
ತುಮಕೂರು, ಅಕ್ಟೋಬರ್ 23: ತುಮಕೂರು ವಿಶ್ವವಿದ್ಯಾನಿಲಯದ ಜ್ಞಾನಸಿರಿ ಕ್ಯಾಂಪಸ್ ಸಮೀಪ ಚಿರತೆ ಪ್ರತ್ಯಕ್ಷ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಚಿರತೆ ಸೆರೆ ಹಿಡಿಯಲು ಬಂದ ಪಶುವೈದ್ಯಾಧಿಕಾರಿ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿ, ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಇದೀಗ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪಶುವೈದ್ಯಾಧಿಕಾರಿ ನೀಡಿರುವ ದೂರಿನನ್ವಯ 15 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ತುಮಕೂರು ವಿಶ್ವವಿದ್ಯಾನಿಲಯದ ಜ್ಞಾನಸಿರಿ ಕ್ಯಾಂಪಸ್ ಸಮೀಪದ ಗ್ರಾಮದಲ್ಲಿ ನಿನ್ನೆ ಬೆಳಗಿನ ಜಾವ ಮನೆಯೊಂದಕ್ಕೆ ನುಗ್ಗಿದ್ದ ಚಿರತೆ, ಕೋಳಿಯನ್ನು ಹಿಡಿದಿತ್ತು. ಬಳಿಕ ತೆಂಗಿನ ಮರವೇರಿದ್ದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು. ಸ್ಥಳಕ್ಕೆ ಪಶುವೈದ್ಯಾಧಿಕಾರಿ ಡಾ. ಪ್ರಯಾಗ್ ಹೆಚ್.ಎಸ್. ಕೂಡ ಆಗಮಿಸಿದ್ದರು. ಆದರೆ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಅಧಿಕಾರಿಗಳ ಕಣ್ಣೆದುರೇ ಚಿರತೆ ತಪ್ಪಿಸಿಕೊಂಡಿತ್ತು.
ಚಿರತೆ ಪರಾರಿಯಾಗುತ್ತಿದ್ದಂತೆ ಗ್ರಾಮಸ್ಥರ ಆಕ್ರೋಶ ಮತ್ತಷ್ಟು ಹೆಚ್ಚಾಗಿತ್ತು. ಕೂಡಲೇ ಚಿರತೆಯನ್ನು ಸೆರೆ ಹಿಡಿಯುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ. ಅಧಿಕಾರಿಗಳ ಸೂಚನೆಯಂತೆ ಸುರಕ್ಷಿತ ಸ್ಥಳಕ್ಕೆ ತೆರಳುವ ಬದಲು, ಚಿರತೆ ಹಿಡಿಯುವಂತೆ ಪಟ್ಟು ಹಿಡಿದ ಜನರ ಗುಂಪು, ವೈದ್ಯಾಧಿಕಾರಿ ಡಾ. ಪ್ರಯಾಗ್ ಅವರನ್ನು ಸುತ್ತುವರೆದಿದ್ದಾರೆ. ಈಗಲೇ ಚಿರತೆ ಹಿಡಿಯದಿದ್ದರೆ ಬಟ್ಟೆ ಬಿಚ್ಚಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಇದೇ ವೇಳೆ ತಳ್ಳಾಟ, ನೂಕಾಟ ನಡೆದು ವೈದ್ಯಾಧಿಕಾರಿಯ ಬೆನ್ನಿಗೆ ಹೊಡೆಯಲಾಗಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಇನ್ನು ಈ ಗಲಾಟೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ವೈದ್ಯಾಧಿಕಾರಿಯನ್ನು ಸುತ್ತುವರಿದಿದ್ದ ಗ್ರಾಮಸ್ಥರು, ತಳ್ಳಾಟ ಹಾಗೂ ನೂಕಾಟದ ದೃಶ್ಯಗಳು ಸೆರೆಯಾಗಿವೆ. ಈ ದೃಶ್ಯಗಳನ್ನು ಆಧಾರವಾಗಿಟ್ಟುಕೊಂಡು ವೈದ್ಯಾಧಿಕಾರಿ ಡಾ. ಪ್ರಯಾಗ್ ಪೊಲೀಸರಿಗೆ ದೂರು ನೀಡಿದ್ದಾರೆ. ‘ಚಿರತೆ ಸೆರೆ ಕಾರ್ಯಾಚರಣೆ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ’ ಎಂಬ ಆರೋಪದಡಿ ದೂರು ಸಲ್ಲಿಸಿದ್ದಾರೆ. ‘ಅಷ್ಟೇ ಅಲ್ಲ, ಆಸ್ಪತ್ರೆಗೆ ತೆರಳುತ್ತಿದ್ದ ಇಲಾಖೆಯ ವಾಹನವನ್ನು ಅಡ್ಡಗಟ್ಟಿ ತಡೆದಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ
ಇದೀಗ ಪ್ರಕರಣದ ತನಿಖೆಯನ್ನು ಹೆಬ್ಬೂರು ಪೊಲೀಸರು ಕೈಗೆತ್ತಿಕೊಂಡಿದ್ದಾರೆ. ಗಲಾಟೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಗ್ರಾಮಸ್ಥರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಇತ್ತ ಚಿರತೆ ಇನ್ನೂ ಸೆರೆ ಸಿಗದಿರುವುದರಿಂದ ತಿಮ್ಮಸಂದ್ರ ಗ್ರಾಮ ಹಾಗೂ ಜ್ಞಾನಸಿರಿ ಕ್ಯಾಂಪಸ್ ಸುತ್ತಮುತ್ತಿಲಿನ ಜನರು ಆತಂಕಗೊಂಡಿದ್ದಾರೆ. ಜನವಸತಿ ಪ್ರದೇಶದಲ್ಲಿ ಚಿರತೆ ಸಂಚಾರದಿಂದ ಜನರು ಭಯದಲ್ಲಿದ್ದರೆ, ಮತ್ತೊಂದೆಡೆ ಚಿರತೆ ಕಾರ್ಯಾಚರಣೆ ವೇಳೆ ನಡೆದ ಗಲಾಟೆ ಪೊಲೀಸ್ ತನಿಖೆಯ ಹಂತ ತಲುಪಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.