ತುಮಕೂರು ದಸರಾ: ಅಂಬಾರಿ ಹೊತ್ತ ಆನೆ ಬಳಿ ಪಟಾಕಿ ಸಿಡಿಸಿದ ಕಿಡಿಗೇಡಿಗಳು; ತಪ್ಪಿದ ಭಾರೀ ಅನಾಹುತ

ತುಮಕೂರು ದಸರಾ ಅಂಬಾರಿ ಮೆರವಣಿಗೆಯಲ್ಲಿ ಲಕ್ಷ್ಮಣ ಆನೆ ಸಮೀಪ ಕಿಡಿಗೇಡಿಗಳು ಪಟಾಕಿ ಸಿಡಿಸಿ ಆತಂಕ ಸೃಷ್ಟಿಸಿದ್ದಾರೆ. ಪಟಾಕಿ ಸದ್ದಿಗೆ ಆನೆ ಬೆದರಿ ಚಡಪಡಿಸಿದರೂ, ದೊಡ್ಡ ಅನಾಹುತ ತಪ್ಪಿದೆ. ಸಾರ್ವಜನಿಕರ ಸುರಕ್ಷತೆಗೆ ಅಪಾಯ ಉಂಟುಮಾಡಿದವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದಸರಾ ಉತ್ಸವದಲ್ಲಿ ಇಂತಹ ಘಟನೆಗಳ ತಡೆಗೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

ತುಮಕೂರು ದಸರಾ: ಅಂಬಾರಿ ಹೊತ್ತ ಆನೆ ಬಳಿ ಪಟಾಕಿ ಸಿಡಿಸಿದ ಕಿಡಿಗೇಡಿಗಳು; ತಪ್ಪಿದ ಭಾರೀ ಅನಾಹುತ
ತುಮಕೂರು ದಸಾರ
Image Credit source: Google
Edited By:

Updated on: Oct 24, 2026 | 8:32 AM

ತುಮಕೂರು, ಅ.24: ವಿಶ್ವಪ್ರಸಿದ್ಧ ಮೈಸೂರು ದಸರಾ ಮಾದರಿಯಲ್ಲಿ ತುಮಕೂರಿನಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದ ತುಮಕೂರು ದಸರಾ ಮಹೋತ್ಸವದ ಅಂಬಾರಿ ಮೆರವಣಿಗೆಯ ವೇಳೆ ಅನಾಹುತವೊಂದು ತಪ್ಪಿದೆ. ಅಂಬಾರಿ ಹೊತ್ತು ಸಾಗುತ್ತಿದ್ದ ಲಕ್ಷ್ಮಣ ಆನೆಯ ಸಮೀಪದಲ್ಲೇ ಕಿಡಿಗೇಡಿಗಳು ಏಕಾಏಕಿ ಪಟಾಕಿ ಸಿಡಿಸಿ ಆತಂಕ ಸೃಷ್ಟಿಸಿದ್ದಾರೆ. ಪಟಾಕಿ ಸದ್ದಿಗೆ ಬೆದರಿದ ಆನೆ ಒಂದೇ ಸಮನೆ ಚಡಪಡಿಸಿದ್ದು, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರಲ್ಲಿ ಭೀತಿ ಮೂಡಿಸಿತ್ತು.

ಘಟನೆಗೆ ಸಂಬಂಧಿಸಿದಂತೆ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ನೀಡಿದ ದೂರಿನ ಮೇರೆಗೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಕ್ಟೋಬರ್ 21 ರಂದು ಮಧ್ಯಾಹ್ನ 3:45 ರಿಂದ 4:00 ಗಂಟೆಯ ಸುಮಾರಿಗೆ ತುಮಕೂರು ನಗರದ ಭದ್ರಮ್ಮ ಸರ್ಕಲ್‌ನಿಂದ ಜೂನಿಯರ್ ಕಾಲೇಜು ಮೈದಾನದತ್ತ ಅಂಬಾರಿ ಮೆರವಣಿಗೆ ಸಾಗುತ್ತಿತ್ತು.

ಮೆರವಣಿಗೆಯು ತುಮಕೂರು ನಗರದ ಶ್ರೀರಾಮ ದೇವಸ್ಥಾನದ ಬಳಿ (ಬಾರ್ ಲೈನ್ ರಸ್ತೆ, ಕೆ.ಆರ್. ಎಕ್ಸ್‌ಟೆನ್ಷನ್) ಸಾಗುತ್ತಿದ್ದ ವೇಳೆ ಕೆಲ ಕಿಡಿಗೇಡಿಗಳು ಏಕಾಏಕಿ ಪಟಾಕಿಗಳನ್ನು ಸಿಡಿಸಿದ್ದಾರೆ. ಪಟಾಕಿ ಶಬ್ದ ಕೇಳುತ್ತಿದ್ದಂತೆ ಅಂಬಾರಿ ಹೊತ್ತಿದ್ದ ಆನೆ ಲಕ್ಷ್ಮಣ ತೀವ್ರವಾಗಿ ಬೆದರಿದೆ. ಇದರಿಂದಾಗಿ ಮೆರವಣಿಗೆಯಲ್ಲಿದ್ದ ಸಾರ್ವಜನಿಕರು ಹಾಗೂ ಇತರೆ ಜನರ ಜೀವ ಮತ್ತು ಸುರಕ್ಷತೆಗೆ ಗಂಭೀರ ಅಪಾಯದ ಸಂಭವ ಎದುರಾಗಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಸೈಬರ್ ಜಾಲ ಭೇದಿಸಿದ ಕರ್ನಾಟಕ ಸೈಬರ್ ಕಮಾಂಡ್: ಡಿಜಿಟಲ್ ಅರೆಸ್ಟ್, ಲೈಂಗಿಕ ಬೆದರಿಕೆಗೆ ಬಳಸುತ್ತಿದ್ದ ಅಕ್ರಮ ಸಿಮ್ ಬಾಕ್ಸ್ ವಶಕ್ಕೆ

ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ (ರಘು ಎಸ್.ಆರ್., ಸಿಪಿಸಿ 969) ನೀಡಿದ ದೂರಿನ ಆಧಾರದ ಮೇಲೆ, ಸಾರ್ವಜನಿಕವಾಗಿ ಅಪಾಯ ಉಂಟುಮಾಡುವ ಕೃತ್ಯ ಎಸಗಿದವರ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಕಲಂ 288 ರಡಿ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಟಾಕಿ ಸಿಡಿಸಿ ಸಾರ್ವಜನಿಕ ವಲಯದಲ್ಲಿ ಆತಂಕ ಹಾಗೂ ಆನೆಗೆ ಬೆದರಿಕೆ ಒಡ್ಡಿದ ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ತೀವ್ರ ಬಲೆ ಬೀಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
Loading...
Unable to load recommendations.
Follow Us