ಸುದ್ದಿ ವಿಶ್ಲೇಷಣೆ: ವಾಸ್ತವ ಒಪ್ಪಿಕೊಳ್ಳಲು ಯಡಿಯೂರಪ್ಪ ಹಿಂದೇಟು ಏಕೆ? ಮ.ಪ್ರದೇಶ ಮುಖ್ಯಮಂತ್ರಿಗೆ ಸಾಧ್ಯವಾಗಿದ್ದು ಕರ್ನಾಟಕದಲ್ಲಿ ಸಾಧ್ಯವಾಗುತ್ತಿಲ್ಲ ಏಕೆ?
ಒಮ್ಮೊಮ್ಮೆ ಹೊರ ಜಗತ್ತಿನ ಬೆಳವಣಿಗೆಗಳು, ದೇಶ ಅಥವಾ ರಾಜ್ಯ ನಡೆಸುವ ನಾಯಕರ ಕೈ ಮೀರುವುದುಂಟು. ಆದರೆ, ಪಕ್ಷದ ಬೆಳವಣಿಗೆಯನ್ನು ನಿಯಂತ್ರಿಸುವ ಶಕ್ತಿ ಒಬ್ಬ ನಾಯಕನಿಗೆ ಇರಬೇಕಲ್ಲವೇ? ಅದನ್ನು ಸಾಧಿಸಲಾಗದ ನಾಯಕನೊಬ್ಬ ಬೇರೆಯವರನ್ನು ದೂಷಿಸಿದರೆ ತಪ್ಪು ಸಂದೇಶ ಹೋಗುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪ ಇದನ್ನು ತಿಳಿದುಕೊಂಡು ತಮ್ಮ ನಡುವಳಿಕೆಯಲ್ಲಿ ಬದಲಾವಣೆ ತಂದುಕೊಂಡರೆ ಅದೇ, ಕರ್ನಾಟಕದ ಜನರಿಗೆ ಯಡಿಯೂರಪ್ಪ ಕೊಡುವ ದೊಡ್ಡ ಉಡುಗೊರೆಯಾಗುತ್ತದೆ.
ಈ ವಾರದ ಪ್ರಾರಂಭದಲ್ಲಿ ನಡೆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ-ಪಕ್ಷದ ಶಾಸಕರ ನಡುವಿನ ಸಭೆಯನ್ನು ಕರೆಯುವಾಗ, ಯಡಿಯೂರಪ್ಪ ಅವರಿಗೆ ಯಾವ ಉದ್ದೇಶವಿತ್ತೋ ಗೊತ್ತಿಲ್ಲ. ಆದರೆ, ಆ ಸಭೆಯ ಮೂಲಕ ಅವರು ಶಾಸಕರ ಸಿಟ್ಟು ಕಡಿಮೆ ಮಾಡಿದ್ದಾರೆ ಎನ್ನುವದಕ್ಕೆ ಯಾವ ನಿದರ್ಶನವೂ ಸಿಗುತ್ತಿಲ್ಲ. ಇಷ್ಟೇ ಅಲ್ಲ, ಅವರು ಆ ಸಭೆಯನ್ನು ಏರ್ಪಡಿಸಿ ಮತ್ತೊಂದಿಷ್ಟು ಗೊಂದಲವನ್ನು ಹುಟ್ಟುಹಾಕಿ ಬಿಟ್ಟರಾ ಎನ್ನುವ ಸಂಶಯ ಕೂಡ ಜನರಲ್ಲಿ ಮೂಡುತ್ತಿದೆ.
ಸಭೆ ಕರೆದಿದ್ದೇಕಿರಬಹುದು? ಕಳೆದ ಒಂದುವರೆ ವರ್ಷದಲ್ಲಿ ಯಾವತ್ತೂ ಸಭೆ ಕರೆದು ಶಾಸಕರ ಅಳಲನ್ನು ಕೇಳಿರದ ಯಡಿಯೂರಪ್ಪ ಈ ವಾರ ಸಭೆ ಕರೆದಿದ್ದೇಕೆ ಎಂಬ ಕುತೂಹಲ ಜನರಲ್ಲಿ ಮೂಡುವುದು ಸಹಜ. ಬಿಜೆಪಿ ಪಕ್ಷದ ಮೂಲಗಳ ಪ್ರಕಾರ ಯಡಿಯೂರಪ್ಪ ಈ ಸಭೆ ಕರೆದಿದ್ದರ ಹಿಂದೆ ಒಂದು ಕಾರಣ ಇದೆ. ಅದೇನೆಂದರೆ, ಮುಂದಿನವಾರ ರಾಜ್ಯಕ್ಕೆ ಭೇಟಿ ನೀಡಲಿರುವ ಕೇಂದ್ರದ ಗೃಹ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಅಮಿತ್ ಷಾ ಅವರಿಗೆ ರಾಜ್ಯದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ತೋರಿಸುವ ತಂತ್ರದ ಭಾಗವಾಗಿ ಈ ಸಭೆ ಕರೆಯಲಾಗಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ, ರಾಜ್ಯದ ಯಾವ ಶಾಸಕರೂ ಕೂಡ ತಮ್ಮ ವಿರುದ್ಧ ಷಾ ಅವರಿಗೆ ಫಿರ್ಯಾದು ಕೊಡಬಾರದು ಎಂಬುದು ಯಡಿಯೂರಪ್ಪ ಅವರ ಲೆಕ್ಕಾಚಾರವಾಗಿತ್ತು.
ಯಡಿಯೂರಪ್ಪ ಅವರು ಇಷ್ಟು ದಿನ ಸಭೆ ಕರೆಯಲಿಲ್ಲ ಎಂದು ಹೇಳುವ ನಾಯಕರು ಒಂದು ವಿಚಾರವನ್ನು ನೆನಪಿಟ್ಟುಕೊಳ್ಳಬೇಕು. ಅವರು ಬಂದಾಗಿನಿಂದ ರಾಜ್ಯ ಒಂದಲ್ಲ ಒಂದು ವಿಪತ್ತನ್ನು ಎದುರಿಸಿತ್ತು. ಕಳೆದ ವರ್ಷ ಕಂಡರಿಯದ ಉತ್ತರ ಕರ್ನಾಟಕದ ನೆರೆ, ಅದಾದ ಮೇಲೆ ಬಂದ ಕೊರೊನಾದಿಂದ ಯಡಿಯೂರಪ್ಪ ಅವರ ಆಡಳಿತ ಸುಸ್ತಾದಂತಿದೆ. ಹಾಗಾಗಿ ಒಂದಿಡೀ ವರ್ಷ ಶಾಸಕರ ಸಭೆ ನಡೆಸಿಲ್ಲ ಎಂದು ಯಾರಾದರೂ ಹೇಳಿದರೆ ಅದು ತಪ್ಪಾಗಬಹುದು.
ಮೊನ್ನೆಯ ಸಭೆಯಲ್ಲಿ ಮಾತನಾಡಿದವರು ಯಡಿಯೂರಪ್ಪನವರ ಮಗನ ಬಗ್ಗೆ ಮತ್ತು ತಮ್ಮ ಕ್ಷೇತ್ರಕ್ಕೆ ಹಣ ಬರುತ್ತಿಲ್ಲ ಎಂಬ ಕೂಗು ಹಾಕಿದ್ದಾರೆ. ಇದು ಈಗ ಯಡಿಯೂರಪ್ಪ ಅವರಿಗೆ ಕಗ್ಗಂಟಾಗಿದೆ. ಇಷ್ಟು ದಿನ ಪಕ್ಷದ ಒಳಗೆ ಗುಸುಗುಸು ಇತ್ತು. ಅದು ಈಗ ಅಂಗಳಕ್ಕೆ ಬಂದು ಜಗತ್ತಿಗೆ ಗೊತ್ತಾದಂತಾಗಿದೆ. ಇದರಿಂದ ಯಡಿಯೂರಪ್ಪ ಅವರಿಗೆ ಹಿನ್ನಡೆಯುಂಟಾಗುವ ಸಾಧ್ಯತೆ ಇದೆ. ಈಗ ಷಾ ಅವರಿಗೆ ಯಾರೂ ಕೂಡ ಫಿರ್ಯಾದು ಕೊಡಬೇಕಾಗಿಲ್ಲ. ಇಲ್ಲಿ ಏನು ನಡೆಯುತ್ತಿದೆ ಎಂದು ಜಗತ್ತಿಗೆ ಗೊತ್ತಾಗಿದ್ದುದು ಷಾ ಅವರಿಗೆ ಗೊತ್ತಾಗುವುದಿಲ್ಲವೇ? ಆದ್ದರಿಂದ ಈ ಬಾರಿ ರಾಜ್ಯಕ್ಕೆ ಭೇಟಿ ಕೊಟ್ಟಾಗ ಷಾ ಅವರ ಮನ ಒಲಿಸಿ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯುವ ಯೋಜನೆಯನ್ನೇನಾದರೂ ಯಡಿಯೂರಪ್ಪ ಹಾಕಿಕೊಂಡಿದ್ದರೆ ಅದು ಸಫಲವಾಗುತ್ತದೆ ಎಂದು ಹೇಳುವುದು ಕಷ್ಟವಾಗುತ್ತದೆ.
ಇನ್ನೊಂದು ವಿಚಾರ ಗೊತ್ತಾ? ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ ಬಂದ ಶಿವರಾಜ್ ಸಿಂಗ್ ಚೌಹಾಣ್ ಅವರ ಸಂಪುಟ ಈಗಾಗಲೇ ಮೂರು ಬಾರಿ ವಿಸ್ತರಣೆಯಾಯಿತು. ಅದು ಹೇಗೆ ಸಾಧ್ಯವಾಯಿತು? ಈ ವಿಚಾರವನ್ನು ಯಡಿಯೂರಪ್ಪ ಗಮನಿಸಬೇಕು. ಶಿವರಾಜ್ ಸಿಂಗ್ ಚೌಹಾಣ್ ಕೂಡ ಯಡಿಯೂರಪ್ಪ ಅವರಂತೆ ಸಂಘದ ನೆರಳಿನಲ್ಲಿ ಬೆಳೆದವರು. ಆದರೆ, ಚೌಹಾಣ್ ಯಾವತ್ತೂ ಪಕ್ಷಕ್ಕೆ ದ್ರೋಹ ಮಾಡಿಲ್ಲ ಮತ್ತು ಪ್ರಬಲ ಕೋಮಿನ ನಾಯಕರಾಗಿದ್ದರೂ ಆ ಜಾತಿ ಕಾರ್ಡ್ನ್ನು ಇಟ್ಟುಕೊಂಡು ಹೈ ಕಮಾಂಡ್ಗೆ ಯಾವತ್ತೂ ಬೆದರಿಕೆ (blackmail) ಹಾಕಿಲ್ಲ. ಯಡಿಯೂರಪ್ಪ ಅವರಿಗೆ ಮಾತ್ರ ತಮ್ಮ ಸಂಪುಟ ವಿಸ್ತರಣೆಗೆ ತೊಂದರೆ ಏಕೆ ಆಗುತ್ತಿದೆ? ಇದರ ಕಾರಣವನ್ನು ಬೇರೆ ಯಾರೂ ಹೇಳಬೇಕಾಗಿಲ್ಲ. ಯಡಿಯೂರಪ್ಪ ತಮ್ಮ ಹಿಂದಿನ ಇತಿಹಾಸ ಮತ್ತು ಈಗ ಅವರು ನಡೆದುಕೊಳ್ಳುವ ರೀತಿಯನ್ನು ಅವರೇ ವಿಶ್ಲೇಷಣೆ ಮಾಡಿದರೆ ಸಾಕು, ಅವರಿಗೆ ಅರ್ಥ ಆಗುತ್ತದೆ.
ಕಳೆದ ಒಂದುವರೆ ವರ್ಷದಲ್ಲಿ ಯಡಿಯೂರಪ್ಪ ಎಂಥ ಸವಾಲನ್ನು ಎದುರಿಸಿದ್ದಾರೋ ಅಂತಹುದೇ ಸವಾಲನ್ನು ಶಿವಾರಜ್ ಸಿಂಗ್ ಚೌಹಾಣ್ ಕೂಡ ಎದುರಿಸಿದ್ದಾರೆ. ಮಳೆ ಮತ್ತು ಕೊರೊನಾ ಮಧ್ಯ ಪ್ರದೇಶವನ್ನು ಬಿಟ್ಟಿರಲಿಲ್ಲ. ಆದರೂ, ಚೌಹಾಣ್ ಹೈಕಮಾಂಡ್ ಮನಸ್ಸನ್ನು ಗೆದ್ದ ವಿಧಾನವನ್ನು ಯಡಿಯೂರಪ್ಪ ವಿಶ್ಲೇಷಿಸಿ, ಅದನ್ನು ಅಳವಡಿಸಿಕೊಳ್ಳಲು ಸಾಧ್ಯವಾದರೆ ಕರ್ನಾಟಕದ ಬಿಜೆಪಿ ಶಾಸಕಾಂಗ ಪಕ್ಷದಲ್ಲಿನ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗುತ್ತದೆ.
ಒಂದೊಮ್ಮೆ ಯಡಿಯೂರಪ್ಪ ತಮ್ಮ ಕುಟುಂಬ ಸದಸ್ಯರು ಯಾರೂ ವರ್ಗಾವಣೆಯಲ್ಲಿ ಅಥವಾ ಬೇರೆ ಬೇರೆ ಕೆಲಸದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದರೆ, ಆಗ ಒಂದು ಪ್ರಶ್ನೆ ಉದ್ಭವವಾಗುವುದು ಸಹಜ. ಅದೇನೆಂದರೆ, ತಮ್ಮ ವಿರುದ್ಧ ಪಕ್ಷಪಾತದ ಮತ್ತು ಇಲ್ಲಸಲ್ಲದ ಆರೋಪ ಮಾಡುವವರರಿಗೆ ಒಂದೇ ಬ್ರಶ್ನಿಂದ ಕರಿಬಣ್ಣ ಬಳಿಯುತ್ತಿರುವ ಯಡಿಯೂರಪ್ಪ ಅವರು ಒಂದು ಪ್ರಶ್ನೆಯನ್ನು ಹಾಕಿಕೊಂಡು ಉತ್ತರಿಸಬೇಕು: ವಿಜಯೇಂದ್ರನ ಹೆಸರು ಹೇಳುವವರು ಯಾಕೆ ಶಿವಮೊಗ್ಗ ಲೋಕ ಸಭಾ ಸದಸ್ಯ ಬಿ.ವೈ. ರಾಘವೇಂದ್ರ ಅವರ ಹೆಸರನ್ನು ಹೇಳುತ್ತಿಲ್ಲ ಏಕೆ? ಅಥವಾ 2008 ರಲ್ಲಿ ಅವರು ಅಧಿಕಾರದಲ್ಲಿ ಇದ್ದಾಗ ಶೋಭಾ ಅವರ ಬಗ್ಗೆ ಹೀಗೆ ಆರೋಪ ಬರುತ್ತಿತ್ತು. ಹಾಗಾದರೆ ಈಗ ಯಾರೂ ಶೋಭಾ ಅವರ ವಿರುದ್ಧ ಯಾಕೆ ಅಂಥದೇ ಆರೋಪ ಮಾಡುತ್ತಿಲ್ಲ ಏಕೆ? ಅಂದರೆ, ರಾಘವೇಂದ್ರ ಆಗಲಿ, ಶೋಭಾ ಆಗಲಿ, ಅವರು ಸರಕಾರದಿಂದ ದೂರ ಇದ್ದಾರೆ. ಹಾಗಾಗಿ ಅವರ ಹೆಸರನ್ನು ಯಾರೂ ಹೇಳುತ್ತಿಲ್ಲ ಎಂಬುದು ಸ್ಪಷ್ಟ.
ಇವನ್ನೆಲ್ಲಾ ನೋಡಿದಾಗ ಹೊಸ ವರ್ಷದಿಂದ ಹೊಸ ಅಧ್ಯಾಯ ಶುರು ಮಾಡಬೇಕೆಂಬ ಯಡಿಯೂರಪ್ಪ ಅವರ ಇಚ್ಛೆ ಕಾರ್ಯ ರೂಪಕ್ಕೆ ಬರಲು ವಿಫಲವಾಗುತ್ತಿದೆಯಾ ಎಂಬ ಸಂದೇಹ ಕಾಡಿದರೆ ಆಶ್ಚರ್ಯ ಇಲ್ಲ.
ಐಜಿಪಿ ರೂಪಾ ಮುಂದೆ ಹೊಸ ಸವಾಲು: ಕರಕುಶಲ ನಿಗಮದ ಲೂಟಿಕೋರನ ಹಿಡಿಯುವುದು..ಯಾರು ಅವರು?
Published On - 8:01 pm, Thu, 7 January 21