ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಸಂಗತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ. ಸುದ್ದಿಯ ಸಂಪೂರ್ಣ ವಿವರ ವೆಬ್ಸೈಟ್ನ ವಿವಿಧ ವಿಭಾಗಗಳಲ್ಲಿ ಲಭ್ಯವಿರುತ್ತವೆ. ಓದಲು ಮರೆಯದಿರಿ.
ವಿಧಾನಸೌಧದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಭಾಷಣ ಮಾಡಿದ್ದಾರೆ. ಈ ವೇಳೆ ಕರ್ನಾಟಕದಲ್ಲಿ BJP ಸರ್ಕಾರ 5 ವರ್ಷ ಗಟ್ಟಿಯಾಗಿ ಇರುತ್ತದೆ ಎಂದು ಹೇಳಿದ್ದಾರೆ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅವಧಿ ಪೂರೈಸುತ್ತದೆ.
ಮತ್ತೊಮ್ಮೆ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಅಮಿತ್ ಶಾ ಹೇಳಿದರು.
07:48 pm ಪಿಎಂ-ಕೇರ್ಸ್ ಫಂಡ್‌ನಲ್ಲಿ ಪಾರದರ್ಶಕತೆ ಇಲ್ಲ ಎನ್ನುವ ವಿಚಾರ ಈ ಮೊದಲಿನಿಂದಲೂ ಚರ್ಚೆ ಆಗುತ್ತಲೇ ಇದೆ. ಈ ವಿಚಾರಕ್ಕೆ ಸಂಬಂಧಿಸಿ 100 ಮಾಜಿ ಸರ್ಕಾರಿ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಶನಿವಾರ ಪತ್ರ ಬರೆದು, ಪಿಎಂ ಕೇರ್ಸ್ ಪಾರದರ್ಶಕತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
07:18 pm ಕೊರೊನಾ ವೈರಸ್ನಿಂದಾಗಿ ನಿಂತಿದ್ದ ರಷ್ಯಾ-ಭಾರತ ನಡುವಣ ವಿಮಾನ ಸಂಚಾರ ಜನವರಿ 27ರಿಂದ ಮತ್ತೆ ಆರಂಭಗೊಳ್ಳಲಿದೆ. ವಿಮಾನ ಸಂಚಾರಕ್ಕೆ ರಷ್ಯಾ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ, ಇದೇ ತಿಂಗಳಿಂದಲೇ ವಿಮಾನ ಸಂಚಾರ ಮತ್ತೆ ಆರಂಭಗೊಳ್ಳಲಿದೆ.
7:03 pm ಜಿಲ್ಲಾಧಿಕಾರಿ ಹಾಗೂ ನೂತನ ಸಚಿವ ನಿರಾಣಿ ನೇತೃತ್ವದಲ್ಲಿ ನಡೆದ ರೈತರ ಜೊತೆಗಿನ ಸಂಧಾನ ಸಭೆ ಯಶಸ್ವಿ ಆಗಿದೆ. ಹೀಗಾಗಿ, ನಾಳೆ ನಡೆಸಲು ಯೋಜಿಸಲಾಗಿದ್ದ ಅಮಿತ್ ಶಾ ಗೋ ಬ್ಯಾಕ್ ಅಭಿಯಾನವನ್ನು ರೈತರು ಹಿಂಪಡೆದಿದ್ದಾರೆ. ನಾಳೆ ಅಮಿತ್ ಶಾ ಬಾಗಲಕೋಟೆಗೆ ಭೇಟಿ ನೀಡಲಿದ್ದಾರೆ.
ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಶಿವಮೊಗ್ಗದಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಹೆಚ್‌ಎಎಲ್ ಏರ್‌ಪೋರ್ಟ್ ಹೊರಭಾಗದಲ್ಲಿ ಬಿಜೆಪಿ ಭವ್ಯ ಸ್ವಾಗತ ಕೋರಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಹೊರವಲಯದ ಬುಳ್ಳಾಪುರದಿಂದ ಹೆಲಿಪ್ಯಾಡ್‌ನಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಅಮಿತ್ ಶಾ ಜತೆ ಸಿಎಂ ಯಡಿಯೂರಪ್ಪ ಸಹ ಪ್ರಯಾಣ ಮಾಡಿದ್ದಾರೆ.
ಕೊರೊನಾ ವ್ಯಾಕ್ಸಿನ್ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಕೊರೊನಾ ವ್ಯಾಕ್ಸಿನ್ ರೈತರಿಗೆ ಅವಶ್ಯಕತೆಯಿಲ್ಲ. ವೈರಾಣು ಬಂದು ಹೋದ ಮೇಲೆ ವ್ಯಾಕ್ಸಿನ್ ಬಂದಿದೆ. ವ್ಯಾಕ್ಸಿನ್ ತಯಾರಕರಿಗೆ ಕೇಂದ್ರ ಸರ್ಕಾರ ಲಾಭ ಮಾಡುತ್ತಿದೆ. ಮೊದಲು ಪ್ರಧಾನಿ ನರೇಂದ್ರ ಮೋದಿ ಲಿಸಿಕೆ ಹಾಕಿಸಿಕೊಂಡು ತೋರಿಸಬೇಕಿತ್ತು. 80 ವರ್ಷ ವಯಸ್ಸಾಗಿರುವ ಯಡಿಯೂರಪ್ಪಗೆ ಲಿಸಿಕೆ ಅವಶ್ಯಕತೆಯಿದೆ. ಸಾರ್ವಜನಿಕರು ಈಗ ವ್ಯಾಕ್ಸಿನ್ ಹಾಕಿಸಿಕೊಂಡು ಪ್ರಯೋಜವೇನು ಎಂದು ಚಿಕ್ಕಬಳ್ಳಾಪುರ ಕಾರ್ಯನಿರತ ಪರ್ತಕರ್ತರ ಸಂಘದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ.
ಹೆಚ್ಎಎಲ್ ಏರ್ಪೋರ್ಟ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿರುವ ಹಿನ್ನಲೆಯಲ್ಲಿ ಅವರನ್ನು ಸ್ವಾಗತಿಸಲು ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಸಚಿವ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಆಗಮಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಭಿನ್ನಮತ ಸ್ಫೋಟ ವಿಚಾರವಾಗಿ ಮಾತನಾಡಿದ ನಿರಾಣಿ ಮನೆಯಲ್ಲಿ ಅಣ್ಣ ತಮ್ಮಂದಿರ ನಡುವೆ ಅಸಮಾಧಾನ ಇದ್ದಂತೆ ಇಲ್ಲೂ ಇದ್ದೆ ಇರುತ್ತದೆ. ಅಸಮಾಧಾನಗೊಂಡವರನ್ನು ವರಿಷ್ಠರು ಸಮಾಧಾನ ಪಡಿಸ್ತಾರೆ. ಹೌದಪ್ಪಗಳಿಗೆ ಸಚಿವ ಸ್ಥಾನವೆಂದು ಸಿದ್ದು ಸವದಿ ಆರೋಪ ಮಾಡಿದ್ದರ ಬಗ್ಗೆ ಮಾತಾನಾಡಿದ ನಿರಾಣಿ, ಹೌದಪ್ಪ, ಅಲ್ಲಪ್ಪ ತೆಗೆದುಕೊಂಡು ನಾನೇನು ಮಾಡಲಿ ಎಂದು ಶಾಸಕ ಸಿದ್ದು ಸವದಿಗೆ ನಿರಾಣಿ ಪರೋಕ್ಷವಾಗಿ ತಿರುಗೇಟು ನೀಡಿದರು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರವಾಗಿ ಅಮಿತ್ ಶಾ ಭೇಟಿ ಮಾಡಿಸಲಿ ಎಂದು ನಿರಾಣಿಗೆ, ಬಸವ ಜಯಮೃತ್ಯುಂಜಯಶ್ರೀಗಳ ಸವಾಲಿನ ಬಗ್ಗೆ ಮಾತಾನಾಡಿದ ಅವರು, ನವದೆಹಲಿಯಲ್ಲಿ ಸಮಯ ನಿಗದಿಪಡಿಸಿ ಅಮಿತ್ ಶಾ ಜತೆ ಶ್ರೀಗಳ ಚರ್ಚೆಗೆ ಅವಕಾಶ ಮಾಡಿಕೊಡುವೆ. ಶ್ರೀಗಳ ಸವಾಲು ಸ್ವೀಕರಿಸುವುದಿಲ್ಲ, ತಿರಸ್ಕರಿಸುವುದೂ ಇಲ್ಲ. ಸ್ವಾಮೀಜಿ ಪಾದಯಾತ್ರೆಗೆ ಯಾವುದೇ ತಡೆಯೊಡ್ಡುವುದಿಲ್ಲ ಎಂದು ನಿರಾಣಿ ಹೇಳಿದರು.
ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರಕಲಮಟ್ಟಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ನೂತನ ಸಚಿವ ಮುರುಗೇಶ್ ನಿರಾಣಿ ಅವರು ನಾಳೆ ನಡೆಯುವ ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು. ಈ ಸಂದರ್ಭದಲ್ಲಿ ಸಿ.ಡಿ.ಯ ಬಗ್ಗೆ ಉಲ್ಲೇಖ ಮಾಡಿದ ಮುರುಗೇಶ್ ನಿರಾಣಿ, ನಾಳೆ 5 ನಿಮಿಷದ ಸಿ.ಡಿ. ಬಿಡುಗಡೆ ಮಾಡುತ್ತೇವೆ; ಆದರೆ ಆ ಸಿ.ಡಿ.ಯಲ್ಲ. ಬದಲಿಗೆ ನಿರಾಣಿ ಸಮೂಹ ಸಂಸ್ಥೆಗಳ ಸಿ.ಡಿ. ಬಿಡುಗಡೆ ಮಾಡುತ್ತೇವೆ ಎಂದು ಗೊಂದಲಗಳಿಗೆ ತೆರೆ ಎಳೆದರು. ಆದರೆ ಶಾಸಕರು ಆರೋಪಿಸುತ್ತಿರುವ ಸಿ.ಡಿ.ಬಗ್ಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಹೊರವಲಯದ ಬುಳ್ಳಾಪುರ ಹೆಲಿಪ್ಯಾಡ್‌ನಿಂದ ಬೆಂಗಳೂರಿನತ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ ತೆರಳಿದ್ದು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಮಿತ್ ಶಾ ಅವರಿಗೆ ಸಾಥ್ ನೀಡಿದ್ದಾರೆ.
ಇಂದು ಸಂಜೆ ವಿಜಯಪುರ ತಾಲೂಕಿನ ಅರಕೇರಿ ಗ್ರಾಮದ ಬಳಿಯಿರುವ ಐಆರ್ಬಿ ಬಟಾಲಿಯನ್ ಕಚೇರಿಯನ್ನು ಕೇಂದ್ರ ಗೃಹ ಸಚಿವ ಅಮೀತ್ ಶಾ ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ಸಂಜೆ 5:30 ರ ಬಳಿಕ ಈ ಕಾರ್ಯಕ್ರಮ ನಡೆಯಲಿದ್ದು, 9.62 ಕೋಟಿ ರೂಪಾಯಿ ವೆಚ್ಚದಲ್ಲಿ, 100 ಎಕರೆ ವಿಸ್ತಾರದಲ್ಲಿ ಈ ಕಟ್ಟಡ ನಿರ್ಮಾಣವಾಗಲಿದೆ. 721 ಮೀಸಲು ಪಡೆ ಕಾನ್ಸಸ್ಟೇಬಲ್ಸ್ ಗಳು ಹಾಗೂ ಕಮಾಂಡೆಂಟ್ ಅಧಿಕಾರಿಗಳಿರುವ ಬಟಾಲಿಯನ್ಗೆ ಅಮಿತ್ ಶಾ ಇಂದು ಚಾಲನೆ ನೀಡಲಿದ್ದಾರೆ.
ಭಾರತದ ಯಶಸ್ಸಿನ ಹಿಂದೆ ಮೋದಿ ನೇತೃತ್ವ ಇದೆ. ಕೊರೊನಾ ವ್ಯಾಕ್ಸಿನ್ ವಿಚಾರದಲ್ಲೂ ವಿಪಕ್ಷಗಳು ರಾಜಕೀಯ ಮಾಡುತ್ತಿವೆ.ಈ ರೀತಿ ರಾಜಕೀಯ ಮಾಡುವವರನ್ನು ಸಹಿಸಲ್ಲ. ದೇಶದ ಜನತೆಗೆ ಮೋದಿ ನಾಯಕತ್ವದ ಬಗ್ಗೆ ಗೊತ್ತಿದೆ ಎಂದು ಭದ್ರಾವತಿಯಲ್ಲಿ ಲಸಿಕೆಯನ್ನು ಟೀಕಿಸುವವರ ವಿರುದ್ಧ ಗೃಹ ಸಚಿವ ಅಮಿತ್ ಶಾ ಬೇಸರ ವ್ಯಕ್ತಪಡಿಸಿದ್ದಾರೆ.
ಕೊರೊನಾ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸಿದ್ದೇವೆ.ವಿಶ್ವದಲ್ಲೇ ಅತ್ಯುತ್ತಮವಾಗಿ ಕೊರೊನಾ ನಿಭಾಯಿಸಿದ್ದೇವೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಕೊರೊನಾ ನಿಯಂತ್ರಣವಾಗಿದ್ದು, ಕೊರೊನಾ ವಿರುದ್ಧ ಹೋರಾಟದಲ್ಲಿ ಯಶಸ್ವಿ ಕಾರ್ಯ ನಡೆಸಿದ್ದೇವೆ. ಮೋದಿ ದೂರದೃಷ್ಟಿ ಕಾರಣದಿಂದ ಭಾರತ ಕೊರೊನಾ ವಿಚಾರದಲ್ಲಿ ಯಶಸ್ಸು ಕಂಡಿದ್ದೇವೆ. ಕೊರೊನಾ ಪೀಡಿತರು ಹೆಚ್ಚು ಸಂಖ್ಯೆಯಲ್ಲಿ ಗುಣಮುಖರಾಗುತ್ತಾರೆ. ವಿಶ್ವದ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮದೇ ಮೇಲುಗೈ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ಹೊರವಲಯದ ಬುಳ್ಳಾಪುರದಲ್ಲಿ ಶಿಲಾನ್ಯಾಸ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದು, ಆರ್‌ಎಎಫ್ ಘಟಕಕ್ಕೆ ಅನುಮತಿ ನೀಡಿದರೆ ಜಾಗ ನೀಡುತ್ತೇವೆ ಎಂದು ನಾನು ಗೃಹ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಿಎಂ ಬಿಎಸ್‌ವೈ ಪತ್ರ ಬರೆದಿದ್ದರು ಎಂದು ಹೇಳಿದರು.
ಬಿಎಸ್‌ವೈ ಇಂಗ್ಲಿಷ್ನಲ್ಲಿ ಮಾತನಾಡಿದ್ದು, ಭದ್ರಾವತಿಯಲ್ಲಿ ಎಆರ್ಎಫ್ ಆಕ್ಷನ್ ಪೋರ್ಸ್ ಕೇಂದ್ರ ಆರಂಭವಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಸಂತಸದ ವಿಚಾರ. ದೇಶಕ್ಕೆ ಸರ್ದಾರ್ ಪಟೇಲ್ ನಂತರ ಅಮಿತ್ ಶಾ ದೇಶಕ್ಕೆ ಗೃಹ ಮಂತ್ರಿಯಾಗಿರುವುದು ದೇಶಕ್ಕೆ ಒಳ್ಳೆಯದಾಗಿದೆ ಎಂದುಮ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಭದ್ರಾವತಿಯ ಬುಳ್ಳಾಪುರ ಬಳಿ ಮಿಲ್ಟ್ರಿ ಕ್ಯಾಂಪ್‌ನ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದು,’ಭಾರತ್ ಮಾತಾ ಕೀ ಜೈ’ ಎಂದು ಅಮಿತ್ ಶಾ ಜೈಕಾರ ಕೂಗಿಸಿದ್ದಾರೆ. ನಂತರ ಸಮಾರಂಭದಲ್ಲಿ ಗೃಹ ಸಚಿವ ನಿಮ್ಮ ಧ್ವನಿ ದಿಲ್ಲಿಯಲ್ಲಿರುವ ಮೋದಿಗೆ ತಲುಪಬೇಕು ಎಂದು ಹೇಳಿದ್ದಾರೆ.
ಸರ್ಕಾರಿ ಜಮೀನುಗಳನ್ನು ರಿಯಾಯಿತಿ ದರದಲ್ಲಿ ಗುತ್ತಿಗೆಗೆ ಪಡೆದು ಆರ್‌ಟಿಐ ಕಾಯ್ದೆಯಡಿ ಮಾಹಿತಿ ನೀಡಲು ನಿರಾಕರಿಸುತ್ತಿದ್ದ ಸಂಸ್ಥೆಗಳಿಗೆ ಹೈಕೋರ್ಟ್ನಲ್ಲಿ ತೀವ್ರ ಹಿನ್ನಡೆಯಾಗಿದೆ. ರಿಯಾಯಿತಿ ದರದಲ್ಲಿ ಭೂಮಿ ಗುತ್ತಿಗೆ ಪಡೆದಿರುವ ಬೆಂಗಳೂರು ಟರ್ಫ್ ಕ್ಲಬ್, ಲೇಡಿಸ್ ಕ್ಲಬ್, ಮೈಸೂರು ರೇಸ್ ಕ್ಲಬ್, ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ ಸಂಸ್ಥೆಗಳು ಸಾರ್ವಜನಿಕ ಪ್ರಾಧಿಕಾರಗಳು ಹೈಕೋರ್ಟ್ ಮಾಹಿತಿ ಆಯೋಗದ ಆದೇಶ ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.
ಜನರಲ್ ತಿಮ್ಮಯ್ಯ ಹುಟ್ಟಿದ ಮನೆ ಸನ್ನಿ ಸೈಡ್‌ನಲ್ಲಿ ಅಪೂರ್ವ ಮ್ಯೂಸಿಯಂ ಉದ್ಘಾಟನೆ ಹಿನ್ನೆಲೆಯಲ್ಲಿ ಫೆಬ್ರವರಿ 6 ರಂದು ಕೊಡಗು ಜಿಲ್ಲೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಭೇಟಿ ನೀಡಲಿದ್ದಾರೆ.
ಮೂರು ಕೃಷಿ ಕಾನೂನುಗಳ ಮೇಲಿನ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ಪರಸ್ಪರ ಮಾತುಕತೆ ನಡೆಸಿ ನಿರ್ಧಾರಕ್ಕೆ ಬರಲು ಸುಪ್ರೀಂ ಕೋರ್ಟ್ ರಚಿಸಿದ ಸಮಿತಿಯ ಉಳಿದ ಮೂವರು ಸದಸ್ಯರನ್ನು ತೆಗೆದು ಈ ಕೆಲಸವನ್ನು ಸರಿಯಾಗಿ ನಿರ್ವಹಿಸಬಲ್ಲ ಇತರರನ್ನು ನೇಮಕ ಮಾಡಿ ಎಂದು ರೈತ ಸಂಘಟನೆಯು ಶನಿವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.
ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ಹಿನ್ನೆಲೆಯಲ್ಲಿ ಕೆ.ಕೆ. ಗೆಸ್ಟ್ ಹೌಸ್‌ಗೆ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಸಚಿವ ಅರುಣ್ ಸಿಂಗ್ ಆಗಮಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಬಳಿ ಇರುವ ಮಿಲ್ಟ್ರಿ ಕ್ಯಾಂಪ್‌ನಲ್ಲಿ ಆರ್‌ಎಎಫ್ ಘಟಕಕ್ಕೆ ಕೇಂದ್ರ ಗೃಹ ಇಲಾಖೆ ಸಚಿವ ಅಮಿತ್ ಶಾ ಭೂಮಿ ಪುಜೆ ನೆರವೇರಿಸುತ್ತಿದ್ದಾರೆ. 50 ಎಕರೆ ಪ್ರದೇಶದಲ್ಲಿ ಆರ್‌ಎಎಫ್ ಘಟಕ ಆರಂಭಗೊಳ್ಳಲಿದ್ದು,1,500 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಘಟಕ ಸ್ಥಾಪನೆಯಾಗಲಿದೆ.ಕರ್ನಾಟಕ ಸೇರಿ 4 ರಾಜ್ಯಗಳ ವ್ಯಾಪ್ತಿಗೊಳಪಡುವ ಆರ್‌ಎಎಫ್ ಘಟಕಕ್ಕೆ ಅಮಿತ್ ಶಾ ಇಂಸು ಶಂಕುಸ್ಥಾಪನೆ ಮಾಡುತ್ತಿದ್ದಾರೆ.
ಭದ್ರಾವತಿಯ ವಿಐಎಸ್ಎಲ್ ಹೆಲಿಪ್ಯಾಡ್ಗೆ ಬಂದಿಳಿದ ಗೃಹ ಸಚಿವ ಅಮಿತ್ ಶಾ ಅವರು ಕೆಲವೇ ಕ್ಷಣಗಳಲ್ಲಿ ದೇಶದ 97ನೇ ಆರ್ಎಎಫ್ನ ಬಟಾಲಿಯನ್ಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಭದ್ರಾವತಿ ತಾಲೂಕಿನ ಬುಳ್ಳಾಪುರದ ಮಿಲ್ಟ್ರಿ ಕ್ಯಾಂಪ್‌ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ವೇದಿಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗಮಿಸಿದ್ದಾರೆ.
ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ವಿತರಣೆಗೆ ಚಾಲನೆ ನೀಡಿದ್ದು, ಅರಿವಳಿಕೆ ತಜ್ಞ ಗಣಪತಿ ಹೆಗ್ಡೆಗೆ ಮೊದಲ ಲಸಿಕೆ ನೀಡಲಾಗಿದ್ದು, ಬಸವರಾಜ್, ರಮೇಶ್, ಗ್ರೂಪ್ ಡಿ ನೌಕರ ನಾಗರಾಜ್ಗೆ ಲಸಿಕೆ ನೀಡಲಾಗಿದೆ.ಈ ಸಂದರ್ಭದಲ್ಲಿ ಡಿಸಿ ಜಿ. ಜಗದೀಶ್, ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್ ಉಪಸ್ಥಿತರಿದ್ದರು.
ಶಿವಮೊಗ್ಗ ಜಿಲ್ಲೆ ಭದ್ರಾವತಿ ಹೊರವಲಯದ ಬುಳ್ಳಾಪುರಕ್ಕೆ ಅಮಿತ್ ಶಾ ಆಗಮಿಸಿದ್ದು, ಬೆಂಗಳೂರಿನ ಹೆಚ್‌ಎಎಲ್‌ನಿಂದ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಬಳೆಸಿದ್ದ ಅಮಿತ್ ಶಾ ಗೆ ಸಿಎಂ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಪ್ರಹ್ಲಾದ್ ಜೋಶಿ, ಡಿಸಿಎಂ ಕಾರಜೋಳ, ಈಶ್ವರಪ್ಪ, ಸಂಸದ ರಾಘವೇಂದ್ರ, ಡಿಸಿಎಂ ಅಶ್ವಥ್ ನಾರಾಯಣ ಅವರು ಸಾಥ್ ನೀಡಿದ್ದಾರೆ.
ಗೋಹತ್ಯೆ ನಿಷೇಧ ಸುಗ್ರೀವಾಜ್ಞೆ ಜಾರಿಗೆ ಮುಹೂರ್ತ ಫಿಕ್ಸ್ ಮಾಡಿದ್ದು, ಜನವರಿ 18 ಸೋಮವಾರದಿಂದ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಆ ಮೂಲಕ
ಜಾನುವಾರು ಹತ್ಯೆ ಪ್ರತಿಬಂಧಕ-ಸಂರಕ್ಷಣಾ ಕಾಯ್ದೆ ಜಾರಿಗೆ ತರಲು ರಾಜ್ಯ ಸರ್ಕಾರ ಅಧಿಸೂಚನೆ ನೀಡಿದೆ.
ನಾರ್ವೆಯಲ್ಲಿ ಕೊರೊನಾ ಲಸಿಕೆ ಪಡೆದ 23 ಮಂದಿ ಮೃತಪಟ್ಟಿದ್ದು, ಇನ್ನೂ ಹಲವರು ಲಸಿಕೆ ತೆಗೆದುಕೊಂಡ ಕೆಲವೇ ಹೊತ್ತಲ್ಲಿ ತೀವ್ರ ಅಸ್ವಸ್ಥರಾಗಿದ್ದಾರೆ. ಇಷ್ಟು ಜೀವಗಳು ಹೋದ ಬಳಿಕ ಈಗ ಹೇಳಿಕೆ ಬಿಡುಗಡೆ ಮಾಡಿರುವ ನಾರ್ವೆ ಆರೋಗ್ಯ ಇಲಾಖೆ, ವೃದ್ಧರಿಗೆ ಮತ್ತು ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಕೊರೊನಾ ಲಸಿಕೆ ಒಳ್ಳೆಯದಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲ, ಈ ಸಾವಿನ ಬಗ್ಗೆ ಸೂಕ್ಷ್ಮವಾಗಿ ತನಿಖೆ ನಡೆಸುವಂತೆ ನಾರ್ವೆ ಸರ್ಕಾರ ಆದೇಶ ಹೊರಡಿಸಿದೆ.
ದೆಹಲಿಯ ಆರ್ಎಂಎಲ್ ಆಸ್ಪತ್ರೆಯಲ್ಲಿ ಇಂದು ವೈದ್ಯಕೀಯ ವ್ಯವಸ್ಥಾಪಕ ಡಾ.ಎ.ಕೆ.ಸಿಂಗ್ ರಾಣಾ ಅವರಿಗೆ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ನೀಡಲಾಯಿತು.
ಸರ್ಕಾರ ರಚನೆಗೆ ನೆರವಾಗಲು ಯೋಗೇಶ್ವರ್ ಅವರು 9 ಕೋಟಿ ರೂಪಾಯಿ ಸಾಲ ಮಾಡಿದ್ದರು ಎಂಬ ಸಚಿವ ರಮೇಶ್ ಜಾರಕಿಹೊಳಿ ಅವರ ಹೇಳಿಕೆ ಬಗ್ಗೆ ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.
ಅನೈತಿಕ ಸರ್ಕಾರ ಎಂಬ ಸಿದ್ದರಾಮಯ್ಯ ಹೇಳಿಕೆಗೆ ರಾಮುಲು ತಿರುಗೇಟು ನೀಡಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೈತಿಕತೆಯೇ ಇಲ್ಲ. ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ಕಾಂಗ್ರೆಸ್ ಸೇರಿದವರು. ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಸ್ಥಾನ ತಪ್ಪಿಸಿದವರು ಇವರು. ಕಾಂಗ್ರೆಸ್ ಪಕ್ಷ ಈಗ 3 ಬಾಗಿಲಾಗಿದೆ. ಮೊದಲು ಅವರ ಮನೆಯಾದ ಕಾಂಗ್ರೆಸ್ ಪಕ್ಷವನ್ನು ಸರಿಪಡಿಸಲಿ. ಅಧಿಕಾರ ಕಳೆದುಕೊಂಡು ಸಿದ್ದರಾಮಯ್ಯಗೆ ಮತಿಭ್ರಮಣೆಯಾಗಿದೆ. ಪ್ರಚಾರಕ್ಕಾಗಿ ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡುತ್ತಾರೆ. ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆಯುವುದು ಒಳಿತು ಎಂದು ಚಿತ್ರದುರ್ಗದಲ್ಲಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಸಂಜೆ 5.30ಕ್ಕೆ ಭದ್ರಾವತಿಯಿಂದ ಹೆಚ್ಎಎಲ್ ಏರ್ಪೋರ್ಟ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಪಾಸ್ಸಾಗಲಿದ್ದು, ವಿಮಾನ ನಿಲ್ದಾಣದ ಹೊರಭಾಗದಲ್ಲಿ ಅಮಿತ್ ಶಾ ಗೆ ರಾಜ್ಯ ಬಿಜೆಪಿಯಿಂದ ವೇದಿಕೆಯಲ್ಲಿ ಸನ್ಮಾನ, ವೀರಗಾಸೆ, ಕೇರಳ ವಾದ್ಯದೊಂದಿಗೆ ಸ್ವಾಗತಕ್ಕೆ ಸಿದ್ಧತೆ ನಡೆಸಲಾಗಿದೆ. ಹೆಚ್ಎಎಲ್ ನಿಂದ ವಿಧಾನಸೌಧಕ್ಕೆ ತೆರಳುವ ವೇಳೆ ದೊಮ್ಮಲೂರು, ಟ್ರಿನಿಟಿ ಸರ್ಕಲ್, ಅನಿಲ್ ಕುಂಬ್ಳೆ ಸರ್ಕಲ್ನಲ್ಲಿ ಕಾರ್ಯಕರ್ತರಿಂದ ಸ್ವಾಗತಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬಿಜೆಪಿ ಸರ್ಕಾರ ರಚನೆಯಲ್ಲಿ ಮಠಾಧೀಶರ ಪಾತ್ರ ದೊಡ್ಡದಿದೆ. ಅದರಲ್ಲೂ ಪಂಚಮಸಾಲಿ ಮಠಾಧೀಶರ ಪಾತ್ರ ಮಹತ್ವದ್ದಾಗಿದ್ದು, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಲು ಸಿಎಂ ಯಡಿಯೂರಪ್ಪರಿಂದ ಮಾತ್ರ ಸಾಧ್ಯ. ಮುಂದೆ ಯಾರೇ ಅಧಿಕಾರಕ್ಕೆ ಬಂದರೂ ಮೀಸಲಾತಿ ಕೊಡಲ್ಲ. ಬಿಎಸ್ವೈಗಾಗಿ ನಮ್ಮ ಜನ ತ್ಯಾಗಮಾಡಿದ್ದಾರೆ, ಮತ ಹಾಕಿದ್ದಾರೆ. ಬಿಎಸ್‌ವೈ ಸಚಿವಸ್ಥಾನ, ನಿಗಮ ಮಂಡಳಿ ಸ್ಥಾನ ಕೊಟ್ಟರೆ ಆಗಲ್ಲ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಬೇಕು ಎಂದು ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಜಯಮೃತ್ಯುಂಜಯಶ್ರೀ ಹೇಳಿಕೆ ನೀಡಿದ್ದಾರೆ.
ಲಸಿಕೆ ತಗೊಂಡ ಬಳಿಕ ತಲೆ ಚಕ್ಕರ್ ಬಂತು, ನಂತರ ತಲೆನೋವು ಆರಂಭವಾಯಿತು. ಒಂದು ಘಂಟೆ ಬಳಿಕ ಸ್ವಲ್ಪ ನಾರ್ಮಲ್ ಆದೆ ಎಂದು ದಾಸರಹಳ್ಳಿಯ ಮಲ್ಲಸಂದ್ರ ಅರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಿಸಿಕೊಂಡಿದ್ದ ಬಿಬಿಎಂಪಿ ಸಂಪರ್ಕ ಕಾರ್ಯಕರ್ತೆ ನಂದಿನಿ ಹೇಳಿದ್ದಾರೆ.
ರೈತರ ಮನೆ ಹಾಳಾಗುತ್ತಿದೆ. ಇವರಿಗೇನು ಬುದ್ದಿ ಇದಿಯಾ? ರೈತರ ಮನೆ ಹಾಳು ಮಾಡಲು ಕೃಷಿ ಕಾಯ್ದೆಗಳನ್ನ ಜಾರಿ ಮಾಡಲಾಗಿದೆ. ಇದು ರೈತ ವಿರೋಧಿ ಸರ್ಕಾರ, ಇದಕ್ಕೆ ರೈತರ ಸಂಪೂರ್ಣ ವಿರೋಧವಿದೆ. ಬಿಜೆಪಿ ಅಂದರೆ ಮೋದಿ ಅಭಿಮಾನಿ ಸಂಘ ಅಷ್ಟೇ, ಕಾಯ್ದೆ ಜಾರಿ ಮಾಡಿದರೆ ಈ ದೇಶದಲ್ಲಿ ಸಿವಿಲ್ ವಾರ್ ಶುರುವಾಗುತ್ತದೆ ಎಂದು ಕೋಲಾರದಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರ ಶೇಖರ್ ವಾಗ್ದಾಳಿ ನಡೆಸಿದ್ದಾರೆ.
ನಾನು ಸಿಎಂ ಆಗಿದ್ದಾಗ ಇಂಗ್ಲೀಷ್ ಮತ್ತು ಕನ್ನಡ ಶಾಲೆಗಳಿಗಾಗಿ ಪಬ್ಲಿಕ್ ಶಾಲೆಗಳನ್ನ ಮಾಡಿದ್ದೆ. ಆದರೆ ಇಂದು ಶಾಲೆ ಪೀಸ್ ಕಟ್ಟಿಲ್ಲ ಎಂದು ಪೋಷಕರು ಕಣ್ಣೀರೂ ಹಾಕಿದ್ರು ಸರ್ಕಾರ ಅದಕ್ಕೆ ಗಮನ ಕೊಡುತ್ತಿಲ್ಲ. ಈಗಾಗಲೆ 2 ಭಾರಿ ಮುಖ್ಯಮಂತ್ರಿಯಾಗಿದ್ದೀನಿ. ವಿಧಾನಸೌಧದ ಸಚಿವ ಸಂಪುಟ ಸಭಾಂಗಣದಲ್ಲಿ ಈಗಾಗಲೆ ನನ್ನ ಪೋಟೋ ಹಾಕಿದ್ದಾರೆ. ನನಗೆ ಮತ್ತೆ ಅಧಿಕಾರ ಬೇಕಿಲ್ಲ. ಮನೆ, ಆರೋಗ್ಯ, ಶಿಕ್ಷಣ, ಬೆಳೆಗೆ ಬೆಂಬಲ ಬೆಲೆ, ಯುವಕರಿಗೆ ಉದ್ಯೋಗ ಈ ಐದು ಕಾರ್ಯಕ್ರಮಗಳನ್ನಿಟ್ಟುಕೊಂಡು ನಾನು ರಾಜ್ಯದ ಜನರ ಮುಂದೆ ಹೊರಟ್ಟಿದ್ದೇನೆ ಎಂದು
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಹೆಚ್ಎಎಲ್ ವಿಮಾನ ನಿಲ್ದಾಣದಿಂದ ಕೇಂದ್ರ ಸಚಿವ ಅಮಿತ್ ಶಾ ಹೆಲಿಕಾಪ್ಟರ್ ಮೂಲಕ ಭದ್ರಾವತಿಗೆ ತೆರಳಿದ್ದು, ಅಮಿತ್ ಶಾ ಜೊತೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೂಡ ಭದ್ರಾವತಿಗೆ ತೆರಳಿದ್ದಾರೆ.
ಫ್ಯಾಕ್ಟ್ ಶೀಟ್ನಲ್ಲಿ ಲಸಿಕೆ ಬಗೆಗಿನ ಮಾಹಿತಿ ಇರಲಿದ್ದು, ಕೊವ್ಯಾಕ್ಸಿನ್ ಲಸಿಕೆ ಪಡೆಯುವವರಿಗೆ ಫ್ಯಾಕ್ಟ್ ಶೀಟ್ ನೀಡಲಾಗುತ್ತದೆ. ಕೋವ್ಯಾಕ್ಸಿನ್ ಲಸಿಕೆಯನ್ನ ತುರ್ತು ಬಳಕೆಗೆ ಮಾತ್ರ ಅನುಮತಿ ನೀಡಲಾಗಿದ್ದು, ಲಸಿಕೆಗೆ ಕ್ಲಿನಿಕಲ್ ಟ್ರಯಲ್ ಮೋಡ್ನಲ್ಲಿ ಮಾತ್ರ ಅನುಮತಿ ಇದ್ದು. 1 ಮತ್ತು 2 ನೇ ಹಂತದ ಪ್ರಯೋಗದಲ್ಲಿ ಕೊರೊನಾ ವಿರುದ್ಧದ ಪ್ರತಿಕಾಯಗಳನ್ನ ಸೃಷ್ಟಿಸಲು ಫ್ಯಾಕ್ಟ್ ಶೀಟ್ ಸಹಾಯ ಮಾಡಲಿದೆ. ಆದರೆ ಕೋವ್ಯಾಕ್ಸಿನ್ ಪರಿಣಾಮಕಾರಿತನದ ಡಾಟಾ 3 ನೇ ಹಂತದ ಪ್ರಯೋಗದ ಬಳಿಕ ಲಭ್ಯ.
ಹೆಚ್ಎಎಲ್ ಏರ್ಪೋರ್ಟ್ನಲ್ಲಿ ಅಮಿತ್ ಶಾ ಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ಕೇಂದ್ರ ಗೃಹ ಸಚಿವರನ್ನು ವೆಂಕಟೇಶ್ವರ ಸ್ವಾಮಿ ಫೋಟೋ ನೀಡಿ ಕೇಂದ್ರ ಸಚಿವ ಜೋಶಿ ಬರಮಾಡಿಕೊಂಡಿದ್ದು, ಪುಸ್ತಕ ನೀಡಿ ಸಿ.ಟಿ. ರವಿ, ಶಾಲು ಹೊದಿಸಿ ಬಿಜೆಪಿ ಸಹ ಉಸ್ತುವಾರಿ ಸಚಿವ ಅರುಣಾ ಸ್ವಾಗತಿಸಿದ್ದಾರೆ.
ನ್ಯೂಜಿಲ್ಯಾಂಡ್ ಸಂಪೂರ್ಣ ಕೊರೊನಾ ವೈರಸ್ನಿಂದ ಮುಕ್ತವಾಗಿದ್ದು,ಕೊರೊನಾದ ಎಲ್ಲಾ ನಿರ್ಬಂಧಗಳನ್ನು ನ್ಯೂಜಿಲ್ಯಾಂಡ್ ತೆರವುಗೊಳಿಸಿದೆ.
ಗುಲಾಬಿ ಹೂ ನೀಡಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೇಂದ್ರ ಸಚಿವ ಅಮಿತ್ ಶಾರನ್ನು ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದಾರೆ.ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಡಿ.ವಿ.ಸದಾನಂದ ಗೌಡ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಬಿಜೆಪಿ ಸಹ ಉಸ್ತುವಾರಿ ಡಿ.ಕೆ. ಅರುಣಾ, ಸಚಿವರಾದ ಸುರೇಶ್ ಕುಮಾರ್, ವಿ. ಸೋಮಣ್ಣ, ಅರವಿಂದ ಲಿಂಬಾವಳಿ, ಎಸ್.ಟಿ. ಸೋಮಶೇಖರ್, ಅರ್. ಅಶೋಕ್, ಭೈರತಿ ಬಸವರಾಜ, ಕೆ. ಗೋಪಾಲಯ್ಯ, ಸಂಸದ ಪಿ.ಸಿ. ಮೋಹನ್, ಕೆ.ಸಿ. ರಾಮಮೂರ್ತಿ, ರಾಜೀವ್ ಚಂದ್ರಶೇಖರ್, ಡಿಜಿಪಿ ಪ್ರವೀಣ್ ಸೂದ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹಾಗೂ ಗೃಹ ಇಲಾಖೆ ಎಸಿಎಸ್ ರಜನೀಶ್ ಗೋಯೆಲ್ ಕೂಡ ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ನಾಳೆ ನಡೆಯಲಿರುವ ಬಿಜೆಪಿ ಜನಸೇವಕ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದು, ಸಮಾವೇಶದಲ್ಲಿ 3 ಲಕ್ಷ ಕಾರ್ಯಕರ್ತರು ಭಾಗಿ ಆಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಮಾವೇಶ ರದ್ದುಗೊಳಿಸುವಂತೆ ಆಗ್ರಹಿಸಿ ಡಿಸಿ ಕಚೇರಿ ಎದುರು ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಕಾರ್ಯಕ್ರಮ ರದ್ದುಗೊಳಿಸಿ ಇಲ್ಲವಾದರೆ ಕೊರೊನಾ ಮಾರ್ಗಸೂಚಿ ಬದಲಿಸುವಂತೆ ಆಗ್ರಹಿಸಿದ್ದಾರೆ. ಕಾರ್ಯಕ್ರಮ ನಡೆಸಿದರೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೇರಿ ಅಮಿತ್ ಶಾ ವಿರುದ್ಧ ಕೂಡ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಅಮಿತ್ ಶಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ವಿಧಾನಸೌಧ, ವಿಕಾಸಸೌಧ ಸಿಬ್ಬಂದಿಗೆ ಅರ್ಧ ದಿನದ ರಜೆ ಸೂಚಿಸಲಾಗಿದ್ದು, ಈ ನಿಟ್ಟಿನಲ್ಲಿ ಮಧ್ಯಾಹ್ನ 1.30ಕ್ಕೆ ಸಿಬ್ಬಂದಿಗಳು ಕೆಲಸ ಮುಗಿಸಿ ಮನೆಗೆ ತೆರಳಿದ್ದಾರೆ. ಕೇವಲ ಪೊಲೀಸ್ ಇಲಾಖೆ ಸಿಬ್ಬಂದಿಗಳು, ಪೊಲೀಸ್ ಹಿರಿಯ ಅಧಿಕಾರಿಗಳು ಮಾತ್ರ ಉಪಸ್ಥಿತರಿದ್ದು, ವಿಧಾನಸೌಧ ಸುತ್ತಮುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ವದಂತಿಗಳಿಗೆ ಕಿವಿ ಕೊಡಬೇಡಿ ಲಸಿಕೆಗಳು ಸುರಕ್ಷೀತವಾಗಿದೆ ಎಂದು ಭಾರತೀಯ ವಿಜ್ಞಾನಿಗಳೇ ಹೇಳಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯಿಂದ ಗೃಹ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆ ಅಮಿತ್ ಶಾರನ್ನು ಸ್ವಾಗತಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು,ನಂತರ ಅಮಿತ್ ಶಾ ಜೊತೆಗೆ ಬಿಎಸ್‌ವೈ ಭದ್ರಾವತಿಗೆ ತೆರಳಲಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಈವರೆಗೆ 44 ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ ಮಾಹಿತಿ ನೀಡಿದ್ದಾರೆ.
ತುಮಕೂರು ಜಿಲ್ಲಾದ್ಯಂತ ಇಂದು 319 ಜನರಿಗೆ ಲಸಿಕೆ ವಿತರಣೆ ಮಾಡಲಾಗಿದ್ದು, ಧಾರವಾಡ ಜಿಲ್ಲೆಯಲ್ಲಿ ಇದುವರೆಗೂ 82 ಚಿತ್ರದುರ್ಗ ಜಿಲ್ಲೆಯಲ್ಲಿ ಈವರೆಗೆ 173 ಜನರಿಗೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಈವರೆಗೂ 57 ಜನರಿಗೆ . ಕಲಬುರಗಿ ಜಿಲ್ಲೆಯಲ್ಲಿ 1.30 ರವರಗೆ ಒಟ್ಟು 90 ಜನರಿಗೆ ಲಸಿಕೆ ಹಾಕಲಾಗಿದೆ. ಇನ್ನು ರಾಮನಗರ ಜಿಲ್ಲೆಯಲ್ಲಿ 8 ಕೇಂದ್ರಗಳಲ್ಲಿ 136 ಜನರಿಗೆ ಲಸಿಕೆ ಹಾಕಲಾಗಿದೆ.
ಭಾರತದಲ್ಲಿ ಕೊವಿಶೀಲ್ಡ್ ಲಸಿಕೆ ಅಭಿವೃದ್ಧಿ ಪಡಿಸಿರುವ ಸಿರಮ್ ಇನ್ಸ್ಟಿಟ್ಯೂಟ್ನ ಸಿಇಓ ಆದಾರ್ ಪೂನಾವಾಲ ಇಂದು ಕೊವಿಶೀಲ್ಡ್ ಲಸಿಕೆ ಪಡೆದಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿನ 8 ಕೇಂದ್ರಗಳಿಂದ 159 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಡಿಹೆಚ್ಒ ಡಾ. ಮಂಚೇಗೌಡ ಮಾಹಿತಿ ನೀಡಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ 8 ಕೇಂದ್ರದಲ್ಲಿ 65 ಜನರಿಗೆ ಲಸಿಕೆ ನೀಡಲಾಗಿದ್ದು, ಕೋಲಾರ ಜಿಲ್ಲೆಯಲ್ಲಿ ಈವರೆಗೆ 62 ಜನರಿಗೆ, ಬಳ್ಳಾರಿ ಜಿಲ್ಲೆಯಲ್ಲಿ ಇದುವರೆಗೆ 126 ಜನವರಿ ಲಸಿಕೆ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಗದಗ ಜಿಲ್ಲೆಯ 7 ಕೇಂದ್ರಗಳಲ್ಲಿ ಇಲ್ಲಿಯವರೆಗೆ 30 ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಟಿವಿ9ಗೆ ಜಿಲ್ಲಾ ಆರ್ಸಿಹೆಚ್ಒ ಡಾ. ಗೊಜನೂರ ಮಾಹಿತಿ ನೀಡಿದ್ದಾರೆ.
ಲಸಿಕೆ ಪಡೆಯುವುದಕ್ಕೆ ಡಿ ಗ್ರೂಪ್ ನೌಕರರು ಬೇಕು, ಆದರೆ ನಮಗೆ ಸಂಬಳವನ್ನು ಮಾತ್ರ ಹೆಚ್ಚಳ ಮಾಡಿಲ್ಲ.ಹಲವು ವರ್ಷಗಳಿಂದ ನಾವು ಕೆಲಸ ಮಾಡುತ್ತಿದ್ದೇವೆ. ಕೋವಿಡ್ ಬಗ್ಗೆ ಕಾಳಜಿ ವಹಿಸುವ ಸರ್ಕಾರ ನಮ್ಮ ಸಂಬಳ ಹೆಚ್ಚಿಸುವ ಬಗ್ಗೆ ಯೋಚನೆ ಮಾಡಬೇಕು ಎಂದು ಮೊದಲನೇ ಹಂತದಲ್ಲಿ ವ್ಯಾಕ್ಸಿನ್ ಪಡೆದ ಡಿ.ದರ್ಜೆ ನೌಕರರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ ನಗರ ಆರೋಗ್ಯ ಕೇಂದ್ರದಲ್ಲಿ ಮೊದಲು ಲಸಿಕೆ ಹಾಕಿಸಿಕೊಂಡ ಕಪಿಲ್ ಗಂಜಿಹಾಳ ಪ್ರತಿಕ್ರಿಯೆ ನೀಡಿದ್ದು, ಇಂಜೆಕ್ಷನ್ ಮಾಡುವಾಗ ಆಗಿರಬಹುದು, ಮಾಡಿದ ನಂತರ ಆಗಿರಬಹುದು ಯಾವುದೇ ತೊಂದರೆ ಆಗಲಿಲ್ಲ. ನಾನು ನಾರ್ಮಲ್ ಆಗಿದ್ದೇನೆ, ಆರಾಮವಾಗಿ ಇದ್ದೇನೆ. ಲಸಿಕೆ ಪಡೆಯುವ ಮುಂಚೆ ಕೊರೊನಾ ಬಗ್ಗೆ ಅಧೈರ್ಯ ಇತ್ತು. ಭಯದಿಂದ ತಿರುಗಾಡುತ್ತಿದ್ದೆವು. ಆದರೆ ಈಗ ಆ ಭಯ ದೂರ ಆಗಿದೆ. ನಾನು ಲಸಿಕೆ ಪಡೆಯುವ ಮುನ್ನ ಹೇಗಿದ್ದೆನೋ ಈಗಲೂ ಹಾಗೆ ಇದ್ದೇನೆ ಎಂದು ಕಪಿಲ್ ಗಂಜಿಹಾಳ ಹೇಳಿದ್ದಾರೆ.
ನನಗೆ ಅತೀವ ಸಂತೋಷವಾಗಿದೆ ಜೊತೆಗೆ ಸಾಕಷ್ಟು ಆಶ್ಚರ್ಯವನ್ನು ಕೂಡ ಇದು ತಂದಿದ್ದು, ಕೇವಲ 10 ತಿಂಗಳಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಲಸಿಕೆ ಕಂಡುಹಿಡಿದಿರುವುದು ಮಾನ್ಯ ಪ್ರಧಾನಿಗಳ ಇಚ್ಛಾಶಕ್ತಿಯನ್ನು ತೋರಿಸುತ್ತದೆ. ವಿಜ್ಞಾನಿಗಳಿಗೆ, ಸಂಶೋಧನಾ ಕೇಂದ್ರಗಳಿಗೆ ಉತ್ತೇಜನ ಕೊಟ್ಟಿರುವುದು ಗೊತ್ತಾಗುತ್ತದೆ. ವಿಜ್ಞಾನಿಗಳು 10 ತಿಂಗಳಿಂದ ಪಟ್ಟ ಶ್ರಮ ನಮಗೆಲ್ಲ ಲಸಿಕೆ ಸಿಕ್ಕಿದೆ. ಕಾಂಗ್ರೆಸ್ ವಿಐಪಿ ಕಲ್ಚರಲ್ ಇಂದ ಹೊರಗೆ ಬಂದಿಲ್ಲ ಬರೋದು ಇಲ್ಲ. ಕಾಂಗ್ರೆಸ್ ಸಂತತಿಯ ಸಾಮ್ರಾಜ್ಯವನ್ನು ನೆಚ್ಚಿಕೊಂಡಿದ್ದಾರೆ. ಇನ್ನೂ ಅವರಿಗೆ ಬುದ್ಧಿ ಬಂದಿಲ್ಲ ದೇವರೇ ಅವರನ್ನು ರಕ್ಷಣೆ ಮಾಡಬೇಕು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.
ನಾನು ಲಸಿಕೆ ಪಡೆದ ಬಳಿಕ ಯಾವುದೇ ತೊಂದರೆಯಾಗಿಲ್ಲ. ಎಲ್ಲಾ ವ್ಯಾಕ್ಸಿನ್ಗಳಂತೆ ಇದು ಕೂಡ ಒಂದು ವ್ಯಾಕ್ಸಿನ್ ಅಷ್ಟೇ. ಆತಂಕ ಬಿಟ್ಟು ಎಲ್ಲರೂ ವ್ಯಾಕ್ಸಿನ್ ತೆಗೆದುಕೊಳ್ಳಬೇಕು. ಇದು ಎಲ್ಲರೂ ಖುಷಿ ಪಡುವ ವಿಚಾರ ಜೊತೆಗೆ ಎರಡನೇ ಡೋಸ್ ತೆಗೆಕೊಳ್ಳುವರೆಗೂ ಹಾಲ್ಕೋಲ್ ತೆಗೆದುಕೊಳ್ಳಬೇಡಿ ಎಂದು ತಾಂತ್ರಿಕಾ ಸಲಹಾ ಸಮಿತಿ ಅಧ್ಯಕ್ಷ ಡಾ.ಸುದರ್ಶನ್ ಎಂ.ಕೆ ಸಲಹೆ ನೀಡಿದ್ದಾರೆ.
ನಮಗೆ ಇಂದು ಬಹಳ ಮಹತ್ವದ ದಿನ. ನಾನು ಬಹಳ ಭಾಗ್ಯವಂತ,ಉದ್ಘಾಟನೆಯ ದಿನದಂದೇ ನಾನು ಲಸಿಕೆ ಪಡೆದಿದ್ದೇನೆ. ಕೊವಿಡ್ ಲಸಿಕೆ ಸೇಫ್ ಆಗಿದೆ. ಕೊವಿಡ್ ಲಸಿಕೆಯಿಂದ ಸಣ್ಣಪುಟ್ಟ ಅಡ್ಡಪರಿಣಾಮ ಆಗಬಹುದು. ಇದರ ಬಗ್ಗೆ ಹೆಚ್ಚು ಯೋಚನೆ ಮಾಡಬಾರದು ಎಂದು ಟಾಸ್ಕ್‌ಫೋರ್ಸ್ ಸಮಿತಿ ಸದಸ್ಯ ಹಾಗೂ ಮಣಿಪಾಲ್ ಆಸ್ಪತ್ರೆ ಚೇರಮನ್ ಡಾ.ಸುದರ್ಶನ್ ಬಲ್ಲಾಳ್ ಹೇಳಿದ್ದಾರೆ.
ದೇವನಹಳ್ಳಿಯಲ್ಲಿ ಇಂದು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದವರಿಗೆ ಅಭಿನಂದನಾ ಸಮಾರಂಭ ನಡೆಯುತ್ತಿದ್ದು,ಈ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಗಮಿಸಿದ್ದಾರೆ. ಬೆಂಗಳೂರಿನಿಂದ ದೇವನಹಳ್ಳಿಗೆ ಆಗಮಿಸಿದ ಹೆಚ್ಡಿಕೆ ಅವರನ್ನು ಮಹಿಳೆಯರು ಪೂರ್ಣಕುಂಭದ ಮೂಲಕ ಅದ್ದೂರಿ ಸ್ವಾಗತ ಮಾಡಿದ್ದು, ಕ್ರೇನ್ ಮೂಲಕ 500 ಕೆ.ಜಿಯ ಸೇಬಿನ ಹಾರವನ್ನು ಅಭಿಮಾನಿಗಳು ಹಾಕಿ ಅದ್ದೂರಿಯಾಗಿ ಬರ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಕೂಡ ಕುಮಾರಸ್ವಾಮಿ ಅವರಿಗೆ ಸ್ವಾಗತಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ಪ್ರಥಮ ಹಂತದಲ್ಲಿ ಕೊರೊನಾ ಲಸಿಕೆಯನ್ನು ಮಕ್ಕಳ ತಜ್ಞ ಡಾ.ರಚನಾ ರೆಡ್ಡಿ ಪಡೆದುಕೊಂಡಿದ್ದಾರೆ.
ಜನವರಿ 30 ರಂದು ಗೃಹ ಸಚಿವ ಅಮಿತ್ ಷಾ ಪಶ್ಚಿಮ ಬಂಗಾಳದ ಮತುವಾ ದಲಿತ ಜನಾಂಗ ವಾಸವಿರುವ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಮತುವಾ ಜನಾಂಗದ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಲ್ಲದೇ, ಇದೇ ಜನಾಂಗದ ಒಬ್ಬರು ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಬಿಜೆಪಿ ಈ ಬಾರಿಯೂ ಮತುವಾ ಮತಗಳ ಮೇಲೆ ಕಣ್ಣಿಟ್ಟುರುವುದನ್ನು ಅರಿತ ಟಿಎಂಸಿ, ಬಿಜೆಪಿಗಿಂತ ಮೊದಲೇ ವಿಶೇಷ ತಂಡವೊಂದನ್ನು ಕಳಿಸಲು ನಿರ್ಧರಿಸಿದೆ. ಜನವರಿ 22 ರಂದು ಈ ಪ್ರದೇಶದಲ್ಲಿ ಪ್ರಚಾರ ಮೆರವಣಿಗೆ ನಡೆಸಲು ನಿರ್ಧರಿಸಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಬಿರುಸಾಗುತ್ತಿದ್ದು, ಟಿಎಂಸಿಯಿಂದ ಬಿಜೆಪಿಗೆ, ಬಿಜೆಪಿಯಿಂದ ಟಿಎಂಸಿಗೆ ಪಕ್ಷಾಂತರವಾಗಲಿದ್ದಾರೆ ಎಂಬ ಸುದ್ದಿಗಳೇ ಪ್ರತಿನಿತ್ಯ ಹೊರಬರುತ್ತಿವೆ. ಪಕ್ಷಾಂತರವೇನಾದರೂ ಆಗಿದ್ದೇ ಆದಲ್ಲಿ, ಪಕ್ಷಕ್ಕೆ ಆಘಾತವಾಗುವುದೆಂಬುದನ್ನು ಅರಿತ ಟಿಎಂಸಿ ತನ್ನ ಸಂಸದ ಸತಾಬ್ದಿ ರಾಯ್ರನ್ನು ಪಕ್ಷದಲ್ಲೇ ಇರಿಸಿಕೊಳ್ಳುವ ಯತ್ನಕ್ಕೆ ಕೈಹಾಕಿ ಬಹುತೇಕ ಸಫಲವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯವರನ್ನು ಭೇಟಿಯಾದ ನಂತರ ಹೇಳಿಕೆ ನೀಡಿರುವ ಸತಾಬ್ದಿ ರಾಯ್, ಪಕ್ಷ ತೊರೆಯುವುದಿಲ್ಲ ಎಂದು ಖಾತ್ರಿಪಡಿಸಿದ್ದಾರೆ.
ರಿಮ್ಸ್ ಆಸ್ಪತ್ರೆಯಲ್ಲಿ ಮೊದಲ ಲಸಿಕೆ ಪಡೆದ ಡಿ ಗ್ರೂಪ್ ನೌಕರರಾದ ಮಂಜುನಾಥ ಬಲ್ಲಟಗಿ ಎಡಗೈಗೆ ಲಸಿಕೆ ಇಂಜಕ್ಟ್ ಮಾಡಿಕೊಂಡಿದ್ದು, ಕೊರೊನಾ ಸಂಧರ್ಬದಲ್ಲಿ ಆತಂಕದಲ್ಲೆ ಕೆಲಸ ಮಾಡಿದ್ದೆ. ಈಗ ಲಸಿಕೆ ಪಡೆದು ತುಂಬಾ ಸಂತೋಷವಾಗಿದೆ. ಇಂಜೆಕ್ಟ್ ಮಾಡಿಸಕೊಂಡ ನಂತರವೂ ಆರಾಮಾಗಿದ್ದೇನೆ. ಯಾವುದೇ ತೊಂದರೆಯಾಗಿಲ್ಲ ಎಂದು ಮಂಜುನಾಥ ಬಲ್ಲಟಗಿ ಹೇಳಿದ್ದಾರೆ.
ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊವಿಡ್ ಲಸಿಕೆ ನೀಡಿಕೆ ಬಗ್ಗೆ ಪರಿಶೀಲನೆ ನಡೆಸುವ ಸಲುವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಆಸ್ಪತ್ರಗೆ ಭೇಟಿ ನೀಡಿದ್ದಾರೆ.
ಗಂಟೆ 12 ಆದರೂ ಬಾಗಲಕೋಟೆ ನಗರ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಕಾರ್ಯ ಆರಂಭವಾಗಿಲ್ಲ. ಹೀಗಾಗಿ ಲಸಿಕಾ ಕೇಂದ್ರದ ಹೊರಗಡೆ ಆರೋಗ್ಯ ಇಲಾಖೆ ಕೊರೊನಾ ವಾರಿಯರ್ಸ್ ಕಾದು ಕುಳಿತಿದ್ದಾರೆ. ಆನ್ ಲೈನ್ ಅಡಚಣೆಯ ಕಾರಣಕ್ಕೆ ಲಸಿಕೆ ವಿತರಣೆ ತಡವಾಗುತ್ತಿದೆ ಎಂದು ಆರೋಗ್ಯ ಸಿಬ್ಬಂದಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ 247 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಪ್ರತಿ ಕೇಂದ್ರದಲ್ಲಿ 100 ಜನರಿಗೆ ಲಸಿಕೆ ನೀಡುತ್ತಿದ್ದೇವೆ. 24,700 ಜನರಿಗೆ ಕೊವಿಡ್ ಲಸಿಕೆ ನೀಡುತ್ತಿದ್ದು, ರಾಜ್ಯದಲ್ಲಿ ಮೊದಲು ಬಿಡದಿ ಮೂಲದ ನಾಗರತ್ನ ಎಂಬವವರಿಗೆ ಲಸಿಕೆ ನೀಡಿದ್ದೇವೆ. ಜನ ನಂಬಿಕೆಯಿಂದ ಲಸಿಕೆಯನ್ನು ತೆಗೆದುಕೊಳ್ಳಬೇಕು. 10 ತಿಂಗಳಲ್ಲಿ ವಿಜ್ಞಾನಿಗಳು ಲಸಿಕೆ ಅಭಿವೃದ್ಧಿ ಪಡಿಸಿದ್ದಾರೆ. ಲಸಿಕೆ ಅಭಿವೃದ್ಧಿ ಪಡಿಸಿದ ವೈದ್ಯರಿಗೆ ಆಭಾರಿಯಾಗಿದ್ದೇವೆ. ವಿಜ್ಞಾನಿಗಳಿಗೆ ಪ್ರೇರಣೆ ಕೊಟ್ಟ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದಲ್ಲಿ ಸಿಎಂ ಬಿಎಸ್‌ವೈ ಕೊಟ್ಟ ಸಹಕಾರಕ್ಕೂ ಅಭಿನಂದಿಸುತ್ತೇನೆ. ಸಣ್ಣ ಅಡ್ಡಪರಿಣಾಮವಾದರೆ ಅಲ್ಲೇ ಚಿಕಿತ್ಸೆ ಕೊಡಲಾಗುತ್ತದೆ. 20 ರಿಂದ 30 ಸಾವಿರ ಕ್ಲಿನಿಕಲ್ ಟ್ರಯಲ್ ಆಗಿದೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಆಯುಷ್ ವಿಭಾಗದಲ್ಲಿ ಕೋವಿಡ್ ನಿರೋಧಕ ವ್ಯಾಕ್ಸಿನ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಮಂಗಳೂರಿನ ಗ್ರೂಪ್ ಡಿ ನೌಕರ ರೋಬಿನ್ಗೆ ಮೊದಲ ವ್ಕಾಕ್ಸಿನ್ ನೀಡಲಾಗಿದೆ.
11.40 ಕ್ಕೆ ದೆಹಲಿಯಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಮಾನ ಟೇಕ್ ಆಫ್ ಆಗಿದ್ದು, 2 ಘಂಟೆ ವೇಳೆಗೆ ಅಮಿತ್ ಶಾ ಬೆಂಗಳೂರು ತಲುಪಲಿದ್ದಾರೆ.
ನಾನು ಲಸಿಕೆ ಪಡೆದಿದ್ದೇನೆ, ನನಗೆ ಯಾವುದೇ ಸಮಸ್ಯೆ ಇಲ್ಲ. ಲಸಿಕೆ ಬಗ್ಗೆ ಇರುವ ಅನುಮಾನ ದೂರವಾಗಲಿದೆ. ಕೆಲವೇ ದಿನಗಳಲ್ಲಿ ಎಲ್ಲಾ ಅನುಮಾನಗಳು ದೂರವಾಗಲಿದೆ. ಧೈರ್ಯವಾಗಿ ಎಲ್ಲರೂ ಲಸಿಕೆಯನ್ನು ಪಡೆಯಬಹುದಾಗಿದೆ. ಕೊರೊನಾ ಲಸಿಕೆ ಸಂಜೀವಿನಿ ಎಂದು ಧೈರ್ಯ ಹೇಳಬೇಕು. ಅದಕ್ಕಾಗಿಯೇ ನಾನು ಲಸಿಕೆಯನ್ನು ಪಡೆದಿದ್ದೇನೆ. ಕೊವಿಡ್ ಲಸಿಕೆ ಪಡೆದರೂ ನಿಯಮ ಪಾಲನೆ ಕಡ್ಡಾಯವಾಗಿರುತ್ತದೆ ಎಂದು ಟಿವಿ9ಗೆ ಲಸಿಕೆ ಪಡೆದ ಕೊವಿಡ್ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್ ಹೇಳಿದ್ದಾರೆ.
ಸಿಎಂ ಯಡಿಯೂರಪ್ಪ ಹಾಗೂ ಸಚಿವ ಡಾ.ಕೆ ಸುಧಾಕರ್ ಮಾರ್ಗದರ್ಶನದಲ್ಲಿ ಅಚ್ಚುಕಟ್ಟಾಗಿ ಲಸಿಕೆ ವಿತರಣೆ ಮಾಡಿದ್ದಾರೆ. 100 ಮಂದಿಗೆ ಪ್ರತಿ ಕೇಂದ್ರದಲ್ಲೂ ಲಸಿಕೆ ಕೊಡುತ್ತಿದ್ದಾರೆ. ಭಾರತದ ವಿಜ್ಞಾನಿಗಳು ಪ್ರಧಾನಿಯ ಪ್ರೇರಣೆ ಮೇರೆಗೆ ಜಗತ್ತಿನಲ್ಲಿ ಅತಿದೊಡ್ಡ ಮಟ್ಟದಲ್ಲಿ ವ್ಯಾಕ್ಸಿನ್ ಕೊಡಲು ತಯಾರುಮಾಡಿದ್ದಾರೆ. ನಮ್ಮಲ್ಲಿ 3 ಕೋಟಿ ಜನಸಂಖ್ಯೆಗೆ ಮೊದಲ ಹಂತದಲ್ಲೇ ಲಸಿಕೆ ಕೊಡುತ್ತಿದ್ದೇವೆ. ಜನರಲ್ಲಿ ಸಂಶಯ ಉಂಟುಮಾಡುವ ಕೆಲಸ ಮಾಡಬಾರದು. ಭಾರತದಲ್ಲೇ ತಯಾರಿಗಿರುವ ಎರಡು ವ್ಯಾಕ್ಸಿನ್ಗಳನ್ನ ಕೊಡಲಾಗುತ್ತಿದೆ. ಫ್ರಂಟ್ ಲೈನ್ ವಾರಿಯರ್ಸ್‌ಗೆ ಕೊಡುತ್ತಿದ್ದೇವೆ. ಇದರಲ್ಲಿ ರಾಜಕಾರಣ ಮಾಡಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಭಾರತ-ಆಸ್ಟ್ರೇಲಿಯಾ ನಡುವಿನ ಅಂತಿಮ ಟೆಸ್ಟ್ ಮಳೆಯಿಂದ ಕೆಲಕಾಲ ಸ್ಥಗಿತಗೊಂಡಿದೆ. ಮಳೆಗೂ ಮುನ್ನ ಆಸ್ಟ್ರೇಲಿಯಾ ನೀಡಿರುವ 369 ರನ್ಗಳನ್ನು ಬೆನ್ನತ್ತಿರುವ ಟೀಂ ಇಂಡಿಯಾ ಪ್ರಮುಖ 2 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿದೆ.
ಇಂದು ಭದ್ರಾವತಿಗೆ ಗೃಹ ಸಚಿವ ಅಮಿತ್ ಶಾ ಮಧ್ಯಾಹ್ನ 12.30ಕ್ಕೆ ಬರಬೇಕಿತ್ತು. ಆದರೆ ದೆಹಲಿಯಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಅಮಿತ್ ಶಾ ಬೆಂಗಳೂರಿಗೆ ತಡವಾಗಿ ಆಗಮಿಸುತ್ತಿದ್ದು, ಮಧ್ಯಾಹ್ನ 2 ಘಂಟೆಗೆ ಅಮಿತ್ ಶಾ ಭದ್ರಾವತಿಗೆ ಭೇಟಿ ನೀಡಲಿದ್ದಾರೆ.
ಕೊರೊನಾ ಲಸಿಕೆ ಅಭಿಯಾನಕ್ಕೆ ಮೋದಿ ಚಾಲನೆ ನೀಡಿದ್ದು, 3 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡಲಾಗುವುದು. ಪ್ರತಿ ಕೇಂದ್ರದಲ್ಲಿ 100 ಜನರಿಗೆ ಲಸಿಕೆ ನೀಡಲಿದ್ದು, ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ಹೆಚ್ಚು ಮಾಡುತ್ತೇವೆ. ಬಿಡದಿಯ ಮಹಿಳೆಯೊಬ್ಬರು ನಮ್ಮ ಸಮ್ಮುಖದಲ್ಲಿ ಲಸಿಕೆಯನ್ನು ಪಡೆದರು. ಕೊವಿಡ್ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಸುದರ್ಶನ್ ಬಲ್ಲಾಳ್ ಸಹ ಲಸಿಕೆಯನ್ನು ಪಡೆದಿದ್ದಾರೆ. ಲಸಿಕೆ ಬಗ್ಗೆ ಯಾರೂ ಭಯ, ಆತಂಕ ಪಡಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಚಿತ್ರದುರ್ಗದ ಲಸಿಕೆ ವಿತರಣೆ ಕೇಂದ್ರಕ್ಕೆ ಸಚಿವ ಬಿ.ಶ್ರೀರಾಮುಲು ಚಾಲನೆ ನೀಡಿದ್ದು, ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಸಂಸದ ಎ.ನಾರಾಯಣಸ್ವಾಮಿ, ಜಿ.ಪಂ ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಉಪಸ್ಥಿತಿ. ಡಿಸಿ ಕವಿತಾ, ಸಿಇಓ ನಂದಿನಿದೇವಿ, ಡಿಹೆಚ್ಓ ಡಾ.ಪಾಲಾಕ್ಷ, ಜಿಲ್ಲಾಸ್ಪತ್ರೆ ಡಿಎಸ್ ಡಾ.ಬಸವರಾಜ ಉಪಸ್ಥಿತರಿದ್ದರು.ಜಿಲ್ಲಾಸ್ಪತ್ರೆಯ ಲಸಿಕೆ ಕೇಂದ್ರದಲ್ಲಿ ಮೊದಲ ಲಸಿಕೆಯನ್ನು ವಾರಿಯರ್ ಅಜಯ್ ಪಡೆದಿದ್ದಾರೆ.
ದೆಹಲಿಯ ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಕೊವಿಡ್ ಲಸಿಕೆಯನ್ನು ಪಡೆದಿದ್ದಾರೆ.
ಟ್ವಿಟರ್‌ನಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಡಿ ಗ್ರೂಪ್ ನೌಕರರ ಮೇಲೆ ಲಸಿಕೆ ಪ್ರಯೋಗಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಲಸಿಕೆ ಬಂದಿರುವುದು ಸಂತೋಷ. ಆದರೆ ಬಡಪಾಯಿ ಡಿ ಗ್ರೂಪ್ ನೌಕರರ ಮೇಲೆ ಲಸಿಕೆ ಪ್ರಯೋಗ ಮಾಡುವ ಮೊದಲು ಆಡಂಬರದಿಂದ ಉದ್ಘಾಟನೆ ಮಾಡುವ ಮಂತ್ರಿಗಳು ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಪಡೆಯಲಿ. ಈ ಮೂಲಕ ಲಸಿಕೆ ಪಡೆದು ಮಾದರಿ ಆಗಲಿ ಎಂಬುದು ಜನರ ಪರವಾಗಿ ನನ್ನ ವಿನಂತಿ ಎಂದು ಟ್ವೀಟ್ ಮಾಡಿದ್ದಾರೆ.
ಗದಗ ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಲಸಿಕಾ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಎಸ್.ಎಸ್ ಪೀರಾ ಮೊದಲ ಲಸಿಕೆ ಪಡೆದುಕೊಂಡಿದ್ದಾರೆ. ಚುಚ್ಚುಮದ್ದು ನೀಡುತ್ತಿದ್ದಂತೆ ಜಿಮ್ ನಿರ್ದೇಶಕ ಡಾ.ಪಿ.ಎಸ್.ಭೂಸರೆಡ್ಡಿ, ಡಾ.ಪಲ್ಲೇದ್, ಡಿವೈಎಸ್ಪಿ ಪ್ರಹ್ಲಾದ್ ಸೇರಿ ಹಲವು ಅಧಿಕಾರಿಗಳು ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಾರೆ.
ನೆಲಮಂಗಲ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಗ್ರೂಪ್ ಡಿ ನೌಕರರಾದ ಹರೀಶ್‌ಗೆ ಮೊದಲ ಲಸಿಕೆ ನೀಡಲಾಗಿದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲಸಿಕೆ ಅಭಿಯಾನಕ್ಕೆ ಮುಖ್ಯಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದು, ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಭಾಗಿಯಾಗಿದ್ದಾರೆ.
ಮಾನವ ಇತಿಹಾಸದಲ್ಲಿ ಅನೇಕ ವಿಪತ್ತುಗಳು, ಯುದ್ಧ ಬಂದಿವೆ. ಆದರೆ ಕೊರೊನಾವನ್ನು ಯಾರೂ ಕೂಡ ನಿರೀಕ್ಷೆ ಮಾಡಿಲ್ಲ. ಕೊರೊನಾ ಸುದ್ದಿ ಭಾರತೀಯರನ್ನು ವಿಚಲಿತರನ್ನಾಗಿ ಮಾಡಿತ್ತು. ವಿಶ್ವದ ಜನ ಭಾರತದ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದರು. ಆದರೆ 2020ರ ಜನವರಿ 30ರಲ್ಲಿ ಭಾರತ ಮೊದಲ ಗೈಡ್‌ಲೈನ್ಸ್ ಹೊರಡಿಸಿದ್ದು, ವಿಮಾನ ನಿಲ್ದಾಣಗಳಲ್ಲಿ ಕೊರೊನಾ ಪರೀಕ್ಷೆ ಆರಂಭಿಸಿದ್ದೆವು. ಭಾರತ ಸಾಮೂಹಿಕ ಶಕ್ತಿಯನ್ನು ಪರಿಚಯ ಮಾಡಿಕೊಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಕೊರೊನಾ ಹಬ್ಬುತ್ತಿದ್ದರೂ ಕೆಲವು ದೇಶಗಳು ತಮ್ಮ ನಾಗರಿಕರನ್ನ ಕರೆ ತರಲಿಲ್ಲ. ಆದರೆ ಭಾರತ ಸರ್ಕಾರ ವಿದೇಶದಲ್ಲಿದ್ದ ಸುಮಾರು 35 ಲಕ್ಷ ಭಾರತೀಯರನ್ನ ವಂದೇ ಭಾರತ್ ಮಿಷನ್ ಅಡಿ ಕರೆ ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಗೋವಾದಲ್ಲಿ ಇಂದಿನಿಂದ ಪ್ರಾರಂಭವಾಗಲಿರುವ 51ನೇ ಅಂತಾರಾಷ್ಟ್ರೀಯ ಸಿನಿಮಾ ಉತ್ಸವ (IFFI)ದಲ್ಲಿ ಕನ್ನಡದ ನಟ, ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಪಣಜಿಯಲ್ಲಿರುವ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಜನವರಿ 24ರವರೆಗೆ ಈ ಫಿಲ್ಮ್ ಫೆಸ್ಟಿವಲ್ ನಡೆಯಲಿದ್ದು, ಇಂದಿನ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಮಂತ್ರಿಗಳೂ ಪಾಲ್ಗೊಳ್ಳಲಿದ್ದಾರೆ. ಈ ವರ್ಷ ಸಿನಿ ಉತ್ಸವದಲ್ಲಿ ವಿವಿಧ ದೇಶಗಳ 224 ಸಿನಿಮಾಗಳು ಇರಲಿವೆ.
ಸಿ.ವಿ.ರಾಮನ್ ಜನರಲ್ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಶುಭಾ ಪ್ರೇಮಾವತಿ ಲಸಿಕೆ ಪಡೆದಿದ್ದಾರೆ.
ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರಾದ ಚಂದ್ರಶೇಖರ್ ರಾವ್ ಕೊವಿಶೀಲ್ಡ್ ಲಸಿಕೆ ಪಡೆದಿದ್ದಾರೆ.
ಭಾರತದ ಪರಿಸ್ಥಿತಿಗೆ ಹೊಂದುವ ಲಸಿಕೆಯನ್ನ ಭಾರತದಲ್ಲಿ ಅಭಿವೃದ್ಧಿಪಡಿಸಿದ್ದೇವೆ. ಕೊರೊನಾ ವಿರುದ್ಧ ನಮ್ಮ ಹೋರಾಟ, ಆತ್ಮವಿಶ್ವಾಸ, ಆತ್ಮನಿರ್ಭರದಿಂದ ಮುಂದುವರಿಯುತ್ತದೆ. ನಾವು ಯಾವುದೇ ಕಾರಣಕ್ಕೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳುವ ಅವಶ್ಯಕತೆಯಿಲ್ಲ. ದೇಶದಲ್ಲಿ ಯಾವುದೇ ರೀತಿಯ ಸಂಕಷ್ಟದ ಪರಿಸ್ಥಿತಿ ಇದ್ದರೂ ಭಯಪಡಬೇಕಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮೊದಲ ಹಂತದಲ್ಲಿಯೇ ನಾವು 3 ಕೋಟಿ ಜನರಿಗೆ ಲಸಿಕೆ ನೀಡುತ್ತಿದ್ದೇವೆ. ಎರಡನೇ ಹಂತದಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡಲು ನಿರ್ಧರಿಸಿದ್ದೇವೆ. ಮೊದಲ 2 ಹಂತದಲ್ಲಿ ಒಟ್ಟಾರೆ 30 ಕೋಟಿ ಜನರಿಗೆ ಲಸಿಕೆ ನೀಡಲಿದ್ದೇವೆ. ನಮ್ಮ ವಿಜ್ಞಾನಿಗಳು, ತಜ್ಞರು ಮೇಡ್ ಇನ್ ಇಂಡಿಯಾ ಲಸಿಕೆ ಕಂಡು ಹಿಡಿದಿದ್ದಾರೆ. ದೇಶದ ಜನರು ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಮನವಿ ಮಾಡುತ್ತೇನೆ. ವಿಶ್ವದಲ್ಲಿ ಮಕ್ಕಳಿಗೆ ನೀಡುವ ಶೇ.60ರಷ್ಟು ಔಷಧಿಗಳು ಭಾರತದಲ್ಲಿ ತಯಾರಾಗುತ್ತದೆ. ಭಾರತೀಯ ಲಸಿಕೆ ವಿದೇಶಿ ಲಸಿಕೆಗಳ ಜೊತೆ ಹೋಲಿಸಿದರೆ ಈ ಲಸಿಕೆ ಸಾಕಷ್ಟು ಪರಿಣಾಮಕಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೊವಿನ್ ಆ್ಯಪ್ನಲ್ಲಿ ಲಸಿಕೆ ನೀಡಿಕೆ ಕುರಿತು ಎಲ್ಲ ವಿಚಾರಗಳನ್ನ ಟ್ರ್ಯಾಕ್ ಮಾಡುತ್ತೇವೆ. ಕೊರೊನಾಗೆ 2 ಡೋಸ್ ಲಸಿಕೆ ಪಡೆಯುವುದು ಅತ್ಯವಶ್ಯಕವಾಗಿದೆ. ಹೀಗಾಗಿ ದೇಶದ ಜನರು 2 ಡೋಸ್ ಲಸಿಕೆ ಪಡೆಯಲು ಮನವಿ ಮಾಡುವೆ. ಲಸಿಕೆ ಪಡೆದಿದ್ದೇವೆ ಎಂದು ನಿರ್ಲಕ್ಷ್ಯ ಮಾಡಿದರೆ ದೇಶದಲ್ಲಿ ಕೊರೊನಾ ಹೆಚ್ಚಳವಾಗಲಿದೆ. ಮಾಸ್ಕ್ ಧಾರಣೆ, ದೈಹಿಕ ಅಂತರ ಕಾಯ್ದುಕೊಳ್ಳಲು ಎಲ್ಲರೂ ಆದ್ಯತೆ ನೀಡಿ. ಕೊರೊನಾ ವಿರುದ್ಧ ಹೇಗೆ ಧೈರ್ಯದಿಂದ ನೀವು ಎದುರಿಸಿದ್ದೀರಿ ಎಂದು ನಿಮಗೆ ಗೊತ್ತು. ಅದೇ ರೀತಿ ಯಾವುದೇ ಭಯ ಇಲ್ಲದೇ ಲಸಿಕೆ ಪಡೆಯಲು ಸಿದ್ಧರಾಗಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬೆಂಗಳೂರಿನ ಮಲ್ಲಸಂದ್ರ ಸರ್ಕಾರಿ ಆಸ್ಪತ್ರೆ ವೈದ್ಯೆ ಕೋಮಲ ಈ ದಿನದ ಮೊದಲ ಲಸಿಕೆ ಪಡೆಯಲಿರುವ ವೈದ್ಯೆಯಾಗಿದ್ದು,ದಾಸರಹಳ್ಳಿ ಶಾಸಕ ಆರ್.ಮಂಜುನಾಥ್ ಆಸ್ಪತ್ರೆ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಇಷ್ಟು ದಿನ ಒಂದು ಲಸಿಕೆ ಅಭಿವೃದ್ಧಿಗೆ ಹಲವು ವರ್ಷ ಹಿಡಿಯುತ್ತಿತ್ತು. ಈಗ ಅತ್ಯಂತ ಕಡಿಮೆ ಅವಧಿಯಲ್ಲಿ 2 ಮೇಡ್ ಇನ್ ಇಂಡಿಯಾ ವ್ಯಾಕ್ಸಿನ್ ಅಭಿವೃದ್ಧಿಯಾಗಿದೆ. ಭಾರತದಲ್ಲಿ ಲಸಿಕೆ ನೀಡಿಕೆ ಅಭಿಯಾನ ಮಾನವೀಯತೆಯ ಹಿನ್ನೆಲೆಯನ್ನು ಹೊಂದಿದೆ. ಅವಶ್ಯಕತೆ ಇರುವವರಿಗೆ, ಫ್ರಂಟ್‌ಲೈನ್ ವಾರಿಯರ್ಸ್‌ಗೆ ಮೊದಲು ಲಸಿಕೆ ನೀಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಲಸಿಕೆ ಪಡೆದ ಬಳಿಕವೂ ಕೊರೊನಾ ನಿಯಮ ಪಾಲಿಸಬೇಕು, ಕೊರೊನಾ ನಿಯಂತ್ರಣಕ್ಕೆ ಮುನ್ನೆಚ್ಚರಿಕಾ ಕ್ರಮ ಪಾಲಿಸಬೇಕು. ಇಷ್ಟು ದೊಡ್ಡ ಮಟ್ಟದ ಅಭಿಯಾನ ಎಂದೂ ನಡೆಸಿಲ್ಲ. ಮೊದಲ ಹಂತದಲ್ಲಿ 3 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡುತ್ತಿದ್ದು, 2ನೇ ಹಂತದಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
3 ಕೋಟಿ ಜನರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು. ಆರೋಗ್ಯ ಕಾರ್ಯಕರ್ತರು, ಫ್ರಂಟ್ ಲೈನ್ ವಾರಿಯರ್ಸ್‌ಗೆ ಲಸಿಕೆ ನೀಡಲಾಗುತ್ತದೆ. ಕೊವಿನ್ ಡಿಜಿಟಲ್ ಪ್ಲಾಟ್‌ಫಾರಂ ಮೂಲಕ ಲಸಿಕೆ ನೀಡಲಾಗುತ್ತದೆ. ಲಸಿಕೆಗೆ ನೋಂದಣಿಯಿಂದ ಎಲ್ಲ ಹಂತದಲ್ಲೂ ನಿಗಾ ಇಡಲಾಗುವುದು. ಲಸಿಕೆ 2 ಡೋಸ್ ಪಡೆಯುವುದು ಬಹಳ ಅತ್ಯವಶ್ಯಕ. ಮೊದಲ ಡೋಸ್ ಪಡೆದು 2ನೇ ಡೋಸ್ ಪಡೆಯದೇ ಇರಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹಗಲು-ರಾತ್ರಿ ಎನ್ನದೆ ವಿಜ್ಞಾನಿಗಳು ಲಸಿಕೆ ಅಭಿವೃದ್ಧಿಪಡಿಸಿದ್ದಾರೆ. ಇಷ್ಟು ಕಡಿಮೆ ಸಮಯದಲ್ಲಿ ಒಂದಲ್ಲ, 2 ಸ್ವದೇಶಿ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದು ಭಾರತದ ದಕ್ಷತೆ, ಪ್ರತಿಭೆಗೆ ಸಾಕ್ಷಿಯಾಗಿದೆ. ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲು ಮೊದಲ ಹಕ್ಕುದಾರರು. ಇದಾದ ಬಳಿಕ ಪೊಲೀಸರು, ಯೋಧರು, ಅಗ್ನಿಶಾಮಕದಳ, ಸಫಾಯಿ ಕರ್ಮಚಾರಿಗಳಿಗೆ ಲಸಿಕೆಯನ್ನು ನೀಡಲಾಗುವುದು. ಆರೋಗ್ಯ, ಫ್ರಂಟ್‌ಲೈನ್ ಕಾರ್ಯಕರ್ತರು ಸೇರಿ 3 ಕೋಟಿ ಜನರಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಷ್ಟು ತಿಂಗಳ ಕಾಲ ದೇಶದ ಪ್ರತಿ ಮನೆಯಲ್ಲೂ ಕೊರೊನಾ ಲಸಿಕೆ ಯಾವಾಗ ಬರುತ್ತದೆ ಎಂಬ ಪ್ರಶ್ನೆ ಇತ್ತು. ಈಗ ಕೊರೊನಾ ಲಸಿಕೆ ಬಂದಿದೆ. ಅತೀ ಕಡಿಮೆ ಸಮಯದಲ್ಲಿ ಇದು ಬಂದಿದೆ. ಇಂದಿನಿಂದ ಎಲ್ಲಾ ರಾಜ್ಯಗಳಲ್ಲೂ ಲಸಿಕೆ ವಿತರಣೆ ಆರಂಭವಾಗಲಿದೆ. ಇದಕ್ಕಾಗಿ ಇಡೀ ದೇಶದ ಜನತೆಗೆ ಅಭಿನಂದನೆ ಸಲ್ಲಿಸ್ತೇನೆ. ಹಗಲು ರಾತ್ರಿ ಶ್ರಮಿಸಿ ಲಸಿಕೆ ಸಂಶೋಧನೆಯಲ್ಲಿ ತೊಡಗಿದ್ದ ವಿಜ್ಞಾನಿಗಳಿಗೆ ಅಭಿನಂದನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಕೊರೊನಾ ಲಸಿಕೆ ಬಂದಾಗಿದೆ.ಬಹಳ ಕಡಿಮೆ ಸಮಯದಲ್ಲಿ ಕೊರೊನಾ ಲಸಿಕೆ ಬಂದಿದೆ ಎಂದು ಲಸಿಕೆ ಅಭಿಯಾನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ಲಸಿಕೆ ವಿತರಣೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ಯಡಿಯೂರಪ್ಪ ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿದ್ದು, ಶಾಸಕ ಜಮೀರ್ ಮತ್ತು ಆಸ್ಪತ್ರೆ ಅಧಿಕಾರಿಗಳು ಬಿಎಸ್ವೈಗೆ ಹೂಗಚ್ಚ ನೀಡಿ ಸ್ವಾಗತಿಸಿದ್ದಾರೆ.ಇನ್ನು ಸಿಎಂ ಜೊತೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಆಗಮಿಸಿದ್ದು, ಪ್ರಧಾನಿ ಮೋದಿಯವರು ವರ್ಚ್ಯುಯಲ್ ಮೂಲಕ ವ್ಯಾಕ್ಸಿನ್ ಹಂಚಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ವಿಕ್ಟೋರಿಯಾ ಕೇಂದ್ರದಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಿರುವ ಸಿಎಂ.
ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದವರಿಗೆ ಮಾತ್ರ ಕೊರೊನಾ ಲಸಿಕೆ ನೀಡಲಿದ್ದು, ಲಸಿಕೆಯನ್ನ ಪಡೆಯಲು ತಮ್ಮ ಒಪ್ಪಿಗೆ ಇದೆ ಎಂಬ ಪತ್ರಕ್ಕೆ ಸಹಿ ಹಾಕದಿದ್ದರೆ ಲಸಿಕೆಯನ್ನು ಹಾಕುವುದಿಲ್ಲ ಎಂದು ತಿಳಿಸಲಾಗಿದೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ವ್ಯಾಕ್ಸಿನೇಷನ್ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಪ್ರಧಾನಿ ಕಾರ್ಯದರ್ಶಿ ಜಾವೇದ್ ಅಖ್ತರ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಭೇಟಿ ನೀಡಿದ್ದು, ವ್ಯಾಕ್ಸಿನೇಷನ್‌ಗೆ ಮಾಡಿಕೊಂಡ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ತಂದೆ ಹಿಮಾಂಶು ಪಾಂಡ್ಯ ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ.
ಜಿಲ್ಲಾಸ್ಪತ್ರೆಯ ಲಸಿಕಾ ಕೇಂದ್ರಕ್ಕೆ ಲಸಿಕೆ ಪಡೆಯಲು ಹೆಲ್ತ್ ವಾರಿಯರ್ಸ್ ಆಗಮಿಸಿದ್ದು, ಸಾಲುಗಟ್ಟಿ ಕೊರೊನಾ ಲಸಿಕೆ ಪಡೆಯಲು ಸಿದ್ಧರಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ಆಸ್ಪತ್ರೆಯಲ್ಲಿ 50 ಜನರಿಗೆ ಕೋವಿಡ್ ಲಸಿಕೆ ನೀಡಲು ತಯಾರಿ ನಡೆಸಿದ್ದು, 39 ಆರೋಗ್ಯ ಇಲಾಖೆ ಸಿಬ್ಬಂದಿಗಳು, ಅಂಗನವಾಡಿ ಮೇಲ್ವಿಚಾರಕರು ಹಾಗೂ ಆಶಾ ಕಾರ್ಯಕರ್ತರನ್ನು ಸೇರಿ 11 ಜನರಿಗೆ ಲಸಿಕೆ ನೀಡಲು ಸಿದ್ಧತೆ ಮಾಡಲಾಗಿದೆ. ಬಿಬಿಎಂಪಿ ಜಂಟಿ ಅಯುಕ್ತ ಮತ್ತು ಶಾಸಕ ಆರ್.ಮಂಜುನಾಥ್ ಅವರು ಈ ಲಸಿಕೆ ನೀಡುವಿಕೆಗೆ ಚಾಲನೆ ನೀಡಲಿದ್ದಾರೆ.
ಇಂದು ಬೆಳಿಗ್ಗೆ 11.30 ಕ್ಕೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದು, ನಂತರ ಎಚ್ಎಎಲ್ ವಿಮಾನ ನಿಲ್ದಾಣದಿಂದ ಭದ್ರಾವತಿಗೆ ತೆರಳಲಿದ್ದಾರೆ. ಈ ನಿಟ್ಟಿನಲ್ಲಿ ಎಚ್ಎಎಲ್ ವಿಮಾನ ನಿಲ್ದಾಣದ ಬಳಿ ಡಿಸಿಪಿ ಶರಣಪ್ಪ ಪೂರ್ವ ವಿಭಾಗ, ವೈಟ್ ಫಿಲ್ಡ್ ವಿಭಾಗ ಹಾಗೂ ಡಿಸಿಪಿ ದೇವರಾಜ್ ನೇತೃತ್ವದಲ್ಲಿ ಸುಮಾರು 2000ಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆಗೆ ವ್ಯವಸ್ಥೆ ಮಾಡಲಾಗಿದ್ದು, ಎಚ್ಎಎಲ್ ವಿಮಾನ ನಿಲ್ದಾಣದಿಂದ ವಿಧಾನಸೌದದ ವರೆಗೂ ಜಿರೊ ಟ್ರಾಫಿಕ್ಗೆ ಸಿದ್ಧತೆ ಮಾಡಲಾಗಿದೆ.
ಕೆ. ಸಿ. ಜನರಲ್ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಪಡೆಯಲಿರುವವರಿಗೆ ತಾಂತ್ರಿಕ ದೋಷದಿಂದ ಯಾವುದೇ ಮೆಸೇಜ್ ಬಾರದ ಹಿನ್ನೆಲೆಯಲ್ಲಿ ಕರೆ ಮಾಡಿ ಫಲಾನುಭವಿಗೆ ಇವತ್ತು ನಿಮ್ಮ ವ್ಯಾಕ್ಸಿನೇಷನ್ ಇದೆ ಎನ್ನುವುದಾಗಿ ಮಾಹಿತಿ ನೀಡಲಾಗಿದೆ. ಆ್ಯಪ್ ಓಪನ್ ಆಗದ ಕಾರಣ ಲಿಸಿಕಾ ಫಲಾನುಭವಿಗಳ ದಾಖಲಾತಿ ಪರಿಶೀಲನೆ ಮಾಡಿ ಸಿಬ್ಬಂಧಿಗಳು ಕರೆ ಮಾಡಿದ್ದಾರೆ.
Published On - 8:10 pm, Sat, 16 January 21