Tumakur Accident: ಪಿಎಂ ಮೋದಿಯಿಂದ ಮೃತರ ಕುಟುಂಬಕ್ಕೆ ರೂ. 2 ಲಕ್ಷ ಪರಿಹಾರ; ಅಪಘಾತಕ್ಕೆ ಅಸಲಿ ಕಾರಣ ಇಲ್ಲಿದೆ

Tumakur Accident - ಕ್ರೂಷರ್ ವಾಹನ ಅಪಘಾತಕ್ಕೆ ಕ್ರೂಷರ್ ವಾಹನದ ಪರಿಸ್ಥಿತಿ ಸಂಪೂರ್ಣ ಕೆಟ್ಟಿದ್ದೇ ಕಾರಣವೆನ್ನಲಾಗುತ್ತಿದ್ದು, ನಾಲ್ಕೂ ಚಕ್ರಗಳು ಸಂಪೂರ್ಣ ಸವೆದು ಹೋಗಿವೆ. 12 ಜನ ಸಾಮರ್ಥ್ಯದ ವಾಹನದಲ್ಲಿ 24 ಜನ ಪ್ರಯಾಣಿಕರು ಇದ್ದರು.

Tumakur Accident: ಪಿಎಂ ಮೋದಿಯಿಂದ ಮೃತರ ಕುಟುಂಬಕ್ಕೆ ರೂ. 2 ಲಕ್ಷ ಪರಿಹಾರ; ಅಪಘಾತಕ್ಕೆ ಅಸಲಿ ಕಾರಣ ಇಲ್ಲಿದೆ
ಅಪಘಾತಕ್ಕೀಡಾದ ಕ್ರೂಷರ್​ ವಾಹನ
Updated By: Digi Tech Desk

Updated on: Aug 25, 2022 | 11:03 AM

ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ಬೆಳಗಿನ ಜಾವ 4ಗಂಟೆ ಸುಮಾರಿಗೆ ವಿಧಿ ತನ್ನ ಕ್ರೂರ ಅಟ್ಟಹಾಸ ಮೆರೆದಿದ್ದು, ಕ್ರೂಸರ್ ಓವರ್ ಟೇಕ್ ಮಾಡಲು ಹೋಗಿ ಲಾರಿ ಡಿಕ್ಕಿಯಾಗಿ ಒಟ್ಟು 9 ಜನರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಸುಜಾತಾ ಪ್ರಭು(25), ಲಕ್ಷ್ಮೀ(30), ವಿನೋಧಪ್ರಭು(3), ಹಾಗೂ ಕೃಷ್ಣಪ್ಪ(28), ಪ್ರಭು(30), ಬಸಮ್ಮ ಶಿವಪ್ಪ(50) ಮೃತ ದುರ್ದೈವಿಗಳು. ಇನ್ನುಳಿದ ಮೃತ ಮೂವರ ಹೆಸರು ಮತ್ತು ವಿಳಾಸ ಪತ್ತೆಯಾಗಿಲ್ಲ. ಮೋನಮ್ಮ, ಅನಿಲ್ ಕುಮಾರ್, ಲಲಿತಾ, ಸಂದೀಪ್, ಬಾಲಾಜಿ, ವಿರೂಪಾಕ್ಷ, ದುರ್ಗಮ್ಮ, ದುರ್ಗಪ್ಪಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಬೆಂಗಳೂರಿನ ನಿಮ್ಹಾನ್ಸ್​ ಆಸ್ಪತ್ರೆಯಲ್ಲಿ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೃತರಲ್ಲಿ ಮೂವರು ಮಹಿಳೆಯರು, ನಾಲ್ವರು ಪುರುಷರು, ಇಬ್ಬರು ಮಕ್ಕಳು ಸೇರಿ ಒಟ್ಟು 9 ಮಂದಿ ಸಾವನ್ನಪ್ಪಿದ್ದು, 11 ಜನರು ಗಾಯಾಗೊಂಡಿದ್ದಾರೆ. ಜಿಲ್ಲಾಧಿಕಾರಿ ಡಿಸಿ ವೈ.ಎಸ್.ಪಾಟೀಲ್ ಮತ್ತು ಜಿಲ್ಲಾ ಪೊಲೀಸ್​ ವರಿಷ್ಟಾಧಿಕಾರಿ ರಾಹುಲ್ ಕುಮಾರ ಶಹಪುರವಾಡ್​ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಅಪಘಾತ ನಡೆದಿದ್ದೇಗೆ?

ರಾಯಚೂರು ಜಿಲ್ಲೆಯಿಂದ ನಿನ್ನೆ 24 ಜನರು ಹೊರಟಿದ್ದು, ಮಾರ್ಗಮಧ್ಯದಲ್ಲಿ ಬೆಳಗಿನ ಜಾವ 4ಗಂಟೆ ಸುಮಾರಿಗೆ ಕ್ರೂಸರ್ ಚಾಲಕ ಲಾರಿವೊಂದನ್ನು ಓವರ್​ ಟೇಕ್​ ಮಾಡಲು ಹೋಗಿದ್ದು, ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕ್ರೂಸರ್​ ವಾಹನದ ಟೈರ್​ ಸ್ಫೋಟಗೊಂಡು ಡಿವೈಡರ್​ಗೆ ಡಿಕ್ಕಿ ಹೊಡಿದಿದೆ. ಹುಬ್ಬಳ್ಳಿಯಿಂದ ತಮಿಳುನಾಡಿನ ಕೊಯಂಬತ್ತೂರಿಗೆ ಲಾರಿ ತೆರಳುತ್ತಿತ್ತು. ತಮಿಳುನಾಡಿನ ನೋಂದಣಿ ಸಂಖ್ಯೆಯನ್ನು ಲಾರಿ ಹೊಂದಿದೆ.

ಕ್ರೂಷರ್ ಹದಗೆಟ್ಟಿದೆ ಅಪಘಾತಕ್ಕೆ ಕಾರಣನಾ?

ಕ್ರೂಷರ್ ವಾಹನ ಅಪಘಾತಕ್ಕೆ ಕ್ರೂಷರ್ ವಾಹನದ ಪರಿಸ್ಥಿತಿ ಸಂಪೂರ್ಣ ಕೆಟ್ಟಿದ್ದೇ ಕಾರಣವೆನ್ನಲಾಗುತ್ತಿದ್ದು, ನಾಲ್ಕೂ ಚಕ್ರಗಳು ಸಂಪೂರ್ಣ ಸವೆದು ಹೋಗಿವೆ. 12 ಜನ ಸಾಮರ್ಥ್ಯದ ವಾಹನದಲ್ಲಿ 24 ಜನ ಪ್ರಯಾಣಿಕರು ಇದ್ದರು. ಟಯರ್ ಸವೆದಿದ್ದರಿಂದ ಬ್ಲಾಸ್ಟ್ ಗೊಂಡಿದೆ. ಹಾಗಾಗಿ ಡಿವೈಡರ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.

ಚಾಲಕ ಮದ್ಯಪಾನ ಮಾಡಿರುವ ಆರೋಪ

ರಾಯಚೂರು ಜಿಲ್ಲೆಯಿಂದ ಬೆಂಗಳೂರಿಗೆ ಕೆಲಸಕ್ಕೆಂದು ಕುಟುಂಬ ಸಮೇತ ಕೂಲಿ ಕಾರ್ಮಿಕರು ಹೊರಟಿದ್ರು. ಚಾಲಕ ಮದ್ಯಪಾನ ಮಾಡಿದ್ದ ಎಂದು ಗಾಯಾಳುಗಳ ಆರೋಪ ಮಾಡಿದ್ದು, ಬೆಳಗ್ಗೆ ಚಹಾ ಕುಡಿಯಲೆಂದು ಚಾಲಕ ವಾಹನ ನಿಲ್ಲಿಸಿದ್ದ. ಈ ವೇಳೆ ಹೋಗಿ ಮದ್ಯ ಸೇವಿಸಿ ಬಂದಿದ್ದಾನೆಂದು ಆರೋಪ ಮಾಡಲಾಗಿದೆ.

ಟ್ವೀಟ್​ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಜನರು ಸಾವಿಗೀಡಾಗಿ ಹಲವರು ಗಾಯಗೊಂಡಿರುವ ವಿಷಯ ತಿಳಿದು ತೀವ್ರ ದುಃಖಿತನಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್​ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

ಅದೇ ರೀತಿಯಾಗಿ ಘಟನೆ ಕುರಿತು ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ, ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 10:55 am, Thu, 25 August 22