ಬೆಂಗಳೂರು: ಕೊರೊನಾದಿಂದ ಕಷ್ಟದಲ್ಲಿದ್ದವರಿಗೆ ನೆರವಿನ ಮಾತಾಡಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಧೈರ್ಯದಿಂದ ಧೀರತನದಿಂದ ಅತಿದೊಡ್ಡ ಪ್ಯಾಕೇಜ್ ಅಂದ್ರೆ ಬರೋಬ್ಬರಿ 1777 ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ರು. ಆದ್ರೆ ಇಷ್ಟು ದೊಡ್ಡ ಮೊತ್ತದ ಪರಿಹಾರ ನಿಜಕ್ಕೂ ಯಾರಿಗೆ ತಲುಪಿದೆ? ಕಷ್ಟದಲ್ಲಿದ್ದ ಅದೆಷ್ಟು ಜನ ಪರಿಹಾರದ ಫಲಾನುಭವಿಗಳಾಗಿದ್ದಾರೆ? 1777 ಕೋಟಿ ರೂಪಾಯಿ ಕೋಟಿಯಲ್ಲಿ ಕಷ್ಟದಲ್ಲಿದ್ದವರಿಗೆ ತಲುಪಿದ ನಿಜವಾದ ಮೊತ್ತವೆಷ್ಟು? 1777 ಕೋಟಿ ಪ್ಯಾಕೇಜ್ ನ ಅಸಲಿ ಬಣ್ಣವನ್ನು ಟಿವಿ9 ಬಯಲು ಮಾಡುತ್ತಿದೆ. ರಾಜ್ಯ ಸರ್ಕಾರಕ್ಕೆ ಬಹಿರಂಗ ಸವಾಲ್ ಹಾಕಿದೆ.
ರಾಜ್ಯದ ಸಿಎಂ ಯಡಿಯೂರಪ್ಪನವರಿಗೆ ಟಿವಿ9ನ ನೇರಾನೇರ ಪ್ರಶ್ನೆಗಳು:
ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ಟಿವಿ9 ನೇರಾನೇರ ಸವಾಲ್ ಹಾಕಿದೆ.
-ನೀವು ಘೋಷಣೆ ಮಾಡಿದ ಕೊರೊನಾ ಪರಿಹಾರ ಯಾರಿಗೆ ತಲುಪಿದೆ..?
-ಒಟ್ಟು ಪರಿಹಾರದಲ್ಲಿ ಎಷ್ಟು ಮೊತ್ತವನ್ನ ಫಲಾನುಭವಿಗಳಿಗೆ ತಲುಪಿಸಿದ್ದೀರಿ..?
-ಲಾಕ್‌ಡೌನ್‌ನಿಂದ ಕುಸಿದಿದ್ದ ಅದೆಷ್ಟು ಬದುಕಿಗೆ ನಿಮ್ಮ ದುಡ್ಡು ಆಸರೆಯಾಗಿದೆ..?
-ಪ್ಯಾಕೇಜ್ ಮೊತ್ತವನ್ನ ನೊಂದ ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ್ದೀರಾ..?
-ಇದುವರೆಗೂ ಪರಿಹಾರ ಮೊತ್ತ ತಲುಪಿಸಲು ಏನೆಲ್ಲಾ ಕ್ರಮ ಕೈಗೊಂಡಿದ್ದೀರಿ..?
-ಅಂಗೈನಲ್ಲಿ ಆಕಾಶ ತೋರಿಸಿ ಜನರನ್ನ ಅಡಕತ್ತರಿಯಲ್ಲಿ ಸಿಲುಕಿಸಿರೋದು ಏಕೆ..?
ಹೂ ಬೆಳೆಗಾರರ ಕಿವಿಗೆ ಹೂವು?
ಸರ್ಕಾರ11687 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆದಿರುವ ಹೂವಿನ ಬೆಳೆಗೆ ಪರಿಹಾರ ಘೋಷಿಸಿತ್ತು. ಹೂವು ಬೆಳೆಗಾರರಿಗೆ ಹೆಕ್ಟೇರ್‌ಗೆ ಗರಿಷ್ಠ ₹25 ಸಾವಿರ ಪರಿಹಾರ ನೀಡುತ್ತೇವೆ ಎಂದಿತ್ತು. ಹೂ ಬೆಳೆಗಾರರ ಪರಿಹಾರದ ಮೊತ್ತ ₹30 ಕೋಟಿ ಎಂದು ಘೋಷಿಸಲಾಗಿತ್ತು. ತೋಟಗಾರಿಕೆ ಇಲಾಖೆಯಿಂದ ಪರಿಹಾರ ವಿತರಿಸುವಂತೆ ಆದೇಶಿಸಲಾಗಿತ್ತು. ಆದರೆ ಇದುವರೆಗೂ ತೋಟಗಾರಿಕೆ ಇಲಾಖೆಗೆ ಸರ್ಕಾರ ಹಣ ನೀಡಿಲ್ಲ. ಪರಿಹಾರ ಹೇಗೆ ವಿತರಿಸಬೇಕು ಎಂಬ ಪ್ಲ್ಯಾನ್ ಇಲ್ಲ. ಇದುವರೆಗೂ ನಷ್ಕಕ್ಕೊಳಗಾದ ಹೂ ಬೆಳೆಗಾರರ ಪಟ್ಟಿ ಕೂಡ ರೆಡಿಯಿಲ್ಲ. ಅರ್ಹ ಹೂವು ಬೆಳೆಗಾರರಿಗೆ ಪರಿಹಾರದ ಹಣ ತಲುಪಿಲ್ಲ. ಸಚಿವ ನಾರಾಯಣಗೌಡ ಸಾರಥ್ಯದ ಇಲಾಖೆಗೇ ಯಾವ ಪ್ಲ್ಯಾನ್ ಕೂಡ ಮಾಡಿಕೊಂಡಿಲ್ಲ.
ಮಡಿವಾಳರ ಬದುಕೇ ಮೂರಾಬಟ್ಟೆ:
ಸರ್ಕಾರ ಮಡಿವಾಳ ವೃತ್ತಿಯಲ್ಲಿರುವವರಿಗೆ ತಲಾ 5000ಸಾವಿರ ಪರಿಹಾರ ಘೋಷಿಸಿತ್ತು. ರಾಜ್ಯದಲ್ಲಿರುವ ಅಂದಾಜು 60 ಸಾವಿರ ಮಡಿವಾಳರಿಗೆ ಪರಿಹಾರ ಕೊಡುವ ಭರವಸೆ ನೀಡಿತ್ತು. ಮಡಿವಾಳ ವೃತ್ತಿಯಲ್ಲಿರುವವರಿಗಾಗಿ ₹30 ಕೋಟಿ ಪರಿಹಾರ ಮೀಸಲಿಡಲಾಗಿತ್ತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪರಿಹಾರ ವಿತರಿಸಬೇಕು. ಆದರೆ ಇದುವರೆಗೂ ಸರ್ಕಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಹಣ ನೀಡಿಲ್ಲ. ಹೀಗಾಗಿ ಪರಿಹಾರ ಹೇಗೆ ವಿತರಿಸಬೇಕೆಂಬ ಪ್ಲ್ಯಾನ್ ಇಲ್ಲ. ಸಚಿವ ಶ್ರೀರಾಮುಲು ಸಾರಥ್ಯದ ಇಲಾಖೆಗೇ ಹಣ ನೀಡೋದು ಹೇಗೆ ಎಂಬ ಅಂದಾಜು ಕೂಡ ಇಲ್ಲ.
ಅಂದಗಾಣಿಸುವವರ ಬದುಕಿಗೇ ಗ್ರಹಣ:
ಕ್ಷೌರಿಕ ವರ್ಗಕ್ಕೆ ಭರ್ಜರಿ ಪ್ಯಾಕೇಜ್ ಘೋಷಿಸಿದ್ದ ಸರ್ಕಾರ, ಪ್ರತಿಯೊಬ್ಬ ವೃತ್ತಿಪರನಿಗೆ 5 ಸಾವಿರ ನೀಡೋ ವಾಗ್ದಾನ ಮಾಡಿತ್ತು. ಯಡಿಯೂರಪ್ಪ ನೀಡಿದ ಮಾತು ಇಂದಿಗೂ ಅತಂತ್ರವಾಗಿದೆ. 2 ಲಕ್ಷದ 30 ಸಾವಿರ ಕ್ಷೌರಿಕರಿಗಿನ್ನೂ ನಯಾಪೈಸೆ ಕೂಡ ತಲುಪಿಲ್ಲ. 115 ಕೋಟಿ ಮೊತ್ತದ ಪರಿಹಾರ ಪ್ಯಾಕೇಜ್ ಅರ್ಹರಿಗಿನ್ನೂ ಮರೀಚಿಕೆಯಾಗಿದೆ. ಪರಿಹಾರ ನೀಡಬೇಕಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೇ ಇನ್ನೂ ಹಣ ತಲುಪಿಲ್ಲ. ಅಷ್ಟಕ್ಕೂ ಫಲಾನುಭವಿಗಳಿಗೆ ಹಣ ತಲುಪಿಸೋದು ಹೇಗೆ ಅನ್ನೋದೇ ನಿಗೂಢವಾಗಿದೆ. ಸಚಿವ ಶ್ರೀರಾಮುಲು ಸಾರಥ್ಯದ ಇಲಾಖೆಗೇ ಹಣ ನೀಡೋದು ಹೇಗೆ ಅನ್ನೋದೇ ಗೊತ್ತಿಲ್ಲ. ಸರ್ಕಾರದ ಮಾರ್ಗಸೂಚಿಯೇ ಈವರೆಗೂ ಇನ್ನೂ ಆಗಿಲ್ಲ ಇತ್ಯರ್ಥ? ಪರಿಹಾರಕ್ಕೆ ಫಲಾನುಭವಿಗಳ ಆಯ್ಕೆ, ಮಾನದಂಡ, ವಿತರಣೆ ಎಲ್ಲವೂ ಅಸ್ಪಷ್ಟವಾಗಿದೆ. ಮುಳುಗೋನಿಗೆ ಆಸರೆಯಂತಿದ್ದ ಪರಿಹಾರ ಕೇವಲ ಮೂಗಿಗೆ ಸವರಿದ ಬೆಣ್ಣೆಯಾಯ್ತಾ? ಎಂಬಂತಿದೆ.
ಟ್ಯಾಕ್ಸಿ ಓಡಿಸುತ್ತ ಬದುಕಿನ ಬಂಡಿ ತಳ್ಳುತ್ತಿದ್ದೋರ ಲೈಫಿಗೇ ರೆಡ್ ಸಿಗ್ನಲ್:
ಪ್ರಯಾಣಿಕ ಪ್ರಬುವೇ ದೇವರು, ವಾಹನವೇ ಮಂದಿರವೆಮದು ಬದುಕು ನಡೆಸುತ್ತಿದ್ದವರಿಗೆ ಮಹಾಮಾರಿ ಕೊರೊನಾ ಬ್ರೇಕ್ ಫೇಲ್ ಮಾಡಿಬಿಟ್ಟಿದೆ. ಟ್ಯಾಕ್ಸಿ ಚಾಲಕರಿಗೆ 5 ಸಾವಿರ ಅಂತಾ ಸರ್ಕಾರ ಮಾತುಕೊಟ್ಟಿತ್ತು. ಈವರೆಗೂ ಈ ಹಣ ಪಡೆಯೋದು ಹೇಗೆ ಅನ್ನೋದೇ ಅಸ್ಪಷ್ಟವಾಗಿದೆ. ಅಂದಾಜು 7 ಲಕ್ಷದ 75 ಸಾವಿರದಷ್ಟು ಮಂದಿಯ ಬದುಕೇ ಡೋಲಾಯಮಾನವಾಗಿದೆ. ಪರಿಹಾರದ 387 ಕೋಟಿ ಇನ್ನೂ ಖಜಾನೆಯಲ್ಲೇ ಕೊಳೆಯುತ್ತಿದೆ. ಸಾರಿಗೆ ಇಲಾಖೆಗೆ ಹಣ ಹಸ್ತಾಂತರಿಸಬೇಕಿತ್ತು. ಆದರೆ ಇದಕ್ಕೆ ಸಂಬಂಧ ಪಟ್ಟಂತೆ ಯಾವುದೇ ಕಾರ್ಯಗಳು ನಡೆಯುತ್ತಿಲ್ಲ.
ನೂಲು ನೇಯುವ ಕೈಗಳನ್ನೇ ಮರೆತಿತಾ ಸರ್ಕಾರ?
ಕೈಮಗ್ಗ ನೇಕಾರರಿಗೆ 2000 ರೂ. ಪರಿಹಾರ ಕೊಡುವ ಸಲುವಾಗಿ 11 ಕೋಟಿ ಘೋಷಣೆ ಮಾಡಲಾಗಿತ್ತು. ಅಂದಾಜು 54 ಸಾವಿರ ಕೈಮಗ್ಗ ನೇಕಾರರನ್ನು ಗುರುತಿಸಲಾಗಿತ್ತು. ಆದರೆ ಇದುವರೆಗೂ ಅರ್ಹರಿಗೆ ಒಂದು ರೂಪಾಯಿ ಪರಿಹಾರ ಕೂಡ ಕೊಟ್ಟಿಲ್ಲ. ಜವಳಿ ಇಲಾಖೆ ಪರಿಹಾರ ವಿತರಿಸಬೇಕು. ಆದರೆ ಇದುವರೆಗೂ ಇಲಾಖೆಗೆ ಸರ್ಕಾರದಿಂದ ಹಣ ಕೊಟ್ಟಿಲ್ಲ. ಹೀಗಾಗಿ ಪರಿಹಾರ ಹೇಗೆ ವಿತರಿಸಬೇಕು ಅನ್ನೋ ಪ್ಲ್ಯಾನ್ ಕೂಡ ಇಲ್ಲ. ಈ ಬಗ್ಗೆ ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ್ ಕೂಡ ಗಪ್ಚುಪ್ ಆಗಿದ್ದಾರೆ.
Published On - 9:46 am, Wed, 27 May 20