ಚಿಕ್ಕಬಳ್ಳಾಪುರ: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹೊರತು, ನಿಯಂತ್ರಣಕ್ಕೆ ಬರುವ ಹಾಗೆ ಕಾಣಿಸುತ್ತಿಲ್ಲ. ಸೋಂಕನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಲಾಕ್ಡೌನ್ ಕೂಡಾ ಜಾರಿಗೊಳಿಸಿದೆ. ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯವೆಂದು ಸರ್ಕಾರ ಹೇಳುತ್ತಿದೆ. ಮಾಧ್ಯಮಗಳಲ್ಲೂ ವೈದ್ಯರು ಮಾಸ್ಕ್ ಧರಿಸಬೇಕೆಂದು ಒತ್ತಿ ಒತ್ತಿ ಹೇಳಿದರೂ ಜನರು ಮಾತ್ರ ಈ ಬಗ್ಗೆ ಗಮನಹರಿಸುತ್ತಿಲ್ಲ. ಮಾಸ್ಕ್ ಧರಿಸದೆ ಬೇಜಾವಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಇದೀಗ ಮಾಸ್ಕ್ ವಿಚಾರವಾಗಿ ಪಿಡಿಒ ದಂಪತಿ ಮೇಲೆ ಹಲ್ಲೆ ಮಾಡಿರುವ ಘಟನೆಯೂ ಬೆಳಕಿಗೆ ಬಂದಿದೆ.
ಜನರ ಆರೋಗ್ಯದ ಕಾಳಜಿಯಿಂದ ಹಲವರು ಕೊರೊನಾ ವಾರಿಯರ್ನಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಮಾಸ್ಕ್ ಮತ್ತು ಸಾಮಾಜಿಕ ಅಂತರದ ಬಗ್ಗೆ ಕೆಲವರು ಜಾಗೃತಿ ಕೂಡಾ ಮೂಡಿಸುತ್ತಿದ್ದಾರೆ. ಆದರೆ ಇವೆಲ್ಲವನ್ನು ಕಂಡು ಜನರು ಮಾತ್ರ ನಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಜೊತೆಗೆ ಮಾಸ್ಕ್ ಧರಿಸಿ ಎಂದು ಹೇಳಿದಕ್ಕೆ ಹಲ್ಲೆ ಕೂಡಾ ಮಾಡುತ್ತಿದ್ದಾರೆ. ಇಂಥಹದೊಂದು ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಶೆಟ್ಟಿಹಳ್ಳಿಯಲ್ಲಿ ನಡೆದಿದೆ.
ಮಾಸ್ಕ್ ಧರಿಸಲು ಸೂಚಿಸಿದ್ದಕ್ಕೆ ಪಿಡಿಓ ದಂಪತಿಯ ಮೇಲೆ ಇಬ್ಬರು ಪುಂಡರು ಹಲ್ಲೆ ಮಾಡಿದ್ದಾರೆ. ಶೆಟ್ಟಿಹಳ್ಳಿ ಗ್ರಾಮ ಪಂಚಾಯತಿಯ ಪಿಡಿಓ ಭಾಗ್ಯಮ್ಮ ಮತ್ತು ಪತಿ ಕೃಷ್ಣಪ್ಪ ಎಂಬುವವರ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ಮಾಡಿದ ಜೊತೆಗೆ ನವೀನ್, ಮನೋಜ್ ಎಂಬುವವರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಹಲ್ಲೆ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ನೊಂದ ಪಿಡಿಓ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ಇದನ್ನೂ ಓದಿ
ಕೊಡಗಿನಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪ ಸೆರೆ; ಅರಣ್ಯ ಇಲಾಖೆ ಸಿಬ್ಬಂದಿಗೆ ಹಸ್ತಾಂತರ
ಚಿಕ್ಕಪ್ಪ- ಚಿಕ್ಕಮ್ಮನ ಮೇಲೆ ಹಲ್ಲೆ ಆರೋಪ: ರಾಷ್ಟ್ರೀಯ ಮಹಿಳಾ ಕಬಡ್ಡಿ ತಂಡದ ಮಾಜಿ ನಾಯಕಿ ಪಾಯಲ್ ಚೌಧರಿ ಬಂಧನ
(Two men assaulted PDO couple who told them to wear a mask in Chikkaballapur)