ಹಳ್ಳಿಗಳು ಮುಳುಗುವ ಆತಂಕ: ಬಫರ್ ಡ್ಯಾಮ್ ನಿರ್ಮಾಣಕ್ಕೆ ಕೊರಟಗೆರೆಯಲ್ಲಿ ತೀವ್ರ ವಿರೋಧ

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ವಡ್ಡೇರಹಳ್ಳಿ ಬಳಿ ಎತ್ತಿನಹೊಳೆ ಬಫರ್ ಡ್ಯಾಂ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. 1.2 ಟಿಎಂಸಿ ನೀರು ಸಂಗ್ರಹದ ಈ ಯೋಜನೆಗೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ತಮ್ಮ ಗ್ರಾಮಗಳು ಮತ್ತು ಭೂಮಿ ಮುಳುಗಡೆಯಾಗುವ ಭೀತಿಯಲ್ಲಿರುವ ರೈತರು, ಈ ನಿರ್ಧಾರದ ವಿರುದ್ಧ ಕಾನೂನು ಹೋರಾಟಕ್ಕೂ ಸಿದ್ಧರಾಗಿದ್ದಾರೆ. ಇದು ಸರ್ಕಾರ ಮತ್ತು ಸ್ಥಳೀಯರ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.

ಹಳ್ಳಿಗಳು ಮುಳುಗುವ ಆತಂಕ: ಬಫರ್ ಡ್ಯಾಮ್ ನಿರ್ಮಾಣಕ್ಕೆ ಕೊರಟಗೆರೆಯಲ್ಲಿ ತೀವ್ರ ವಿರೋಧ
ಬಫರ್ ಡ್ಯಾಮ್ ನಿರ್ಮಾಣಕ್ಕೆ ತೀವ್ರ ವಿರೋಧ
Image Credit source: Tv9 Kannada
Edited By:

Updated on: Mar 15, 2026 | 6:38 PM

ತುಮಕೂರು, ಮಾರ್ಚ್​​ 15: ಜಿಲ್ಲೆಯ ಕೊರಟಗೆರೆ ತಾಲೂಕಿನ ವಡ್ಡೇರಹಳ್ಳಿ ಗ್ರಾಮದ ಬಳಿ ಎತ್ತಿನಹೊಳೆ ಯೋಜನೆಯ ಭಾಗವಾಗಿ ಬಫರ್ ಡ್ಯಾಮ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಸುಮಾರು 1.2 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಈ ಡ್ಯಾಮ್ ನಿರ್ಮಾಣಕ್ಕೆ ಬಜೆಟ್‌ನಲ್ಲಿಯೂ ಅನುಮೋದನೆ ಸಿಕ್ಕಿದೆ. ಆದರೆ ವಡ್ಡೇರಹಳ್ಳಿ ಬಳಿ ಹಾದುಹೋಗುವ ಎತ್ತಿನಹೊಳೆ ನಾಲೆಯ ಬಳಿ 817.50 ಮೀಟರ್ ಎತ್ತರ ಮತ್ತು ಸುಮಾರು 1,440 ಮೀಟರ್ ಉದ್ದದ ಬಫರ್ ಡ್ಯಾಮ್ ನಿರ್ಮಿಸುವ ಈ ಯೋಜನೆ ಹಳ್ಳಿಗಳನ್ನೇ ಮುಳುಗಿಸಬಹುದೆಂಬ ಆತಂಕ ವ್ಯಕ್ತವಾಗಿದ್ದು, ಸರ್ಕಾರದ ನಿರ್ಧಾರಕ್ಕೆ ಸ್ಥಳೀಯ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ನೀರು ಸಾಗಿಸಲು ಈ ಡ್ಯಾಮ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಸರ್ಕಾರವೇನೋ ಹೇಳಿದೆ. ಆದರೆ ಈಗಾಗಲೇ ನಿರ್ಧರಿಸಿದ್ದ ಬಫರ್ ಡ್ಯಾಮ್ ಯೋಜನೆಯ ಮೂಲ ಸ್ಥಳದ ಬದಲಿಗೆ ವಡೇರಹಳ್ಳಿಯಲ್ಲಿ ಅಣೆಕಟ್ಟು ನಿರ್ಮಾಣದ ಚಿಂತನೆಗೆ ಗ್ರಾಮಸ್ಥರು ಅಸಮಾಧಾನಗೊಂಡಿದ್ದಾರೆ. ಈ ಡ್ಯಾಮ್ ನಿರ್ಮಾಣ ವಿಚಾರ ವಡ್ಡೇರಹಳ್ಳಿ ಸೇರಿದಂತೆ ಕಾಟೇನಹಳ್ಳಿ, ಅಂಕೋನಹಳ್ಳಿ, ನಾಯಕರಪಾಳ್ಯ, ಚೆಣಚೆಹಟ್ಟಿ, ನರಸಾಪುರ ಹಾಗೂ ಗಾಣದಹಟ್ಟಿ ಸೇರಿದಂತೆ ಏಳೆಂಟು ಗ್ರಾಮಗಳ ರೈತರನ್ನು ಆತಂಕಕ್ಕೆ ತಳ್ಳಿದೆ. ಭೂಮಿ ಮತ್ತು ಮನೆಗಳು ಮುಳುಗುವ ಭೀತಿಯಿಂದ ರೈತರು ಯೋಜನೆ ವಿರೋಧಿಸುತ್ತಿದ್ದು, ಪ್ರಾಣ ಬಿಟ್ಟೇವೇ ಹೊರತು ಡ್ಯಾಮ್ ನಿರ್ಮಾಣಕ್ಕೆ ಜಾಗ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ವರ್ಷಗಳಿಂದ ಅಭಿವೃದ್ಧಿ ಕಾಣದೆ ಉಳಿದ ಬಾಲಕಿಯರ ವಸತಿ ನಿಲಯ; ಮೌಢ್ಯವನ್ನೇ ನೆಪ ಮಾಡಿಕೊಂಡಿತಾ ಸರ್ಕಾರ?

ಮತ್ತೊಂಡೆ ಸ್ಥಳೀಯ ಗ್ರಾಮಸ್ಥರ ವಿರೋಧದ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ರೈತರನ್ನು ಕೂರಿಸಿಕೊಂಡು ಮಾತನಾಡುವ ಮುಖಾಂತರ ಸಮಸ್ಯೆ ಬಗೆ ಹರಿಸೊದಾಗಿ ಹೇಳಿದ್ದಾರೆ. ಈ ಹಿಂದೆ ಬಫರ್ ಡ್ಯಾಂ ಬೈರಗೊಂಡನಹಳ್ಳಿಯಲ್ಲಿ ನಿರ್ಮಿಸುವ ಚಿಂತನೆ ನಡೆದಿತ್ತು. ಕೆಲ ಬೆಳವಣಿಗೆ ಬಳಿಕ ದೊಡ್ಡಬಳ್ಳಾಪುರದ ಚರ್ಚೆಯಾಯ್ತು. ನಂತರ ಮತ್ತೆ ಬೈರಗೊಂಡ್ಲುವಿನ್ನಲ್ಲಿ ಮಾಡುವ ಬಗ್ಗೆ ಚರ್ಚೆಯಾದಾಗ ಗ್ರಾಮಸ್ಥರು ವಿರೋಧ ವ್ಯಕ್ತ ಪಡಿಸಿದ್ದರು. ಆರೇಳು ಬಾರಿ ಸಭೆ ಮಾಡಿದರೂ ಗ್ರಾಮಸ್ಥರು ಬೇಡ ಎಂದರು. ಹೀಗಾಗಿ ವಡೇರಹಳ್ಳಿಯಲ್ಲಿ ನಿರ್ಮಾಣ ಮಾಡುವ ನಿರ್ಧಾರ ಮಾಡಲಾಗಿದೆ‌. ಸ್ಥಳೀರನ್ನು ಏನಾದರೂ ಮಾಡಿ ಮನವೊಲಿಸುವ ಮುಖಾಂತರ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸಮಸ್ಯೆ ಬಗೆ ಹರಿಸಲಾಗುವುದು ಎಂದು ತಿಳಿಸಿದ್ದಾರೆ. ಹೀಗಿದ್ದರೂ ಸದ್ಯ ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶಗೊಂಡ ಗ್ರಾಮಸ್ಥರು ಕಾನೂನು ಹೋರಾಟಕ್ಕೂ ಮುಂದಾಗಿದ್ದು, ಬಫರ್ ಡ್ಯಾಮ್ ನಿರ್ಮಾಣ ವಿಚಾರ ಸರ್ಕಾರ ಹಾಗೂ ಗ್ರಾಮಸ್ಥರ ನಡುವಿನ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಇದು ಎಲ್ಲಿಗೆ ಹೋಗಿ ನಿಲ್ಲುತ್ತೆ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:36 pm, Sun, 15 March 26

Follow Us