Tumakuru: ರೈತರ ಕನಸಿಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಅಡ್ಡಗಾಲು

| Updated By: Rakesh Nayak Manchi

Updated on: Nov 28, 2022 | 3:41 PM

ವರ್ಷದ ಬೆಳೆ ರೈತರ ಕೈ ಸೇರಿತ್ತು. ಈ ಬೆಳೆಯನ್ನ ಮಾರಿ ಸಾಲ ತೀರಿಸಿಕೊಂಡು ಆರಾಮವಾಗಿರುವ ಅಂತಾ ಆ ರೈತರು ಕನಸು ಕಂಡಿದ್ದರು. ಆದರೆ ಅವರ ಈ ಕನಸಿಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಅಡ್ಡಗಾಲು ಹಾಕಿದ್ದಾರೆ. ಅದೇನೆಂದು ಇಲ್ಲಿದೆ ನೋಡಿ.

Tumakuru: ರೈತರ ಕನಸಿಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಅಡ್ಡಗಾಲು
ಅಡಿಕೆ ಚೀಲ ತುಂಬಿದ ವಾಹನ ಸೀಜ್; ವಾಣಿಜ್ಯ ತೆರಿಗೆ ಇಲಾಖೆ ಕಚೇರಿ ಮುಂದೆ ನೋವು ತೋಡಿಕೊಳ್ಳುತ್ತಿರುವ ರೈತರು
Follow us on

ತುಮಕೂರು: ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಚಿಕ್ಕಬೆಳವಂಗಲ ಗ್ರಾಮದ ರೈತರಾದ ರವಿಕುಮಾರ್ ಮತ್ತು ಪ್ರತಾಪ್ ತಮ್ಮ ತೋಟದಲ್ಲಿ ಬೆಳೆದ ಅಡಿಕೆ (Arecanut)ಯನ್ನ ಮಾರಾಟ ಮಾಡಲು ಮುಂದಾಗಿದ್ದರು. ಹೀಗಾಗಿ ಸುಮಾರು 105 ಚೀಲ ಅಡಿಕೆಯನ್ನ ಕ್ಯಾಂಟರ್ ವಾಹನದಲ್ಲಿ ತುಂಬಿಕೊಂಡು ಚಿತ್ರದುರ್ಗದ (Chitradurga) ಭೀಮಸಂದ್ರ ಮಾರುಕಟ್ಟೆಯ ಕಡೆ ಹೊರಟಿದ್ದರು. ಆದರೆ ವಾಹನ ಶಿರಾ ಬಳಿ ಆಗಮಿಸುತ್ತಿದ್ದಂತೆ ತುಮಕೂರು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ವಾಹನವನ್ನ ಜಪ್ತಿ ಮಾಡಿದ್ದಾರೆ. ರೈತ ರವಿಕುಮಾರ್​ಗೆ ಸೇರಿದ 60 ಚೀಲ ಮತ್ತು ಪ್ರತಾಪ್​ಗೆ ಸೇರಿದ 45 ಚೀಲಗಳು ಸೇರಿ ಒಟ್ಟು 105 ಅಡಿಕೆ ಚೀಲಗಳು ವಾಹನದಲ್ಲಿದ್ದವು. ಇದೆಲ್ಲ ತಮ್ಮ ಹೊಲದಲ್ಲಿಯೇ ಬೆಳೆದಿದ್ದು ಅಂತಾ ಅಧಿಕಾರಿಗಳಿಗೆ ಪರಿ ಪರಿಯಾಗಿ ಕೇಳಿಕೊಂಡರೂ ಅಧಿಕಾರಿಗಳು ಬಿಡದೇ ವಾಹನವನ್ನ ಜಪ್ತಿ ಮಾಡಿದ್ದಾರೆ.

ರೈತರಿಗೆ ಜಮೀನಿನ ಪಹಣಿ ತಂದು ತೋರಿಸುವಂತೆ ಹೇಳಿದಾಗ ರೈತರು ತಕ್ಷಣವೇ ಪಹಣಿ ತಂದು ತೋರಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅಧಿಕಾರಿಗಳು ಗ್ರಾಮಕ್ಕೆ ಬಂದು ತಪಾಸಣೆ ಮಾಡುವುದಾಗಿ ಹೇಳಿದ್ದಾರೆ. ರೈತರು ಅದಕ್ಕೂ ಒಪ್ಪಿದ್ದಾರೆ. ಬಳಿಕ ಚಿಕ್ಕಬೆಳವಂಗಲ ಗ್ರಾಮಕ್ಕೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.

ಇದನ್ನೂ ಓದಿ: ಗೌರಿಶಂಕರ್ ಕೊಲೆ ಸುಪಾರಿ ಕೊಟ್ಟಿದ್ದರೆಂದು ಪ್ರಪಂಚದ ಯಾವುದೇ ದೇವರ ಮುಂದೆ ಪ್ರಮಾಣ ಮಾಡಿ ಹೇಳಲು ಸಿದ್ಧ: ಬಿಜೆಪಿ ಮಾಜಿ ಶಾಸಕ

“ಅದಿಕಾರಿಗಳು ವಾಹನವನ್ನು ಜಪ್ತಿ ಮಾಡಿದ ಹಿನ್ನೆಲೆ ಕಚೇರಿಗೆ ಬಂದೆವು. ಇಲ್ಲಿ ಪಹಣಿ ತೋರಿಸುವಂತೆ ಹೇಳಿದಾಗ ನಾವು ಪಹಣಿ ತೋರಿಸಿದ್ದೇವೆ. ಈ ವೇಳೆ ಅಧಿಕಾರಿಗಳು ಈ ಪಹಣಿ ನಿಮ್ಮದೇ ಎನ್ನಲು ಯಾವ ಸಾಕ್ಷಿ ಇದೆ ಎಂದು ಪ್ರಶ್ನಿಸಿ ಬೆಳಗ್ಗೆ ಮನೆ ಬಳಿ ಬರುತ್ತೇವೆ ಎಂದು ಹೇಳಿದ್ದಾರೆ. ಅದರಂತೆ ಮುಖ್ಯ ಕಚೇರಿಯಿಂದಲೇ ಅಧಿಕಾರಿಗಳು ಮನೆ ಬಳಿ ಬಂದು ಇಂಚಿಂಚು ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ನೀವು ದಳ್ಳಾಲಿಗಳು ಅಲ್ಲ ಅಂತ ತಿಳಿಯಿತು. ಯಾರಾದರು ದಳ್ಳಾಲಿಗಳಿದ್ದರೆ ಹೆಸರು ಹೇಳಿ ಅಂತ ಸ್ಕ್ವಾಡ್​ಗಳು ಒತ್ತಾಯಿಸಿದರು. ಬಳಿಕ ಅಡಿಕೆ ಖರೀದಿ ಮಾಡುವವರನ್ನು ಕರೆಯಿರಿ ಅಂತ ಹೇಳಿದರು. ಅವರು ಬಂದಾಗ ನಮ್ಮನ್ನು ಬೈದು ಹೊರಗೆ ಕಳುಹಿಸಿ ಅವರಲ್ಲಿ ಮಾತ್ರ ಮಾತನಾಡಿದ್ದಾರೆ.” -ರವಿಕುಮಾರ್ ಗೌಡ, ರೈತ

ಚಿಕ್ಕಬೆಳವಂಗಲ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ರವಿಕುಮಾರ್ ಹಾಗೂ ಪ್ರತಾಪ್ ಮನೆಯನ್ನು ಹಾಗೂ ತೋಟದಲ್ಲಿ ತಪಾಸಣೆಯನ್ನೂ ನಡೆಸಿ ಬಂದಿದ್ದಾರೆ. ಇಷ್ಟೆಲ್ಲಾ ತಪಾಸಣೆ ಮುಗಿಸಿದ್ದರು ಕೂಡ ವಾಹನವನ್ನ ಬಿಡದೇ ಅಧಿಕಾರಿಗಳು ಸತಾಯಿಸುತ್ತಿದ್ದಾರೆ.

ಮೊದಲು ವಾಹನವನ್ನ ವೇ ಬ್ರಿಡ್ಜ್​ನಲ್ಲಿ ತೂಕ ಹಾಕಿಸುವಂತೆ ಹೇಳಿದ್ದ ಅಧಿಕಾರಿಗಳು ನಂತರ ಪಹಣಿ ನೀಡುವಂತೆ ಕೇಳಿದರು. ಎಲ್ಲಾ ದಾಖಲೆಗಳು ಸರಿಯಾಗಿ ಇದ್ದರು ಕೂಡ 45 ಲಕ್ಷ ಟ್ಯಾಕ್ಸ್ ಕಟ್ಟುವಂತೆಯೂ ಹೇಳಿದ್ದಾರೆ. ಅದಕ್ಕೆ ಒಪ್ಪದಿದ್ದಾಗ 10 ಲಕ್ಷ ರೂಪಾಯಿ ಲಂಚಕ್ಕೂ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಬೇಡಿಕೆಯಿಟ್ಟಿದ್ದಾರೆ. ಲಂಚ ಕೊಡಲು ಒಪ್ಪದಿದ್ದಾಗ ನಿಮ್ಮದೇ ಅಡಿಕೆ ಅನ್ನೋದಕ್ಕೆ ಸಾಕ್ಷಿ ಏನಿದೆ ಎಂದು ಸತಾಯಿಸುತ್ತಿದ್ದಾರೆ ಅಂತಾ ರೈತರು ಆರೋಪಿಸಿದ್ದಾರೆ. ಒಟ್ಟಿನಲ್ಲಿ ತಾವು ಬೆಳೆದ ಬೆಳೆಯನ್ನ ಮಾರಿ ಕೈತುಂಬಾ ಹಣ ಎಣಿಸುವ ಅಂತಾ ಕನಸು ಕಂಡಿದ್ದ ರೈತರಿಗೆ ಈ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅಡ್ಡಗಾಲು ಹಾಕಿದ್ದಾರೆ. ಹೀಗಾಗಿ ರೈತರು ನ್ಯಾಯಕ್ಕಾಗಿ ಪರಿತಪಿಸುವಂತಾಗಿದೆ.

ವರದಿ: ಮಹೇಶ್, ಟಿವಿ9 ತುಮಕೂರು

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:34 pm, Mon, 28 November 22