ಸಿದ್ದರಾಮೇಶ್ವರ ಮಹಾಸಂಸ್ಥಾನದ ಸ್ವಾಮೀಜಿಗಳ ಮೇಲೆ ಹಲ್ಲೆ: ಆರೋಪಿ ಅರೆಸ್ಟ್​​

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಸಿದ್ಧರಾಮೇಶ್ವರ ಮಹಾಸಂಸ್ಥಾನದ ಮಠಾಧಿಪತಿ ಮೃತ್ಯುಂಜಯ ಸ್ವಾಮೀಜಿ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ದೇವಾಲಯದ ಗೋಪುರ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದಾರೆಂದು ಆರೋಪಿಸಿ ಸಿದ್ಧರಾಮಯ್ಯ ಎಂಬಾತ ಕೊಲೆ ಯತ್ನ ನಡೆಸಿದ್ದಾನೆ ಎಂದು ದೂರಲಾಗಿದ್ದು, ಫೆಬ್ರವರಿ 11ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗಾಯಗೊಂಡ ಸ್ವಾಮೀಜಿಗೆ ಚಿಕಿತ್ಸೆ ನೀಡಲಾಗಿದೆ.

ಸಿದ್ದರಾಮೇಶ್ವರ ಮಹಾಸಂಸ್ಥಾನದ ಸ್ವಾಮೀಜಿಗಳ ಮೇಲೆ ಹಲ್ಲೆ: ಆರೋಪಿ ಅರೆಸ್ಟ್​​
ಹಲ್ಲೆಗೊಳಗಾದ ಸ್ವಾಮೀಜಿ
Image Credit source: Tv9 Kannada
Edited By:

Updated on: Feb 27, 2026 | 11:50 AM

ತುಮಕೂರು, ಫೆಬ್ರವರಿ 27: ಸಿದ್ಧರಾಮೇಶ್ವರ ದೇವಾಲಯದ ಗೋಪುರ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಗೋಡೆಕೆರೆಯ ಸಿದ್ದರಾಮೇಶ್ವರ ಮಹಾಸಂಸ್ಥಾನದ ಮಠಾಧಿಪತಿಗಳ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಮೃತ್ಯುಂಜಯ ಸ್ವಾಮೀಜಿಗಳ ಮೇಲೆ ದಾಳಿ ಸಂಬಂಧ ಸ್ಥಳೀಯ ಹಾಗೂ ಮಠದಲ್ಲಿ ಸ್ವಾಮೀಜಿಗಳ ಜೊತೆ ಓಡಾಡಿಕೊಂಡಿದ್ದ ಸಿದ್ಧರಾಮಯ್ಯ ಎಂಬಾತನನ್ನು ಬಂಧಿಸಲಾಗಿದೆ. ಫೆಬ್ರವರಿ 11ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಳಿಗ್ಗೆ ಸುಮಾರು 5.30ರ ಹೊತ್ತಿಗೆ ಮೃತ್ಯುಂಜಯ ಸ್ವಾಮೀಜಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಸಿದ್ಧರಾಮಯ್ಯ, ನೀನು ಸಿದ್ಧರಾಮೇಶ್ವರ ದೇವಾಲಯದ ಗೋಪುರ ಮಾಡಲು ಬೀಡುತ್ತಿಲ್ಲ. ಗೋಪುರ ಮಾಡಲು ಅಡ್ಡಿ ಪಡುಸುತ್ತಿರುವ ನಿನ್ನ ಕೊಲೆ ಮಾಡಲು ಬಂದಿದ್ದೇನೆ ಎಂದು ಹೇಳಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮಠದ ಬಾಲಕ ಸ್ವಾಮೀಜಿ ರಕ್ಷಣೆಗೆ ಬಂದಿದ್ದು, ಆರೋಪಿ ಆತನನ್ನೂ ಬಲವಾಗಿ ತಳ್ಳಿದ್ದಾನೆ. ಬಳಿಕ ಪ್ಲಾಸ್ಟಿಕ್​​ ಕುರ್ಚಿಯಿಂದ ಸ್ವಾಮೀಜಿ ಮೇಲೆ ದಾಳಿ ನಡೆಸಿದ್ದು, ಅವರನ್ನು ಎಳೆದುಕೊಂಡು ಹೋಗಿ ಗೇಟ್​​ ಹತ್ತಿರ ತಳ್ಳಿ ನಿನ್ನನ್ನು ಎಲ್ಲರೂ ನೋಡುವ ಹಾಗೆ ಸಾಯಿಸುತ್ತೇನೆ ಎಂದು ಹೇಳಿ ಕುತ್ತಿಗೆಗೆ ಕೈ ಹಾಕಿ ಹಿಸುಕಿದ್ದಾನೆ. ಈ ವೇಳೆ ಮಠದ ಬಾಲಕ ಕಿರುಚಾಡಿದ್ದು ಕೂಡಲೇ ಬಂದ ಮಠದ ಸಿಬ್ಬಂದಿ ಸ್ವಾಮೀಜಿಯವರನ್ನು ಆರೋಪಿ ಕೈಯಿಂದ ಬಿಡಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:  ದಾವಣಗೆರೆ-ಬೆಂಗಳೂರು ಪ್ರಯಾಣಕ್ಕೆ ಎರಡೂವರೆ ಗಂಟೆ ಸಾಕು! ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗ ಮುಂದಿನ ವರ್ಷ ಸಿದ್ಧ

ಘಟನೆಯಲ್ಲಿ ಸ್ವಾಮೀಜಿ ಮುಖ ಮತ್ತು ಕುತ್ತಿಗೆ ಭಾಗಕ್ಕೆ ಗಾಯಗಳಾಗಿದ್ದು, ಅವರನ್ನು ಗ್ರಾಮಸ್ಥರ ಸಹಾಯದಿಂದ ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಸಂಬಂಧ ಸಿದ್ದರಾಮಯ್ಯ ವಿರುದ್ಧ ಸ್ವಾಮೀಜಿ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಠದ ಸ್ವಾಮೀಜಿಯ ಮೇಲೆಯೇ ಹಲ್ಲೆ ನಡೆದಿರೋದು ಭಕ್ತರ ಆತಂಕಕ್ಕೆ ಕಾರಣವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us