ತುಮಕೂರು, ಸೆ.05: ಕೇಳಿದ ತಕ್ಷಣ ಜಾನುವಾರುಗಳಿಗೆ ತಿನ್ನಲು ಬೂಸಾ(Cattle Feed) ಕೊಡಲಿಲ್ಲ ಎಂದು ಅಧಿಕಾರಿಯ ಮೇಲೆಯೇ ಹಲ್ಲೆ ನಡೆಸಿದ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹಾಲಿನ ಡೈರಿ ಬಳಿ ನಡೆದಿದೆ. ಬೂಸಾ ಕೊಡಲು ತಡಿ ಮಾಡಿದಕ್ಕೆ ಗೂಸಾ ಕೊಟ್ಟವನ ಮೇಲೆ ಎಫ್ಐಆರ್(FIR) ದಾಖಲಾಗಿದೆ. ಶೆಟ್ಟಿಕೆರೆ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶಿವಕುಮಾರ್ ಮೇಲೆ ಹಲ್ಲೆ ನಡೆದಿದೆ. ಕ್ಷುಲ್ಲಕ ವಿಚಾರಕ್ಕೆ ಕರ್ತವ್ಯನಿರತ ಶಿವಕುಮಾರ್ ಮೇಲೆ ನಾಗರಾಜು, ಯೋಗಾನಂದ್, ಅನಿಲ್ ಎಂಬುವವರು ಹಲ್ಲೆ ನಡೆಸಿದ್ದಾರೆ. ಬೂಸಾ ಗೋದಾಮಿಗೆ ನುಗ್ಗಿ ದಾಂದಲೆ ಮಾಡಿದ್ದಾರೆ. ಹಲ್ಲೆ ನಡೆಸಿದ ಮೂವರ ವಿರುದ್ದ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ತುಮಕೂರು ಜಿಲ್ಲೆ ಪಾವಗಡದ ಇಂದಿರಾ ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ. ಇಂದಿರಾ ಕ್ಯಾಂಟೀನ್ ಮುಂದೆ ಕೆಲ ಯುವಕರು ವಾಹನ ನಿಲ್ಲಿಸಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಸಿಬ್ಬಂದಿ ಮೇಲೆ ಯುವಕರ ಗುಂಪಿನಿಂದ ಹಲ್ಲೆ ನಡೆದಿದೆ. ಕ್ಯಾಂಟೀನ್ ಸಿಬ್ಬಂದಿ ನಾಗರಾಜ್ & ಮಂಜು ಹಲ್ಲೆಗೊಳಗಾದವರು. ಗಾಯಾಳುಗಳನ್ನ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಲ್ಲೆಗೈದ ಆರೋಪಿಗಳ ವಿರುದ್ಧ ಪಾವಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಶೇ 95 ರಷ್ಟು ಜನರಿಗೆ ಸ್ವಂತ ವಾಹನ ಬಿಟ್ಟು ಮೆಟ್ರೋದಲ್ಲಿ ಸಂಚರಿಸಲು ಇಚ್ಛೆ
ತುಮಕೂರು ತಾಲೂಕಿನ ಶಂಭೋನಹಳ್ಳಿ ಬಳಿ ಕರಡಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದೆ. ಶಂಭೋನಹಳ್ಳಿ ಗ್ರಾಮದ ತೋಟದಲ್ಲಿ ಕರಡಿ ಮೃತ ದೇಹ ಪತ್ತೆಯಾಗಿದ್ದು ಹಸಿವಿನಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ಕರಡಿ ಹಲವು ದಿನಗಳಿಂದ ಜನರಿಗೆ ತೊಂದರೆ ಕೊಡುತ್ತಿತ್ತು. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಆದರೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಿನ್ನೇ ಮಧ್ಯಾಹ್ನ ತೋಟದಲ್ಲಿ ಕರಡಿ ಸುಸ್ತಾಗಿ ಮಲಗಿತ್ತು. ಇದನ್ನು ಕಂಡು ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯ ಸಿಬ್ಬಂದಿ ತಡವಾಗಿ ಸ್ಥಳಕ್ಕೆ ಬಂದಿದ್ದು ಸತ್ತ ಸ್ಥಿತಿಯಲ್ಲಿ ಕರಡಿ ಸಿಕ್ಕಿದೆ. ಸದ್ಯ ಅರಣ್ಯ ಇಲಾಖೆ ಕರಡಿ ಶವವನ್ನು ವಶಕ್ಕೆ ಪಡೆದಿದೆ.
ತುಮಕೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ