ಸಿದ್ದಗಂಗಾಶ್ರೀ‌ಗಳ 4ನೇ ವರ್ಷದ ಪುಣ್ಯಸ್ಮರಣೆ: ಶ್ರೀಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಕಾರ್ಯಕ್ರಮ; ಸ್ವಾಮೀಜಿಗಳ ಕುರಿತ ಪುಸ್ತಕ ಬಿಡುಗಡೆ

| Updated By: ವಿವೇಕ ಬಿರಾದಾರ

Updated on: Jan 21, 2023 | 9:18 AM

ಲಿಂಗೈಕ್ಯ ಪರಮಪೂಜ್ಯ ಡಾ.ಶ್ರೀ ‌ಶಿವಕುಮಾರ ಮಹಾಸ್ವಾಮೀಜಿಗಳ 4ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ ಮಠದಲ್ಲಿ ಶ್ರೀಗಳ ಗದ್ದುಗೆಗೆ ಬೆಳಿಗ್ಗೆ 5 ಗಂಟೆಯಿಂದ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ವಿಶೇಷ ಪೂಜೆ ಪ್ರಾರಂಭವಾಗಿವೆ.

ಸಿದ್ದಗಂಗಾಶ್ರೀ‌ಗಳ 4ನೇ ವರ್ಷದ ಪುಣ್ಯಸ್ಮರಣೆ: ಶ್ರೀಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಕಾರ್ಯಕ್ರಮ; ಸ್ವಾಮೀಜಿಗಳ ಕುರಿತ ಪುಸ್ತಕ ಬಿಡುಗಡೆ
ಸಿದ್ದಗಂಗಾ ಶ್ರೀಗಳ ಗದ್ದುಗೆ
Image Credit source: Twitter
Follow us on

ತುಮಕೂರು: ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಶತಾಯುಷಿ ಲಿಂಗೈಕ್ಯ ಪರಮಪೂಜ್ಯ ಡಾ.ಶ್ರೀ ಶ್ರೀ‌ಶಿವಕುಮಾರ ಮಹಾಸ್ವಾಮೀಜಿಗಳ 4ನೇ ವರ್ಷದ ಪುಣ್ಯಸ್ಮರಣೆ. ಈ ಹಿನ್ನೆಲೆ ಇಂದು (ಜ.21) ಮಠದಲ್ಲಿ ಶ್ರೀಗಳ ಗದ್ದುಗೆಗೆ ಬೆಳಿಗ್ಗೆ 5 ಗಂಟೆಯಿಂದ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ವಿಶೇಷ ಪೂಜೆ ಪ್ರಾರಂಭವಾಗಿವೆ. ನಂತರ ಬೆಳ್ಳಿ ರಥದಲ್ಲಿ ಪೂಜ್ಯರ ಭಾವಚಿತ್ರವಿಟ್ಟು ಮೆರವಣಿಗೆ ಮಾಡಲಾಗುತ್ತದೆ. ಬೆಳಿಗ್ಗೆ 8.30 ಸುಮಾರಿಗೆ ಶಿವಕುಮಾರ್ ಶ್ರೀಗಳ ಭಾವಚಿತ್ರ ಇರುವ ರುದ್ರಾಕ್ಷಿ ಮಂಟಪ ಮೆರವಣಿಗೆ ನಡೆಯಲಿದೆ.

ತದನಂತರ ನಡೆಯುವ ಕಾರ್ಯಕ್ರಮಕ್ಕಾಗಿ ಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಬೃಹತ್ ಸಭಾಮಂಟಪ ನಿರ್ಮಾಣ ಮಾಡಲಾಗಿದೆ. ಇಂದು ನಡೆಯುವ ಕೈಂಕರ್ಯಗಳ ಕುರಿತು ಸಿದ್ಧಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಟಿವಿ9 ಜೊತೆ ಮಾತನಾಡಿ ಬೆಳಗ್ಗೆ 10ಕ್ಕೆ ಮಠದ ಶ್ರೀಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಕಾರ್ಯಕ್ರಮ ಜರಗಲಿದ್ದು, ಮಾಜಿ ಮುಖ್ಯಮಂತ್ರಿ ಬಿಎಸ್​​ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಜೆಸಿ ಮಾಧುಸ್ವಾಮಿ, ವಿ. ಸೋಮಣ್ಣ, ಆರಗ ಜ್ಞಾನೇಂದ್ರ, ಬಿ.ಸಿ ನಾಗೇಶ್​, ಡಾ.ಕೆ.ಸುಧಾಕರ್​​, ಎಸ್​.ಟಿ.ಸೋಮಶೇಖರ್​, ಸಿ.ಸಿ.ಪಾಟೀಲ್​​, ಸಂಸದರಾದ ಬಸವರಾಜ್, ತೇಜಸ್ವಿ ಸೂರ್ಯ, ಕೇಂದ್ರ ಸಚಿವ ಭಗವಂತ ಖೂಬಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್​. ಸಂತೋಷ್​,ವಿವಿಧ ಪಕ್ಷಗಳ ಶಾಸಕರು, ನಾಯಕರು ಮತ್ತು ವಿವಿಧ ಮಠಾಧೀಶರು ಭಾಗಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಶ್ರೀಮಠದ ಅಧ್ಯಕ್ಷರಾದ ಸಿದ್ದಲಿಂಗಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿಕೊಳ್ಳಲಿದ್ದು, ದಿವ್ಯಸಾನಿಧ್ಯವನ್ನು ಶಿವಾನುಭಚರಮೂರ್ತಿ ಪರಮಪೂಜ್ಯ ಶ್ರೀ ಶಿವರುದ್ರ ಮಹಾ ಸ್ವಾಮೀಜಿ, ಅಧ್ಯಕ್ಷರು ಬೇಲಿಮಠ, ಕಾರ್ಯಕ್ರಮದ ಅಧ್ಯಕ್ಷತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ವಿ.ಸೋಮಣ್ಣ ಮತ್ತು ಸಚಿವ ಜೆಸಿ ಮಾಧುಸ್ವಾಮಿ ಭಕ್ತಿ ಸಮರ್ಪಣೆ ಮಾಡಲಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ “ವಿಶ್ವ ಜ್ಯೋತಿ” (ಶಿವಕುಮಾರ ಸ್ವಾಮೀಜಿಗಳ ಕುರಿತ ಲೇಖನ ಸಂಗ್ರಹ) ಪುಸ್ತಕ ಬಿಡುಗಡೆ ಮಾಡಲಾಗುತ್ತದೆ. ಕಾರ್ಯಕ್ರಮದ ವೀಕ್ಷಣೆಗೆ 10ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದೆ.

ಮಠಕ್ಕೆ ಬರುವ ಎಲ್ಲರಿಗೂ ಊಟದ ವ್ಯವಸ್ಥೆ

ಮಠಕ್ಕೆ ಬರುವ ಎಲ್ಲ ಭಕ್ತರಿಗು ಪ್ರಸಾದವಿರುತ್ತದೆ. ಮಠದ ಆವರಣದಲ್ಲಿ 5 ಕಡೆ ಪ್ರಸಾದದ ಕೌಂಟರ್​ ತೆರೆಯಲಾಗಿದೆ. ಕೈಗಾರಿಕಾ ವಸ್ತು ಪ್ರದಶರ್ನ ಆವರಣ, ಸಾದರ ಕೊಪ್ಪಲು ಕೆಂಪಹೊನ್ನಯ್ಯ ಅತಿಥಿಗೃಹ, ಹೊಸಪ್ರಸಾದ ನಿಲಯದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಬರುವ ಭಕ್ತರಿಗೂ ಬೆಳಿಗ್ಗೆ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟದ ನೀಡಲಾಗುವುದು. ಉಪಹಾರ ಉಪ್ಪಿಟ್ಟು-ಕೇಸರಿ ಬಾತ್, ಊಟಕ್ಕೆ ಪಾಯಸ, ಬೂಂದಿ ಚಿತ್ರನ್ನಾ ಅನ್ನ ಸಾಂಬರ್, ಅನ್ನ-ಮಜ್ಜಿಗೆ.

ಸಾರ್ವಜನಿಕರು ಮಠಕ್ಕೆ ಕ್ಯಾಲಸಂದ್ರ ಮಾರ್ಗವಾಗಿ ಪ್ರವೇಶ ನೀಡಲು ಅನುವು ಮಾಡಿಕೊಡಲಾಗಿದೆ. ಮಠದ ಹಿಂಬದಿ ಗೇಟ್​ ಮುಖಾಂತರ ವಿಐಪಿಗಳು ಪ್ರವೇಶ ಮಾಡಬಹುದಾಗಿ. ಇನ್ನು ಮಠಕ್ಕೆ 5 ಲಕ್ಷಕ್ಕೂ ಹೆಚ್ಚು ಭಕ್ತರು ಬರುವ ನಿರೀಕ್ಷೆ ಇದೆ.

ಬೃಹತ್ ಪಾರ್ಕಿಂಗ್ ವ್ಯವಸ್ಥೆ

ಮಠದ ಬಳಿ ಬೃಹತ್ ವಾಹನ ಪಾರ್ಕಿಂಗ್​ಗೆ ಅವಕಾಶ ನೀಡಲಾಗಿದೆ. ಮಠದ ಬಲ ಭಾಗದ ಬಂಡೆಪಾಳ್ಯ ಬಳಿ ರಾಗಿ ಹೊಲದ ಬೈಲಿನಲ್ಲಿ ಪಾರ್ಕಿಂಗ್ ಮಾಡಬಹುದಾಗಿದೆ. ಬಸ್, ಕಾರು, ಬೈಕ್ ಸೇರಿದಂತೆ ಎಲ್ಲ ರೀತಿ ವಾಹನಗಳು ನಿಲ್ಲಲ್ಲು ಅವಕಾಶವಿದೆ.

ಪೊಲೀಸ್ ಬಿಗಿ ಭದ್ರತೆ

ಸಿದ್ದಗಂಗಾ ಮಠದ ಸುತ್ತಲು ತುಮಕೂರು ಎಸ್ಪಿ ರಾಹುಲ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ. 4 ಜನ ಡಿ.ವೈ.ಎಸ್.ಪಿ, 10 ಜನ ಸಿ.ಪಿ.ಐ, 20 ಜನ ಸಬ್​ಇನ್ ಸ್ಪೆಕ್ಟರ್, 300ಕ್ಕೂ ಹೆಚ್ಚು ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:20 am, Sat, 21 January 23