ಬೆಂಗಳೂರು: ಕೇರಳದ ಗಡಿ ಭಾಗದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಕರ್ನಾಟಕದಲ್ಲಿ ಆತಂಕ ಎದುರಾಗಿದೆ. ದೇಶದಾದ್ಯಂತ ಕಳೆದ ಕೆಲವು ದಿನಗಳಿಂದ ಕಾಗೆಗಳು, ಬಾತುಕೋಳಿಗಳು ಮತ್ತು ಕೋಳಿಗಳು ಸೇರಿದಂತೆ ಸುಮಾರು 25,000ಕ್ಕೂ ಅಧಿಕ ಪಕ್ಷಿಗಳು ಜ್ವರದಿಂದ ಸಾವನ್ನಪ್ಪಿವೆ. ಮೊದಲು ರಾಜಸ್ಥಾನದಲ್ಲಿ, ನಂತರ ಮಧ್ಯ ಪ್ರದೇಶದಲ್ಲಿ ಈ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಆದರೆ ಕೇರಳದಲ್ಲೂ ಈ ಜ್ವರ ಕಂಡುಬಂದಿದೆ. ಹೀಗಾಗಿ ಕರ್ನಾಟಕದಲ್ಲಿ ಆತಂಕ ಹುಟ್ಟುಹಾಕಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಅನಿವಾರ್ಯವಾಗಿ ತೆಗೆದುಕೊಳ್ಳಬೇಕು. ಅಲ್ಲದೆ ಕೆಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹಾಗಾದರೆ ಹಕ್ಕಿ ಜ್ವರ ತಡೆಯಲು ಮುಂಜಾಗ್ರತೆ ಕ್ರಮಗಳೇನು? ಎಂಬ ಪ್ರಶ್ನೆಯನ್ನು ಆಧರಿಸಿ ಗುರುವಾರ ಟಿವಿ9 ಫೇಸ್ಬುಕ್ ಲೈವ್ನಲ್ಲಿ ತಜ್ಞ ವೈದ್ಯರೊಂದಿಗೆ ಚರ್ಚಿಸಲಾಯಿತು. ಈ ಚರ್ಚೆಯನ್ನು ಆ್ಯಂಕರ್ ಮಾಲ್ತೇಶ್ ನಡೆಸಿಕೊಟ್ಟಿದ್ದು, ಪಶು ವೈದ್ಯರಾದ ಡಾ.ಶಿವರಾಮ್, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ.ಎಸ್. ಸುರೇಶ್ ಮತ್ತು ಶ್ವಾಸಕೋಶ ತಜ್ಞರಾದ ಡಾ.ಪವನ್ ಚರ್ಚೆಯಲ್ಲಿ ಭಾಗವಹಿಸಿದ್ದರು.
ಚರ್ಚೆಯ ಆರಂಭದಲ್ಲಿ ಹಕ್ಕಿ ಜ್ವರ ಎಂದರೇನು? ಇದಕ್ಕೆ ಸಂಬಂಧಿಸಿದಂತೆ ಜನರಿಗೆ ಇರಬೇಕಾದ ತಿಳುವಳಿಕೆಗಳೇನು? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪಶು ವೈದ್ಯರಾದ ಡಾ.ಶಿವರಾಮ್ , ಹಕ್ಕಿ ಜ್ವರ ಬಹಳ ದಿನಗಳಿಂದಲೂ ಇದೆ. H1N1 ವೈರಸ್ನಿಂದ ಬರುವ ಈ ರೋಗ ಪಕ್ಷಿಗಳಲ್ಲಿ ಉಸಿರಾಟದ ಸಮಸ್ಯೆ ಮತ್ತು ಗಂಟಲು ನೋವು ಕಾಣಿಸಿಕೊಳ್ಳುತ್ತದೆ. ಇದರ ಮೂಲಕ ಹಕ್ಕಿ ಜ್ವರ ಇದೆ ಎಂದು ತಿಳಿದುಕೊಳ್ಳಬಹುದು. ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನುವುದರಿಂದ ಇಂತಹ ಸಮಸ್ಯೆ ತೀರಾ ಕಡಿಮೆ ಎಂದರು. ತಕ್ಷಣ ಸತ್ತ ಹಕ್ಕಿಗಳನ್ನು ಮುಟ್ಟಬಾರದು. ಪಕ್ಷಿಗಳ ಸಾವಿನಲ್ಲಿ ಜ್ವರದ ಲಕ್ಷಣ ಕಂಡು ಬಂದರೆ ಸಮೀಪದ ಪಶುವೈದ್ಯರಿಗೆ ತಿಳಿಸಬೇಕೆಂದರು.
ಕಾಡಿನಲ್ಲಿರುವ ಮತ್ತು ನೀರಿನಲ್ಲಿರುವ ಹಕ್ಕಿಗಳು ಸಾಮಾನ್ಯವಾಗಿ ಚಳಿಗಾಲದಲ್ಲಿ ವಲಸೆ ಬರುತ್ತಿರುತ್ತವೆ. ವಲಸೆ ಬಂದ ಹಕ್ಕಿಗಳ ಸೋಂಕು ಸ್ಥಳೀಯ ಹಕ್ಕಿಗಳಿಗೆ ಗಾಳಿಯ ಮೂಲಕ ಹರಡುತ್ತದೆ. ಈ ಸೋಂಕು ನೇರವಾಗಿ ಮನುಷ್ಯರಿಗೆ ತಾಕಿದಾಗ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಡಾ.ಶಿವರಾಮ್ ತಿಳಿಸಿದರು.
ಚರ್ಚೆಯ ಮುಂದಿನ ಭಾಗವಾಗಿ ಮಾತನಾಡಿದ ಶ್ವಾಸಕೋಶ ತಜ್ಞರಾದ ಡಾ.ಪವನ್ ಈ ಹಕ್ಕಿ ಜ್ವರ ಭಾರತಕ್ಕೆ ಹಲವು ಭಾರಿ ಬಂದಿದೆ. ಈ ಹಕ್ಕಿ ಜ್ವರ ಮೊದಲು 1961ರಲ್ಲಿ ಚೀನಾದಲ್ಲಿ ಗುರುತಿಸಲಾಯಿತು. ಆ ನಂತರ ಈ ಹಕ್ಕಿ ಜ್ವರ 1997ರಲ್ಲಿ ಮನುಷ್ಯರಲ್ಲಿ ಕಾಣಿಸಿಕೊಂಡಿರುವುದು ಕೂಡಾ ದಾಖಲಾಗಿದೆ. ಆದರೆ ಸುಲಭವಾಗಿ ಹಕ್ಕಿಗಳಿಂದ ಮನುಷ್ಯರಿಗೆ ಈ ವೈರಸ್ ಹರಡುವುದಿಲ್ಲ. ಪ್ರಾಣಿಗಳ ಜೊತೆ ಮತ್ತು ಕಸಾಯಿಖಾನೆಗಳಲ್ಲಿ ಕೆಲಸ ಮಾಡುವವರಿಗೆ ಈ ಹಕ್ಕಿ ಜ್ವರ ಕಾಣಿಸುವ ಸಾಧ್ಯತೆ ಹೆಚ್ಚಿರುತ್ತದೆ ವಿನಃ ಉಳಿದವರಿಗೆ ವೈರಸ್ ಹರಡುವ ಸಂಗತಿ ಕಡಿಮೆ ಎಂದು ತಿಳಿಸಿದರು. ಅಲ್ಲದೇ ಯಾರಿಗಾದರೂ ಈ ಹಕ್ಕಿ ಜ್ವರ ಕಾಣಿಸಿಕೊಂಡರೆ ಇನ್ನೊಬ್ಬರಿಗೆ ಈ ಸೋಂಕು ಹರಡುವುದು ತೀರಾ ಕಡಿಮೆ ಹಾಗಾಗಿ ಆತಂಕ ಪಡುವ ಅಗತ್ಯವಿಲ್ಲ. ಹೀಗೆಂದ ಮಾತ್ರಕ್ಕೆ ಬೇಜಾವಬ್ದಾರಿಯಿಂದ ವರ್ತಿಸುವುದು ಒಳ್ಳೆಯದಲ್ಲ. ಹಸಿ ಮೊಟ್ಟೆಯನ್ನು, ಅರ್ಧ ಬೆಂದ ಮಾಂಸ ತಿನ್ನದೇ ಚೆನ್ನಾಗಿ ಬೇಯಿಸಿ ಸೇವಿಸಬೇಕು ಎಂದು ಸ್ಪಷ್ಟಪಡಿಸಿದರು.
ಪಕ್ಷಿಗಳು ಸಾವನ್ನಪ್ಪುತ್ತಿದ್ದರೆ ತಕ್ಷಣ ಮಾಹಿತಿ ತಿಳಿಸುವಂತೆ ಸೂಚಿಸಿದ್ದೇವೆ. ಇದರ ಬಗ್ಗೆ ಹೆಚ್ಚು ಗಮನ ಹರಿಸಿ ಕೆಲಸ ನಿರ್ವಹಿಸುವುತ್ತಿರುವದರಿಂದ ಹಕ್ಕಿ ಜ್ವರ ಕಂಡುಬಂದಿಲ್ಲ. ಹೀಗಾಗಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಕಳೆದ ಬಾರಿ ಮೈಸೂರಿನಲ್ಲಿ ಮತ್ತು ದಾವಣಗೆರೆಯಲ್ಲಿ ಹಿತ್ತಲು ಕೋಣೆಯಲ್ಲಿದ್ದ ಹಕ್ಕಿಗಳಿಗೆ ಈ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಆ ವೇಳೆಯಲ್ಲಿ ಸುಮಾರು 5,000 ಕೋಳಿಗಳನ್ನು ಸಾಯಿಸಿ 20 ಅಡಿಯ ಕೆಳಗೆ ಹೂತು ಹಾಕಿದ್ದೆವು. ಅಲ್ಲದೇ ಸುತ್ತಮುತ್ತ ಸ್ಯಾನಿಟೈಸ್ ಮಾಡಲಾಗಿತ್ತು. ಜೊತೆಗೆ ಆ ಪ್ರದೇಶದ ಕೆಲವು ಭಾಗದಲ್ಲಿ ಮೊಟ್ಟೆ ಮತ್ತು ಕೋಳಿ ಮಾಂಸವನ್ನು ನಿಷೇಧಿಸಿದ್ದೆವು ಹೀಗಾಗಿ ಮುಂದೆ ಯಾವುದೇ ಸಮಸ್ಯೆಗಳು ಎದುರಾಗಿರಲಿಲ್ಲ. ಈಗಲೂ ಮೈಸೂರಿನಲ್ಲಿ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಚೆಕ್ ಪೋಸ್ಟ್ನಲ್ಲಿ ತಪಾಸಣೆ ಕೈಗೊಳ್ಳಲಾಗಿದೆ ಎಂದು ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ.ಎಸ್. ಸುರೇಶ್ ತಿಳಿಸಿದರು.
ಶಿವಮೊಗ್ಗದ ಪಾರ್ಕ್ನಲ್ಲಿ ಸತ್ತುಬಿದ್ದ ಪಕ್ಷಿಗಳು: ರಾಜ್ಯಕ್ಕೂ ವಕ್ಕರಿಸಿತಾ ಹಕ್ಕಿ ಜ್ವರ?
Published On - 6:35 pm, Thu, 7 January 21