Udupi: ಅನಾಥ ಮಕ್ಕಳ ಅದ್ಧೂರಿ ವಿವಾಹ; ಜಿಲ್ಲಾಧಿಕಾರಿಯೇ ಮಾಡಿದ್ರು ಕನ್ಯಾದಾನ

ಉಡುಪಿ ರಾಜ್ಯ ಮಹಿಳಾ ನಿಲಯದಲ್ಲಿ ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ಅನಾಥ ಹೆಣ್ಣುಮಕ್ಕಳ ಅದ್ಧೂರಿ ವಿವಾಹ ನೆರವೇರಿತು. ಜಿಲ್ಲಾಧಿಕಾರಿ ಸ್ವತಃ ಕನ್ಯಾದಾನ ಮಾಡಿ, ನವ ವಿವಾಹಿತರಿಗೆ ಆರತಿ ಬೆಳಗಿದರು. ಈ ಮದಿವೆ ಸಮಾರಂಭಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಸಾಕ್ಷಿಯಾಗಿದ್ದು, ಇದು ಸ್ವರ್ಗದಲ್ಲಿ ನಿಶ್ಚಯವಾದ ಮದುವೆ ಎಂದು ನೆರೆದಿದ್ದವರು ಹೇಳಿದ್ರು.

Udupi: ಅನಾಥ ಮಕ್ಕಳ ಅದ್ಧೂರಿ ವಿವಾಹ; ಜಿಲ್ಲಾಧಿಕಾರಿಯೇ ಮಾಡಿದ್ರು ಕನ್ಯಾದಾನ
ಅದ್ಧೂರಿಯಾಗಿ ನಡೆದ ಮದುವೆ
Updated By: ಪ್ರಸನ್ನ ಹೆಗಡೆ

Updated on: Dec 12, 2025 | 3:09 PM

ಉಡುಪಿ, ಡಿಸೆಂಬರ್​​ 12: ಅನಾಥ ಹೆಣ್ಣು ಮಕ್ಕಳ ಅದ್ಧೂರಿ ವಿವಾಹಕ್ಕೆ ಉಡುಪಿಯ ರಾಜ್ಯ ಮಹಿಳಾ ನಿಲಯ ಸಾಕ್ಷಿಯಾಗಿದೆ. ಜಿಲ್ಲಾಡಳಿತ ನೇತೃತ್ವದಲ್ಲಿ ಇಬ್ಬರ ವಿವಾಹ ಕಾರ್ಯಕ್ರಮ ನೆರವೇರಿದ್ದು, ಜಿಲ್ಲಾಧಿಕಾರಿಯೇ ಮುಂದೆ ನಿಂತು ಕನ್ಯಾದಾನ ಮಾಡಿದ್ದು ವಿಶೇಷವಾಗಿತ್ತು. ಆ ಮೂಲಕ ರಾಜ್ಯ ಮಹಿಳಾ ನಿಲಯದಲ್ಲಿ ಈವರೆಗೆ ನೆರವೇರಿದ ಮದುವೆಗಳ ಸಂಖ್ಯೆ 25ರ ಗಡಿ ತಲುಪಿತು.

ಕಿವಿ ಕೇಳಿಸದ, ಮಾತು ಬಾರದ ಅನಾಥ ಯುವತಿಯ ಬಾಳಿಗೆ ಹಾಸನದ ಕೃಷಿಕ ಬೆಳಕಾಗಿ ಬಂದರೆ, ವಿವಾಹವಾದ ಮತ್ತೋರ್ವ ಯುವತಿ ಈಗ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ. ಎಂಕಾಂ ಮಾಡಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಯುವಕನ ಜೊತೆ ಈಕೆ ಸಪ್ತಪದಿ ತುಳಿದಿದ್ದು, ಆಕೆಯ ಮುಂದಿನ ಓದಿನ ಜವಾಬ್ದಾರಿಯನ್ನೂ ಆತ ಹೊತ್ತಿದ್ದಾನೆ. ವಿದ್ಯಾಭ್ಯಾಸ ಮಾಡುತ್ತಿರುವ ಹುಡುಗಿಗೆ ಉದ್ಯೋಗಸ್ಥ ಯುವಕನೇ ಬೇಕೆಂದು ಕಾದು ಕುಳಿತು ರಾಜ್ಯ ಮಹಿಳಾ ನಿಲಯ ಮದುವೆ ಮಾಡಿಸಿದೆ. ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರೇ ಮುಂದೆನಿಂತು ಮದುವೆಕಾರ್ಯ ನೆರವೇರಿಸಿದ್ದು, ಕನ್ಯಾದಾನ ಮಾಡಿದ್ದಾರೆ. ನವ ವಿವಾಹಿತರಿಗೆ ಆರತಿಯನ್ನೂ ಬೆಳಗಿದ್ದಾರೆ.

ಇದನ್ನೂ ಓದಿ: ವಿವಾಹ ಕಾಲದಲ್ಲಿ ಯಾರು ಏನನ್ನು ನೋಡಬೇಕು?

ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಮದುವೆಗೆ ಹಾಜರಾಗಿದ್ದು, ನವ ವಿವಾಹಿತರ ಹೆಸರಿಗೆ 50 ಸಾವಿರ ರೂ. ಹಣ ಡೆಪಾಸಿಟ್ ಕೂಡ ಮಾಡಲಾಗಿದೆ. ಇದು ಸ್ವರ್ಗದಲ್ಲಿ ನಿಶ್ಚಯವಾದ ಮದುವೆ ಎಂದು ನೆರೆದಿದ್ದವರು ಹೇಳಿದ್ದಾರೆ. ಇನ್ನು ಬ್ರಾಹ್ಮಣ ಸಮುದಾಯ ಸೇರಿ ಕೃಷಿಕ ಕುಟುಂಬಗಳ ಯುವಕರಿಗೆ ಮದುವೆಯಾಗಲು ಕನ್ಯೆಯರ ಅಭಾವ ಹಿನ್ನಲೆ ಮದುವೆಗೆ ಕನ್ಯೆಯರಿಗೆ ಆಗ್ರಹಿಸಿ ಉಡುಪಿ ರಾಜ್ಯ ಮಹಿಳಾ ನಿಲಯಕ್ಕೆ ಅತೀ ಹೆಚ್ಚು ಬೇಡಿಕೆ ಬರುತ್ತಿವೆ ಎನ್ನಲಾಗಿದೆ.

ರೈತರ ಮಕ್ಕಳ ಮದುವೆಗೆ ಸಿಗ್ತಿಲ್ಲ ಕನ್ಯೆ: ವಿನೂತನ ಪ್ರತಿಭಟನೆ

ರೈತರ ಮಕ್ಕಳು ಮದುವೆಯಾಗಲು ಹೆಣ್ಣು ಕೊಡೋದಕ್ಕೆ ಜನ ಹಿಂದೇಟು ಹಾಕುತ್ತಿರುವ ಹಿನ್ನೆಲೆ ಮಂಡ್ಯದಲ್ಲಿ ಬಿಜೆಪಿ ವಿನೂತನವಾಗಿ ಪ್ರತಿಭಟನೆ ನಡೆಸಿದೆ. ಜಿಲ್ಲೆಯೊಂದರಲ್ಲೇ ಮದುವೆಯಾಗದ ಸಾವಿರಾರು ಯುವಕರು ಇರುವ ಕಾರಣ, ರೈತರ ಮಕ್ಕಳ ಮದುವೆಗಾಗಿ ಪ್ರೋತ್ಸಾಹಧನ ನೀಡಬೇಕೆಂಬ ಆಗ್ರಹ ವ್ಯಕ್ತಪಡಿಸಲಾಗಿದೆ. ವರನಂತೆ ಹಣೆಗೆ ಬಾಸಿಂಗ, ತಲೆಗೆ ಮೈಸೂರು ಪೇಟ ಹಾಕಿಕೊಂಡು ಅಣಕು ಪ್ರದರ್ಶಿಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಶಾದಿಭಾಗ್ಯ ಮಾದರಿಯಲ್ಲಿ ರೈತರನ್ನ ಮದುವೆಯಾಗುವ ಯುವತಿಯರಿಗೆ 5 ಲಕ್ಷ ಪ್ರೋತ್ಸಾಹ ಧನ ನೀಡಬೇಕೆಂಬ ಬೇಡಿಕೆ ಇಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.