ತುಮಕೂರು, ಮೇ.16: ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಅವರ ಕನಸಿನ ಯೋಜನೆ. ಬರೋಬ್ಬರಿ ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗೆ ಈಗಾಗಲೇ ಶಂಕುಸ್ಥಾಪನೆ ನೆರವೇರಿದ್ದು, ಕಾಮಗಾರಿ ಕೂಡ ಆರಂಭವಾಗಿದೆ. ಆದ್ರೆ ಇದೀಗ ಈ ಯೋಜನೆಗೆ ಕಲ್ಪತರು ನಾಡು ತುಮಕೂರಿ(Tumakur)ನಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಚುನಾವಣೆಯಿದೆ ಅಂತಾ ಇಷ್ಟು ದಿನ ಸುಮ್ಮನಿದ್ದ ಜಿಲ್ಲೆಯ ನಾಯಕರು ಇದೀಗ ಪಕ್ಷಾತೀತವಾಗಿ ಬೃಹತ್ ಹೋರಾಟ ನಡೆಸಲು ಮುಂದಾಗಿದ್ದಾರೆ.
ಹೋರಾಟ ಮತ್ತಷ್ಟು ಸ್ವರೂಪ ಪಡೆದುಕೊಂಡಿದೆ. ಇದಕ್ಕೆ ಕಾರಣ ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರೋ ಅದೊಂದು ಯೋಜನೆ. ಹೇಮಾವತಿ ನೀರನ್ನ ಕುಣಿಗಲ್ ಮತ್ತು ಮಾಗಡಿ ತಾಲೂಕಿನ 33 ಕೆರೆಗಳಿಗೆ ನೀರು ಹರಿಸುವ ಉದ್ದೇಶದಿಂದ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಕನಸಿನ ಯೋಜನೆ ಇದಾಗಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಹೋದರ ಡಿಕೆ ಸುರೇಶ್ ಅವರ ಗೆಲುವಿಗೆ ಸಹಕಾರಿಯಾಗುತ್ತದೆ ಎನ್ನುವ ಉದ್ದೇಶದಿಂದ ತರಾತುರಿಯಲ್ಲಿಯೇ ಈ ಯೋಜನೆಗೆ ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದರು.
ಇದನ್ನೂ ಓದಿ:‘ಲಿಂಕಿಂಗ್ ಕೆನಾಲ್’ ಮೂಲಕ ಗುಬ್ಬಿಯಿಂದ ಮಾಗಡಿಗೆ ನೀರು; ಬಿಜೆಪಿ-ಜೆಡಿಎಸ್ ನಾಯಕರ ತೀವ್ರ ಆಕ್ಷೇಪ
ಇದೀಗ ಈ ಯೋಜನೆಯ ಕಾಮಗಾರಿ ಕೂಡ ಆರಂಭವಾಗಿದೆ. ಆದ್ರೆ, ಈ ಯೋಜನೆಯ ವಿರುದ್ಧ ತುಮಕೂರು ಜಿಲ್ಲೆಯ ಬಿಜೆಪಿ-ಜೆಡಿಎಸ್ ನಾಯಕರು ಸಿಡಿದೆದ್ದಿದ್ದಾರೆ. ಕಲ್ಪತರು ನಾಡು ತುಮಕೂರಿನ ಜನರ ಪಾಲಿಗೆ ಹೇಮಾವತಿ ನೀರು ಅಮೃತದ ಸಮಾನ. ಹೇಮಾವತಿ ಇಲ್ಲದಿದ್ದರೆ ಜಿಲ್ಲೆಯ ಜನರಿಗೆ ಕುಡಿಯೋದಕ್ಕೂ ನೀರು ಇರುತ್ತಿರಲಿಲ್ಲ. ಹೀಗಾಗಿ ಜಿಲ್ಲೆಯ ಬಹುತೇಕ ತಾಲೂಕುಗಳ ಜನರು ತಮ್ಮೆಲ್ಲ ಅಗತ್ಯತೆಗಳಿಗೂ ಹೇಮಾವತಿ ನೀರನ್ನೇ ನೆಚ್ಚಿಕೊಂಡಿದ್ದಾರೆ. ಆದ್ರೆ , ಈ ಹೇಮಾವತಿ ನೀರಿಗೂ ಕುತ್ತು ಬರುತ್ತಾ ಅನ್ನೋ ಆತಂಕ ಜಿಲ್ಲೆಯ ಜನರಲ್ಲಿ ಶುರುವಾಗಿದೆ.
ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ಜಿಲ್ಲೆಯಲ್ಲಿ ಹೋರಾಟ ತೀವ್ರಗೊಂಡಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಸುಂಕಾಪುರದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಸಾವಿರಾರು ಸಂಖ್ಯೆಯ ರೈತರ ಸಮ್ಮುಖದಲ್ಲಿ ಹೋರಾಟಕ್ಕೆ ಕರೆ ನೀಡಲಾಗಿದ್ದು, ಕಾಮಗಾರಿ ನಡೆಸದಂತೆ ತಡೆಹಿಡಿಯಲು ಕೆನಾಲ್ ಯೋಜನೆ ವಿರೋಧಿ ಹೋರಾಟ ಸಮಿತಿ ಮುಂದಾಗಿದೆ. ಹೇಮಾವತಿ ನೀರು ನಮ್ಮ ನೀರು, ನಮ್ಮ ಹಕ್ಕು ಎಂಬ ಕೂಗಿನೊಂದಿಗೆ ಹೋರಾಟಕ್ಕೆ ನಾಂದಿ ಹಾಡಲಾಗಿದೆ. ತುಮಕೂರು, ಗುಬ್ಬಿ, ತುರುವೇಕೆರೆ, ತಿಪಟೂರು, ತುಮಕೂರು ಗ್ರಾಮಾಂತರ ರೈತರು ಹೋರಾಟದಲ್ಲಿ ಭಾಗಿಯಾಗಿದ್ದು, ಜೆಡಿಎಸ್ ಶಾಸಕ ಎಂ.ಟಿ ಕೃಷ್ಣಪ್ಪ, ಬಿಜೆಪಿ ಶಾಸಕ ಬಿ. ಸುರೇಶ್ ಗೌಡ, ಮಾಜಿ ಸಚಿವ ಸೊಗಡು ಶಿವಣ್ಣ ಸೇರಿದಂತೆ ಜಿಲ್ಲೆಯ ಹಾಲಿ, ಮಾಜಿ ಶಾಸಕರುಗಳು ಸೇರಿದಂತೆ ಹಲವು ನಾಯಕರು ಕೈ ಜೋಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ