ಕೋಲಾರ: ಜಿಲ್ಲೆಯ ಮಾಜಿ ಶಾಸಕ ಹಾಗೂ ಮಾಜಿ ಸಚಿವ ವರ್ತೂರ್ ಪ್ರಕಾಶ್ಗೆ ಕಾಂಗ್ರೆಸ್ ಪಕ್ಷದ ಮೇಲೆ ಮನಸ್ಸಾಗಿದ್ದು, ಮತ್ತೆ ಕಾಂಗ್ರೆಸ್ ಪಕ್ಷ ಸೇರುವುದಕ್ಕೆ ಹಾತೊರೆಯುತ್ತಿದ್ದಾರೆ! ಹೀಗೆಂದು ಸ್ವತಃ ವರ್ತೂರ್ ಪ್ರಕಾಶ್ ಗ್ರಾಮ ಪಂಚಾಯತಿಯ ಗೆದ್ದ ಅಭ್ಯರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.
ಕಾಂಗ್ರೆಸ್ ಜಪ, ಕೆ.ಹೆಚ್.ಮುನಿಯಪ್ಪರ ಮೇಲೆ ಪ್ರೀತಿ! ಕೋಲಾರದಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದ ವರ್ತೂರ್ ಪ್ರಕಾಶ್ ಬೆಂಬಲಿತ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ವರ್ತೂರ್ ಪ್ರಕಾಶ್, ತಾವು ಕಾಂಗ್ರೆಸ್ ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಗ್ರಾಮ ಪಂಚಾಯತಿ ಚುನಾವಣೆ ವೇಳೆ ಸಾಕಷ್ಟು ನಷ್ಟ ಅನುಭವಿಸಿದ್ದ ವರ್ತೂರ್ ಪ್ರಕಾಶ್ಗೆ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಹಣ ನೀಡಿ ಶಕ್ತಿ ತುಂಬಿದ್ದಾರೆ. ಗ್ರಾಮ ಪಂಚಾಯತಿ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ನೀಡಿದ ಹಣದಲ್ಲೇ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲಾಗಿದೆ. ಹಿಂದಿನ ಹಲವು ಚುನಾವಣೆಗಳಲ್ಲಿ ನಾನು ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿಕೊಂಡು ಬಂದಿದ್ದೇವೆ ಎಂದು ವರ್ತೂರ್ ಪ್ರಕಾಶ್ ಹೇಳಿದ್ದಾರೆ.
2008 ವಿಧಾನಸಭಾ ಚುನಾವಣೆಯಿಂದ ವರ್ತೂರ್ ಪ್ರಕಾಶ್ ಕಾಂಗ್ರೆಸ್ ಸೇರಲು ಹಾತೊರೆಯುತ್ತಿದ್ದಾರೆ! 2008 ರ ವಿಧಾನಸಭಾ ಚುನಾವಣೆಗೆ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಬಂದಿಳಿದಿದ್ದ ವರ್ತೂರ್ ಪ್ರಕಾಶ್ ಕೋಲಾರದಲ್ಲಿ ಬೃಹತ್ ಅಹಿಂದ ಸಮಾವೇಶವನ್ನು ಮಾಡುವ ಮೂಲಕ ಸಿದ್ದರಾಮಯ್ಯ, ಜಿ.ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರನ್ನು ಒಂದೆಡೆ ಸೇರಿಸಿ ಅಹಿಂದ ಕಹಳೆ ಊದಿದ್ದರು. ಆ ಸಮಾವೇಶದ ನಂತರ ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಹೊರಹೊಮ್ಮಿದ ವರ್ತೂರ್ ಪ್ರಕಾಶ್ಗೆ ಹಾಲಿ ಶಾಸಕ ಕೆ. ಶ್ರೀನಿವಾಸಗೌಡರು ಪ್ರಭಲ ಪ್ರತಿಸ್ಪರ್ಧಿಯಾಗಿ ಕಂಡು ಬಂದರು. ಸತತವಾಗಿ 3 ಬಾರಿ ಶಾಸಕರಾಗಿದ್ದ ಕೆ. ಶ್ರೀನಿವಾಸಗೌಡರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವ ಮೂಲಕ ವರ್ತೂರ್ ಪ್ರಕಾಶ್ಗೆ ನಿರಾಸೆ ಮಾಡಿತ್ತು. ಆದರೆ ವರ್ತೂರ್ ಪ್ರಕಾಶ್ ಎದೆಗುಂದದೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಕೋಲಾರ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಮಾಡುವ ಮೂಲಕ 2008ರ ಚುನಾವಣೆಯಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದರು.
ಸಚಿವ ವರ್ತೂರ್ ಪ್ರಕಾಶ್
ಬಿಜೆಪಿಯ ಭರ್ಜರಿ ಆಫರ್ನ್ನು ಲೆಕ್ಕಿಸದೆ, ಕಾಂಗ್ರೆಸ್ ಮತ್ತು ಸಿದ್ದರಾಮಯ್ಯರನ್ನು ಜಪಿಸುತ್ತಿದ್ದ ವರ್ತೂರ್! 2008ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ನಂತರ ಅತಂತ್ರ ವಿಧಾನಸಭೆ ಸೃಷ್ಟಿಯಾಗಿ ಪಕ್ಷೇತರ ಶಾಸಕರಿಗೆ ಭರ್ಜರಿ ಬೇಡಿಕೆ ಬಂದಿತ್ತು. ಈ ವೇಳೆ ವರ್ತೂರ್ ಪ್ರಕಾಶ್ ಬಿಜೆಪಿ ಜೊತೆಗೆ ಕೈಜೋಡಿಸಿದ್ದರೆ ಅವರು ಮೊದಲ ಬಾರಿಗೆ ಸಚಿವರಾಗಿರುತ್ತಿದ್ದರು.ಆದರೆ ಅಂದಿಗೆ ಬಿಜೆಪಿ ಜೊತೆಗೆ ಕೈಜೋಡಿಸದ ವರ್ತೂರ್ ಪ್ರಕಾಶ್ ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡಿದ್ದರು.ಈ ವೇಳೆ ಬಿಜೆಪಿ ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿತ್ತು ಆಗಲೂ ವರ್ತೂರ್ ಪ್ರಕಾಶ್ ಬಿಜೆಪಿಯಿಂದ ದೂರ ಉಳಿದಿದ್ದರು. ಆದರೆ ಬಿಜೆಪಿ ಸರ್ಕಾರಕ್ಕೆ 2 ವರ್ಷಗಳ ನಂತರ ಮತ್ತೆ ಸಂಕಷ್ಟ ಎದುರಾದಾಗ ವರ್ತೂರ್ ಪ್ರಕಾಶ್ ಬಿಜೆಪಿ ಜೊತೆಗೆ ಕೈಜೋಡಿಸಿ ಜವಳಿ ಸಚಿವರಾಗಿ, ಕುಡಿಯುವ ನೀರು ಹಾಗೂ ಒಳಚರಂಡಿ ನಿಗದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.
ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಕಾಂಗ್ರೆಸ್ ಜಪ: ಹೀಗೆ ವರ್ತೂರ್ ಪ್ರಕಾಶ್ ಬಿಜೆಪಿ ಸರ್ಕಾರದ ಅವದಿಯಲ್ಲಿ ಸಚಿವರಾಗಿ ಅಧಿಕಾರಗಳನ್ನು ಅನುಭವಿಸಿದ್ದರೂ ವರ್ತೂರ್ ಪ್ರಕಾಶ್ಗೆ ಮಾತ್ರ ಕಾಂಗ್ರೆಸ್ ಮೇಲಿನ ವ್ಯಾಮೋಹ ತಪ್ಪಿಲ್ಲ. 2013ರ ವಿಧಾಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಬಹುಮತದಿಂದ ಸರ್ಕಾರ ರಚನೆ ಮಾಡಿದಾಗಲೂ ವರ್ತೂರ್ ಪ್ರಕಾಶ್ ಸಿದ್ದರಾಮಯ್ಯರನ್ನೇ ಜಪಿಸುತ್ತಿದ್ದರೂ. ಆದರೆ ಸಿದ್ದರಾಮಯ್ಯರಾಗಲೀ ಕಾಂಗ್ರೆಸ್ ಪಕ್ಷವಾಗಲೀ ಇವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದೆ ದೂರವೇ ಇಟ್ಟಿತ್ತು. ಇದರಿಂದ ಬೇಸರಗೊಂಡ ವರ್ತೂರ್ ಪ್ರಕಾಶ್ ಕಾಂಗ್ರೆಸ್ ನಾಯಕರ ಮೇಲೆ ತಮ್ಮ ಮಾತಿನಿಂದ ಕುಟುಕುತ್ತಿದ್ದರು. ಆಗ ವರ್ತೂರ್ ಪ್ರಕಾಶ್ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯರ ಕೆಂಗಣ್ಣಿಗೆ ಗುರಿಯಾಗಿ 2018 ವಿಧಾಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದರು.
ಗ್ರಾಮ ಪಂಚಾಯತಿಯ ಗೆದ್ದ ಅಭ್ಯರ್ಥಿಗಳ ಅಭಿನಂದನಾ ಸಮಾರಂಭದ ಧೃಶ್ಯ
ವರ್ತೂರ್ಗೆ ಡ್ಯಾಮೇಜಿಂಗ್ ಸ್ಟೇಟ್ಮೆಂಟ್ ನಿಂದಲೇ ಡ್ಯಾಮೇಜ್ ವರ್ತೂರ್ ಪ್ರಕಾಶ್ ಎಂದರೆ ವಿವಾದಿತ ಹೇಳಿಕೆಗಳಿಂದಲೇ ಪ್ರಖ್ಯಾತಿ ಪಡೆದವರು. ಹೀಗಾಗಿಯೇ ಕಾಂಗ್ರೇಸ್ನಲ್ಲಿ 150 ಕೆ.ಜಿ ತೂಕದ ನಾಯಕರು ಇರುವವರೆಗೂ ಪಕ್ಷ ಏಳಿಗೆ ಆಗಲ್ಲ, ಸಿದ್ದರಾಮಯ್ಯರನ್ನು ನಾವೇ ಬೆಳೆಸಿದ್ದು, ಅವರನ್ನು ಕುರುಬ ಸಮುದಾಯದ ನಾಯಕ ಎಂದು ಮಾಡಿದ್ದು ನಾನೇ, ರಾಜ್ಯದಲ್ಲಿ ಕುರುಬ ಸಮುದಾಯದಲ್ಲಿ ಸಿದ್ದರಾಮಯ್ಯರನ್ನು ಹೊರತು ಪಡಿಸಿದರೆ ನಾನೇ ಮುಂಚೂಣಿ ನಾಯಕ ಈ ರೀತಿ ಹೇಳಿಕೆಗಳಿಂದ ಪ್ರಮುಖ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ವರ್ತೂರ್ ಪ್ರಕಾಶ್ ಕ್ರಮೇಣ ಮೂಲೆಗುಂಪಾದರು.
ಹೊಸ ಪಕ್ಷ ಕಟ್ಟಿದರು ಪ್ರಯೋಜನವಾಗಲಿಲ್ಲ: 2018ರ ವಿಧಾನಸಭೆ ಚುನಾವಣೆ ವೇಳೆಗೆ ನಮ್ಮ ಕಾಂಗ್ರೆಸ್ ಎನ್ನುವ ಹೊಸ ಪಕ್ಷವನ್ನು ಸ್ಥಾಪನೆ ಮಾಡಿದರಾದರೂ ಅದು ಹೇಳ ಹೆಸರಿಲ್ಲದಂತೆ ಹೋಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಆ ಪಕ್ಷದಿಂದಲೂ ಕೆಲವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ವರ್ತೂರ್ ಪ್ರಕಾಶ್ ತನ್ನನ್ನು ಸೇರಿ ಯಾರೊಬ್ಬರೂ ನಮ್ಮ ಕಾಂಗ್ರೆಸ್ ಎನ್ನುವ ಹೊಸ ಪಕ್ಷದಿಂದ ಆಯ್ಕೆಯಾಗಲೇ ಇಲ್ಲ.
ಸಿಎಂ BSY ರಾಜಕೀಯ ಕಾರ್ಯದರ್ಶಿ NR ಸಂತೋಷ್ ಆತ್ಮಹತ್ಯೆ ಯತ್ನ, ರಾಜಕೀಯ ಒತ್ತಡ ಎಂದ ಕುಟುಂಬಸ್ಥರು