ತುಮಕೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಕಂಬಾಳು ಮಠದ(Kambalu Samsthana Mutt) ಸ್ವಾಮೀಜಿ, ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ಯುವತಿ ಮಾತಿಗೆ ಮರುಳಾಗಿ 35 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ. ಇನ್ನು ಇದರ ಮಧ್ಯೆ ಕಂಬಾಳು ಮಠವು ಸಿದ್ಧಗಂಗಾ ಮಠದ ಶಾಖಾ ಮಠ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ತುಮಕೂರಿನ ಸಿದ್ಧಗಂಗಾ ಮಠದ (Tumakuru Siddaganga Math) ಆಡಳಿತ ಮಂಡಳಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಕಂಬಾಳು ಮಠಕ್ಕೂ ಸಿದ್ಧಗಂಗಾ ಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಇತ್ತೀಚೆಗೆ ಕಂಬಾಳು ಸಂಸ್ಥಾನ ಮಠವು ಸಿದ್ದಗಂಗಾ ಮಠದ ಶಾಖಾ ಮಠವೆಂದು ಹಲವು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸಲಾಗುತ್ತಿದೆ. ಕಂಬಾಳು ಸಂಸ್ಥಾನ ಮಠ ತುಮಕೂರಿನ ಸಿದ್ದಗಂಗಾ ಮಠದ ಶಾಖಾ ಮಠವಲ್ಲ. ಕಂಬಾಳು ಮಠವು ಶ್ರೀ ಶೈಲ ಸೂರ್ಯಸಿಂಹಾಸನ ಗುರುಪರಂಪರೆಗೆ ಸೇರಿದ ಮಠವಾಗಿದೆ. ಹೀಗಾಗಿ ಸಿದ್ದಗಂಗಾ ಮಠಕ್ಕೂ ಕಂಬಾಳು ಮಠಕ್ಕೂ ಯಾವುದೇ ಸಂಬಂಧವಿಲ್ಲ. ಸಿದ್ದಗಂಗಾ ಮಠವು ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಒಂದಾಗಿದ್ದು, ತ್ರೀವಿಧ ದಾಸೋಹದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಸಂಸ್ಥೆಯಾಗಿರುತ್ತದೆ ಎಂದು ತುಮಕೂರಿನ ಸಿದ್ದಗಂಗಾ ಮಠದ ಆಡಳಿತ ಮಂಡಳಿಯು ಪ್ರತಿಕಾ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ.
ತಮ್ಮ ಮಠಕ್ಕೆ ಜಮೀನು ಕೊಡುವುದಾಗಿ ನಂಬಿಸಿದ ವರ್ಷ ಎಂಬ ಹೆಸರಿನ ಮಹಿಳೆಯೊಬ್ಬರು ಹಂತಹಂತವಾಗಿ 35 ಲಕ್ಷ ರೂಪಾಯಿಗಳನ್ನು ತಮ್ಮ ಖಾತೆಗೆ ಹಾಕಿಸಿಕೊಂಡು, ವಂಚನೆ ಎಸಗಿದ್ದಾರೆ ಎಂದು ಕಂಬಾಳು ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಆರೋಪಿಸಿದ್ದರು.
ಫೇಸ್‌ಬುಕ್ ನಲ್ಲಿ ಪರಿಚಯವಾಗಿ ವಿಡಿಯೋ ಕರೆ ಮೂಲಕ ಸಲುಗೆಯಿಂದ ಮಾತನಾಡುತ್ತಿದ್ದ ಯುವತಿಯೊಬ್ಬರ ಬಲೆಗೆ ಬಿದ್ದು ಕಂಬಾಳು ಮಹಾಸಂಸ್ಥಾನದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಸುಮಾರು 35 ಲಕ್ಷ ರು ಕಳೆದುಕೊಂಡಿದ್ದಾರೆ, ಈ ಸಂಬಂಧ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸ್ವಾಮೀಜಿ ಅವರನ್ನು 2020ರಲ್ಲಿ ಪರಿಚಯ ಮಾಡಿಕೊಂಡಿದ್ದ ಯುವತಿ, ನಾನಾ ಕಾರಣ ನೀಡಿ ಹಣ ಪಡೆದಿದ್ದಾಳೆ. ಫೇಸ್‌ಬುಕ್ ನಲ್ಲಿ ವರ್ಷಾ ಹೆಸರಿನ ಖಾತೆಯಿಂದ 2020ರಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅದನ್ನು ಸ್ವೀಕರಿಸಿದ್ದೆ. ನಂತರ, ಯುವತಿ ಚಾಟಿಂಗ್ ಮಾಡಲಾರಂಭಿಸಿದ್ದಳು. ಆಧ್ಯಾತ್ಮಿಕವಾಗಿ ಆಸಕ್ತಿ ಇದೆ ಎಂದು ಹೇಳಿ, ಮೊಬೈಲ್ ನಂಬರ್ ಪಡೆದುಕೊಂಡಿದ್ದಳು. ತನ್ನ ಮೊಬೈಲ್ ನಂಬರ್ ಸಹ ಕೊಟ್ಟಿದ್ದಳು ಎಂದು ಸ್ವಾಮೀಜಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.