ಪಾಕ್ ಪರ ಘೋಷಣೆ ಸಾಬೀತಾದ್ರೆ ಕ್ರಮ, ದೇಶ ದ್ರೋಹಿಗಳ ಮಟ್ಟ ಹಾಕಬೇಕಿದೆ: ಸಿಎಂ ಸಿದ್ದರಾಮಯ್ಯ
ರಾಜ್ಯಸಭೆ ಚುನಾವಣೆ ಗೆಲುವಿನ ಸಂಭ್ರಮಾಚರಣೆ ವೇಳೆ ವಿಧಾನಸೌಧ ಆವರಣದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ನಿಜವಾಗಿಯೂ ಆ ರೀತಿ ಘೋಷಣೆ ಆಗಿದ್ದರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ದೇಶ ದ್ರೋಹಿಗಳನ್ನು ಮಟ್ಟ ಹಾಕಬೇಕಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು, ಫೆಬ್ರವರಿ 28: ವಿಧಾನಸೌಧದ ಆವರಣದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ (Pro Pakistan Slogan) ಕೂಗಿರುವ ಆರೋಪಕ್ಕೆ ಸಂಬಂಧಿಸಿ ರಾಜಕೀಯ ಆರೋಪ-ಪ್ರತ್ಯಾರೋಪ ತೀವ್ರಗೊಂಡಿರುವ ಬೆನ್ನಲ್ಲೇ ಆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ದೇಶ ದ್ರೋಹಿಗಳನ್ನು ಮಟ್ಟಹಾಕಬೇಕಿದೆ ಎಂದು ಅವರು ಬುಧವಾರ ಹೇಳಿದ್ದಾರೆ.
ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆಯೇ ಎಂಬ ಬಗ್ಗೆ ಮೊದಲು ತನಿಖೆಯಾಗಬೇಕಿದೆ. ಅದಕ್ಕೆ ಸಂಬಂಧಿಸಿದ ವಿಡಿಯೋ ತುಣುಕುಗಳನ್ನು ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಯಕ್ಕೆ ತನಿಖೆಗೆ ಕಳುಹಿಸಿಕೊಟ್ಟಿದ್ದೇವೆ. ಘೋಷಣೆ ಕೂಗಿದ್ದು ನಿಜವೇ ಆಗಿದ್ದರೆ ಕ್ರಮ ಕೈಗೊಳ್ಳುತ್ತೇವೆ. ತಪ್ಪಿತಸ್ಥರು ಯಾರೇ ಆಗಿರಲಿ, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಘಟನೆ ಸಂಬಂಧ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಕೆಲವರು ‘ನಾಸಿರ್ ಸಾಬ್’ ಎಂಬ ಘೋಷಣೆ ಕೂಗಲಾಗಿದೆ ಎಂದರೆ, ಇನ್ನು ಕೆಲವರು ‘ಪಾಕಿಸ್ತಾನ’ ಪರ ಘೋಷಣೆ ಎನ್ನುತ್ತಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆ ಸಹ ಬಂದಿದೆ. ಘಟನೆ ಸಂಬಂಧ ಕಾನೂನು & ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಹಾಗೂ ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಇಂದು ಬೆಳಗ್ಗೆ ಗೃಹ ಸಚಿವರನ್ನು ಭೇಟಿಯಾಗಿ ಮಾಹಿತಿ ನೀಡಿದ್ದಾರೆ.
ಕಾಲ್ಪನಿಕ ಘಟನೆ ಎಂದ ಸಚಿವ ಪ್ರಿಯಾಂಕ್ ಖರ್ಗೆ
ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಇದು ಕಾಲ್ಪನಿಕ ಘಟನೆಯಾಗಿದೆ ಎಂದಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಿಗೆ ಮುಖಭಂಗವಾಗಿದೆ. ಘೋಷಣೆ ಕೂಗಿರುವ ಆಡಿಯೋದಲ್ಲಿ ಸೈಯದ್ ಸಾಬ್, ನಾಸಿರ್ ಹುಸೇನ್ ಜಿಂದಾಬಾದ್ ಅಂತ ಹೇಳಿದ್ದಾರೆ. ನಾವು ಜವಬ್ದಾರಿಯುತವಾಗಿಯೇ ಪರಿಶೀಲನೆ ಮಾಡಲು ಹೇಳಿದ್ದೆವು. ಪಾಕಿಸ್ತಾನದ ಪರವಾಗಿ ಯಾವುದೇ ಘೋಷಣೆ ಕೂಗಿಲ್ಲ. ವಿಡಿಯೋ ತುಣುಕುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೂ ಕಳುಹಿಸಿಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಆರೋಪ: ತನಿಖೆಗಾಗಿ ಮೂರು ವಿಶೇಷ ತಂಡಗಳ ರಚನೆ
ಕೆಲವು ಮಾಧ್ಯಮದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಬಗ್ಗೆ ವರದಿಯಾಗಿವೆ. ಖಾಸಗಿಯಾಗಿ ಆಡಿಯೋ ಚೆಕ್ ಮಾಡಲಾಗಿದೆ. ಮಾಧ್ಯಮಗಳು ಸರ್ಕಾರವನ್ನು ನೇಣಿಗೆ ಹಾಕಲು ಸಿದ್ಧವಾಗಿದ್ದರೆ ನಾವೇನು ಮಾಡಲು ಆಗುತ್ತದೆ? ಘೋಷಣೆ ಕೂಗಿಲ್ಲ ಅಂತ ಹೇಳಿದ್ದೇನೆ. ಸಮರ್ಥನೆ ನಾನು ಮಾಡಿಲ್ಲ. ಸರ್ಕಾರದಿಂದ 11 ಗಂಟೆಗೆ ರಿಪೋರ್ಟ್ ಬರುತ್ತದೆ ನೋಡೋಣ. ಇದು ವೈಯಕ್ತಿಕ ಘೋಷಣೆ, ಪಕ್ಷದ ಘೋಷಣೆ ಅಲ್ಲ. ಸುಮ್ಮನೇ ಆರೋಪ ಮಾಡಲಾಗದು. ಸುಳ್ಳು ಸುದ್ದಿಗೆ ಕಾನೂನು ಕೂಡ ಇದೆ. ಬಿಜೆಪಿಯವರು ಹತಾಶರಾಗಿ ಆರೋಪ ಮಾಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ