೆದ್ದಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ನಿನ್ನೆ ಯತ್ನಿಸಿದ್ರು. ನಂದೀಶ್ ರೆಡ್ಡಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಧರಣಿ ಮಾಡಿದ್ರು. ಪ್ರತಿಭಟನಾನಿರತ ನಿರತರನ್ನು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ನೇತೃತ್ವದಲ್ಲಿ ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ಯಲಾಯ್ತು. ಈ ವೇಳೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:08 pm, Wed, 28 February 24