ಮಾದಕ ವಸ್ತು ಜಾಲ ಮತ್ತು ಡ್ರಗ್ಸ್ ಸೇವನೆ ಕರ್ನಾಟಕವಲ್ಲದೆ ಇಡೀ ದೇಶದ ಯುವಜನತೆಗೆ ಮಾರಕಾವಾಗಿ ಪರಿಣಮಿಸಿದೆ. ಈ ಜಾಲವನ್ನು ಮಟ್ಟಹಾಕಲು ಸರ್ಕಾರ ನಿರಂತರ ಹೋರಾಟ ನಡೆಸುತ್ತಲೇ ಬಂದಿದೆ. ಅಂತೆಯೇ, ಕಳೆದ 13 ವರ್ಷಗಳಿಂದ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಹೋರಾಡುತ್ತಾ ರಾಜ್ಯದ ಪ್ರತಿ ಸಂಕಷ್ಟಕ್ಕೂ ಸ್ಪಂದಿಸುತ್ತಾ ಬಂದಿರೋ ಟಿವಿ9 ಡ್ರಗ್ಸ್ ಜಾಲವನ್ನ ನಿರ್ಮೂಲನೆ ಮಾಡುವ ಹೋರಾಟದಲ್ಲಿ ಸಹ ತನ್ನ ಕೈ ಜೋಡಿಸಿದೆ. ಇದೇ ಕಾರಣಕ್ಕಾಗಿ ಡ್ರಗ್ಸ್ ಬೇಡ ಕರ್ನಾಟಕ ಅನ್ನೋ ಕಾನ್‌ಕ್ಲೇವ್ ಹಮ್ಮಿಕೊಂಡಿತ್ತು.
ಈ ವಿಶೇಷ ಕಾರ್ಯಕ್ರಮವನ್ನು ಬೆಂಗಳೂರಿನ ಅಶೋಕ ಹೋಟೆಲ್ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದರಾದ ಸುಮಲತಾ ಅಂಬರೀಶ್ ಮತ್ತು ತೇಜಸ್ವಿ ಸೂರ್ಯ, ನಿವೃತ್ತ ಉಪ ಲೋಕಾಯುಕ್ತರಾದ ನ್ಯಾ. ಸುಭಾಷ್ ಬಿ. ಆಡಿ, ನಟ ಅಜಯ್ ರಾವ್, ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್, ವಿವೇಕ್ ಪಾಯ್ಸ್, ಪ್ರಾದೇಶಿಕ ನಿರ್ದೇಶಕ-ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಧರ್ಮಸ್ಥಳ ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಟಿವಿ9 ಕನ್ನಡ ಮ್ಯಾನೇಜಿಂಗ್ ಎಡಿಟರ್ ಆದ ಆರ್. ಶ್ರೀಧರನ್ ಅವರು ವೇದಿಕೆಗೆ ಆಗಮಿಸಿ ಪ್ರಾಸ್ತಾವಿಕ ನುಡಿಯನ್ನು ನೀಡಿದರು. ಜೊತೆಗೆ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರಿಗೆ ಆತ್ಮೀಯ ಸ್ವಾಗತ ಕೋರಿದರು. ಬಳಿಕ ಹಿರಿಯ ನಿರೂಪಕ ರಂಗನಾಥ್ ಭಾರದ್ವಾಜ್ ಅವರು ಗಣ್ಯರನ್ನು ವೇದಿಕೆಗೆ ಬರಮಾಡಿಕೊಂಡು ಅವರೊಟ್ಟಿಗೆ ಮಾದಕ ವಸ್ತು ಜಾಲವನ್ನು ಮಟ್ಟಹಾಕುವ ಬಗ್ಗೆ ಸುದೀರ್ಘ ಚರ್ಚೆಗೆ ಮುಂದಾದರು.
‘ಮಕ್ಕಳಿಗೆ ಮನೆಯಿಂದಲೇ ಅರಿವು ಮೂಡಿಸಬೇಕು’
ಚರ್ಚೆಯಲ್ಲಿ ಭಾಗಿಯಾದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸಹ ತಮ್ಮ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಹಂಚಿಕೊಂಡರು. ತಮ್ಮ ಪುತ್ರ ಅಭಿಷೇಕ್ ಶಾಲೆಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಚಾಕೋಲೇಟ್ ಮತ್ತು ಐಸ್ಕ್ರೀಮ್ನಲ್ಲಿ ಡ್ರಗ್ಸ್ ಬೆರೆಸಿ ಮಕ್ಕಳಿಗೆ ಕೆಲವರು ನೀಡುತ್ತಿದ್ದುದ್ದನ್ನು ನೆನಪಿಸಿಕೊಂಡರು. ಈ ವಿಚಾರವಾಗಿ ತಮ್ಮ ಮಗನಿಗೆ ಅರಿವು ಮೂಡಿಸಿದ ಬಗ್ಗೆ ಸಹ ಮಾತನಾಡಿದರು. ಅಂತೆಯೇ, ಡ್ರಗ್ಸ್ನ ಅಪಾಯಕಾರಿ ಪರಿಣಾಮಗಳ ಬಗ್ಗೆ ಮಕ್ಕಳಿಗೆ ಮನೆಯಿಂದಲೇ ಅರಿವು ಮೂಡಿಸಬೇಕು. ಈ ಕೆಲಸವನ್ನು ಪೋಷಕರು ಮಾಡುವುದರಿಂದ ಮಕ್ಕಳಿಗೆ ಇದರ ದುಷ್ಪರಿಣಾಮಗಳ ಬಗ್ಗೆ ಪ್ರಜ್ಞೆ ಹುಟ್ಟುತ್ತದೆ. ಇದಲ್ಲದೆ, ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿರುವ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಸಂಸದೆ ತಪ್ಪಿತಸ್ಥರಿಗೆ ಖಂಡಿತ ಶಿಕ್ಷೆ ಕೊಡಿ. ಆದರೆ, ಇಡೀ ಚಿತ್ರರಂಗವನ್ನು ಕಳಂಕಿತರ ಹಾಗೆ ಬಿಂಬಿಸಬೇಡಿ ಎಂದು ಹೇಳಿದರು.
‘ಯುವಕರು ಡ್ರಗ್ಸ್ ವಿರುದ್ಧ ಎಚ್ಚೆತ್ತುಕೊಳ್ಳಬೇಕು’
ಈ ನಡುವೆ, ಮಾದಕ ವಸ್ತು ಜಾಲದಿಂದ ಹಲವಾರು ದೇಶಗಳು ಕುಸಿದು ಹೋಗಿರುವ ಸಾಕಷ್ಟು ಉದಾಹರಣೆಗಳಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು. ಆದ್ದರಿಂದ ಯುವಕರಲ್ಲಿ ಈ ಸಿಗರೇಟ್, ಮದ್ಯ ಸೇವನೆ ಮತ್ತು ಗಾಂಜಾ ಅಥವಾ ಡ್ರಗ್ಸ್ ವ್ಯಸನ ಕೂಲ್ ಆಗಿ ಕಾಣಿಸಲು ಅಥವಾ ಫ್ಯಾಷನ್ ಸ್ಟೇಟ್ಮೆಂಟ್ ಆಗಲು ಬಿಡಬಾರದು ಎಂದು ತೇಜಸ್ವಿ ಸೂರ್ಯ ಹೇಳಿದರು. ಜೊತೆಗೆ, ದೇಶದಲ್ಲಿ ಸಂಭವಿಸುವ ಆತ್ಮಹತ್ಯೆಗಳಲ್ಲಿ ಶೇಕಡಾ 10 ರಷ್ಟು ಡ್ರಗ್ಸ್ನ ಸಂಬಂಧಿಸಿ ನಡೆಯುತ್ತಿದೆ ಎಂದು ಹೇಳಿದರು. ಹಾಗಾಗಿ, ಯುವಕರು ಇದರ ವಿರುದ್ಧ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ನಟ ಅಜಯ್ ರಾವ್ ಮೂರು ವಿಚಾರಗಳನ್ನು ನಾವು ಅಳವಿಡಿಸಿಕೊಂಡರೆ ಈ ಡ್ರಗ್ಸ್ ಜಾಲದ ಹರಡುವಿಕೆಯನ್ನ ತಡೆಯಬಹುದು ಎಂದು ಹೇಳಿದರು. ಅವುಗಳೇ, ಡ್ರಗ್ಸ್ ಸೇವನೆ ಬಗ್ಗೆ ಭಯ, ಅದರ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಹಾಗೂ ಸ್ವಇಚ್ಛೆಯಿಂದ ಅದರಿಂದ ದೂರವಿರುವುದು ಎಂದು ಹೇಳಿದರು.
ಟಿವಿ9 ಅಭಿಯಾನಕ್ಕೆ ಸಿಎಂ ಸಂಪೂರ್ಣ ಬೆಂಬಲ
ಇನ್ನು ಟಿವಿ9 ಅಭಿಯಾನಕ್ಕೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಾಹಿನಿಯ ಸಮಾಜಪರ ನಿಲುವನ್ನು ಶ್ಲಾಘಿಸಿದರು. ಇದು ಅತ್ಯಂತ ಸಮಯೋಚಿತ ಕಾರ್ಯಕ್ರಮವೆಂದು ತುಂಬು ಹೃದಯದಿಂದ ಹೊಗಳಿದರು. ಜೊತೆಗೆ, ಇಡೀ ದೇಶದಲ್ಲೇ ಸಾವಿರಾರು ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾದ ರಾಜ್ಯವೆಂದರೆ ಅದು ಕರ್ನಾಟಕ ಎಂದು ಸಂತಸ ವ್ಯಕ್ತಪಡಿಸಿದರು. ಈ ಜಾಲವನ್ನು ಬುಡಸಮೇತ ಕಿತ್ತುಹಾಕುವ ಕೆಲಸ ಮಾಡುತ್ತೇವೆ. ಯಾವುದೇ ಒತ್ತಡಕ್ಕೆ ಮಣಿಯದೆ ರಾಜ್ಯವನ್ನು ಮಾದಕ ವಸ್ತು ಮುಕ್ತ ಹಾಗೂ ಉತ್ತಮ ಸಮಾಜವಾಗಿ ರೂಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.