ಬೆಂಗಳೂರು: ಜಯನಗರದ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿ ಮೃತಪಟ್ಟದ ಐಎಎಸ್ ಅಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆಗೆ ಏನು ಕಾರಣವಾಯ್ತು ಎಂಬುದರ ಬೆನ್ನುಹತ್ತಿದಾಗ..
ಐಎಂಎ ಕೇಸ್ನಲ್ಲಿ ಭ್ರಷ್ಟಾಚಾರ ಆರೋಪದಲ್ಲಿ ಜೈಲು ಪಾಲಾಗಿ ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದ ವಿಜಯ್ ಶಂಕರ್ ಕುಗ್ಗಿ ಹೋಗಿದ್ದರು. ಆರೋಪದ ನಂತರ ಅವರ ಮಗಳ ಮದ್ವೆ ಪ್ರಯತ್ನಗಳು ವಿಫಲವಾಗಿದ್ದವು. ತನ್ನ ಈ ಪರಿಸ್ಥಿತಿ ಜತೆಗೆ ಮಗಳ ಮದುವೆಯೂ ಕೈಗೂಡದೆ ನೊಂದಿದ್ದ ವಿಜಯ್ ಶಂಕರ್ ಈ ರೀತಿಯ ನಿರ್ಧಾರ ತಗೊಂಡ್ರಾ ಎಂಬ ಅನುಮಾನ ಮೊದಲು ಕಾಡುತ್ತದೆ.
ಆ ಒಂದು ಪತ್ರ ವಿಜಯ್ ಶಂಕರ್ ನ ನೆಮ್ಮದಿ ಕೆಡಿಸಿತ್ತು:
ಮಗಳ ಮದುವೆ ವಿಚಾರದಲ್ಲಿ ನೊಂದಿದ್ದ IAS ಅಧಿಕಾರಿಗೆ ಪತ್ರವೊಂದು ಅವರ ನೆಮ್ಮದಿಯನ್ನು ಕಿತ್ತುಕೊಂಡಿತ್ತಂತೆ. ಐಎಂಎ ಕೇಸ್ ಆರೋಪ ವಿಚಾರಕ್ಕೆ ಸಂಬಂಧಿಸಿ ಜೂನ್ 5 ರಂದು ಸಿಬಿಐ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಸಿಬಿಐ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದ ಆ ಪತ್ರ ನೋಡಿ ವಿಜಯ್ ಶಂಕರ್ ಮತ್ತಷ್ಟು ಕಂಗಾಲಾಗಿದ್ದರು.
ಸಿಬಿಐ ಅಧಿಕಾರಿ ಸೀಪಸ್ ಕಲ್ಯಾಣ್ ಬರೆದಿದ್ದ ಪತ್ರದಲ್ಲಿ ಅವರ ವಿರುದ್ಧ ತನಿಖೆಗೆ ಪ್ರಾಸಿಕ್ಯೂಷನ್ ಕೇಳಲಾಗಿತ್ತು. ಇದಕ್ಕೆ ಪ್ರಾಸಿಕ್ಯೂಷನ್ ಜೊತೆಗೆ ಇಲಾಖಾ ತನಿಖೆ ನಡೆಸುವಂತೆ ಸಿಬಿಐ ಸೂಚಿಸಿತ್ತು. ಜೂನ್ 8 ರಂದು ಈ ಸೂಚನೆಗೆ ಮುಖ್ಯ ಕಾರ್ಯದರ್ಶಿ ಕೂಡ ಅಸ್ತು ಎಂದಿದ್ದರು.
ವಿಶೇಷವಾಗಿ, ಇಲಾಖಾ ತನಿಖೆ ನಡೆಸಲೂ ಸೂಚಿಸಲಾಗಿತ್ತು. ಸಿಬಿಐ ತನಿಖೆ ಜೊತೆಗೆ ಇಲಾಖಾ ತನಿಖೆ ಎದುರಿಸಬೇಕಾದ ಪರಿಸ್ಥಿತಿ ವಿಜಯ್ ಶಂಕರ್ಗೆ ಎದುರಾಗಿತ್ತು. ನಿವೃತ್ತಿ ಹೊಂದಲು ದಿನಗಳನ್ನ ಎಣಿಸುತ್ತಿದ್ದ ವಿಜಯ್ ಶಂಕರ್ ಒಂದು ವೇಳೆ ಇಲಾಖಾ ತನಿಖೆ ಆರಂಭವಾದ್ರೆ ನಿವೃತ್ತಿಯ ಯಾವುದೇ ಸೌಲಭ್ಯಗಳು ಸಿಗ್ತಿರಲಿಲ್ಲ ಅನ್ನೋ ಟೆನ್ಶನ್ ಶುರುವಾಗಿತ್ತು.
ಮತ್ತೊಂದೆಡೆ ಸಿಬಿಐ ಅಧಿಕಾರಿಗಳಿಂದ ಮತ್ತೆ ಬಂಧನ ಆಗುವ ಭಯ ಕೂಡ ಅವರಿಗಿತ್ತು. ಹೀಗಾಗಿ ಐಎಎಸ್ ಅಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆ ಗೆ ಶರಣಾದ್ರಾ ಎಂಬ ಶಂಕೆ ವ್ಯಕ್ತವಾಗಿದೆ. ಈ ಎರಡು ಬಹು ಮುಖ್ಯ ಕಾರಣಗಳು ಅವರ ಸಾವಿಗೆ ನೇಣಾಗಿವೆ ಎಂದು ವಿಜಯ್ ಶಂಕರ್ ಆಪ್ತ ಮೂಲಗಳಿಂದ ತಿಳಿದು ಬಂದಿದೆ.