ಕೊರೊನಾದಿಂದಾಗಿ ಈ ಜೀವ ಜಲ ಯೋಜನೆ ಮತ್ತಷ್ಟು ವಿಳಂಬ?

| Updated By: ಆಯೇಷಾ ಬಾನು

Updated on: May 27, 2020 | 2:10 PM

ಕೋಲಾರ: ಕೊರೊನಾ ಲಾಕ್​ಡೌನ್​ ಪರಿಣಾಮ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸುವ ಮಹತ್ವಪೂರ್ಣ ಎತ್ತಿನಹೊಳೆ ಯೋಜನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಜಾರಿಯಲ್ಲಿದ್ದ ಲಾಕ್‌ಡೌನ್‌ನಿಂದ ಬಹುತೇಕ ಕಾಮಗಾರಿಗಳು ಸ್ಥಗಿತಗೊಂಡಿವೆ. ಲಾಕ್‌ಡೌನ್ ತೆರವಾದರೂ, ಕಟ್ಟಡ ನಿರ್ಮಾಣದ ಕಾರ್ಮಿಕರು ತಮ್ಮ ಊರುಗಳಿಗೆ ಮರಳಿದ್ದು, ಕೆಲಸ ಮಾಡಲು ಕಾರ್ಮಿಕರಿಲ್ಲದಂತಾಗಿದೆ. ಪರಿಣಾಮ ಪಂಪ್‌ಹೌಸ್ ಸೇರಿದಂತೆ ಕಾಲುವೆಗಳ ನಿರ್ಮಾಣ ಕಾಮಗಾರಿ ತಡವಾಗಲಿದೆ. ಯೋಜನೆಗಾಗಿ ದೊಡ್ಡಬಳ್ಳಾಪುರ ಸಮೀಪದ ಜಲಾಶಯ ನಿರ್ಮಾಣಕ್ಕಾಗಿ ಒಟ್ಟು 5278 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಬೇಕಿದೆ. ಅದರಂತೆ ಸ್ವಾಧೀನಕ್ಕೆ ಸರ್ಕಾರದಿಂದ ನೀಡುವ […]

ಕೊರೊನಾದಿಂದಾಗಿ ಈ ಜೀವ ಜಲ ಯೋಜನೆ ಮತ್ತಷ್ಟು ವಿಳಂಬ?
Follow us on

ಕೋಲಾರ: ಕೊರೊನಾ ಲಾಕ್​ಡೌನ್​ ಪರಿಣಾಮ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸುವ ಮಹತ್ವಪೂರ್ಣ ಎತ್ತಿನಹೊಳೆ ಯೋಜನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಜಾರಿಯಲ್ಲಿದ್ದ ಲಾಕ್‌ಡೌನ್‌ನಿಂದ ಬಹುತೇಕ ಕಾಮಗಾರಿಗಳು ಸ್ಥಗಿತಗೊಂಡಿವೆ. ಲಾಕ್‌ಡೌನ್ ತೆರವಾದರೂ, ಕಟ್ಟಡ ನಿರ್ಮಾಣದ ಕಾರ್ಮಿಕರು ತಮ್ಮ ಊರುಗಳಿಗೆ ಮರಳಿದ್ದು, ಕೆಲಸ ಮಾಡಲು ಕಾರ್ಮಿಕರಿಲ್ಲದಂತಾಗಿದೆ. ಪರಿಣಾಮ ಪಂಪ್‌ಹೌಸ್ ಸೇರಿದಂತೆ ಕಾಲುವೆಗಳ ನಿರ್ಮಾಣ ಕಾಮಗಾರಿ ತಡವಾಗಲಿದೆ.

ಯೋಜನೆಗಾಗಿ ದೊಡ್ಡಬಳ್ಳಾಪುರ ಸಮೀಪದ ಜಲಾಶಯ ನಿರ್ಮಾಣಕ್ಕಾಗಿ ಒಟ್ಟು 5278 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಬೇಕಿದೆ. ಅದರಂತೆ ಸ್ವಾಧೀನಕ್ಕೆ ಸರ್ಕಾರದಿಂದ ನೀಡುವ ಪರಿಹಾರ ವಿಚಾರದಲ್ಲಿನ ಸಮಸ್ಯೆ ಬಹುತೇಕ ಬಗೆಹರಿದಿದ್ದರೂ, ಪರಿಹಾರ ನೀಡಲು ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರದ ಬಳಿ ಹಣವಿದೆಯೇ ಎಂಬ ಪ್ರಶ್ನೆ ಮೂಡಿಸಿದೆ.

ಕೊರೊನಾ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಅವಿರತವಾಗಿ ದುಡಿಯುತ್ತಿದ್ದು, ಕೊರೊನಾ ನಿರ್ವಹಣೆಗೆ ಹೆಚ್ಚಿನ ಹಣದ ಅಗತ್ಯವಿದೆ. ಪರಿಣಾಮ ಕಾರ್ಯಾದೇಶ ನೀಡದಂತಹ ಯೋಜನೆಗಳಿಗೆ ನೀಡಿರುವ ಹಣವನ್ನು ಹಿಂಪಡೆಯಲು ಸರ್ಕಾರ ಮುಂದಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಭೂಸ್ವಾಧೀನ ಸಮಸ್ಯೆ ಬಗೆಹರಿದರೂ, ಭೂ ಮಾಲೀಕರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ಅಗತ್ಯ ಹಣವಿದೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ. ಪರಿಣಾಮ 20 ಸಾವಿರ ಕೋಟಿಯ ಯೋಜನೆ ಮತ್ತಷ್ಟು ವಿಳಂಬವಾಗಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಏನಿದು ಎತ್ತಿನಹೊಳೆ ಯೋಜನೆ..?
ರಾಜ್ಯದ ಪೂರ್ವ ಭಾಗದ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಳೆಯ ಕೊರತೆಯಿಂದ ಹಾಗೂ ಸತತ ಬರಗಾಲದಿಂದ ಭೂ ಅಂತರ್ಜಲ ಮಟ್ಟದಲ್ಲಿ ಗಣನೀಯ ಕುಸಿತ ತಡೆಯಲು ಹಾಗೂ ಸಣ್ಣ ನೀರಾವರಿ ಕೆರೆಗಳ ಸಾಮರ್ಥ್ಯದ ಶೇ.50ರಷ್ಟು ನೀರು ತುಂಬಿಸಿ ಅಂತರ್ಜಲ ಪುನಃಶ್ಚೇತಗೊಳಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು.

ವರ್ಷದಿಂದ ವರ್ಷಕ್ಕೆ ಬಿಳಿಯಾನೆಯಾಗುತ್ತಿದೆ?
ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಲ್ಲಿ ಹರಿಯುವ ನೀರನ್ನು ಪೂರ್ವಕ್ಕೆ ತಿರುಗಿಸುವ 8,323 ಕೋಟಿ ರೂ.ಗಳ ಎತ್ತಿನಹೊಳೆ ಯೋಜನೆಗೆ 2012 ರಲ್ಲಿಯೇ ಆಡಳಿತಾತ್ಮಕ ಅನುಮೋದನೆ ಸಿಕ್ಕಿದರೂ, 2014 ರಲ್ಲಿ 12, 912 ಕೋಟಿ ರೂ.ಗಳಿಗೆ ಹೆಚ್ಚಿಸಿ ಯೋಜನೆಗೆ ಮತ್ತೆ ಚಾಲನೆ ನೀಡಲಾಯಿತು. 2013 ರಲ್ಲಿ ಭೂಸ್ವಾಧೀನಕ್ಕೆ ನಿಗದಿ ಮಾಡಿರುವ ದರ ಸದ್ಯ ನೂತನ ಭೂಸ್ವಾಧೀನ ಕಾಯ್ದೆ ಜಾರಿಯಾದ ಬಳಿಕ ಮೂರು ಪಟ್ಟು ಹೆಚ್ಚಾಗಿದೆ. ಹೀಗಾಗಿ ವೆಚ್ಚ 20 ಸಾವಿರ ಕೋಟಿ ರೂ. ಗಡಿ ದಾಟುವ ಸಾಧ್ಯತೆಯಿದ್ದು, ವರ್ಷದಿಂದ ವರ್ಷಕ್ಕೆ ಯೋಜನೆಯ ಗಾತ್ರ ಹೆಚ್ಚಾಗುವ ಮೂಲಕ ಎತ್ತಿನಹೊಳೆ ಬಿಳಿಯಾನೆಯಾಗಿ ಪರಿಗಣಿಸಿದೆ.

ಅವಧಿಯೊಳಗೆ ಮುಗಿಯುವುದು ಡೌಟ್!?
ಯೋಜನೆಯನ್ನು 2022-23 ರ ವೇಳೆಗೆ ಮುಗಿಸುವುದು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಯೋಜನೆಯಾಗಿದೆ. ಆದರೆ, ನೀರು ಸಂಗ್ರಹಣಾ ಜಲಾಶಯಕ್ಕೆ ಸಂಬಂಧಿಸಿದಂತೆ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಹಾಗೂ ಭೂ ಸ್ವಾಧೀನ ಸಮಸ್ಯೆ ಪರಿಹಾರ ಇನ್ನು ಸಿಕ್ಕಿಲ್ಲ.

ಇದೀಗ ಕೊರೊನಾದಿಂದ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಶೀಘ್ರವೇ ಪರ್ಯಾಯ ಕ್ರಮಗಳನ್ನು ಕೈಗೊಳ್ಳದಿದ್ದರೆ ಯೋಜನೆಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸುವುದು ಅಸಾಧ್ಯವಾಗಲಿದೆ ಎಂದು ಅಧಿಕಾರಿಗಳ ಅಭಿಪ್ರಾಯ.

ಭೂಸ್ವಾಧೀನಕ್ಕೆ ಏಕರೂಪ ದರದ್ದು ತಲೆನೋವು..! 
ದೊಡ್ಡಬಳ್ಳಾಪುರದ ಬೈರಗೊಂಡ್ಲು ಬಳಿ ಜಲಾಶಯ ನಿರ್ಮಿಸಲು ಭೂಸ್ವಾಧೀನಕ್ಕೆ ಎರಡು ತಾಲೂಕುಗಳ ಜಮೀನು ಹಾಗೂ ಗ್ರಾಮಗಳು ಮುಳುಗಡೆಯಾಗುತ್ತವೆ. ಕೆಂಪೇಗೌಡ ಅಂತಾರಾಷ್ಟೀಯ ವಿಮಾನ ನಿಲ್ದಾಣಕ್ಕೆ ಸಮೀಪವಿರುವ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂಮಿಯ ಮಾರ್ಗಸೂಚಿ ದರ ಹೆಚ್ಚಿದೆ. ಆದರೆ, ಕೊರಟಗೆರೆ ತಾಲೂಕಿನಲ್ಲಿ ಭೂಮಿ ಕಳೆದುಕೊಳ್ಳುವವರಿಗೆ ಕಡಿಮೆ ಪರಿಹಾರ ದರವಿದೆ. ಪರಿಣಾಮ ಏಕರೂಪ ದರ ನಿಗದಿ ಮಾಡಬೇಕೆಂದು ರೈತರು ಒತ್ತಾಯವಾಗಿತ್ತು.

ಇದೀಗ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಿದ್ದು, ಏಕರೂಪ ದರ ನೀಡುವ ಬಗ್ಗೆ ಚರ್ಚೆಗಳಾಗುತ್ತಿವೆ. ಒಂದೊಮ್ಮೆ ಏಕರೂಪ ದರ ನೀಡಿದ್ದೇ ಆದರೆ, ರಾಜ್ಯದಾದ್ಯಂತ ಇತರೆ ಯೋಜನೆಗಳಿಗೆ ಭೂಸ್ವಾಧೀನ ಸಮಯದಲ್ಲಿಯೂ ಇದೇ ಏಕರೂಪ ದರ ನೀಡುವಂತೆ ಭೂ ಮಾಲೀಕರು ಒತ್ತಾಯ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

Published On - 11:26 am, Wed, 27 May 20