ದೇವರ ಹಣ ಕದ್ದು ಪರಾರಿ: 24 ಗಂಟೆಯೊಳಗೆ ಕಳ್ಳ ಪತ್ತೆ, ಭಕ್ತರ ಮೊರೆಗೆ ಓಗೊಟ್ಟ ದೈವ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 12, 2024 | 9:12 PM

ಉಡುಪಿಯ ಚಿಟ್ಪಾಡಿ ಕಸ್ತೂರ್ಬಾ ನಗರ ಬಬ್ಬು ಸ್ವಾಮಿ ಸನ್ನಿಧಾನದಲ್ಲಿ ಜು.4 ರ ನಡುರಾತ್ರಿ ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ಕಳ್ಳತನ ನಡೆದಿತ್ತು. ದೈವದ ಸನ್ನಿಧಾನದಲ್ಲಿ ಕಳ್ಳತನ ಮಾಡಿದರೆ ಅಪಚಾರವಾಗುವುದಿಲ್ಲವೇ? ಎಂದು ಭಕ್ತರು ದೈವಕ್ಕೆ ಪ್ರಶ್ನಿಸಿದ್ದರು‌. ಇದಕ್ಕೆ ಉತ್ತರವಾಗಿ 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವ ಭಕ್ತರಿಗೆ ಅಭಯ ನೀಡಿತ್ತು.

ದೇವರ ಹಣ ಕದ್ದು ಪರಾರಿ: 24 ಗಂಟೆಯೊಳಗೆ ಕಳ್ಳ ಪತ್ತೆ, ಭಕ್ತರ ಮೊರೆಗೆ ಓಗೊಟ್ಟ ದೈವ
ದೇವರ ಹಣ ಕದ್ದು ಪರಾರಿ: 24 ಗಂಟೆಯೊಳಗೆ ಕಳ್ಳ ಪತ್ತೆ, ಭಕ್ತರ ಮೊರೆಗೆ ಓಗೊಟ್ಟ ದೈವ
Follow us on

ಉಡುಪಿ, ಜುಲೈ 12: ಕರಾವಳಿ ಜಿಲ್ಲೆಯ ದೈವಗಳ (Daiva) ಕಾರಣಿಕ ಹೇಳುತ್ತಾ ಹೋದರೆ ಒಂದಲ್ಲ ಎರಡಲ್ಲ ಸಾವಿರಾರು ನಿದರ್ಶನ ನೀಡಬಹುದು. ಇಲ್ಲಿ ಪೊಲೀಸ್ ಇಲಾಖೆ ತನಿಖೆ ಮಾಡುವ ಮೊದಲೇ ದೈವಗಳು ಅಪರಾಧಿಯನ್ನು ತಂದು ಭಕ್ತರ ಮುಂದೆ ಇಟ್ಟು ಕಾರಣೀಕವನ್ನು ತೋರಿದೆ ಎಂದರೆ ನೀವು ನಂಬಲೇಬೇಕು. ಇದಕ್ಕೆ ಸಾಕ್ಷಿ ಎನ್ನುವಂತೆ ಉಡುಪಿಯಲ್ಲಿ ಒಂದು ಘಟನೆ ನಡೆದಿದೆ. ದೇವರ ಕಾಣಿಕೆ ಹಣ ಕದ್ದು ಪರಾರಿಯಾಗಿದ್ದ ಕಳ್ಳ (Thief) 24 ಗಂಟೆ ಒಳಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.

ಕರಾವಳಿಯಲ್ಲಿ ದೈವ ದೇವರುಗಳ ಆಚರಣೆ ಎಂದರೆ ಅದಕ್ಕೆ ಕೊನೆ ಮೊದಲಿಲ್ಲ. ಪರಶುರಾಮನ ಸೃಷ್ಟಿಯ ಈ ಅದ್ಭುತ ಜಾಗದಲ್ಲಿ ಪ್ರತಿಯೊಂದು ಜೀವಿಯಲ್ಲೂ ದೇವರನ್ನ ಕಾಣುವುದನ್ನು ಕರಾವಳಿ ಭಾಗದಲ್ಲಿ ಕಾಣಸಿಗುತ್ತದೆ. ಕೇವಲ ಕರಾವಳಿಗೆ ಮಾತ್ರ ಸೀಮಿತವಾಗಿದ್ದ ದೈವ ಆರಾಧನೆ ಸದ್ಯ ಜಾಗತಿಕ ಮಟ್ಟದಲ್ಲಿಯೂ ಖ್ಯಾತಿ ಪಡೆಯಲು ಕಾರಣವಾಗಿದ್ದು ನಟ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರದ ಮೂಲಕ.

ಕಳ್ಳನ ಪತ್ತೆಗಾಗಿ ದೈವಸ್ಥಾನದಲ್ಲಿ ಭಕ್ತರಿಂದ ಮೊರೆ

ದುಷ್ಟರನ್ನು ಶಿಕ್ಷಿಸುವುದು ಭಕ್ತಿಯಿಂದ ಬೇಡಿದವರನ್ನು ಪಾಲಿಸುವ ದೈವಗಳು ಅಪರಾಧಿಯನ್ನು ಕೂಡ ಪತ್ತೆ ಹಚ್ಚುವುದರಲ್ಲಿ ಭಕ್ತರ ಜೊತೆಗೆ ನಿಂತಿದೆ ಎನ್ನುವುದಕ್ಕೆ ಈ ಪ್ರಕರಣ ನಿದರ್ಶನ. ಹೊರ ಜಿಲ್ಲೆಯಿಂದ ಬಂದ ಕಳ್ಳನೋರ್ವ ಉಡುಪಿಯ ಚಿಟ್ಪಾಡಿ ಸಮೀಪದ ಕಸ್ತೂರ್ಬ ನಗರದ ಶ್ರೀ ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಕಳ್ಳತನ ನಡೆಸಿದ್ದಾನೆ. ದೈವಸ್ಥಾನದಲ್ಲಿದ್ದ ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ ಹಣವನ್ನ ಕದ್ದು ಕಣ್ಮರೆಯಾಗಿದ್ದ ಕಳ್ಳನ ಪತ್ತೆಗಾಗಿ ದೈವಸ್ಥಾನದ ಭಕ್ತರು ದೇವರಲ್ಲಿ ಮೊರೆ ಇಟ್ಟಿದ್ದಾರೆ. ಭಕ್ತನ ಮೊರೆಗೆ ಓಗೊಟ್ಟ ದೈವ, ಕಳ್ಳನನ್ನ ನಂಬಲಸಾಧ್ಯವಾದ ರೀತಿಯಲ್ಲಿ ಪತ್ತೆ ಹಚ್ಚುವ ಮೂಲಕ ತನ್ನ ಇರುವಿಕೆಯನ್ನು ಭಕ್ತರಿಗೆ ತೋರಿಸಿದೆ.

ಇದನ್ನೂ ಓದಿ: ಉಡುಪಿ: ಸತ್ಯವಾಯಿತು ದೈವದ ನುಡಿ, ಕೊಲೆ ಆರೋಪಿ ಶರಣಾಗತಿ

ಉಡುಪಿಯ ಚಿಟ್ಪಾಡಿ ಕಸ್ತೂರ್ಬಾ ನಗರ ಬಬ್ಬು ಸ್ವಾಮಿ ಸನ್ನಿಧಾನದಲ್ಲಿ ಜು.4 ರ ನಡುರಾತ್ರಿ ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ಕಳ್ಳತನ ನಡೆದಿತ್ತು. ಕಳ್ಳತನ ನಡೆದ ಮರುದಿನ ಅಂದರೆ ಜು.5 ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಭಕ್ತರು ಕಳ್ಳನ ಪತ್ತೆಗಾಗಿ ಸಾಮೂಹಿಕ ಪ್ರಾರ್ಥನೆ ಮಾಡಿದ್ದರು. ದೈವದ ಸನ್ನಿಧಾನದಲ್ಲಿ ಕಳ್ಳತನ ಮಾಡಿದರೆ ಅಪಚಾರವಾಗುವುದಿಲ್ಲವೇ? ಎಂದು ಭಕ್ತರು ದೈವಕ್ಕೆ ಪ್ರಶ್ನಿಸಿದ್ದರು‌. ಇದಕ್ಕೆ ಉತ್ತರವಾಗಿ 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವ ಭಕ್ತರಿಗೆ ಅಭಯ ನೀಡಿತ್ತು.

ಕಳ್ಳನ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆ

ಕಳ್ಳತನ ಮಾಡಿದ್ದ ಕಳ್ಳನ ಕೃತ್ಯ ಸಿಸಿ ಕ್ಯಾಮರದಲ್ಲಿ ಸರಿಯಾಗಿದ್ದನ್ನ ಬಹುತೇಕ ಭಕ್ತರು ಗಮನಿಸಿದ್ದರು. ಸಿಸಿ ಕ್ಯಾಮೆರಾದಲ್ಲಿ ನೋಡಿದ ಕಳ್ಳನ ಚಹರೆಯನ್ನು ಹೋಲುವ ವ್ಯಕ್ತಿಯೊಬ್ಬ ನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ನಿದ್ರೆ ಮಾಡುತ್ತಿರುವುದನ್ನ ಸ್ಥಳೀಯ ಆಟೋ ರಿಕ್ಷಾ ಚಾಲಕರೋರ್ವರು ಜುಲೈ 6 ರಂದು ಗಮನಿಸಿದ್ದಾರೆ. ತಕ್ಷಣ ಸ್ಥಳೀಯ ಪೊಲೀಸರಿಗೆ ಆಟೋ ಚಾಲಕ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕಳ್ಳನನ್ನ ಬಂಧಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಿನ ಎಡಮಂಗಲದಲ್ಲಿ ಮರುಕಳಿಸಿದ ‘ಕಾಂತಾರ’ ಸನ್ನಿವೇಶ; ದೈವ ನುಡಿಗೆ ತಲೆ ಬಾಗಿದ ಜನ

ಮೂಲತಃ ಬಾಗಲಕೋಟೆ ಮೂಲದ ಮುದುಕಪ್ಪ, ವಿಚಾರಣೆ ಮಾಡಿದಾಗ ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ದೇವಸ್ಥಾನಗಳಲ್ಲಿ ಕಳ್ಳತನ ಮಾಡುವ ಚಾಳಿ ಇರುವ ಮುದುಕಪ್ಪ ಚಿಟ್ಪಾಡಿ, ಉದ್ಯಾವರ ಭಾಗದಲ್ಲಿ ಕಳ್ಳತನ ನಡೆಸಿ ಕದ್ದ ಹಣದೊಂದಿಗೆ ಊರಿಗೆ ತೆರಳುವ ಸಿದ್ಧತೆ ಮಾಡಿದ್ದ. ಬಸ್ ಸಿಗದ ಕಾರಣ ಬಸ್ಟ್ಯಾಂಡ್​ನಲ್ಲಿ ಮಲಗಿದ್ದ ಮುದುಕಪ್ಪನಿಗೆ ಮುಂಜಾನೆ 8 ಗಂಟೆಯಾದರೂ ಎಚ್ಚರಿಕೆ ಆಗದ ಹಿನ್ನೆಲೆಯಲ್ಲಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಕರಾವಳಿಯ ದೈವಾರಾಧನೆ ಮಹತ್ವ ಎಂತಹದು ಎನ್ನುವುದಕ್ಕೆ ಈ ಪ್ರಕರಣ ಒಂದು ದೊಡ್ಡ ನಿದರ್ಶನ. ನಂಬಿ ಬರುವ ಭಕ್ತರಿಗೆ ಶ್ರೀ ರಕ್ಷೆ ನೀಡುವ ಜೊತೆಗೆ ತಪ್ಪು ಮಾಡಿದ ಅಪರಾಧಿಗೆ ದಂಡನೆ ಕೊಡುವ ಕೆಲಸವನ್ನು ಕೂಡ ದೈವಗಳು ಮಾಡುತ್ತವೆ ಎನ್ನುವುದನ್ನು ಈ ಪ್ರಕರಣ ಮತ್ತೆ ಸತ್ಯ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.