ತುಮಕೂರು, ಜುಲೈ 27: ಜಗತ್ತು ಎಷ್ಟೇ ಮುಂದುವರೆಯುತ್ತಿದ್ದರೂ ಮೂಢನಂಬಿಕೆ ಮಾತ್ರ ಇನ್ನೂ ಜೀವಂತವಿದೆ ಎನ್ನುವುದಕ್ಕೆ ತುಮಕೂರು ಜಿಲ್ಲೆಯಲ್ಲಿ ನಡೆದ ಘಟನೆಯೇ ಸಾಕ್ಷಿ. ಗೊಲ್ಲ ಸಮುದಾಯದ ಸೂತಕ ಆಚರಣೆಗೆ 1 ತಿಂಗಳ ಮಗು ಬಲಿಯಾಗಿದೆ. ಇಂತಹ ಹೃದಯ ವಿದ್ರಾವಕ ಘಟನೆ ನಡೆದರೂ ಕುಟುಂಬಸ್ಥರು ಬಾಣಂತಿಯನ್ನು ಮನೆಯೊಳಗೆ ಬಿಟ್ಟಿಕೊಂಡಿಲ್ಲ. ಕರುಳ ಕುಡಿ ಕಳೆದುಕೊಂಡಿದ್ದರೂ ದೇವರಿಗೆ ಸೂತಕ ಎಂಬ ಕಾರಣಕ್ಕೆ ಬಾಣಂತಿಯನ್ನು ಮನೆಯೊಳಗೆ ಕರೆಸಿಕೊಂಡಿರಲಿಲ್ಲ. ಸದ್ಯ ಈಗ ಮನವೊಲಿಸುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದ್ದು ಬಾಣಂತಿಯನ್ನು ಮನೆಯೊಳಗೆ ಸೇರಿಸಿಕೊಳ್ಳಲಾಗಿದೆ.
ತುಮಕೂರು ತಾಲೂಕಿನ ಮಲ್ಲೇನಹಳ್ಳಿಯ ಗೊಲ್ಲರಹಟ್ಟಿಯಲ್ಲಿ ಸಿದ್ದೇಶ್ ಕುಟುಂಬಸ್ಥರು ಶಾಸ್ತ್ರೋಕ್ತವಾಗಿ ವಸಂತಾಳನ್ನು ಬರಮಾಡಿಕೊಂಡಿದ್ದಾರೆ. ನಿನ್ನೆ ಆರೋಗ್ಯ ಅಧಿಕಾರಿಗಳು ಸಿದ್ದೇಶ್ ಕುಟುಂಬಸ್ಥರ ಮನವೊಲಿಸಿದ್ದರು. ಅದರಂತೆ ಈಗ ಶಾಸ್ತ್ರೋಕ್ತವಾಗಿ ಬಾಣಂತಿಯನ್ನು ಮನೆಗೆ ಸೇರಿಸಿಕೊಳ್ಳಲಾಗಿದೆ.
ಕಳೆದ ಜೂನ್ 19 ರಂದು ಹೆಣ್ಣಾಗಿದ್ದೆ ತಪ್ಪಾ ಶಿರ್ಷಿಕೆಯಡಿ ಟಿವಿ9 ಗೊಲ್ಲರಹಟ್ಟಿಯ ಮೂಡನಂಬಿಕೆ ಆಚರಣೆ ಬಗ್ಗೆ ವರದಿ ಮಾಡಿತ್ತು. ಆರೋಗ್ಯ ಇಲಾಖೆ ಅಧಿಕಾರಿಗಳು ತಾಲೂಕು ಆಡಳಿತ ಸೇರಿದಂತೆ ಸಂಬಂಧ ಪಟ್ಟ ಅಧಿಕಾರಿಗಳು ಭೇಟಿ ನೀಡಿ ಮನವೊಲಿಸಿದರೂ ಕೂಡ ತಾಯಿ ಮಗು ಮಾತ್ರ ಮನೆಗೆ ಹೋಗಿರಲಿಲ್ಲ. ತುಮಕೂರು ತಾಲೂಕಿನ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಮೂಢನಂಬಿಕೆ ಆಚರಣೆಯಿಂದ ತಾಯಿಮಗುವನ್ನ ಊರಿಂದ ಆಚೆ ಬಿಡಾರ ನಿರ್ಮಿಸಿ ಇರಿಸಲಾಗಿತ್ತು. ಆದ್ರೆ ಶೀತ ಹೆಚ್ಚಾದ ಕಾರಣ ಮಗು ಸಾವನ್ನಪ್ಪಿದೆ. ಮಗು ಮೃತಪಟ್ಟರೂ ಕುಟುಂಬಸ್ಥರು ಬಾಣಂತಿ ಮಹಿಳೆಯನ್ನು ಮನೆಗೆ ಸೇರಿಸಿಕೊಂಡಿಲ್ಲ. ಸೂತಕ ಕಳೆದ ನಂತರ ಬರುವಂತೆ ಸೂಚಿಸಿದ್ದಾರೆ. ಹೀಗಾಗಿ ನಿನ್ನೆ ಮತ್ತೆ ಆರೋಗ್ಯ ಇಲಾಖೆ ಸಿಬ್ಬಂದಿ ಸಿದ್ದೇಶ್ ಕುಟುಂಬಸ್ಥರ ಬಳಿ ತೆರಳಿ ಮನವೊಲಿಸುವ ಯತ್ನ ಮಾಡಿದ್ದು ಇಂದು ಶಾಸ್ತ್ರೋಕ್ತವಾಗಿ ವಸಂತಾಳನ್ನ ಮನೆಯೊಳಗೆ ಬಿಟ್ಟುಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಮಾಡೆಲ್ ಆತ್ಮಹತ್ಯೆ ಹಿಂದೆ ಫೇಸ್ಬುಕ್ ಪ್ರಿಯಕರನಿಂದ ಲವ್ ಸೆಕ್ಸ್ ದೋಖಾ, ಡೈರಿ ಬಿಚ್ಚಿಟ್ಟ ಸ್ಫೋಟಕ ಅಂಶ
ಕಳೆದ ಜೂನ್ 22 ರಂದು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಸಿದ್ದೆಶ್ ವಸಂತ ದಂಪತಿಗೆ ಅವಳಿ ಮಕ್ಕಳಾಗಿದ್ದವು, ಆಸ್ಪತ್ರೆಯಲ್ಲಿಯೆ ಒಂದು ನವಜಾತ ಗಂಡು ಮಗು ಸಾವನ್ನಪ್ಪಿದ್ದರೇ, ಉಳಿದ ಹೆಣ್ಣು ಮಗು 23 ದಿನಗಳ ಕಾಲ ಚಿಕಿತ್ಸೆ ಪಡೆದು ಗ್ರಾಮಕ್ಕೆ ವಾಪಸ್ ಆಗಿತ್ತು. ಕಳೆದ ಜುಲೈ 14 ರಂದು ಗ್ರಾಮಕ್ಕೆ ಹೋಗಿದ್ದರು, ಆದರೆ ಗ್ರಾಮದಲ್ಲಿ ತಮ್ಮ ದೇವರು ಜುಂಜಪ್ಪ ಎತ್ತಪ್ಪರಿಗೆ ಸೂತಕ ಆಗಲ್ಲ ಅಂತಾ ಎರಡು ತಿಂಗಳ ಕಾಲ ಊರಾಚೆ ಬಿಡಾರದಲ್ಲಿ ಇರಿಸಲಾಗಿತ್ತು. ಮಳೆ ಗಾಳಿಯಿಂದ ಮಗುವಿಗೆ ಶೀತ ಹೆಚ್ಚಾಗಿ ಕಳೆದ ಗುರುವಾರ ಮತ್ತೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆ ಮಗು ಕೂಡ ಸಾವನ್ನಪ್ಪಿದ್ದು, ಗೊಲ್ಲ ಸಮುದಾಯದ ಮೌಢ್ಯಕ್ಕೆ ಮಗು ಬಲಿಯಾಗಿದೆ.
ತುಮಕೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ