ತುಮಕೂರು ಹಾಲು ಒಕ್ಕೂಟ ನೇಮಕಾತಿಯಲ್ಲೂ ಅಕ್ರಮ: 77 ಅಂಕ ಪಡೆದವನಿಗೆ ಕೆಲಸ; ಕೋರ್ಟ್​ ಮೆಟ್ಟಿಲೇರಲು ಮುಂದಾದ ಅಭ್ಯರ್ಥಿಗಳು

ಕೆಪಿಎಸ್​​ಸಿ ನೇಮಕಾತಿ ಹಗರಣ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ತುಮಕೂರು ಹಾಲು ಒಕ್ಕೂಟದಲ್ಲಿಯೂ ನೇಮಕಾತಿ ಅಕ್ರಮ ಬಯಲಾಗಿದೆ. 2016-17ರ ನೇಮಕಾತಿಯಲ್ಲಿ 102 ಅಂಕ ಪಡೆದವರಿಗಿಂತ 77 ಅಂಕ ಗಳಿಸಿದವರಿಗೆ ಹುದ್ದೆ ನೀಡಲಾಗಿದೆ. ಇದೀಗ 31 ಅಭ್ಯರ್ಥಿಗಳು ತುಮುಲ್ ವಿರುದ್ಧ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾರೆ.

ತುಮಕೂರು ಹಾಲು ಒಕ್ಕೂಟ ನೇಮಕಾತಿಯಲ್ಲೂ ಅಕ್ರಮ: 77 ಅಂಕ ಪಡೆದವನಿಗೆ ಕೆಲಸ; ಕೋರ್ಟ್​ ಮೆಟ್ಟಿಲೇರಲು ಮುಂದಾದ ಅಭ್ಯರ್ಥಿಗಳು
ತುಮಕೂರು ಹಾಲು ಒಕ್ಕೂಟ
Edited By:

Updated on: Oct 24, 2026 | 4:18 PM

ಮುಖ್ಯಾಂಶಗಳು

  • ತುಮಕೂರು ಹಾಲು ಒಕ್ಕೂಟ ನೇಮಕಾತಿಯಲ್ಲಿ ಅಕ್ರಮ ಆರೋಪ
  • 102 ಅಂಕ ಪಡೆದವನ ಬದಲು 77 ಅಂಕ ಪಡೆದವನಿಗೆ ಕೆಲಸ
  • ಕೋರ್ಟ್​ ಮೆಟ್ಟಿಲೇರಲು ಮುಂದಾದ 31 ಅಭ್ಯರ್ಥಿಗಳು

ತುಮಕೂರು, ಅಕ್ಟೋಬರ್​​ 24: ಇಲ್ಲಿನ ತುಮಕೂರು ಹಾಲು ಒಕ್ಕೂಟ (ತುಮುಲ್) ನೇಮಕಾತಿ ಪ್ರಕ್ರಿಯೆ ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಕಳೆದ 10 ವರ್ಷದ ಹಿಂದೆ ನಡೆದ ತುಮಕೂರು ಹಾಲು ಒಕ್ಕೂಟದ ನೇಮಕಾತಿಯಲ್ಲೂ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹೆಚ್ಚು ಅಂಕ ಪಡೆದರೂ ಅಭ್ಯರ್ಥಿಗೆ ಸಿಗದ ಹುದ್ದೆ, ಕಡಿಮೆ ಅಂಕ ಪಡೆದ ಅಭ್ಯರ್ಥಿಗೆ ನೌಕರಿ ನೀಡಲಾಗಿದೆ ಎಂಬ ಆರೋಪಕ್ಕೆ ಹೈಕೋರ್ಟ್ ತೀರ್ಪು ಹೊಸ ತಿರುವು ನೀಡಿದೆ. ಕಾನೂನು ಹೋರಾಟದ ಮುಖಾಂತರ ವ್ಯಕ್ತಿಗೆ ಇದೀಗ ಹುದ್ದೆ ಸಿಕ್ಕಿದೆ. ಇದರ ಬೆನ್ನಲ್ಲೇ, ತಮಗೂ ನ್ಯಾಯ ಸಿಗಬೇಕೆಂದು 31 ಅಭ್ಯರ್ಥಿಗಳು ಮತ್ತೆ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ.

ತುಮುಲ್ ನೇಮಕಾತಿಯಲ್ಲಿ ಅಕ್ರಮ ಆರೋಪ

ತುಮಕೂರು ಹಾಲು ಒಕ್ಕೂಟದ ನೇಮಕಾತಿ ಸುತ್ತ ಅಕ್ರಮದ ಆರೋಪದ ಸುಳಿ ಸೃಷ್ಟಿಯಾಗಿದೆ. ಇದಕ್ಕೆ ಕಾರಣ 2016-17ನೇ ಸಾಲಿನಲ್ಲಿ ತುಮುಲ್‌ನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ನೇರ ನೇಮಕಾತಿ ನಡೆದಿತ್ತು. ಎಫ್‌ಡಿಎ, ಸಿಸ್ಟಮ್ ಮ್ಯಾನೇಜರ್, ಜನರಲ್ ಮ್ಯಾನೇಜರ್ ಸೇರಿದಂತೆ ವಿವಿಧ ಗ್ರೇಡ್‌ಗಳ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಹಾಗೂ ವೈವಾ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ ಈ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ ಹಣ ಪಡೆದು ಹುದ್ದೆಗಳನ್ನು ನೀಡಲಾಗಿದೆ ಎಂಬ ಗಂಭೀರ ಆರೋಪವೂ ಮಾಡಲಾಗಿದೆ.

102 ಅಂಕ ಪಡೆದರೂ ಕೈತಪ್ಪಿದ ಹುದ್ದೆ: 77 ಅಂಕ ಪಡೆದವನಿಗೆ ಒಲಿದ ನೌಕರಿ

ಇದು ತುಮುಲ್ ನೇಮಕಾತಿ ಅಕ್ರಮದ ಆರೋಪಕ್ಕೆ ಪ್ರಮುಖ ಕಾರಣ. ಅಸಿಸ್ಟೆಂಟ್ ಸಿಸ್ಟಮ್ ಮ್ಯಾನೇಜರ್ ಹುದ್ದೆಗೆ ಪರೀಕ್ಷೆ ಬರೆದಿದ್ದ ವೇಣುಗೋಪಾಲ್‌ಗೆ ಲಿಖಿತ ಪರೀಕ್ಷೆಯಲ್ಲಿ 102 ಅಂಕ ಬಂದಿತ್ತು. ಆದರೆ 77 ಅಂಕ ಪಡೆದ ಮಧುಸೂದನ್‌ಗೆ ಹುದ್ದೆ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಇದನ್ನು ಪ್ರಶ್ನಿಸಿ ವೇಣುಗೋಪಾಲ್ ಕಳೆದ 9 ವರ್ಷದಿಂದ ಕಾನೂನು ಹೋರಾಟ ನಡೆಸಿದ್ದರು. ಬಳಿಕ ಕಳೆದ ಮೂರು ತಿಂಗಳ ಹಿಂದೆ ಹೈಕೋರ್ಟ್ ತೀರ್ಪಿನ ಬಳಿಕ ವೇಣುಗೋಪಾಲ್‌ಗೆ ತುಮುಲ್‌ನಲ್ಲಿ ಹುದ್ದೆ ನೀಡಲಾಗಿದೆ. ಈ ಬೆಳವಣಿಗೆ ಇದೀಗ ಇತರೆ ಅಭ್ಯರ್ಥಿಗಳಲ್ಲೂ ಹೊಸ ನಿರೀಕ್ಷೆ ಮೂಡಿಸಿದೆ.

ಇದನ್ನೂ ಓದಿ: ಕೆಪಿಎಸ್​​ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಐಎಎಸ್​ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸಿಎಂ ಡಿ.ಕೆ. ಶಿವಕುಮಾರ್ ಅನುಮತಿ

ವೇಣುಗೋಪಾಲ್‌ಗೆ ನ್ಯಾಯ ಸಿಕ್ಕ ಬೆನ್ನಲ್ಲೇ ಉಳಿದ ಅಭ್ಯರ್ಥಿಗಳು ಅಖಾಡಕ್ಕಿಳಿದಿದ್ದಾರೆ. ನೇಮಕಾತಿ ಪ್ರಕ್ರಿಯೆಯಲ್ಲೇ ಅಕ್ರಮ ನಡೆದಿದ್ದು, ಸಮಗ್ರ ತನಿಖೆ ನಡೆಸಬೇಕು ಎಂದು 31 ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ. ಈಗಾಗಲೇ ಈ ಸಂಬಂಧ ತುಮುಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿರುವ ಅಭ್ಯರ್ಥಿಗಳು, ನ್ಯಾಯ ಸಿಗದಿದ್ದರೆ ಮತ್ತೆ ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ. 2016-17ರಲ್ಲಿ ಕೊಂಡವಾಡಿ ಚಂದ್ರಶೇಖರ್ ಅಧ್ಯಕ್ಷರಾಗಿದ್ದ ವೇಳೆ ಹಾಗೂ ಮುನೇಗೌಡ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ನೇಮಕಾತಿ ನಡೆದಿತ್ತು. ಇದೀಗ ಇಡೀ ನೇಮಕಾತಿ ಪ್ರಕ್ರಿಯೆಯ ಬಗ್ಗೆ ತನಿಖೆ ನಡೆಸಬೇಕೆಂಬ ಆಗ್ರಹ ಕೇಳಿಬಂದಿದೆ.

ಒಬ್ಬ ಅಭ್ಯರ್ಥಿಯ ಕಾನೂನು ಹೋರಾಟಕ್ಕೆ ಜಯ ಸಿಕ್ಕಿರುವುದು ಇದೀಗ 30ಕ್ಕೂ ಹೆಚ್ಚು ಅಭ್ಯರ್ಥಿಗಳಲ್ಲಿ ನ್ಯಾಯದ ನಿರೀಕ್ಷೆ ಮೂಡಿಸಿದೆ. ಕೇವಲ ಒಬ್ಬರ ನೇಮಕಾತಿಯಲ್ಲಷ್ಟೇ ಅಲ್ಲ, ಇಡೀ ಆಯ್ಕೆ ಪ್ರಕ್ರಿಯೆಯಲ್ಲೇ ಅಕ್ರಮ ನಡೆದಿದೆ ಎಂಬ ಅನುಮಾನವನ್ನು ಅಭ್ಯರ್ಥಿಗಳು ವ್ಯಕ್ತಪಡಿಸಿದ್ದಾರೆ. ನೇಮಕಾತಿಯ ದಾಖಲೆಗಳನ್ನು ಪರಿಶೀಲಿಸಿ, ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂಬುದು ಅವರ ಆಗ್ರಹವಾಗಿದೆ.

ಇದನ್ನೂ ಓದಿ: ಹಗರಣ ಬೆನ್ನಲ್ಲೇ ಕೆಪಿಎಸ್​​​​​​​​​​​​​​​ಸಿ ವೆಬ್‌ಸೈಟ್ ಬದಲಾವಣೆ :ಇಲ್ಲಿದೆ ಹೊಸ ಪೋರ್ಟಲ್ ಲಿಂಕ್

ಮುಂದಿನ ದಿನಗಳಲ್ಲಿ ತುಮುಲ್ ಆಡಳಿತ ಮಂಡಳಿ ಯಾವ ಕ್ರಮಕೈಗೊಳ್ಳಲಿದೆ, ಅಭ್ಯರ್ಥಿಗಳ ಆರೋಪಗಳಿಗೆ ಉತ್ತರ ಸಿಗಲಿದೆಯೇ ಅಥವಾ ಈ ವಿವಾದ ಮತ್ತೊಂದು ಸುತ್ತಿನ ಕಾನೂನು ಹೋರಾಟಕ್ಕೆ ಸಾಕ್ಷಿಯಾಗಲಿದೆಯೇ ಅನ್ನೋದನ್ನ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:17 pm, Sat, 24 October 26

ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
Loading...
Unable to load recommendations.
Follow Us