ಪೇಜಾವರ ಶ್ರೀಗಳಿಂದ ದಲಿತ ಕೇರಿಯಲ್ಲಿ ಪಾದಯಾತ್ರೆ; ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ ಸಹಯೋಗ

| Updated By: guruganesh bhat

Updated on: Sep 03, 2021 | 9:01 PM

ದಲಿತ ಸಮುದಾಯದ ಭಕ್ತರಿಗೆ ಪೇಜಾವರ ಶ್ರೀಗಳು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಸಾದ ವಿತರಣೆ ಮಾಡಿದ್ದಾರೆ. ಕೃಷ್ಣವೇಷ ತೊಟ್ಟು ಹತ್ತಾರು ಮಕ್ಕಳಿಂದ ಸ್ವಾಮೀಜಿಗಳಿಗೆ ಸ್ವಾಗತ ಕೋರಲಾಗಿತ್ತು.

ಪೇಜಾವರ ಶ್ರೀಗಳಿಂದ ದಲಿತ ಕೇರಿಯಲ್ಲಿ ಪಾದಯಾತ್ರೆ; ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ ಸಹಯೋಗ
ದಲಿತ ಸಮುದಾಯ ವಾಸಿಸುವ ಓಣಿಗಳಿಗೆ ಭೇಟಿ ನೀಡಿದ ಸ್ವಾಮೀಜಿಗಳು
Follow us on

ಬೆಂಗಳೂರು: ಉಡುಪಿ ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಬೆಂಗಳೂರಿನ ರಾಮಕೃಷ್ಣ ಆಶ್ರಮ ಬಳಿಯ ಗವಿಪುರ, ಗುಟ್ಟಹಳ್ಳಿ, ಕೆಜಿನಗರದ ದಲಿತ ಓಣಿಗಳಲ್ಲಿ ಪಾದಯಾತ್ರೆ ಮಾಡಿದ್ದಾರೆ. ಪೇಜಾವರದ ವಿಶ್ವಪ್ರಸನ್ನ ತೀರ್ಥ ಶ್ರೀಗಳಿಗೆ ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ ಸಹಯೋಗ ನೀಡಿದ್ದು, ದಲಿತ ಸಮುದಾಯದ ಭಕ್ತರಿಗೆ ಪೇಜಾವರ ಶ್ರೀಗಳು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಸಾದ ವಿತರಣೆ ಮಾಡಿದ್ದಾರೆ. ಕೃಷ್ಣವೇಷ ತೊಟ್ಟು ಹತ್ತಾರು ಮಕ್ಕಳಿಂದ ಸ್ವಾಮೀಜಿಗಳಿಗೆ ಸ್ವಾಗತ ಕೋರಲಾಗಿತ್ತು. ಪಾದಯಾತ್ರೆಯ ವೇಳೆ ಚಂಡಿಕಾದುರ್ಗೆ ದೇಗುಲಕ್ಕೆ ಪೇಜಾವರಶ್ರೀ, ಮಾದಾರಚೆನ್ನಯ್ಯ ಶ್ರೀ ಭೇಟಿ ನೀಡಿದ್ದಾರೆ. ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಧರ್ಮಸಭೆಯಲ್ಲಿ ಇಬ್ಬರೂ ಸ್ವಾಮೀಜಿಗಳು ಭಾಗವಹಿಸಿದ್ದರು.

ಪೇಜಾವರದ ಈ ಹಿಂದಿನ ಶ್ರೀಗಳಾದ ವಿಶ್ವೇಶತೀರ್ಥ ಸ್ವಾಮೀಜಿಯವರು 2009ರಲ್ಲಿ ಮೈಸೂರಿನಲ್ಲಿ ಮೊದಲ ಬಾರಿಗೆ ದಲಿತ ಕೇರಿಗಳಲ್ಲಿ ಪಾದಯಾತ್ರೆ ನಡೆಸಿದ್ದರು. ಮಾದಾರ ಶ್ರೀಗಳು ಅಸ್ಪಶ್ಯತೆಯ ಬಗ್ಗೆ ಎತ್ತಿದ್ದ ಕೆಲವು ಅಂಶಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅವರು ದಲಿತ ಕೇರಿಗಳಿಗೆ ಪಾದಯಾತ್ರೆ ಕೈಗೊಂಡಿದ್ದರು. ಅಲ್ಲದೇ ದಲಿತ ಮಹಿಳೆಯರು ಅವರಿಗೆ ಪೇಜಾವರ ಶ್ರೀಗಳ ಪಾದಪೂಜೆ ನಡೆಸಿದ್ದರು.

ಅದೇ ರೀತಿ ಮಾದಾರ ಶ್ರೀಗಳು ಸಹ ಬ್ರಾಹ್ಮಣ ಕೇರಿಗೆ ಪಾದಯಾತ್ರೆ ನಡೆಸಿದರು. ಬ್ಯಾಹ್ಮಣ ಸಮುದಾಯದ ಮಹಿಳೆಯರು ಮಾದಾರ ಶ್ರೀಗಳ ಪಾದಪೂಜೆ ನಡೆಸಿ ಗೌರವಿಸಿದರು. ಈ ಇಬ್ಬರೂ ಸ್ವಾಮೀಜಿಗಳ ಪಾದಪೂಜೆಯ ನಂತರ ಒಂದೇ ಕಾರ್ಯಕ್ರಮದಲ್ಲಿ ಅಕ್ಕಪಕ್ಕದಲ್ಲಿ ಕುಳಿತು ಭಾಗವಹಿಸಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಪ್ರಗತಿಪರರು ವಿರೋಧ ವ್ಯಕ್ತಪಡಿಸಿದ್ದರು. ಅದೇ ಕಾರ್ಯಕ್ರಮದಲ್ಲಿ ಪೇಜಾವರದ ಹಿಂದಿನ ಶ್ರೀಗಳಾದ ವಿಶ್ವೇಶತೀರ್ಥರು ‘ಇಂದು ಬ್ರಾಹ್ಮಣರಿಂದಲೇ ಜಾತಿ ಪದ್ಧತಿ ಆಚರಣೆ ವಿನಾಶವಾಯಿತು. ನನ್ನ ಮುಂದಿನ ಜೀವನದಲ್ಲಿ ಜಾತಿ ಪದ್ಧತಿ ವಿನಾಶಕ್ಕಾಗಿ ಕೆಲಸ ಮಾಡುತ್ತೇನೆ’ ಎಂದು ಘೋಷಿಸಿದ್ದರು.

ಅದೇ ರೀತಿ, 34 ನೇ ಚಾತುರ್ಮಾಸ್ಯ ಆಚರಣೆಯಲ್ಲಿ ನಿರತರಾಗಿರುವ ಈಗಿನ ಪೇಜಾವರದ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬೆಂಗಳೂರಿನ ದಲಿತ ಕೇರಿಗಳಲ್ಲಿ ಪಾದಯಾತ್ರೆ ನಡೆಸಿರುವುದು ಹಿಂದಿನ ಶ್ರೀಗಳ ಸಂಪ್ರದಾಯವನ್ನು ಮುಂದುವರೆಸಿದಂತಾಗಿದೆ.

ಇದನ್ನೂ ಓದಿ: 

ರಾಮ ಜನ್ಮಭೂಮಿ ಟ್ರಸ್ಟ್ ಬೇನಾಮಿ ಸಂಸ್ಥೆ ಅಲ್ಲ; ವಿಹೆಚ್​ಪಿ ಪುಂಡುಪೋಕರಿಗಳ ಸಂಸ್ಥೆಯಲ್ಲ: ಪೇಜಾವರ ಶ್ರೀ

ನನ್ನ ಉತ್ತರಾಧಿಕಾರಿಯನ್ನು ಈಗ ನೇಮಕ ಮಾಡುತ್ತಿಲ್ಲ, ಆದರೆ ಅವರು ದಲಿತ ಸಮುದಾಯದವರೇ ಆಗಿರುತ್ತಾರೆ: ಮಾಯಾವತಿ

(Udupi Pejawara Shri make padayatra to Bengaluru Dalit Colony joins with Chitradurga Madar Chenniah Swamiji)

Published On - 8:20 pm, Fri, 3 September 21